ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ಖಂಡಿಸಿ ಇಂದು ರಾಜಸ್ಥಾನದ ಜೈಪುರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ- CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಏಕಾಏಕಿ ಹಲ್ಲೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
ನೀಟ್ (NEET), ಸಿಬಿಎಸ್ಇ, ಸಿಯುಇಟಿ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ನಿರುದ್ಯೋಗ ಸಮಸ್ಯೆ ಖಂಡಿಸಿ ಜೈಪುರದ ಶಹೀದ್ ಸ್ಮಾರಕದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆಗೆ ಬೃಹತ್ ಪ್ರತಿಭಟನೆ ಆಯೋಜಿಸಲಾಗಿತ್ತು. ಸಭೆಯನ್ನುದ್ದೇಶಿಸಿ ಮಾತನಾಡಲು ದೀಪ್ಕೆ ಅವರು ಆಗಮಿಸಿದಾಗ ಈ ಘಟನೆ ನಡೆದಿದೆ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಭಿಜೀತ್ ದೀಪ್ಕೆ ಅವರನ್ನು ಅವರ ಬೆಂಬಲಿಗರು ಹೆಗಲ ಮೇಲೆ ಕೂರಿಸಿಕೊಂಡು ವೇದಿಕೆಯತ್ತ ಕರೆದೊಯ್ಯುತ್ತಿದ್ದರು. ಈ ವೇಳೆ ಗುಂಪಿನಲ್ಲಿದ್ದ ಕೆಲವರು ಏಕಾಏಕಿ ದೀಪ್ಕೆ ಅವರ ಸ್ಕಾರ್ಫ್ ಎಳೆದು, ನಾಲ್ಕು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲದೆ, ಅವರನ್ನು ಕೆಳಗೆ ಎಳೆಯಲು ಯತ್ನಿಸಿದ್ದಾರೆ. ಹಲ್ಲೆ ನಡೆಯುತ್ತಿದ್ದಂತೆ ರೊಚ್ಚಿಗೆದ್ದ ಬೆಂಬಲಿಗರು, ಆರೋಪಿಗಳನ್ನು ಹಿಡಿದು ಥಳಿಸಿದ್ದಾರೆ. ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.
ಗದ್ದಲದ ನಡುವೆಯೂ ದೀಪ್ಕೆ ಅವರು ಗುಂಪನ್ನು ಶಾಂತಗೊಳಿಸಲು ಹಾಗೂ ಆರೋಪಿಗಳ ಮೇಲೆ ಹಲ್ಲೆ ನಡೆಸದಂತೆ ತಡೆಯಲು ಯತ್ನಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸದ್ಯ ಇಬ್ಬರು ಯುವಕರನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮೋದಿ ಸರ್ಕಾರದ ಡಿಲಿಮಿಟೇಷನ್ ದುಸ್ಸಾಹಸ: ಮ್ಯಾಜಿಕ್ ನಂಬರ್‌ಗಾಗಿ ಪ್ರಜಾಸತ್ತಾತ್ಮಕ ಮೌಲ್ಯಗಳ ಬಲಿ!
ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳ ನೈತಿಕ ಹೊಣೆಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸಿಜೆಪಿ ವತಿಯಿಂದ ದೇಶಾದ್ಯಂತ ಅಭಿಯಾನ ನಡೆಸಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಜೈಪುರದಲ್ಲಿ ಯುವಜನರು ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸುತ್ತಿದ್ದರು. ಈ ಪ್ರತಿಭಟನೆಯ ಉಸ್ತುವಾರಿ ನೋಡಿಕೊಳ್ಳಲು ದೀಪ್ಕೆ ಅವರು ಭಾನುವಾರ ರಾತ್ರಿಯೇ ಜೈಪುರಕ್ಕೆ ಆಗಮಿಸಿದ್ದರು.
‘ಹಲ್ಲೆ ಹೇಡಿತನದ ಸಂಕೇತ’: ದೀಪ್ಕೆ
ತಮ್ಮ ಮೇಲಿನ ಹಲ್ಲೆಯ ಕುರಿತು ‘ಎಕ್ಸ್’ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅಭಿಜೀತ್ ದೀಪ್ಕೆ, ಈ ಕೃತ್ಯವನ್ನು ಖಂಡಿಸಿದ್ದಾರೆ. “ದೈಹಿಕ ಹಲ್ಲೆಗಳು ಭಯ ಮತ್ತು ಹೇಡಿತನದ ಸಂಕೇತವಾಗಿವೆ. ನಾವು ಶಾಂತಿಯುತವಾಗಿ ನಮ್ಮ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ. ನಾನು ಗಾಂಧಿ ಮತ್ತು ಅಂಬೇಡ್ಕರ್ ಅವರ ಅನುಯಾಯಿಯಾಗಿದ್ದು, ಈ ಹೋರಾಟವನ್ನು ಶಾಂತಿ ಮತ್ತು ಪ್ರೀತಿಯಿಂದಲೇ ಮುನ್ನಡೆಸುತ್ತೇನೆ,” ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ, “ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಲೇಬೇಕು,” ಎಂದು ತಮ್ಮ ಮೂಲ ಬೇಡಿಕೆಯನ್ನು ಅವರು ಮತ್ತೊಮ್ಮೆ ಕಟುವಾಗಿ ಪುನರುಚ್ಚರಿಸಿದ್ದಾರೆ.




