ಅರಟಾಳ್ ರುದ್ರಗೌಡರ ಪ್ರಯತ್ನದಿಂದ ಲಿಂಗಾಯತರು ಆಧುನಿಕ ಇಂಗ್ಲಿಷ್ ಶಿಕ್ಷಣ ಮತ್ತು ಸಾಂಪ್ರದಾಯಿಕ ಸಂಸ್ಕೃತ ಶಿಕ್ಷಣ ಪಡೆದು ಬ್ರಾಹ್ಮಣರಿಗೆ ಪ್ರತಿಸ್ಪರ್ಧಿಗಳಾಗಿ ಬೆಳೆದರು. ಗೌಡರು ಮುಂಬೈಯ ರಾಯಲ್ ಏಸಿಯಾಟಿಕ್ ಸೊಸೈಟಿಯ ಸದಸ್ಯರಾಗಿ, ಎಂಥಾಪೊಲಾಜಿಕಲ್ ಸೊಸೈಟಿ ಜರ್ನಲ್‌ದಲ್ಲಿ ಅನೇಕ ಲೇಖನಗಳನ್ನು ಬರೆದರು. ಅಂದಿನ ಸಾಮಾಜಿಕ ಪ್ರತಿಷ್ಠೆಯಾಗಿದ್ದ ಅಡ್ಡಪಲ್ಲಕ್ಕಿ ಉತ್ಸವ, ವ್ಯಾಸನತೋಳು ಮೆರವಣಿಗೆ, ದೇವರ ಪೂಜೆಯ ಹಕ್ಕು ಮೊದಲಾದ ಬ್ರಾಹ್ಮಣರ ಜೊತೆಗಿನ ಹೋರಾಟಗಳಲ್ಲಿ ಲಿಂಗಾಯತರಿಗೆ ಜಯವನ್ನು ದೊರಕಿಸಿಕೊಟ್ಟರು.
ಲಿಂಗಾಯತ ಪಂಚಮಸಾಲಿ ಉಪವರ್ಗದ ಮತ್ತೊಂದು ಖ್ಯಾತನಾಮ ಹೆಸರು ರಾವ್ ಬಹಾದ್ದೂರ್ ಅರಟಾಳ್ ರುದ್ರಗೌಡರು. ಬ್ರಿಟೀಷ್ ಆಡಳಿತದಲ್ಲಿ ದಕ್ಷ ಅಧಿಕಾರಿಯಾಗಿ, ಬೆಳಗಾವಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಹೆಸರುವಾಸಿಯಾಗಿದ್ದರು. ಲಿಂಗಾಯತ ಧರ್ಮ ಮತ್ತು ಸಮಾಜದ ಉನ್ನತಿಗಾಗಿ ಅರಟಾಳರು ಮಾಡಿದ ಕಾರ್ಯಗಳು ಅನುಪಮ. ಮೆಕಾಲೆ ಶಿಕ್ಷಣ ನೀತಿ ಜಾರಿಯಾಗಿ ಶಿಕ್ಷಣ ಸಾರ್ವತ್ರಿಕರಣಗೊಂಡ ಮೇಲೆ ಕರ್ನಾಟಕದಲ್ಲಿ ಅಕ್ಷರ ವಂಚಿತ ಬ್ರಾಹ್ಮಣೇತರ ಸಮುದಾಯದ ಜನರಿಗೆ ಶಿಕ್ಷಣ ದೊರಕಿಸಿಕೊಡುವಲ್ಲಿ ಲಿಂಗಾಯತ ಮಠಗಳು ಹಾಗು ಶಿಕ್ಷಣ ಸಂಸ್ಥೆಗಳ ಕೊಡುಗೆ ಅನನ್ಯವಾದದ್ದು. ಧಾರವಾಡದಲ್ಲಿ ಶಿಕ್ಷಣ ಅಧಿಕಾರಿಯಾಗಿದ್ದ ಡೆಪ್ಯುಟಿ ಚೆನ್ನಬಸಪ್ಪನವರು ಬಹುಜನರ ಶಿಕ್ಷಣಕ್ಕೆ ನೀಡಿದ ಕೊಡುಗೆ ಬೆಲೆ ಕಟ್ಟಲಾಗದು. ಅದನ್ನು ಮುಂದುವರೆಸಿದ ಗಿಲಗಂಚಿ ಗುರುಸಿದ್ದಪ್ಪರು ಮತ್ತು ಅರಟಾಳ್ ರುದ್ರಗೌಡರು ಬ್ರಾಹ್ಮಣರಿಗೆ ಸರಿಸಮಾನವಾಗಿ ಲಿಂಗಾಯತರು ಶಿಕ್ಷಣ ಪಡೆಯಬೇಕೆಂದು ತಳಮಟ್ಟದಲ್ಲಿ ಕಾರ್ಯ ಮಾಡಿದರು. ಅರಟಾಳ್ ರುದ್ರಗೌಡರ ದಕ್ಷತೆಗೆ ಬ್ರಿಟಿಷ್ ಆಡಳಿತ ಮಾರುಹೋಗಿತ್ತು. 1897 ರಲ್ಲಿ ಪ್ಲೇಗ್ ಮಹಾಮಾರಿ ವಕ್ಕರಿಸಿದಾಗ ಬ್ರಿಟಿಷ್ ಸರಕಾರ ಅಂದಿನ ಮುಂಬೈ ಪ್ರಾಂತ್ಯದಲ್ಲಿ ಪ್ರಸಿದ್ಧ ಪ್ಲೇಗ್ ಆಯುಕ್ತ ವಾಲ್ಟರ್ ಚಾರ್ಲ್ಸ್ ರಾಂಡ್ (ಭಾರತೀಯ ನಾಗರಿಕ ಸೇವೆಗಳ (ICS) ಅಧಿಕಾರಿ) ಅವರನ್ನು ಪುಣೆಯಲ್ಲಿ ಬುಬೊನಿಕ್ ಪ್ಲೇಗ್ ಸಾಂಕ್ರಾಮಿಕದ ಸಮಯದಲ್ಲಿ ವಿಶೇಷ ಪ್ಲೇಗ್ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸಿತ್ತು.

