ಕೋವಿಡ್ ಸುನಾಮಿ ಬಗ್ಗೆ ರಾಹುಲ್ ಗಾಂಧಿ ಎಚ್ಚರಿಕೆ ನೀಡಿದಾಗ ಮೋದಿ ಸರ್ಕಾರ ರಾಹುಲ್ ನಕಾರಾತ್ಮಕ ರಾಜಕೀಯ ಮಾಡುತ್ತಿದ್ದಾರೆ ಎಂದು ಸಾಧ್ಯತೆಗಳನ್ನು ತಳ್ಳಿಹಾಕಿತು. ಆದರೆ ಕೆಲವೇ ದಿನಗಳಲ್ಲಿ ರಾಹುಲ್ ನೀಡಿದ್ದ ಎಲ್ಲ ಎಚ್ಚರಿಕೆಗಳು ನಿಜವಾಯಿತು. ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ, ಜನರಲ್ಲೂ ಎಚ್ಚರಿಕೆ ಮೂಡಿಸದ ಕೇಂದ್ರ ಸರ್ಕಾರ ತಡಕಾಡಿತು. ಕೊನೆಗೆ ಪ್ರಧಾನಿ ಮೋದಿ ಜನರ ಕೈಯಲ್ಲಿ ಚಪ್ಪಾಳೆ ತಟ್ಟಿಸಿದರು, ಗಂಟೆ-ತಟ್ಟೆ ಬಾರಿಸಿದರು. ಜನರನ್ನು ಮುರ್ಖರನ್ನಾಗಿಸಿದರು.
ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಚುನಾವಣೆಗಳು ನಡೆದು ಫಲಿತಾಂಶ ಹೊರಬರುವವರೆಗೂ ಕಾದು ಕೂತಿದ್ದ ಕೇಂದ್ರ ಸರ್ಕಾರವು ಒಂದಲ್ಲ, ಎರಡು ಬಾರಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನು ಏರಿಸಿದೆ. ಇಂಧನ ದರ ಹೆಚ್ಚಾಗುತ್ತಿದ್ದಂತೆ ಈಗಾಗಲೇ ಗಗನಕ್ಕೆ ಏರುತ್ತಿರುವ ಇತರೆ ವಸ್ತುಗಳ ಬೆಲೆಯೂ ಏಣಿ ಮೆಟ್ಟಿಲೇರುತ್ತಲಿದೆ. ಇವೆಲ್ಲವುದರ ನಡುವೆ ಲೋಕಸಭೆ ವಿಪಕ್ಷ ನಾಯಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಯ್‌ಬರೇಲಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ, “ದೇಶವು ಶೀಘ್ರವೇ ‘ಆರ್ಥಿಕ ಸುಂಟರಗಾಳಿ’ (Economic Storm) ಎದುರಿಸಲಿದೆ” ಎಂದು ಎಚ್ಚರಿಸಿದ್ದಾರೆ. ರಾಹುಲ್ ಜೋಕೆ ಎನ್ನುತ್ತಿದ್ದಂತೆ ಈ ಹಿಂದೆ ಅವರು ನೀಡಿದ ಎಚ್ಚರಿಕೆಗಳನ್ನು ನಾವು ನೆನಪಿಸಿಕೊಳ್ಳುವಂತಾಗಿದೆ.
ಸದ್ಯ ಮದ್ಯಪ್ರಾಚ್ಯದ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ತೈಲ ಪೂರೈಕೆ ಮಾರ್ಗದಲ್ಲಿನ ಅಡಚಣೆಯು ಜಾಗತಿಕ ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ದೇಶದಲ್ಲಿ ಇಂಧನ ಬೆಲೆ ಏರಿಕೆಯಾಗಿದೆ. ಇವೆಲ್ಲವುದರಿಂದಾಗಿ ಆರ್ಥಿಕ ದುರ್ದಿನಗಳ ಸುಂಟರಗಾಳಿ ಬೀಸಲಿದೆ, ಈ ಆರ್ಥಿಕ ಹೊಡೆತದಿಂದ ಬಡವರು, ಯುವಕರು, ರೈತರು ಮತ್ತು ಸಣ್ಣ ವ್ಯಾಪಾರಿಗಳು ತೀವ್ರ ತೊಂದರೆಗೆ ಒಳಗಾಗಲಿದ್ದಾರೆ ಎಂಬ ಎಚ್ಚರಿಕೆಯನ್ನು ರಾಹುಲ್ ಗಾಂಧಿ ನೀಡಿದ್ದಾರೆ. ಈ ಎಚ್ಚರಿಕೆ ನೀಡುತ್ತಿದ್ದಂತೆ, ರಾಹುಲ್ ಈ ಹಿಂದೆ ನೀಡಿದ್ದ ಹಲವು ಪ್ರಮುಖ ಎಚ್ಚರಿಕೆಗಳು ನಿಜವಾಗಿದ್ದು ಮತ್ತೆ ಸುದ್ದಿಯಾಗುತ್ತಿದೆ. ಕೋವಿಡ್ ಸಾಂಕ್ರಾಮಿಕ, ಕೃಷಿ ಮಸೂದೆ, ಲಾಡ್‌ಡೌನ್, ವಲಸೆ ಕಾರ್ಮಿಕರ ಬಿಕ್ಕಟ್ಟು – ಹೀಗೆ ಹಲವು ಸಂದರ್ಭಗಳಲ್ಲಿ ಏನಾಗಬಹುದು ಎಂದು ರಾಹುಲ್ ಎಚ್ಚರಿಕೆ ನೀಡಿದ್ದರೋ ಅದೇ ನಡೆದಿತ್ತು.
ಇದನ್ನು ಓದಿದ್ದೀರಾ? ರಾಹುಲ್ ಗಾಂಧಿ ಸೇರಿ 25 ಕಾಂಗ್ರೆಸ್ ಸಂಸದರಿಗೆ ಗುಂಡಿಕ್ಕುವ ಬೆದರಿಕೆ ಹಾಕಿದಾತನ ಬಂಧನ
This video cannot be played in your browser. Open the video directly
ರಾಹುಲ್ ಗಾಂಧಿ ನೀಡಿದ್ದ ಕೋವಿಡ್-19 ಸುನಾಮಿ ಎಚ್ಚರಿಕೆ (2020)
ದೇಶದಲ್ಲಿ ಕೋವಿಡ್ ಪ್ರಕರಣಗಳು ಇನ್ನೂ ತೀರಾ ಆರಂಭಿಕ ಹಂತದಲ್ಲಿದ್ದಾಗ ಅಂದರೆ 2020ರ ಫೆಬ್ರವರಿ, ಮಾರ್ಚ್ ನಡುವೆ ರಾಹುಲ್ ಗಾಂಧಿ ಅವರು ಕೊರೊನಾ ವೈರಸ್‌ನಿಂದ ದೇಶದ ಆರೋಗ್ಯ ಕ್ಷೇತ್ರದ ಬಿಕ್ಕಟ್ಟು ಮತ್ತು ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸರಣಿ ಟ್ವೀಟ್‌ಗಳು ಹಾಗೂ ಪತ್ರಿಕಾಗೋಷ್ಠಿಗಳನ್ನು ಮಾಡಿ ಎಚ್ಚರಿಸಿದ್ದರು. “ದೇಶದಲ್ಲಿ ಕೋವಿಡ್ ಮಾತ್ರವಲ್ಲ ಆರ್ಥಿಕ ಸುನಾಮಿ ಕೂಡ ಅಪ್ಪಳಿಸಲಿದೆ. ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಸರ್ಕಾರ ಈಗಲೇ ಎಚ್ಚೆತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಸೂಚಿಸಿದ್ದರು.
