ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ ದೊಡ್ಡ ಸವಾಲಾಗಿರುವ ಚೀನಾದ ಮುಂದೆ ಅದೇ ಬಲಪ್ರದರ್ಶನ ಏಕೆ ಕಾಣುವುದಿಲ್ಲ? ಪಾಕ್ ಮೇಲೆ ಗರ್ಜಿಸುವ ಸರ್ಕಾರ, ಚೀನಾಗೆ ಬೆನ್ನು ತೋರಿಸುತ್ತದೆಯೇ ಎಂಬ ದ್ವಂದ್ವ ನೀತಿ ಮತ್ತೆ ಚರ್ಚೆಯ ಕೇಂದ್ರಬಿಂದುವಾಗಿದೆ.
2016ರ ಸೆಪ್ಟೆಂಬರ್ 28-29ರಂದು ನಡೆದ ಸರ್ಜಿಕಲ್ ಸ್ಟ್ರೈಕ್‌ಗೆ 10 ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಭಾನುವಾರ ‘ಮನ್ ಕಿ ಬಾತ್’ನಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಬಾಲಾಕೋಟ್ ವಾಯುದಾಳಿ ಮತ್ತು ಆಪರೇಷನ್ ಸಿಂಧೂರ್‌ವರೆಗೆ ಭಾರತ ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ತಳೆದಿದೆ. ಭಯೋತ್ಪಾದಕರು ಭಾರತದ ವಿರುದ್ಧ ದುಸ್ಸಾಹಸ ಮಾಡಿದರೆ ಅವರಿಗೆ ತಕ್ಕ ಉತ್ತರ ನೀಡಲಾಗುವುದು ಎಂಬ ಸಂದೇಶವನ್ನು ಕಳೆದ ಒಂದು ದಶಕದಲ್ಲಿ ಭಾರತ ನಿರಂತರವಾಗಿ ನೀಡಿದೆ ಎಂದು ಮೋದಿ ಹೇಳಿದ್ದಾರೆ.
ನಮ್ಮ ಸೈನಿಕರು ಗಡಿ ನಿಯಂತ್ರಣ ರೇಖೆ (LoC) ದಾಳಿ ಮಾಡಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ ರೀತಿ ನೋಡಿ ಇಡೀ ಜಗತ್ತೇ ಬೆರಗಾಗಿತ್ತು. ಇದು ಭಾರತದ ಭಯೋತ್ಪಾದನಾ ನಿಗ್ರಹ ನೀತಿಯಲ್ಲಿ ಹೊಸ ಬದಲಾವಣೆಯನ್ನು ತೋರಿಸಿದೆ. ಇದು ಭಾರತವು ದೀರ್ಘಕಾಲದಿಂದ ಅನುಭವಿಸುತ್ತಿದ್ದ ನೋವು ಮತ್ತು ಆಕ್ರೋಶಕ್ಕೆ ನೀಡಿದ ಅತ್ಯಂತ ನಿರ್ಣಾಯಕ ಪ್ರತಿಕ್ರಿಯೆಯಾಗಿದೆ. ಬಾಲಾಕೋಟ್ ವಾಯುದಾಳಿಯಿಂದ ಹಿಡಿದು ಇತ್ತೀಚಿನ ‘ಆಪರೇಷನ್ ಸಿಂಧೂರ್’ ತನಕ, ಭಾರತವು ಜಗತ್ತಿಗೆ ಸ್ಪಷ್ಟ ಸಂದೇಶ ನೀಡಿದೆ. ಯಾರಾದರೂ ಭಾರತದ ಮೇಲೆ ಕೆಟ್ಟ ಕಣ್ಣು ಹಾಕಿದರೆ ಅವರಿಗೆ ತಕ್ಕ ಉತ್ತರ ಖಚಿತ ಎಂದಿದ್ದಾರೆ.
ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಕಾಲವನ್ನು ನೆನಪಿಸಿಕೊಂಡ ಮೋದಿ, ಅಂದು ದೇಶದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಾಮಾನ್ಯವಾಗಿದ್ದವು. 2008ರ ಸೆಪ್ಟೆಂಬರ್ 13ರಂದು ದೆಹಲಿ ಸ್ಫೋಟ ಮತ್ತು ಕೆಲವೇ ವಾರಗಳಲ್ಲಿ ಮುಂಬೈ ಭಯೋತ್ಪಾದಕ ದಾಳಿ ನಡೆದು ದೇಶವೇ ಬೆಚ್ಚಿಬಿದ್ದಿತ್ತು. ಅಂದು ಪಾಕ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದರೂ ಹಿಂದಿನ ಸರ್ಕಾರ ಸುಮ್ಮನಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಭಾರತವು ಉಗ್ರವಾದದ ವಿರುದ್ಧ ‘ಶೂನ್ಯ ಸಹಿಷ್ಣುತೆ’ (Zero Tolerance) ನೀತಿ ಅನುಸರಿಸುತ್ತಿದೆ ಎಂದು ತಿಳಿಸಿದರು.
‘ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿ ಮೋದಿ ಸರ್ಕಾರವು ಒಂದು ಮಹತ್ವದ ಮತ್ತು ಕಠಿಣ ರಾಷ್ಟ್ರೀಯ ಭದ್ರತಾ ನೀತಿಯನ್ನು ರೂಪಿಸಿದೆ. ಇದರ ಪ್ರಕಾರ, ಇನ್ನುಮುಂದೆ ಯಾವುದೇ ಉಗ್ರ ದಾಳಿಯಾದರೂ ಅದನ್ನು ಕೇವಲ ಸಾಮಾನ್ಯ ದಾಳಿಯೆಂದು ಪರಿಗಣಿಸದೆ, ‘ಯುದ್ಧದ ಕೃತ್ಯ’ (Act of War) ಎಂದೇ ಪರಿಗಣಿಸಲಾಗುತ್ತದೆ. ಉಗ್ರರು ಮತ್ತು ಅವರಿಗೆ ಆಶ್ರಯ ನೀಡುವ ದೇಶಗಳ ನಡುವೆ ಇನ್ನು ಮುಂದೆ ಯಾವುದೇ ವ್ಯತ್ಯಾಸವಿರುವುದಿಲ್ಲ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (UNGA) ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಅವರು ತಾವು ಉಗ್ರರ ವಿರುದ್ಧ ಹೋರಾಡುತ್ತಿರುವುದಾಗಿ ಸುಳ್ಳು ಹೇಳಿಕೊಂಡು ಜಗತ್ತಿನ ಕಣ್ಣಿಗೆ ಮಣ್ಣೆ ಎರಚಲು ಪ್ರಯತ್ನಿಸಿದರು. ಆದರೆ, ಅಲ್ಲಿ ಉಪಸ್ಥಿತರಿದ್ದ ನಮ್ಮ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನವನ್ನು “ಉಗ್ರರ ಸೀರಿಯಲ್ ಪ್ರಾಕ್ಟೀಷನರ್” (ನಿರಂತರವಾಗಿ ಉಗ್ರರನ್ನು ಪೋಷಿಸುವ ದೇಶ) ಎಂದು ಕರೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಬ್ಲಾಕ್‌ಬಸ್ಟರ್ ತಿರುಗೇಟು ನೀಡಿದರು. ಭಾರತದ ಮೇಲೆ ಯಾವುದೇ ಭಯೋತ್ಪಾದಕ ಬೆದರಿಕೆ ಬಂದರೂ, ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕು ಭಾರತಕ್ಕೆ ಇದೆ ಎಂದು ಗುಡುಗಿದರು ಮೋದಿ.
ಪಾಕಿಸ್ತಾನದ ವಿಷಯದಲ್ಲಿ ನರೇಂದ್ರ ಮೋದಿ ಸರ್ಕಾರದ ಈ ಧೋರಣೆಯನ್ನು ಮತ್ತು ‘ಆಪರೇಷನ್ ಸಿಂಧೂರ್’ನಂತಹ ಕಠಿಣ ಕ್ರಮಗಳನ್ನು ಇಡೀ ದೇಶದ ಜನತೆ ಒಮ್ಮುಖವಾಗಿ ಸ್ವಾಗತಿಸಿದೆ. ಭಾರತಕ್ಕೆ ಇಂದು ಗಡಿ ದಾಳಿ ಮಾಡಿ ತಕ್ಕ ಉತ್ತರ ನೀಡುವ ಶಕ್ತಿ ಬಂದಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂಗತಿ. ಉಗ್ರರು ಮತ್ತು ಅವರಿಗೆ ಆಶ್ರಯ ನೀಡುವವರ ನಡುವೆ ವ್ಯತ್ಯಾಸವಿಲ್ಲ ಎಂಬ ಸರ್ಕಾರದ ಹೊಸ ಸಿದ್ಧಾಂತ ರಾಷ್ಟ್ರೀಯ ಭದ್ರತೆಗೆ ಹೊಸ ಆಯಾಮವನ್ನು ನೀಡಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ಆದರೆ, ಕೇವಲ ಒಂದು ಶತ್ರು ರಾಷ್ಟ್ರದ ಮೇಲೆ ಗರ್ಜಿಸುವುದೇ ನಿಜವಾದ ರಾಷ್ಟ್ರೀಯ ಭದ್ರತೆಯಾಗಲು ಸಾಧ್ಯವೇ? ಭಾರತದ ಅಖಂಡತೆಗೆ ಅತಿ ದೊಡ್ಡ ಕಂಟಕವಾಗಿ ಪರಿಣಮಿಸಿರುವ ಚೀನಾದ ವಿಚಾರದಲ್ಲಿ ಸರ್ಕಾರ ತೋರುತ್ತಿರುವ ಮೌನ ಮತ್ತು ರಾಜಿ ಧೋರಣೆಯು ಈ ಎಲ್ಲ ಸಾಧನೆಗಳ ಮೇಲೊಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸುತ್ತದೆ. ಪಾಕಿಸ್ತಾನ ಆರ್ಥಿಕವಾಗಿ ಹಾಳಾಗಿರುವ, ಜಾಗತಿಕವಾಗಿ ಮೂಲೆಗುಂಪಾಗಿರುವ ಒಂದು ದುರ್ಬಲ ರಾಷ್ಟ್ರ. ಅದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಸುಲಭ. ಆದರೆ, ವಿಶ್ವದ ಬಲಾಢ್ಯ ರಾಷ್ಟ್ರಗಳ ಸಾಲಿನಲ್ಲಿ ನಿಂತಿರುವ ಚೀನಾ ನಮ್ಮ ಗಡಿ ದಾಟಿ ನುಗ್ಗುತ್ತಿದ್ದರೆ, ಅರುಣಾಚಲ ಪ್ರದೇಶದ ಮೇಲೆಯೇ ಕಣ್ಣಿಟ್ಟಿದ್ದರೆ, ಅಲ್ಲಿ ಸರ್ಕಾರದ ‘ಶೂನ್ಯ ಸಹಿಷ್ಣುತೆ’ ನೀತಿ ಎಲ್ಲಿ ಮಾಯವಾಗುತ್ತದೆ? ಜತೆಗೆ ಪಾಕಿಸ್ತಾನಕ್ಕೆ ಕಠಿಣ ಸಂದೇಶ ನೀಡುವ ಸರ್ಕಾರ, ಪಾಕಿಸ್ತಾನದ ಪ್ರಮುಖ ಬೆಂಬಲಿಗನಾಗಿರುವ ಚೀನಾದ ವಿಚಾರದಲ್ಲಿ ಯಾವ ನಿಲುವು ತೆಗೆದುಕೊಳ್ಳುತ್ತಿದೆ?
ಮೋದಿ ಅವರು ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ (ಸೆಪ್ಟೆಂಬರ್ 2014) ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲೇ, ಲಡಾಖ್‌ನ ಚುಮಾರ್ ಪ್ರದೇಶದಲ್ಲಿ ಚೀನಾ ಸೇನೆ ರಸ್ತೆ ನಿರ್ಮಿಸಲು ಮುಂದಾಯಿತು. ಇದಕ್ಕೆ ಭಾರತೀಯ ಸೈನಿಕರು ತೀವ್ರವಾಗಿ ಅಡ್ಡಿಪಡಿಸಿದರು. ಸುಮಾರು 16 ದಿನಗಳ ಕಾಲ ಮುಖಾಮುಖಿ (Standoff) ಮುಂದುವರಿದು, ಕೊನೆಗೆ ಉಭಯ ದೇಶಗಳ ಮಾತುಕತೆಯ ಬಳಿಕ ಚೀನಾ ಹಿಂದೆ ಸರಿದಿತ್ತು.
ಭೂತಾನ್, ಚೀನಾ ಮತ್ತು ಭಾರತ ಸಂಧಿಸುವ (Tri-junction) ಡೋಕ್ಲಾಮ್ ಪ್ರಸ್ಥಭೂಮಿಯಲ್ಲಿ ಚೀನಾ ಅಕ್ರಮವಾಗಿ ರಸ್ತೆ ನಿರ್ಮಿಸಲು ಪ್ರಯತ್ನಿಸಿದಾಗ, ಭಾರತೀಯ ಸೇನೆಯು ನೇರವಾಗಿ ಮಧ್ಯಪ್ರವೇಶಿಸಿ ಅದನ್ನು ತಡೆಯಿತು. ಇದು ಬರೋಬ್ಬರಿ 73 ದಿನಗಳ ಕಾಲ (ಜೂನ್ ನಿಂದ ಆಗಸ್ಟ್ ವರೆಗೆ) ಮುಂದುವರಿದ ಅತ್ಯಂತ ಗಂಭೀರ ಬಿಕ್ಕಟ್ಟಾಗಿತ್ತು. ಕೊನೆಗೆ ಅಂತಾರಾಷ್ಟ್ರೀಯ ಒತ್ತಡದಿಂದಾಗಿ ಚೀನಾ ತನ್ನ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕಾಯಿತು.
ಮೋದಿಯವರ ಎರಡನೇ ಅವಧಿಯಲ್ಲಿ (ಮೇ-ಜೂನ್ 2020) ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಉಭಯ ದೇಶಗಳ ಸೇನೆಯ ನಡುವೆ ಭೀಕರ ಕಲಹ ನಡೆಯಿತು. ಈ ಸಂಘರ್ಷದಲ್ಲಿ ಭಾರತದ 20 ವೀರ ಯೋಧರು ಹುತಾತ್ಮರಾದರು ಮತ್ತು ಚೀನಾದ ಸೈನಿಕರಿಗೂ ಭಾರೀ ಸಾವುನೋವುಗಳಾದವು. ಇದು ದಶಕಗಳ ಬಳಿಕ ಭಾರತ-ಚೀನಾ ಗಡಿಯಲ್ಲಿ ನಡೆದ ಅತ್ಯಂತ ರಕ್ತಸಿಕ್ತ ಘಟನೆ. ಇದರ ಬಳಿಕ ಲಡಾಖ್ ಗಡಿಯಲ್ಲಿ ಲಕ್ಷಾಂತರ ಸೈನಿಕರನ್ನು ಎರಡೂ ರಾಷ್ಟ್ರಗಳು ನಿಯೋಜಿಸಿದವು.
ಚೀನಾದ ವಿಚಾರದಲ್ಲಿ ಮೋದಿ ಸರ್ಕಾರದ ಕೆಲವು ನಿಲುವುಗಳು ದೇಶದೊಳಗೆ ತೀವ್ರ ಚರ್ಚೆ ಹಾಗೂ ಟೀಕೆಗೆ ಗುರಿಯಾಗಿದ್ದು ಗೊತ್ತೇ ಇದೆ.
2020ರ ಜೂನ್‌ನಲ್ಲಿ ಗಲ್ವಾನ್ ಘಟನೆ ನಡೆದು ನಮ್ಮ ಯೋಧರು ಹುತಾತ್ಮರಾದ ಬಳಿಕ, ಪ್ರಧಾನಿ ಮೋದಿ ಅವರು ಸರ್ವಪಕ್ಷ ಸಭೆಯಲ್ಲಿ ಮಾತನಾಡುತ್ತಾ, “ನಮ್ಮ ಗಡಿಯೊಳಗೆ ಯಾರೂ ಬಂದಿಲ್ಲ, ನಮ್ಮ ಯಾವುದೇ ಪೋಸ್ಟ್‌ಗಳು ಯಾರ ಕೈಗೂ ಸೇರಿಲ್ಲ“ ಎಂದಿದ್ದರು. ವಿರೋಧ ಪಕ್ಷಗಳು ಈ ಹೇಳಿಕೆಯನ್ನು ಗಡಿಯಲ್ಲಿ ಚೀನಾದ ಅತಿಕ್ರಮಣಕ್ಕೆ ಸರ್ಕಾರ ನೀಡಿದ ‘ಕ್ಲೀನ್ ಚಿಟ್’ ಎಂದು ಬಿಂಬಿಸಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡವು.
ಲಡಾಖ್ ಮತ್ತು ಅರುಣಾಚಲ ಪ್ರದೇಶದ ಗಡಿ ಭಾಗಗಳಲ್ಲಿ ಚೀನಾ ರಸ್ತೆಗಳು, ಸೇತುವೆಗಳು ಮತ್ತು ಸಂಪೂರ್ಣ ಹಳ್ಳಿಗಳನ್ನೇ ನಿರ್ಮಿಸುತ್ತಿದ್ದರೂ, ಭಾರತ ಸರ್ಕಾರ ಕೇವಲ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆಗಳಿಗೆ ಸೀಮಿತವಾಯಿತೆ ವಿನಃ ಪಾಕಿಸ್ತಾನದ ಮೇಲೆ ನಡೆಸುವಂತಹ ನೇರ ಆಕ್ರಮಣಕಾರಿ ದಾಳಿಗಳನ್ನು ಚೀನಾದ ವಿಷಯದಲ್ಲಿ ನಡೆಸಿಲ್ಲ ಎಂಬ ಆರೋಪವಿದೆ.