ಪ್ಲೇಗ್ ಏಕಾಏಕಿಯಾಗಿ ನಿಯಂತ್ರಿಸಲು ಅವರ ಆಕ್ರಮಣಕಾರಿ ಕ್ರಮಗಳು ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಪರಿಣಾಮವಾಗಿ, ಅವರು ಮತ್ತು ಅವರ ಮಿಲಿಟರಿ ಬೆಂಗಾವಲು ಲೆಫ್ಟಿನೆಂಟ್ ಚಾರ್ಲ್ಸ್ ಅಯರ್ಸ್ಟ್ ಅವರನ್ನು ಜೂನ್ 22, 1897ರಂದು ಚಾಪೇಕರ್ ಸಹೋದರರು (ದಾಮೋದರ್, ಬಾಲಕೃಷ್ಣ ಮತ್ತು ವಾಸುದೇವ್) ಹತ್ಯೆ ಮಾಡಿದರು. ಚಾರ್ಲ್ಸ್ ಅವರು ಪ್ಲೇಗ್ ಜಾರಿ ಪಡೆಯೊಂದಿಗೆ ಕಟ್ಟುನಿಟ್ಟಾಗಿ ಖಾಸಗಿ ಮನೆಗಳಿಗೆ ಪ್ರವೇಶಿಸಿ ಕ್ರಮ ತೆಗೆದುಕೊಂಡಿದ್ದರು. ವೈಯಕ್ತಿಕ ಆಸ್ತಿಯನ್ನು ನಾಶಪಡಿಸುವುದು ಮತ್ತು ನಾಗರಿಕರನ್ನು ಸಾರ್ವಜನಿಕ ದೈಹಿಕ ಪರೀಕ್ಷೆಗಳಿಗೆ ಒಳಪಡಿಸಿದವು, ಇದು ಸ್ಥಳೀಯರ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳನ್ನು ಕೆರಳಿಸಿದವು ಎಂದು ಚಿತ್ಪಾವನ ಬ್ರಾಹ್ಮಣ ಚಾಪ್ಲೇಕರ್ ಸಹೋದರರು ಚಾರ್ಲ್ಸ್ ರನ್ನು ಸಹಕರಿಸಲಿಲ್ಲ. ಚಾರ್ಲ್ಸ್ ಕೊಲೆಯಿಂದ ಉದ್ಭವಿಸಿದ ಕಾವನ್ನು ತಣಿಸಿ ಪರಿಣಾಮಕಾರಿಯಾಗಿ ಕಾರ್ಯ ಮಾಡುವ ಪರ್ಯಾಯ ಅಧಿಕಾರಿಯಾಗಿ ಅರಟಾಳ್ ರುದ್ರಗೌಡರನ್ನು ಬ್ರಿಟಿಷ್ ಸರಕಾರ ಅಂದು ಸಾತಾರಾಕ್ಕೆ ವರ್ಗಾಯಿಸಿತು. ಅರಟಾಳರು ಸರಕಾರದ ನಿರೀಕ್ಷೆಯಂತೆ ಬಹಳ ಸೌಹಾರ್ದಯುತವಾಗಿ ಪ್ಲೇಗ್ ನ್ನು ನಿಯಂತ್ರಣಕ್ಕೆ ತಂದು ಬ್ರಿಟಿಷ್ ಸರ್ಕಾರದ ಮನ್ನಣೆಗೆ ಪಾತ್ರರಾಗಿದ್ದರು. ಇಂತಹ ದಕ್ಷ ಅಧಿಕಾರಿಯಾಗಿದ್ದ ಅರಟಾಳರು ದೈತ್ಯ ಸಂಘಟಕರೂ ಆಗಿದ್ದರು. ಆ ಕಾಲದಲ್ಲಿ ಲಿಂಗಾಯತರನ್ನು ಸಂಘಟಿಸಿ ಬ್ರಾಹ್ಮಣರೊಂದಿಗೆ ಸ್ಪರ್ಧಿಸುವಂತೆ ಮಾಡುವಲ್ಲಿ ಅರಟಾಳರ ಕೊಡುಗೆ ದೊಡ್ಡದು.