ಆದರೆ ಆ ಸಂದರ್ಭದಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತು ಬಿಜೆಪಿಗರು ರಾಹುಲ್ ಗಾಂಧಿ ಬಗ್ಗೆ ವ್ಯಂಗ್ಯವಾಡಿದ್ದರು. ರಾಹುಲ್ ಗಾಂಧಿ ಭಯದ ವಾತಾವರಣ ಸೃಷ್ಟಿಸುವ ಯತ್ನ ಮಾಡುತ್ತಿದ್ದಾರೆ, ನಕಾರಾತ್ಮಕ ರಾಜಕೀಯ ಮಾಡುತ್ತಿದ್ದಾರೆ ಎಂದು ಸಾಧ್ಯತೆಗಳನ್ನು ಮೋದಿ ಸರ್ಕಾರ ತಳ್ಳಿ ಹಾಕಿತ್ತು. ಅಷ್ಟು ಮಾತ್ರವಲ್ಲದೆ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ವ್ಯಸ್ತವಾಯಿತು. ಕೆಲವೇ ದಿನಗಳಲ್ಲಿ ರಾಹುಲ್ ನೀಡಿದ್ದ ಎಲ್ಲ ಎಚ್ಚರಿಕೆಗಳು ನಿಜವಾಯಿತು. ಕೋವಿಡ್ ಸಾಂಕ್ರಾಮಿಕ ದೇಶದಲ್ಲಿ ಸುನಾಮಿಯಂತೆ ಅಪ್ಪಳಿಸಿತು, ತೀವ್ರ ಆರ್ಥಿಕ ಸಂಕಷ್ಟ ಉಂಟಾಯಿತು. ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದ, ಜನರಲ್ಲೂ ಎಚ್ಚರಿಕೆ ಮೂಡಿಸದ ಕೇಂದ್ರ ಸರ್ಕಾರ ತಡಕಾಡಿತು. ಕೊನೆಗೆ ಪ್ರಧಾನಿ ಮೋದಿ ಜನರ ಕೈಯಲ್ಲಿ ಚಪ್ಪಾಳೆ ತಟ್ಟಿಸಿದರು, ಗಂಟೆ-ತಟ್ಟೆ ಬಾರಿಸಿದರು. ಜನರನ್ನು ಮುರ್ಖರನ್ನಾಗಿಸಿದರು.
ಎರಡನೇ ಅಲೆಯ ಎಚ್ಚರಿಕೆ ನೀಡಿದ್ದ ರಾಹುಲ್ ಗಾಂಧಿ
2021ರ ಆರಂಭದಲ್ಲಿ ದೇಶದಲ್ಲಿ ಮೊದಲ ಕೋವಿಡ್ ಅಲೆ ತಗ್ಗಿದಾಗ ಪರಿಸ್ಥಿತಿ ತಿಳಿಯಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಆ ಸಮಯದಲ್ಲಿಯೂ ರಾಹುಲ್ ಗಾಂಧಿ ಕೋವಿಡ್ ಎರಡನೇ ಅಲೆಯ ಅಪಾಯದ ಬಗ್ಗೆ ಧ್ವನಿ ಎತ್ತಿದ್ದರು. ವೈರಸ್ ರೂಪಾಂತರಗೊಳ್ಳುತ್ತಾ ಹೋದರೆ ಅದನ್ನು ತಡೆಯುವುದು ಕಷ್ಟವಾಗುತ್ತದೆ, ಹೀಗಾಗಿ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ತೀವ್ರಗೊಳಿಸಬೇಕು ಎಂದು ರಾಹುಲ್ ಗಾಂಧಿ ಒತ್ತಾಯಿಸಿದ್ದರು. ಲಸಿಕಾಕರಣದ ವೇಗ ಕುಂಠಿತವಾಗಿದ್ದನ್ನು ವಿರೋಧಿಸಿದ್ದ ಅವರು, ದೇಶದಲ್ಲಿ ಲಸಿಕೆಯ ಕೊರತೆಯಾಗಲಿದ್ದು, ಇದು ಮತ್ತೊಂದು ದೊಡ್ಡ ಅಲೆಗೆ ದಾರಿ ಮಾಡಿಕೊಡಲಿದೆ ಎಂದು ಎಚ್ಚರಿಸಿದ್ದರು. ರಾಹುಲ್ ಹೇಳಿದಂತೆ ಕೋವಿಡ್ ರೂಪಾಂತರ ಹರಡಿತ್ತು.