ಇದನ್ನೂ ಓದಿ: ಮೋದಿಗೆ ಧೈರ್ಯ ಇದ್ದರೆ ಟ್ರಂಪ್ ಸುಳ್ಳುಗಾರ ಎಂದು ಹೇಳಲಿ: ರಾಹುಲ್ ಗಾಂಧಿ ಸವಾಲು
ಪಾಕಿಸ್ತಾನದೊಂದಿಗೆ ಎಲ್ಲಾ ವ್ಯಾಪಾರಗಳನ್ನು ಸಂಪೂರ್ಣವಾಗಿ ಕಡಿದುಕೊಂಡಿರುವ ಭಾರತ, ಚೀನಾದ ಜೊತೆ ಮಾತ್ರ ಅತಿ ಹೆಚ್ಚಿನ ವ್ಯಾಪಾರವನ್ನು (ಬಿಲಿಯನ್‌ಗಟ್ಟಲೆ ಡಾಲರ್ ಆಮದು) ಮುಂದುವರಿಸಿದೆ. ಎಲೆಕ್ಟ್ರಾನಿಕ್ಸ್, ಕೈಗಾರಿಕಾ ಯಂತ್ರೋಪಕರಣಗಳು ಹಾಗೂ ಔಷಧೀಯ ಕಚ್ಚಾ ವಸ್ತುಗಳಿಗಾಗಿ ಭಾರತ ಇಂದಿಗೂ ಚೀನಾವನ್ನು ಅವಲಂಬಿಸಬೇಕಿರುವುದರಿಂದ, ಸಂಪೂರ್ಣವಾಗಿ ಚೀನಾವನ್ನು ಬಹಿಷ್ಕರಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಪಾಕಿಸ್ತಾನದ ವಿರುದ್ಧ ಸಾರ್ವಜನಿಕ ಭಾಷಣಗಳಲ್ಲಿ ನೇರವಾಗಿ ‘ಪಾಕಿಸ್ತಾನ’ ಎಂದೇ ಗುಡುಗುವ ಪ್ರಧಾನಿ ಮೋದಿ, ಚೀನಾದ ಗಡಿ ಬಿಕ್ಕಟ್ಟುಗಳು ಅಥವಾ ಅತಿಕ್ರಮಣಗಳ ಬಗ್ಗೆ ಮಾತನಾಡುವಾಗ ನೇರವಾಗಿ ಚೀನಾದ ಹೆಸರನ್ನು ಪ್ರಸ್ತಾಪಿಸುವುದನ್ನು ಆದಷ್ಟು ಕಡಿಮೆ ಮಾಡುತ್ತಾರೆ. ಬದಲಿಗೆ ‘ನೆರೆಹೊರೆಯ ದೇಶಗಳು’ ಅಥವಾ ‘ಗಡಿ ಭದ್ರತೆ’ ಎಂಬ ಸಾಂಪ್ರದಾಯಿಕ ಪದಗಳನ್ನು ಬಳಸುತ್ತಾರೆ.
ಕೆಲವರ ಮೇಲೆ ಸಿಂಹವಾಗಿ ಗರ್ಜಿಸಿ, ಬಲಿಷ್ಠರ ಮುಂದೆ ಮೌನವಾಗಿರುವುದು ಬಲಶಾಲಿ ನಾಯಕತ್ವದ ಲಕ್ಷಣವಲ್ಲ. ಪಾಕ್ ಮೇಲೆ ಎದೆ ತಟ್ಟಿಕೊಳ್ಳುವ ಮೋದೀಜಿ, ಚೀನಾದ ಆಕ್ರಮಣಕಾರಿ ನೀತಿಯ ವಿಚಾರದಲ್ಲೂ ಅದೇ ಎದೆಗಾರಿಕೆಯನ್ನು ಪ್ರದರ್ಶಿಸುವ ಕಾಲ ಯಾವಾಗ ಬರುತ್ತದೆ? ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಶತ್ರುವಿನ ಬಲ ನೋಡಿ ನೀತಿ ಬದಲಾಗದೆ, ದೇಶದ ಅಖಂಡತೆಯನ್ನು ಕಾಪಾಡುವಲ್ಲಿ ಎಲ್ಲ ಶತ್ರುಗಳ ವಿರುದ್ಧವೂ ಸಮಾನವಾದ ಹಾಗೂ ದೃಢವಾದ ನಿಲುವು ತಳೆದಾಗ ಮಾತ್ರ ನಿಜವಾದ ಬಲಿಷ್ಠ ದೇಶ ಹಾಗೂ ಬಲಿಷ್ಠ ನಾಯಕತ್ವ ರೂಪುಗೊಳ್ಳುತ್ತದೆ.