ಅರಟಾಳ್ ರುದ್ರಗೌಡರು 1851 ಮಾರ್ಚ್ 22 ರಂದು ಕುಂದಗೋಳ ತಾಲೂಕಿನ ಹಿರೆ ಹರಕುಣಿ ಗ್ರಾಮದ ಲಿಂಗಾಯತ ಪಂಚಮಸಾಲಿ ಗೌಡರ ಮನೆತನದಲ್ಲಿ ಜನಿಸಿದರು. ಉತ್ತರಕರ್ನಾಟಕದಲ್ಲಿ ಬ್ರಾಹ್ಮಣರ ಶೋಷಣೆಯ ವಿರುದ್ಧ ಅವರು ಏಕಾಂಗಿಯಾಗಿ ಹೋರಾಡಿದರು. ಬ್ರಾಹ್ಮಣರ ಶೋಷಣೆಗೆ ಪೇಶ್ವೆಗಳ ಆಡಳಿತದ ಬೆಂಬಲವಿತ್ತು. ಅವರ ಹೋರಾಟ ಸಾಮೂಹಿಕವಲ್ಲದ ಕಾರಣ ಅದು ಚಳವಳಿಯ ರೂಪ ತಾಳಲಿಲ್ಲ. ಅದು ಚಳುವಳಿ ಆಗಿದ್ದರೆ, ಅವರು ದೊಡ್ಡ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದರು. ಸರಕಾರಿ ಅಧಿಕಾರಿಯಾಗಿ, ಭ್ರಷ್ಟಾಚಾರ ತಡೆಯುವಲ್ಲಿ ರುದ್ರಗೌಡರದ್ದು ಪರಮ ಸಾಧನೆ ಎಂದು ಅಂದಿನ ಬ್ರಿಟಿಷ್ ಸರಕಾರದ ರೆವಿನ್ಯೂ ಅಡ್ಮಿನಿಸ್ಟ್ರೇಟಿವ್ ರಿಪೋರ್ಟಿನಲ್ಲಿ ದಾಖಲಾದ್ದು ಗಮನಾರ್ಹ. ಹಳ್ಳಿಯಲ್ಲಿ ಹುಟ್ಟಿ ರುದ್ರಗೌಡರು ನಿರ್ವಹಿಸಿದ ಸರಕಾರಿ ಹುದ್ದೆಗಳು ಹೀಗಿವೆ :
೧೮೭೩-೭೪: ಅರಟಾಳ್ ಗ್ರಾಮದ ಗೌಡಕಿ.
೧೮೭೫: 15 ರೂ. ವೇತನದ ಕಾರಕೂನ, ಧಾರವಾಡ.
೧೮೭೮: ಕಲೆಕ್ಟರ್ ಡೆಪ್ಯುಟಿ ಚಿಟೀಸ್, ಧಾರವಾಡ.
೧೮೮೦: ಕಲೆಕ್ಟರ್ ಅವರ ಚಿಟೀಸ್, ಧಾರವಾಡ.
೧೮೮೮: ಕಲೆಕ್ಟರ್ ಅವರ ದಫ್ತರ್‌ದಾರ, ಉತ್ತರ ಕನ್ನಡ ಜಿಲ್ಲೆ.
೧೮೯೦: ದಕ್ಷಿಣ ವಿಭಾಗದ ಕಮೀಶನ್ ಅವರ ನೇಟಿವ್ ಅಸಿಸ್ಟೆಂಟ್.
೧೮೯೨: ಡಿಸ್ಟ್ರಿಕ್ಟ್ ಡೆಪ್ಯುಟಿ ಕಲೆಕ್ಟರ್, ವಿಜಾಪುರ.
೧೮೯೭: ಡಿಸ್ಟ್ರಿಕ್ಟ್ ಡೆಪ್ಯುಟಿ ಕಲೆಕ್ಟರ್, ನಾಸಿಕ.
೧೮೯೮-೧೯೧೩: ಡಿಸ್ಟ್ರಿಕ್ಟ್ ಡೆಪ್ಯುಟಿ ಕಲೆಕ್ಟರ್, ಬೆಳಗಾವಿ
ಕೇವಲ ಮೆಟ್ರಿಕ್ ವರೆಗೆ ಓದಿ, ಹಳ್ಳಿಯ ಗೌಡಕಿಯಿಂದ ಹಿಡಿದು, ಡೆಪ್ಯುಟಿ ಕಲೆಕ್ಟರ್ ಹುದ್ದೆ ವರೆಗೆ ಉನ್ನತ ಹುದ್ದೆಯ ವರೆಗೆ ರುದ್ರಗೌಡರ ಪಯಣ ಸಾಗಿತ್ತು.