ಇದನ್ನು ಓದಿದ್ದೀರಾ? ಮತಗಳವು ಗಂಭೀರ ಆರೋಪಕ್ಕೆ ರಾಹುಲ್ ಗಾಂಧಿ ಮಾತ್ರ ಉತ್ತರದಾಯಿಯೇ?
2021ರ ಏಪ್ರಿಲ್-ಮೇ ತಿಂಗಳಲ್ಲಿ ಎರಡನೇ ಅಲೆ ದೇಶಾದ್ಯಂತ ಆಮ್ಲಜನಕ (Oxygen) ಮತ್ತು ಆಸ್ಪತ್ರೆಗಳ ಹಾಸಿಗೆಗಳ ತೀವ್ರ ಕೊರತೆಯ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್, “ರಾಹುಲ್ ಗಾಂಧಿ ಅವರು ಮೊದಲೇ ಎಚ್ಚರಿಸಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿತು” ಎಂದು ರಾಹುಲ್ ಅವರು ಎಚ್ಚರಿಕೆ ನೀಡಿದ್ದ ಹಳೆಯ ವಿಡಿಯೋಗಳು, ಟ್ವೀಟ್‌ಗಳನ್ನು ಹಂಚಿಕೊಂಡಿತ್ತು. ಸರ್ಕಾರದ ವೈಫಲ್ಯವನ್ನು ತರಾಟೆಗೆ ತೆಗೆದುಕೊಂಡಿತ್ತು.
ಲಾಕ್‌ಡೌನ್ ಮತ್ತು ವಲಸೆ ಕಾರ್ಮಿಕರ ಬಿಕ್ಕಟ್ಟು
2020ರಲ್ಲಿ ದೇಶದಲ್ಲಿ ಕೋವಿಡ್ ಸಾಂಕ್ರಾಮಿಕದ ಆರಂಭಿಕ ಹಂತದಲ್ಲಿ ಹೇರಲಾದ ಹಠಾತ್ ಲಾಕ್‌ಡೌನ್ ಮತ್ತು ಅದರ ಬೆನ್ನಲ್ಲೇ ಸೃಷ್ಟಿಯಾದ ವಲಸೆ ಕಾರ್ಮಿಕರ ಮಾನವೀಯ ಬಿಕ್ಕಟ್ಟಿನ ಬಗ್ಗೆಯೂ ರಾಹುಲ್ ಗಾಂಧಿಯವರು ಮುನ್ಸೂಚನೆ ನೀಡಿದ್ದರು. ವಿಶ್ವದಲ್ಲೇ ಅತ್ಯಂತ ಕಠಿಣ ಎನ್ನಲಾದ ಈ ಲಾಕ್‌ಡೌನ್ ಘೋಷಣೆಯಾಗುವ ಮುನ್ನವೇ ಮತ್ತು ಸಾಂಕ್ರಾಮಿಕದ ಆರಂಭದಲ್ಲೇ ಈ ಎಚ್ಚರಿಕೆಗಳನ್ನು ನೀಡಿದ್ದರು. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಲಾಕ್‌ಡೌನ್ ಘೋಷಿಸಿದರೆ ದೇಶದ ಆರ್ಥಿಕತೆ ಧ್ವಂಸವಾಗುತ್ತದೆ ಎಂದು ರಾಹುಲ್ ಎಚ್ಚರಿಸಿದ್ದರು. ಇದರಿಂದಾಗಿ ದಿನಗೂಲಿ ನೌಕರರು, ಬೀದಿಬದಿ ವ್ಯಾಪಾರಿಗಳು ಮತ್ತು ಸಣ್ಣ ಉದ್ಯಮಗಳು ಸಂಪೂರ್ಣವಾಗಿ ಬೀದಿಗೆ ಬೀಳುತ್ತಾರೆ ಎಂದು ರಾಹುಲ್ ಪ್ರತಿಪಾದಿಸಿದ್ದರು. ಆದರೆ ಕೇಂದ್ರದ ಮೋದಿ ಸರ್ಕಾರ ಎಂದಿನಂತೆ ರಾಹುಲ್ ಎಚ್ಚರಿಕೆಯನ್ನು ಕಡೆಗಣಿಸಿತ್ತು.
ಲಾಕ್‌ಡೌನ್ ಘೋಷಣೆಯಾದ ನಂತರ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ, ಲಕ್ಷಾಂತರ ವಲಸೆ ಕಾರ್ಮಿಕರು ನಗರಗಳಿಂದ ತಮ್ಮ ಹಳ್ಳಿಗಳಿಗೆ ನೂರಾರು ಕಿಲೋಮೀಟರ್ ನಡೆದುಕೊಂಡೇ ಹೋಗಬೇಕಾದ ಹೃದಯವಿದ್ರಾವಕ ಪರಿಸ್ಥಿತಿ ನಿರ್ಮಾಣವಾಯಿತು. ಜನರು ಹಸಿವಿನಿಂದ ಜೀವ ಕಳೆದುಕೊಳ್ಳುವಂತಾಯಿತು. ಈ ಸಂದರ್ಭದಲ್ಲಿ ಕಾರ್ಮಿಕರ ವಲಸೆಯನ್ನು ತಡೆಯಲು ಮತ್ತು ಅವರ ಹಸಿವನ್ನು ನೀಗಿಸಲು ಬಡ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಿಂಗಳಿಗೆ 7,500 ರೂಪಾಯಿಗಳನ್ನು ವರ್ಗಾಯಿಸಬೇಕು ಎಂದು ರಾಹುಲ್ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ಸರ್ಕಾರ ಇದನ್ನೂ ಮಾಡಿಲ್ಲ. ಒಟ್ಟಿನಲ್ಲಿ ಸೂಕ್ತ ಯೋಜನೆಯಿಲ್ಲದ ಲಾಕ್‌ಡೌನ್‌ನಿಂದಾಗಿ ದೇಶದ ಜಿಡಿಪಿ (GDP) ತೀವ್ರ ಕುಸಿತ ಕಂಡಿತು. ವಲಸೆ ಕಾರ್ಮಿಕರ ಬಿಕ್ಕಟ್ಟು ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ಕರಾಳ ಮಾನವೀಯ ದುರಂತಗಳಲ್ಲಿ ಒಂದಾಗಿ ದಾಖಲಾಯಿತು.
ಮೂರು ಕೃಷಿ ಕಾಯ್ದೆಗಳ ಹಿಂಪಡೆದೆ ಪಡೆಯುತ್ತಾರೆ!
ಕೇಂದ್ರ ಸರ್ಕಾರವು 2020ರಲ್ಲಿ ಜಾರಿಗೆ ತಂದಿದ್ದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ, ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದ ರೈತರು ಸುದೀರ್ಘ ಪ್ರತಿಭಟನೆಯನ್ನು ನಡೆಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ರೈತರ ಹೋರಾಟವನ್ನು ಬೆಂಬಲಿಸಿದ್ದರು. ರಾಹುಲ್ ಗಾಂಧಿಯವರು ತಮ್ಮ ಭಾಷಣಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ, “ಸರ್ಕಾರವು ಎಷ್ಟೇ ಹಠ ಹಿಡಿದರೂ ಅಂತಿಮವಾಗಿ ಈ ಕಪ್ಪು ಕೃಷಿ ಕಾಯ್ದೆಗಳನ್ನು ಹಿಂಪಡೆಯಲೇಬೇಕಾಗುತ್ತದೆ ಮತ್ತು ರೈತರ ಶಕ್ತಿಯ ಮುಂದೆ ಸರ್ಕಾರ ತಲೆಬಾಗಬೇಕಾಗುತ್ತದೆ” ಎಂದು ನಿರಂತರವಾಗಿ ಹೇಳುತ್ತಿದ್ದರು.