೧೮೮೩ ರಲ್ಲಿ ಧಾರವಾಡದಲ್ಲಿ “ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ” ಯನ್ನು ಸ್ಥಾಪಿಸಿ ಆರ್ಥಿಕವಾಗಿ ದುರ್ಬಲವಾಗಿರುವ ಪ್ರತಿಭಾವಂತ ಲಿಂಗಾಯತರಿಗೆ ಧನ ದಾಸೋಹವನ್ನು ಆರಂಭಿಸಿದರು. “ಆ ಕಾಲದಲ್ಲಿ ಈ ಸಂಸ್ಥೆಯು ಲಿಂಗಾಯತರ ಶಿಕ್ಷಣಾಭಿವೃದ್ಧಿಯ ಅನಧಿಕೃತ ಇಲಾಖೆಯಂತೆ ಕಾರ್ಯ ಮಾಡಿತು. ಸುಶಿಕ್ಷಿತ ಲಿಂಗಾಯತ ವಿದ್ಯಾರ್ಥಿಗಳ ಹೆಸರನ್ನು ನೌಕರಿಗಾಗಿ ಶಿಫಾರಸು ಮಾಡುವ ಅಧಿಕಾರವನ್ನು ಅಂದಿನ ಸರಕಾರ ಈ ಸಂಸ್ಥೆಗೆ ನೀಡುವ ಮೂಲಕ, ಇದು ಅರೆ ಸರಕಾರಿ ಸಂಸ್ಥೆಯೆಂಬಂತೆ ಮಾನ್ಯತೆ ಗಳಿಸಿತು” ಎಂದು ಸಂಶೋಧಕ ಡಾ. ಕಲಬುರ್ಗಿಯವರು ಬಣ್ಣಿಸಿದ್ದಾರೆ. ಆನಂತರ 1889 ರಲ್ಲಿ ಗದುಗಿನಲ್ಲಿ ಜಗದ್ಗುರು ತೋಂಟದಾರ್ಯ ಸಂಸ್ಕೃತ ಪಾಠಶಾಲೆ, 1903 ರಲ್ಲಿ ಹುಬ್ಬಳ್ಳಿಯಲ್ಲಿ ಪ್ರಿಂಟಿಂಗ್ ಪ್ರೆಸ್, 1904 ರಲ್ಲಿ ವೀರಶೈವ ಮಹಾಸಭೆ, 1906 ರಲ್ಲಿ ಬೆಳಗಾವಿಯಲ್ಲಿ ಸಿರಸಂಗಿ ಲಿಂಗರಾಜ ಫಂಡ್, 1907 ರಲ್ಲಿ ಕೊಲ್ಲಾಪುರದಲ್ಲಿ ಲಿಂಗಾಯತ ಬೋರ್ಡಿಂಗ್, ಅದೇ ವರ್ಷ ಸೋಲಾಪುರದಲ್ಲಿ ಲಿಂಗಾಯತ ಎಜುಕೇಶನ್ ಅಸೋಸಿಯೇಶನ್, 1908 ರಲ್ಲಿ ಬೆಳಗಾವಿಯಲ್ಲಿ ಸೂಲಗಿತ್ತಿಯರ ತರಬೇತಿ ಕೇಂದ್ರ, 1916 ರಲ್ಲಿ ಬೆಳಗಾವಿಯಲ್ಲಿ ಕೆ ಎಲ್ ಇ ಸೊಸೈಟಿ, ಅದೇ ವರ್ಷ ಧಾರವಾಡದಲ್ಲಿ ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್, 1917 ರಲ್ಲಿ ಧಾರವಾಡದಲ್ಲಿ ಕರ್ನಾಟಕ ಕಾಲೇಜು, ಹೀಗೆ ಸರಣಿಯಲ್ಲಿ ಅನೇಕ ಸಂಸ್ಥೆಗಳನ್ನು ಪ್ರತ್ಯಕ್ಷವಾಗಿ ಸ್ಥಾಪಿಸಿದರೆ, ಪರೋಕ್ಷವಾಗಿ ಇನ್ನೂ ಅನೇಕ ಸಂಸ್ಥೆಗಳ ಸ್ಥಾಪನೆಗೆ ಪ್ರೇರಣೆ ನೀಡಿದರು. ತಮ್ಮ ಬದುಕಿನ 30 ವರ್ಷಗಳ ಸೇವಾ ಕಾಲದಲ್ಲಿ ಅರಟಾಳ್ ಅವರು ಸಾರ್ವಜನಿಕರಿಂದ ಸುಮಾರು ರೂ. 25 ಲಕ್ಷ ದೇಣಿಗೆ ಸಂಗ್ರಹಿಸಿದರು, ಇಂದು ಅದು ನೂರಾರು ಕೋಟಿಗೆ ಸಮವಾಗುತ್ತಿತ್ತು.