ಇದನ್ನು ಓದಿದ್ದೀರಾ? ಕಾರ್ಮಿಕ ವಿರೋಧಿ ಸಂಹಿತೆಗಳು: ಮೋದಿ ಸರ್ಕಾರದ ವಿರುದ್ಧ CITU ಆಕ್ರೋಶ
ಅದರಂತೆ ರೈತರ ಒಂದು ವರ್ಷಕ್ಕೂ ಮಿಗಿಲಾದ ನಿರಂತರ ಹೋರಾಟದ ನಂತರ, 2021ರ ನವೆಂಬರ್ 19ರಂದು ಪ್ರಧಾನಿ ನರೇಂದ್ರ ಮೋದಿಯವರು ಮೂರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಅಧಿಕೃತವಾಗಿ ಘೋಷಿಸಿದರು. ಸರ್ಕಾರದ ಘೋಷಣೆಯ ಬೆನ್ನಲ್ಲೇ, ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಗಳನ್ನು ರದ್ದುಗೊಳಿಸುವ ವಿಧೇಯಕವನ್ನು ಮಂಡಿಸಿ, ಔಪಚಾರಿಕವಾಗಿ ಮೂರು ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆಯಲಾಯಿತು. ಅಂತಿಮವಾಗಿ ರೈತರ ಪಟ್ಟು ಮತ್ತು ಪ್ರತಿಭಟನೆಯ ತೀವ್ರತೆಯಿಂದಾಗಿ ಸರ್ಕಾರವು ತನ್ನ ನಿರ್ಧಾರವನ್ನು ಬದಲಿಸಬೇಕಾಗಿ ಬಂದಿದ್ದರಿಂದ, ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷಗಳು ಈ ಹಿಂದೆ ನೀಡಿದ್ದ ಹೇಳಿಕೆಗಳು ವೈರಲ್ ಆಗಲು ಶುರುವಾಗಿತ್ತು.
ಹೀಗೆ ರಾಹುಲ್ ಗಾಂಧಿ ನೀಡಿದ ಎಚ್ಚರಿಕೆಗಳನ್ನು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಆರಂಭದಲ್ಲಿ ಎಷ್ಟು ಲೇವಡಿ, ಟೀಕೆ ಮಾಡಿದ್ದರೂ ಅಂತಿಮವಾಗಿ ನಡೆದಿದ್ದು ಅದೇ. ಇದೀಗ ರಾಹುಲ್ ಗಾಂಧಿ ಆರ್ಥಿಕ ದುರ್ದಿನಗಳ ಸುಂಟರಗಾಳಿ ಬೀಸುವ ಮುನ್ಸೂಚನೆಯನ್ನು ನೀಡಿದ್ದಾರೆ. ಸದ್ಯ ರಾಹುಲ್ ಲೋಕಸಭೆ ವಿಪಕ್ಷ ನಾಯಕರು ಎಂಬ ಕಾರಣಕ್ಕಾಗಿ ಆದರೂ ಮೋದಿ ಸರ್ಕಾರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದೆಯೇ? ಖಂಡಿತ ಇಲ್ಲ.
ಇಂದಿಗೂ ವಿಪಕ್ಷ ನಾಯಕರುಗಳು ಸರ್ಕಾರ ಜಾಗೃತವಾಗಿರಬೇಕಾದ ಅನಿವಾರ್ಯವನ್ನು ಗಮನಕ್ಕೆ ತರುವ ತಮ್ಮ ಕಾರ್ಯವನ್ನು ಮಾಡುತ್ತಲೇ ಇದೆ. ಆದರೆ ಮೋದಿ ಸರ್ಕಾರ ಮಾತ್ರ ಪಾಠ ಕಲಿತಿಲ್ಲ. ತಮ್ಮ ಹಳೆಯ ಚಾಳಿ ಮುಂದುವರೆಸಿದೆ. ದೇಶದ ಆರ್ಥಿಕ ಪ್ರಗತಿ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿಕೊಂಡು ವಿಪಕ್ಷಗಳ ಟೀಕೆಗಳನ್ನು ತಳ್ಳಿಹಾಕುತ್ತಲೇ ಬಂದಿದೆ.