ಅರಟಾಳ್ ರುದ್ರಗೌಡರ ಪ್ರಯತ್ನದಿಂದ ಲಿಂಗಾಯತರು ಆಧುನಿಕ ಇಂಗ್ಲಿಷ್ ಶಿಕ್ಷಣ ಮತ್ತು ಸಾಂಪ್ರದಾಯಿಕ ಸಂಸ್ಕೃತ ಶಿಕ್ಷಣ ಪಡೆದು ಬ್ರಾಹ್ಮಣರಿಗೆ ಪ್ರತಿಸ್ಪರ್ಧಿಗಳಾಗಿ ಬೆಳೆದರು. ಗೌಡರು ಮುಂಬೈಯ ರಾಯಲ್ ಏಸಿಯಾಟಿಕ್ ಸೊಸೈಟಿಯ ಸದಸ್ಯರಾಗಿ, ಎಂಥಾಪೊಲಾಜಿಕಲ್ ಸೊಸೈಟಿ ಜರ್ನಲ್‌ದಲ್ಲಿ ಅನೇಕ ಲೇಖನಗಳನ್ನು ಬರೆದರು. ಅಂದಿನ ಸಾಮಾಜಿಕ ಪ್ರತಿಷ್ಠೆಯಾಗಿದ್ದ ಅಡ್ಡಪಲ್ಲಕ್ಕಿ ಉತ್ಸವ, ವ್ಯಾಸನತೋಳು ಮೆರವಣಿಗೆ, ದೇವರ ಪೂಜೆಯ ಹಕ್ಕು ಮೊದಲಾದ ಬ್ರಾಹ್ಮಣರ ಜೊತೆಗಿನ ಹೋರಾಟಗಳಲ್ಲಿ ಲಿಂಗಾಯತರಿಗೆ ಜಯವನ್ನು ದೊರಕಿಸಿಕೊಟ್ಟರು. ಕರ್ನಾಟಕ ಎನ್ನುವ ಹೆಸರು ಇನ್ನೂ ಸ್ಪಷ್ಟವಾಗಿ ಮುನ್ನೆಲೆಗೆ ಬರುವ ಮುನ್ನ ಇವರು ಸ್ಥಾಪಿಸಿದ ಅನೇಕ ಸಂಸ್ಥೆಗಳ ಹೆಸರಿನಲ್ಲಿ ಕರ್ನಾಟಕ ಶಬ್ದವಿತ್ತು ಎನ್ನುವುದು ಅವರ ಕನ್ನಡ ಭಾಷಾ ಪ್ರೇಮ ಹಾಗು ನಾಡು, ನುಡಿಯ ಪ್ರೇಮವನ್ನು ದೃಢೀಕರಿಸುತ್ತದೆ. ಅರಟಾಳರು ಮಾಡಿದ ಕಾರ್ಯಗಳ ಹಿಂದೆ ಅನೇಕ ಜನ ದಾಸೋಹಿಗಳ ಕೊಡುಗೆ ಇದೆ. ಇವರಲ್ಲಿ ವಂಟಮುರಿ ರಾಜಾ ಲಖಮಣ ದೇಸಾಯಿಯವರು, ಇವರ ಬೀಗರಾದ ಚಚಡಿಯ ದೇಸಾಯಿಯವರು, ತ್ಯಾಗವೀರ ಶಿರಸಂಗಿ ಲಿಂಗರಾಜ ದೇಸಾಯಿಯವರು ಇತ್ಯಾದಿ. ಇವರು ಬೆಳಗಾವಿಯ ಜಿಲ್ಲಾಧಿಕಾರಿಯಾಗಿದ್ದಾಗ ಸಾಮಾನ್ಯ ಜನರಿಗೆ ಹಾಗೂ ರೈತರಿಗೆ ಸರ್ಕಾರಿ ಕೆಲಸ ಮಾಡಿಕೊಡುವುದಾಗಿ ಕೆಲವು ಬ್ರಾಹ್ಮಣ ದಲ್ಲಾಳಿಗಳು ಹಣ ವಸೂಲಿ ಮಾಡುತ್ತಿದ್ದರು. ಸರ್ಕಾರಿ ಕಚೇರಿಗಳ ಎದುರು ಜನಸಾಮಾನ್ಯರ ಸುಲಿಗೆ ಮಾಡುವ ದಲ್ಲಾಳಿಗಳ ಕಾಟ ವಿಪರೀತವಾಗಿತ್ತು.
ಅದರಲ್ಲೂ ಓದು ಬರಹ ಬಾರದ ಹಳ್ಳಿಯ ಜನರನ್ನು ಅಕ್ಷರಸ್ಥರಾಗಿದ್ದ ಬ್ರಾಹ್ಮಣರು ಸುಲಿಗೆ ಮಾಡುತ್ತಿದ್ದರು. ಅರಟಾಳರು ಜನತಾ ದರ್ಶನ ಮಾದರಿಯ ಸಭೆಗಳ ಮೂಲಕ ನೇರವಾಗಿ ಹಳ್ಳಿಗಾಡಿನ ರೈತರ ಸಮಸ್ಯೆಗಳನ್ನು ಬಗೆಹರಿಸಲು ಆರಂಭಿಸಿದರು, ಆ ಮೂಲಕ ದಲ್ಲಾಳಿಗಳ ಕಾಟಕ್ಕೆ ಯಶಸ್ವಿಯಾಗಿ ತಡೆಯೊಡಿದ್ದರು. ಇದರಿಂದ ಕೋಪಗೊಂಡ ಆ ಬ್ರಾಹ್ಮಣ ದಲ್ಲಾಳಿಗಳು ಪುಣೆಯ ಅವರ ಕುಲಬಾಂಧವ ಬಾಲಗಂಗಾಧರ ತಿಲಕ್ ಗೆ ಈ ಕುರಿತು ದೂರುನ್ನು ನೀಡಿದ್ದರು. ಇವರ ಮಾತು ಕೇಳಿ ಬಾಲಗಂಗಾಧರ ತಿಲಕ್ ತನ್ನ ಕೇಸರಿ ಹಾಗು ಮರಾಠಿ ಪತ್ರಿಕೆಗಳಲ್ಲಿ ಅರಟಾಳರು, ಅಪ್ರಮಾಣಿ, ಅದಕ್ಷ, ಜಾತಿವಾದಿ ಅಧಿಕಾರಿ, ಜನರನ್ನು ಶೋಷಣೆ ಮಾಡುತ್ತಾರೆ, ಮುಂತಾಗಿ ಮಿತ್ಯಾರೋಪದ ವರದಿಗಳನ್ನು ಸರಣಿ ರೂಪದಲ್ಲಿ ಪ್ರಕಟಿಸಿದರು. ಅನೇಕ ಜನ ಓದುಗರು ತಿಲಕರ ಪತ್ರಿಕೆಗೆ ಕಾಗದ ಬರೆದು, ಒಬ್ಬ ದಕ್ಷ ಅಧಿಕಾರಿಯ ವಿರುದ್ಧ ಸುಳ್ಳು ಸುದ್ದಿ ಪ್ರಕಟಿಸುವುದು ತಪ್ಪು ಎಂದು ಮನವರಿಕೆ ಮಾಡಿದರೂ ತಿಲಕ್ ತನ್ನ ಬರವಣಿಗೆ ನಿಲ್ಲಿಸಲಿಲ್ಲ. ಇದು ಅಂದಿನ ಬ್ರಿಟಿಷ್ ಸರ್ಕಾರದ ಗಮನಕ್ಕೆ ಬಂದು ಸರಕಾರ ಅರಟಾಳರ ವಿರುದ್ಧ ಸ್ವಯಂ ಪ್ರೇರಿತ ವಿಚಾರಣೆ ಆರಂಭಿಸಿತು. ಕೊನೆಗೆ ತಿಲಕ್ ಮಾಡಿದ ಆರೋಪಗಳು ಸುಳ್ಳು ಎಂದು ತನಿಖಾ ಸಂಸ್ಥೆ ವರದಿ ನೀಡಿತು. ಅರಟಾಳ್ ರುದ್ರಗೌಡರ ಮೇಲಿನ ಆರೋಪಗಳು ಮತ್ತು ಪತ್ರಿಕಾ ವರದಿಗಳು ಸುಳ್ಳು ಎಂದು ಸರ್ಕಾರದ ತನಿಖಾ ವರದಿಯನ್ನು ಅಂದಿನ ಗೆಜೆಟ್ ನಲ್ಲೂ ಪ್ರಕಟಿಸಲಾಗಿತ್ತು.

ಈ ವಿಷಯದ ಕುರಿತು ಬಸಯ್ಯ ಕಂಬಿಮಠ ಅವರು “ಅರಟಾಳ್ ರುದ್ರಗೌಡರ ಚರಿತ್ರೆ” ಎನ್ನುವ ಗ್ರಂಥದಲ್ಲಿ ವಿವರವಾಗಿ ಬರೆದಿದ್ದಾರೆ. ಬಾಲಗಂಗಾಧರ ತಿಲಕ್ ಸ್ವಾತಂತ್ರ ಹೋರಾಟಗಾರನಲ್ಲ, ಆತನೊಬ್ಬ ಬೆದರಿಸುವ (ಬ್ಲ್ಯಾಕ್ಮೇಲ್) ಪತ್ರಕರ್ತನಾಗಿದ್ದ, ಮಾನಹಾನಿ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದನೇ ಹೊರತು ಬ್ರಿಟಿಷರ ವಿರುದ್ಧ ಹೋರಾಡಿ ಅಲ್ಲ ಎಂದು ಕಂಬಿಮಠ ಅವರು ಈ ಗ್ರಂಥದಲ್ಲಿ ಬರೆದಿದ್ದಾರೆ. ಲೇಖಕರು ಅರಟಾಳ್ ರುದ್ರಗೌಡರ ಸಮಕಾಲೀನರು, ಮತ್ತು ಆತ್ಮೀಯ ಸ್ನೇಹಿತರಾಗಿದ್ದರು ಹಾಗು ಈ ಗ್ರಂಥವನ್ನು ಬರೆಯಲು ಅವರು 1911 ರಲ್ಲಿ ಆರಂಭಿಸಿ 1919-20ರ ವರೆಗೆ ಬರೆದಿದ್ದಾರೆ. ಈ ಗ್ರಂಥವು ಕಳೆದ ಹತ್ತು ವರ್ಷಗಳ ಹಿಂದೆ ಕೆ.ಎಲ್.ಇ. ವಿಶ್ವವಿದ್ಯಾಲಯದ ಪ್ರಸಾರಾಂಗ ಸಂಸ್ಥೆಯು ಪ್ರಕಟಿಸಿದೆ. ಈ ಗ್ರಂಥದ ಪರಿಚಯವನ್ನು ಲಿಂಗೈಕ್ಯ ಗೌರಿ ಲಂಕೇಶ್ ಅವರು ತಮ್ಮ ಪತ್ರಿಕೆಯಲ್ಲಿ “ಬಾಲಗಂಗಾಧರ ತಿಲಕರ ಇನ್ನೊಂದು ಮುಖ” ಎನ್ನುವ ತಲೆಬರಹದಲ್ಲಿ ಒಂದು ಸುದೀರ್ಘ ವರದಿ ಮಾಡಿದ್ದರು. ಅಲ್ಲಿಯ ವರೆಗೆ ಬಾಲಗಂಗಾಧರ ತಿಲಕ್ ಸ್ವಾತಂತ್ರ ಹೋರಾಟಗಾರ ಎನ್ನುವ ಭ್ರಮೆಯಲ್ಲಿದ್ದ ಜನರಿಗೆ ಸತ್ಯ ದರ್ಶನವಾಗಿತ್ತು. ಅರಟಾಳ್ ರುದ್ರಗೌಡರು ಧಾರವಾಡದಲ್ಲಿ ಕರ್ನಾಟಕ ಕಾಲೇಜು ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಕಾಲೇಜು ಸ್ಥಾಪನೆಯ ಹಿಂದೆ ಕೂಡ ಒಂದು ರೋಚಕ ಕತೆಯಿದೆ. ಉತ್ತರ ಕರ್ನಾಟಕದಲ್ಲಿ 1910ರ ವರೆಗೆ ಒಂದೂ ಕಾಲೇಜುಗಳಿರಲಿಲ್ಲ. ಅರಟಾಳ್ ರುದ್ರಗೌಡರು ಅಂದಿನ ಬ್ರಿಟಿಷ್ ಶಿಕ್ಷಣಾಧಿಕಾರಿ ಮಿ. ರ್ಹಿಲ್ ಅವರಿಗೆ ಕಾಲೇಜು ಆರಂಭಿಸುವುದಕ್ಕೆ 1913ರಲ್ಲಿ ಪರವಾನಿಗೆ ಕೇಳಿದರು.
ಕರ್ನಾಟಕ ಕಾಲೇಜ ಸ್ಥಾಪನೆಗೆ ಬ್ರೀಟಿಷ ಸರಕಾರ ಮೂರು ಲಕ್ಷ ರೂಪಾಯಿ ಠೇವಣಿ ಇಡಬೇಕೆಂದು ತಿಳಿಸಿತು. ಅರಟಾಳ್ ರುದ್ರಗೌಡರು ಒಂದು ಲಕ್ಷ ಮತ್ತು ರೂದ್ದ ಶ್ರೀನಿವಾಸರಾಯರು ಒಂದು ಲಕ್ಷ ವಂತಿಗೆ ಸಂಗ್ರಹಿಸುವುದು ಮತ್ತು ಬ್ರಿಟಿಷ್ ಸರಕಾರ ಒಂದು ಲಕ್ಷ ಸೇರಿಸಿ ಕಾಲೇಜು ಆರಂಭಿಸುವ ಮಾತುಕತೆಯಾಯಿತು. ಅರಟಾಳರು ಒಂದು ವಾರದಲ್ಲಿ ನಿರ್ಧಾರಿತ ಹಣ ಸಂಗ್ರಹಿಸಿದರು, ಆದರೆ ರೂದ್ದ ಶ್ರೀನಿವಾಸರಾಯ ಸಂಗ್ರಹಿಸಿದ ಮೂತ್ತ ಕೇವಲ ಮೂವತ್ತುಸಾವಿರ ಮಾತ್ರ ಆಗಿತ್ತು. ಇದರಿಂದ ಅವಮಾನಿತನಾಗಿ ಹೊದ್ದು ಶ್ರೀನಿವಾಸರಾಯ ರುದ್ರಗೌಡರು ಮಾಡಿದ ಕಾರ್ಯದ ಶ್ರೇಯಸ್ಸು ತಾನು ಪಡೆಯಲು ಪ್ರಯತ್ನಿಸಿದ. ಉಳಿದ ಹಣವನ್ನು ಅರಟಾಳ್ ರುದ್ರಗೌಡರೆ ಸಂಗ್ರಹಿಸಿದ ಕಾರಣ 1917 ರಲ್ಲಿ ಕರ್ನಾಟಕ ಕಾಲೇಜು ಆರಂಭವಾಯಿತು. ನಂತರ ಮುಂಬೈ ಸರ್ಕಾರದಲ್ಲಿ ಶಿಕ್ಷಣ ಮಂತ್ರಿಗಳಾಗಿದ್ದ ಸರ್ ಸಿದ್ದಪ್ಪ ಕಂಬಳಿಯವರು ಗ್ರೆಡ-2 ಕಾಲೇಜ್ ನ್ನು ಗ್ರೇಡ-೧ ಕಾಲೇಜ ಆಗಿ ಬಡ್ತಿ ನೀಡಿದರು. ಕನ್ನಡಕ್ಕೆ ದಕ್ಕಿದ ಆರು ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿಗಳು ಓದಿದ್ದು ಈ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಎನ್ನುವುದು ಗಮನಾರ್ಹ. ಆದರೆ, ದುರಂತದ ಸಂಗತಿ ಏನೆಂದರೆ, ಆ ಕಾಲೇಜು ಆರಂಭಿಸಲು ದುಡಿದ ಅರಟಾಳ್ ರುದ್ರಗೌಡರ ಅಥವಾ ಸರ್ ಸಿದ್ಧಪ್ಪ ಕಂಬಳಿಯವರ ಪ್ರತಿಮೆ ಆ ಕಾಲೇಜಿನ ಆವರಣ ಸೇರುವ ಮೊದಲೇ ರೊದ್ದ ಶ್ರೀನಿವಾಸರಾಯನ ಪ್ರತಿಮೆ ಸ್ಥಾಪನೆಯಾಗಿದ್ದು, ಆನಂತರ ಇತ್ತೀಚಿಗೆ ಸರ್ ಸಿದ್ಧಪ್ಪ ಕಂಬಳಿಯವರ ಪ್ರತಿಮೆ ಅಲ್ಲಿ ಸ್ಥಾಪಿಸಲಾಗಿದೆ.
ಧಾರವಾಡದ ಕರ್ನಾಟಕ ಕಾಲೇಜು ಸ್ಥಾಪನೆಯ ಸಮಯದಲ್ಲಿ ದೇಣಿಗೆ ಸಂಗ್ರಹಿಸಿ ಸರಕಾರದಲ್ಲಿ ಠೇವಣಿ ಇಟ್ಟಿದ್ದ ಹಣದ ಮೇಲೆ ಜಮೆಯಾದ ಬಡ್ಡಿ ಹಣಕ್ಕೆ ಒಂದಷ್ಟು ತಮ್ಮ ಹಣ ಸೇರಿಸಿ ಬೆಳಗಾವಿಯಲ್ಲಿ ಸಪ್ತ ಋಷಿಗಳ ಜೊತೆ ಸೇರಿ ಕೆ.ಎಲ್.ಇ ಸಂಸ್ಥೆಯನ್ನು ನೋಂದಣಿ ಮಾಡಿಸಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಅರಟಾಳರು ಸಂಸ್ಥೆಗೆ ಗಟ್ಟಿ ಬುನಾದಿ ಹಾಕಿದರು. ಕಾಶಿಯಲ್ಲಿ ಒಂದು ವಿಶ್ವ ವಿದ್ಯಾಲಯದ ಸ್ಥಾಪಿಸಿದ ಮದನ್ ಮೋಹನ್ ಮಾಳ್ವಿಯ ಬ್ರಾಹ್ಮಣರಾಗಿರುವ ಕಾರಣದಿಂದ ಭಾರತ ರತ್ನಕ್ಕೆ ಭಾಜನರಾಗಿ ಪ್ರಸಿದ್ಧರಾದರು. ಸರ್ಕಾರಿ ಅಧಿಕಾರಿಯಾಗಿದ್ದುಕೊಂಡು ಇಂತಹ ದೈತ್ಯ ಕಾರ್ಯ ಮಾಡಿದ ಅರಟಾಳ್ ರುದ್ರಗೌಡರನ್ನು ಕನ್ನಡಿಗರು, ಲಿಂಗಾಯತರು, ಅದೂ ಪಂಚಮಸಾಲಿಗಳೆ ಗುರುತಿಸಲಿಲ್ಲ. ಅರಟಾಳ್ ರುದ್ರಗೌಡರ ಧಾರಾಳತನ ಅಂದು ಅನೇಕ ರೀತಿಯಲ್ಲಿ ದುರುಪಯೋಗವಾಯಿತು. ಅವರು ಸ್ಥಾಪಿಸಿದ ವೀರಶೈವ ಮಹಾಸಭಾ ಲಿಂಗಾಯತರನ್ನು ಅಲ್ಪಸಂಖ್ಯಾತರ ಸೌಲಭ್ಯದಿಂದ ವಂಚಿಸುತ್ತಿದೆ, ಶಿವಯೋಗಿ ಮಂದಿರ ಲಿಂಗಾಯತ ಸಿದ್ಧಾಂತಕ್ಕೆ ವಿರುದ್ಧವಾಗಿ, ಲಿಂಗಾಯತರ ವಿರುದ್ಧವಾಗಿ ಕಾರ್ಯ ಮಾಡುತ್ತಿದೆ. ಅವರ ನೆರವಿನಿಂದ ಬ್ರಾಹ್ಮಣರ ವಿರುದ್ಧ ವೀರಶೈವ ಜಾತಿ ಜಂಗಮರಿಗೆ ದೇವಸ್ಥಾನಗಳ ಅರ್ಚಕ ಹುದ್ದೆ, ಅಡ್ಡಪಲ್ಲಕ್ಕಿ ಮೆರವಣಿಗೆ ಮುಂತಾದ ಲಿಂಗಾಯತ ಧರ್ಮಕ್ಕೆ ವಿರುದ್ಧವಾಗಿರುವ ವೈದಿಕ ಮೌಢ್ಯದ ಆಚರಣೆಗಳು ನ್ಯಾಯಾಲಯಗಳಲ್ಲಿ ದಾವೆ ಹೂಡಿ ಗೆಲ್ಲಲಾಯಿತು. ಇದು ಅಂದು ವೀರಶೈವ ಜಾತಿ ಜಂಗಮರು ಅರಟಾಳರನ್ನು ಬಳಸಿಕೊಂಡದ್ದಕ್ಕೆ ಸಾಕ್ಷಿಯಾಗಿದೆ. ಆದರೆ ಯಾವ ವೀರಶೈವ ಜಾತಿ ಜಂಗಮರೂ ಅರಟಾಳರನ್ನು ಸ್ಮರಿಸಿಕೊಳ್ಳುವುದಿಲ್ಲ.
ಮುಂದುವರೆಯುವುದು….

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ



