ಪಂಚಮಸಾಲಿ ಪೀಠಗಳ ಗೊಂದಲ- ಭಾಗ 20 | ಹಾದಿ ತಪ್ಪಿದ ಮೀಸಲಾತಿ ಹೋರಾಟ

Date:

ರಾಜ್ಯಾದ್ಯಂತ ಏಕೈಕ ಪಂಚಮಸಾಲಿ ಸಂಘಟನೆ, ಟ್ರಸ್ಟ್ ಅಥವಾ ಪೀಠ ಮಾಡುವಲ್ಲಿ ಪಂಚಮಸಾಲಿ ಸಮಾಜ ಆರಂಭದಲ್ಲಿಯೇ ಎಡವಿತು. ಮುಂದೆ ಪಂಚಮಸಾಲಿ ಸಂಘಟನೆ, ಟ್ರಸ್ಟ್ ಮತ್ತು ಪೀಠಗಳು ಪಂಚಮಸಾಲಿ ಜನರನ್ನು ಉಪೇಕ್ಷಿಸಿ ರಾಜಕೀಕರಣಗೊಂಡವು. ಅದರ ಪರಿಣಾಮದಿಂದ ಪಂಚಮಸಾಲಿ ಸಂಘಟನೆ ಮತ್ತು ಪೀಠಗಳಲ್ಲಿ ಇಂದಿನ ಗೊಂದಲ, ಅರಾಜಕತೆ, ಹಗರಣಗಳು ಹುಟ್ಟಿಕೊಂಡವು. ಈಗ ಆ ಗೊಂದಲಗಳು ಬೆಳೆದು ಸಂಘಟನೆ ಮತ್ತು ಪೀಠಗಳು ಗುಣಪಡಿಸಲಾಗದ ರೋಗಗ್ರಸ್ತ ಹಂತಕ್ಕೆ ತಲುಪಿವೆ.

- Advertisement -

ಹರಿಹರ ಪಂಚಮಸಾಲಿ ಟ್ರಸ್ಟ್ ಮತ್ತು ಪೀಠಗಳ ಕುರಿತು ನಡೆಯುತ್ತಿರುವ ಎಲ್ಲಾ ಗದ್ದಲಗಳನ್ನು ಹೋಲಿಸಿದಾಗ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಮತ್ತು ಪೀಠ ಆರಂಭದಿಂದ ಸರಿಯಾದ ಹಾದಿಯನ್ನೇ ತುಳಿದಿವೆ. ಆ ಟ್ರಸ್ಟ್ ನ ಅಧ್ಯಕ್ಷರಾಗಿರುವ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ಅದರ ಬಹುತೇಕ ಸದಸ್ಯರು ಲಿಂಗಾಯತ ಧರ್ಮ ಹೋರಾಟದ ಪರವಾಗಿ ಇದ್ದಾರೆ. ಆ ಕಾರಣದಿಂದ ಕೂಡಲಸಂಗಮ ಪೀಠದ ಉಚ್ಛಾಟಿತ ಸ್ವಾಮಿಗಳೂ ಸಹ ಲಿಂಗಾಯತ ಚಳುವಳಿಯಲ್ಲಿ ಈ ಹಿಂದೆ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಎಲ್ಲಾ ಬಸವಪರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಈ ಟ್ರಸ್ಟ್ ನ ಗೌರವಾನ್ವಿತ ಸದಸ್ಯರಾಗಿರುವ ಮಾಜಿ ವಿಧಾನ ಪರಿಷತ್ ಸದಸ್ಯ ಎಂ. ಪಿ. ನಾಡಗೌಡರು ಸರಳ, ಸಜ್ಜನ ವ್ಯಕ್ತಿಯಾಗಿದ್ದು ಅವರು ಲಿಂಗಾಯತದ ಧರ್ಮದ ಅಸ್ತಿತ್ವ ಮತ್ತು ಅಸ್ಮಿತೆಯ ವಿರುದ್ಧ ಯಾವತ್ತೂ ಹೋದವರಲ್ಲ. ಶ್ರೀಯುತ ಹುಣಸಿಕಟ್ಟಿ ಹಾಗು ನೀಲಕಂಠ ಅಸೂಟಿಯವರು ಸಹ ವಿವಾದಾತ್ಮಕ ವ್ಯಕ್ತಿಗಳಲ್ಲ. ಇನ್ನೊಬ್ಬ ಸದಸ್ಯ, ಬೆಳಗಾವಿಯ ವಕೀಲರಾದ ಬಸವರಾಜ ರೊಟ್ಟಿಯವರು ಲಿಂಗಾಯತ ಚಳವಳಿಯಲ್ಲಿ ಗುರುತಿಸಿಕೊಂಡು ಬೆಳಗಾವಿ ಜಿಲ್ಲೆಯ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಆನಂತರದ ಕಾಲದಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ನೆಪದಲ್ಲಿ ಕೂಡಲಸಂಗಮ ಪೀಠದ ಉಚ್ಛಾಟಿತ ಸ್ವಾಮಿಗಳು ಲಿಂಗಾಯತ ಚಳವಳಿಯಿಂದ ಅಂತರ ಕಾಯ್ದುಕೊಂಡರು. ಟ್ರಸ್ಟ್ ನಿಯಮ ಪಾಲಿಸದಿರುವುದು, ಹಿಂದುತ್ವವಾದಿಗಳೊಂದಿಗೆ ಕೈಜೋಡಿಸಿದ್ದು ಮತ್ತು ಬಹಿರಂಗವಾಗಿ ಹೇಳಲಾಗದ ಇನ್ನಿತರ ಕಾರಣಗಳಿಂದ ಅವರನ್ನು ಪೀಠದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಟ್ರಸ್ಟ್ ಘೋಷಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ಅದಕ್ಕಿಂತ ಪೂರ್ವದಲ್ಲಿಯೇ ಪಂಚಮಸಾಲಿ ಮೀಸಲಾತಿ ಹೋರಾಟ ಆರಂಭವಾಗಿತ್ತು. ಪಂಚಮಸಾಲಿ ಉಪವರ್ಗದ 2ಎ ಮೀಸಲಾತಿ ಹೋರಾಟ ಒಂದರ್ಥದಲ್ಲಿ ಅದೊಂದು ರಾಜಕೀಯ ಪ್ರೇರಿತ ಚಳುವಳಿ ಆಗಿದೆ. ಹಾವನೂರು ಆಯೋಗದ ವರದಿಯ ಅನುಸಾರ ಲಿಂಗಾಯತ ಮತ್ತು ಅದರ ಉಪಜಾತಿಗಳಿಗೆ ಮೊದಲಿನಿಂದ ಮೀಸಲಾತಿ ಇದೆ. ಈಗ ಜೈನರು ಮತ್ತು ಕ್ರೈಸ್ತರೊಂದಿಗೆ ಪಂಚಮಸಾಲಿ ಉಪವರ್ಗವೂ ಒಳಗೊಂಡಂತೆ ಲಿಂಗಾಯತರಿಗೆ ೩ಬಿ ಪ್ರವರ್ಗದ ಅಡಿಯಲ್ಲಿ ಮೀಸಲಾತಿ ಇದೆ. ಕೇವಲ ಕಾಯಕ ವರ್ಗದ ಕುಂಬಾರ, ಕಂಬಾರ, ಹಡಪದ, ಮಡಿವಾಳ ಮುಂತಾದ ಉಪವರ್ಗಗಳು ಇಂತದ್ದೇ ಕಾಯಕ ಮಾಡುವ ಲಿಂಗಾಯತೇತರ ಹಿಂದೂ ಉಪವರ್ಗಗಳೊಂದಿಗೆ 2ಎ ಪ್ರವರ್ಗದಲ್ಲಿ ಮೀಸಲಾತಿ ಪಡೆಯುತ್ತಿವೆ. ಆದರೆ, ಈ ಮಧ್ಯೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಲಿಂಗಾಯತ ಉಪವರ್ಗದಲ್ಲಿ ಅತ್ಯಂತ ಶ್ರೀಮಂತರಾಗಿರುವ ಬಣಜಿಗ, ಗಾಣಿಗ, ಸಾದು ಮುಂತಾದ ಉಪವರ್ಗಗಳನ್ನು 2ಎ ಪ್ರವರ್ಗದ ಅಡಿಯಲ್ಲಿ ತಂದು ಅಲ್ಲಿನ ಹಿಂದುಳಿದ ವರ್ಗಗಳಿಗೆ ದೊಡ್ಡ ಅನ್ಯಾಯ ಮಾಡಲಾಗಿದೆ. ಅದನ್ನೆ ನೆಪವಾಗಿಟ್ಟುಕೊಂಡು ಇಲ್ಲಿ ತಾವು 3ಬಿ ಪ್ರವರ್ಗದಲ್ಲಿದ್ದರೂ ತಮಗೂ 2ಎ ಅಡಿಯಲ್ಲಿ ಪರಿಗಣಿಸಬೇಕು ಎನ್ನುವುದು ಪಂಚಮಸಾಲಿಗಳ ಬೇಡಿಕೆ. ಇದರ ಹಿಂದೆ ಒಂದು ಬಲವಾದ ರಾಜಕೀಯ ಕಾರಣವಿದೆ. ಬಿಜೆಪಿಯಲ್ಲಿ ಬಣಜಿಗ (ಬಳೆ ಶೆಟ್ರು) ಉಪವರ್ಗಕ್ಕೆ ಸೇರಿರುವ ಯಡಿಯೂರಪ್ಪನವರನ್ನು ಹಣಿಯಲು ಕೆಲವರು ಅವರ ವಿರುದ್ಧ ಪಂಚಮಸಾಲಿಗಳನ್ನು ಛೂ ಬಿಟ್ಟಿದ್ದು ಅನಂತಕುಮಾರ್ ಅವರು ಇನ್ನೂ ಬದುಕಿರುವ ಕಾಲದಲ್ಲಿ. ಬಿಜೆಪಿಯಲ್ಲಿ ಬಿ. ಬಿ. ಶಿವಪ್ಪ ಆದಿಯಾಗಿ ಇನ್ನಿತರ ಲಿಂಗಾಯತ ನಾಯಕರನ್ನು ಮೊದಲಿನಿಂದ ಯಡಿಯೂರಪ್ಪನವರು ತುಳಿಯುತ್ತಾ ಬಂದಿದ್ದಾರೆ ಎನ್ನುವುದು ವ್ಯಾಪಕವಾಗಿ ಕೇಳಿಬರುವ ಒಂದು ಆರೋಪ.

ಅದಕ್ಕೆ ಪೂರಕವಾಗಿ ಆ ಆರೋಪವನ್ನು ನಂಬುವಂತಹ ಅನೇಕ ಘಟನೆಗಳು ನಡೆದಿವೆ. ಮೊದಲ ಅವಧಿ ಆಡಳಿತದಲ್ಲಿ ತಾವು ಅಧಿಕಾರ ಬಿಟ್ಟು ಇಳಿಯುವಾಗ ಒಬ್ಬ ಲಿಂಗಾಯತ ನಾಯಕನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡದೆ ಯಡಿಯೂರಪ್ಪ ಸದಾನಂದಗೌಡರನ್ನು ಆಯ್ಕೆ ಮಾಡಿದರು, ಅದಕ್ಕಾಗಿ ಅವರನ್ನು ಜಾತ್ಯಾತೀತ ನಾಯಕ ಎಂದು ಅವರ ಅಭಿಮಾನಿಗಳು ವರ್ಣಿಸಿದರೆ ಅದು ಪರಿಹಾಸ್ಯವಾಗುತ್ತದೆ. ಯಡಿಯೂರಪ್ಪನವರ ಈ ಜಿಗುಟು ಸ್ವಭಾವವನ್ನು ಸರಿಯಾಗಿ ಅರಿತಿದ್ದ ಅವರ ಪಕ್ಷದೊಳಗೆ ನಾಗಪುರ ಕಚೇರಿಯೊಡನೆ ಗಾಢ ಒಡನಾಟ ಹೊಂದಿರುವವರು ಯಡಿಯೂರಪ್ಪ ವಿರುದ್ಧ ಉಳಿದ ಲಿಂಗಾಯತರನ್ನು ವಿಶೇಷವಾಗಿ ಪಂಚಮಸಾಲಿ ನಾಯಕರನ್ನು ಎತ್ತಿ ಕಟ್ಟಿದ್ದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ಇದರ ಪರಿಣಾಮವಾಗಿ ಬಸನಗೌಡ ಪಾಟೀಲ, ಯತ್ನಾಳ್, ಅರವಿಂದ್ ಬೆಲ್ಲದ, ಸಿ. ಸಿ. ಪಾಟೀಲ ಮುಂತಾದ ಪಂಚಮಸಾಲಿ ಸಮಾಜದ ಮೇಲೆ ಅಷ್ಟೇನೂ ಹಿಡಿತವಿಲ್ಲದ, ಪ್ರಭಾವವಿಲ್ಲದ ಮುಂಚೂಣಿ ನಾಯಕರು ಯಡಿಯೂರಪ್ಪನವರಿಂದ ಅಂತರ ಕಾಯ್ದುಕೊಂಡು ನಾಗಪುರ ಕಚೇರಿಯ ಪ್ರಭಾವಿಗಳ ಅಣತಿಯಂತೆ ನಡೆದುಕೊಳ್ಳಲು ಆರಂಭಿಸಿದರು. ವಿಪರೀತ ಗರ್ವ, ಮುಂಗೋಪ, ಅಹಂಕಾರದ ಸ್ವಭಾವ ಹೊಂದಿರುವ ಯಡಿಯೂರಪ್ಪನವರು ತಮ್ಮ ವಿರುದ್ಧ ಲಿಂಗಾಯತ ಪಂಚಮಸಾಲಿ ನಾಯಕರನ್ನು ಎತ್ತಿಕಟ್ಟುತ್ತಿರುವುದರ ಹಿಂದೆ ಯಾರಿದ್ದಾರೆ ಎನ್ನುವುದರ ಕುರಿತು ಅರಿವಿದ್ದರೂ ಅದನ್ನು ಆರಂಭದಲ್ಲಿಯೆ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಲಿಲ್ಲ.

ಕೆಜೆಪಿ ವಿಸರ್ಜಿಸಿ 2014 ರಲ್ಲಿ ಮತ್ತೊಮ್ಮೆ ಬಿಜೆಪಿ ಸೇರಿದ ಮೇಲೆ ಲಿಂಗಾಯತ ಸಮಾಜದ ಮೇಲೆ ಯಡಿಯೂರಪ್ಪನವರ ಬಿಗಿ ಹಿಡಿತವನ್ನು ಸಡಿಲುಗೊಳಿಸುವ ಕೃತ್ಯಗಳು ನಾಗಪುರ ಕಚೇರಿಯ ಪ್ರಭಾವಿಗಳು ಮುಂದುವರೆಸಿದರು. ಅವರ ವಿರುದ್ಧ ರಾಯಣ್ಣ ಬ್ರಿಗೇಡ್ ಹೆಸರಿನಲ್ಲಿ ಬಂಡಾಯ ಆರಂಭಿಸಲಾಯಿತು. 2017-18ರಲ್ಲಿ ಲಿಂಗಾಯತ ಧರ್ಮಕ್ಕೆ ಸಂವಿಧಾನ ಮಾನ್ಯತೆಯ ಹೋರಾಟ ಆರಂಭಗೊಂಡಿತು. ಈ ಬೆಳವಣಿಗೆ ಯಡಿಯೂರಪ್ಪನವರಿಗೆ ವರವಾಗಿ ಪರಿಣಮಿಸಿತು. ಸ್ವತಃ ತನ್ನ ಸಮಾಜಕ್ಕೆ ಸಿಗುವ ಅಲ್ಪಸಂಖ್ಯಾತರ ಸೌಲಭ್ಯದ ವಿರುದ್ಧ ನಿಂತಿದ್ದಕ್ಕಾಗಿ 2018ರ ಚುನಾವಣೆಯಲ್ಲಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವುದು ಬಿಜೆಪಿಗೆ ಅನಿವಾರ್ಯವಾಯಿತು. ಕುರುಬರ ಪರಿಶಿಷ್ಟ ಪಂಗಡ ಮೀಸಲಾತಿ ಕೂಗು ಎಬ್ಬಿಸುವ ಮೂಲಕ ಸಿದ್ದರಾಮಯ್ಯನವರನ್ನು ಹಣಿಯುವುದು ಒಂದು ಅಜೆಂಡಾ ಆದರೆ, ಪಂಚಮಸಾಲಿ ಮೀಸಲಾತಿ ಹೋರಾಟ ಮುನ್ನೆಲೆಗೆ ತಂದು ಲಿಂಗಾಯತ ಹೋರಾಟ ಹಣಿಯುವುದು ಮತ್ತು ಪಕ್ಷದೊಳಗೆ ಯಡಿಯೂರಪ್ಪನವರ ಪ್ರಭಾವವನ್ನು ತಗ್ಗಿಸುವುದು ನಾಗಪುರ ಪ್ರಭಾವಿಗಳ ಹುನ್ನಾರವಾಗಿತ್ತು. ಅದರ ಯೋಜನೆಯಂತೆ ಬಿಜೆಪಿಯೊಳಗಿನ ಯಡಿಯೂರಪ್ಪ ವಿರೋಧಿ ಪಂಚಮಸಾಲಿ ನಾಯಕರನ್ನು ಕರೆಸಿ ಮೀಸಲಾತಿ ಹೋರಾಟ ತೀವ್ರಗೊಳಿಸುವ ಕಠಿಣ ನಿರ್ದೇಶನಗಳು ನೀಡಲಾಯಿತು.

ಲಿಂಗಾಯತ ಹೋರಾಟವನ್ನು ಬೆಂಬಲಿಸದಂತೆ ಬಿಜೆಪಿಯೊಳಗಿನ ಲಿಂಗಾಯತ ನಾಯಕರಿಗೆ ತಾಕೀತು ಮಾಡಿದವರು, ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಮುಂದೆ ನಿಂತು ನಡೆಸುವಂತೆ ಮೌಖಿಕ ಆದೇಶ ನೀಡಿದ್ದರು. ಅದಕ್ಕೆ ಪೂರಕ ಎನ್ನುವಂತೆ ಪಂಚಮಸಾಲಿ ಉಭಯ ಪೀಠಗಳ ಸ್ವಾಮಿಗಳ ನೇತೃತ್ವದಲ್ಲಿ, (ವಿಶೇಷವಾಗಿ ಕೂಡಲಸಂಗಮ ಪೀಠದ ಸ್ವಾಮಿಗಳು ಮುಂಚೂಣಿಯಲ್ಲಿದ್ದರು) ಪಂಚಮಸಾಲಿ ಮೀಸಲಾತಿ ಹೋರಾಟ, ಪಾದಯಾತ್ರೆ, ರಸ್ತೆಯಲ್ಲಿ ಇಷ್ಟಲಿಂಗ ಪೂಜೆ ಮುಂತಾದ ದೃಶ್ಯಗಳು ನೋಡಲು ಸಿಕ್ಕವು. ಹೋರಾಟದ ಉದ್ದಕ್ಕೂ ಅವಕಾಶ ಸೃಷ್ಟಿಸಿಕೊಂಡು ಯಡಿಯೂರಪ್ಪನವರನ್ನು ಟೀಕಿಸುವುದು ಮುಂಚೂಣಿ ಹೋರಾಟಗಾರರು ಮರೆಯಲಿಲ್ಲ. ಕುರುಬರು ಪರಿಶಿಷ್ಟ ವರ್ಗದ ಮೀಸಲಾತಿ ಬೇಡಿಕೆಯ ಹಿಂದಿನ ಹುನ್ನಾರವನ್ನು ಅರಿತು ಹೋರಾಟ ಕೈಬಿಟ್ಟು ಪ್ರಜ್ಞಾವಂತರೆನ್ನಿಕೊಂಡರೆ ಪಂಚಮಸಾಲಿಗಳು ಅದರ ಹಿಂದಿನ ಹುನ್ನಾರ ಗೊತ್ತಿದ್ದೂ ಅದಕ್ಕೆ ಬಲಿಯಾದರು. ಉಭಯ ಪಂಚಮಸಾಲಿ ಪೀಠಗಳು ಹಿಂದುತ್ವದ ಕಡೆಗೆ ವಾಲಿದವು ಎನ್ನುವ ಅನುಮಾನಗಳಿಗೆ ಅನೇಕ ಪೂರಕ ಘಟನೆಗಳು ಸಾಕ್ಷಿಯಾದವು. ಅದರಲ್ಲೂ ವಿಶೇಷವಾಗಿ ಲಿಂಗಾಯತ ಚಳುವಳಿಯಲ್ಲಿ ಗುರುತಿಸಿಕೊಂಡಿದ್ದ ಕೂಡಲಸಂಗಮ ಪೀಠದ ಸ್ವಾಮಿಗಳು ತಮ್ಮ ಮೀಸಲಾತಿ ಹೋರಾಟದ ಸಹವರ್ತಿಗಳು ಬಸವ ನಿಂದನೆ ಮಾಡಿದಾಗ ಮೌನವಾದರು. ಜಾತಿ ಗಣತಿಯಲ್ಲಿ ಧರ್ಮದ ಕಾಲಮ್ ನಲ್ಲಿ ಹಿಂದೂ ಎಂದು ಬರೆಸಲು ಕರೆ ನೀಡಿದರು, ರಾಮಮಂದಿರ ಉದ್ಘಾಟನೆ ಮತ್ತು ಕುಂಭಮೇಳದಲ್ಲಿ ಉತ್ಸಾಹದಿಂದ ಭಾಗವಹಿಸಿದರು.

ಇಷ್ಟಾದಾಗ್ಯೂ ಲಿಂಗಾಯತ ಚಳುವಳಿಯಲ್ಲಿರುವ ಇವರ ಭಕ್ತರು ಇವರ ಮೇಲಿನ ನಂಬಿಕೆ ಕಳೆದುಕೊಳ್ಳಲಿಲ್ಲ. ಇವರ ಯಾವುದೋ ದೌರ್ಬಲ್ಯವನ್ನು ಇಟ್ಟುಕೊಂಡು ಇವರನ್ನು ಹೆದರಿಸಿ ಹಿಂದುತ್ವದ ಪರವಾಗಿ ಮಾತನಾಡುವಂತೆ ಮಾಡುತ್ತಿದ್ದಾರೆ ಎನ್ನುವುದು ಅವರ ಭಕ್ತರ ವಾದವಾಗಿತ್ತು. ಪಂಚಮಸಾಲಿ ಮೀಸಲಾತಿ ಹೋರಾಟವನ್ನು ತೆರೆಯ ಮರೆಯಲ್ಲಿ ನಿಂತು ಪ್ರಾಯೋಜಿಸಿದವರು ಅಧಿಕಾರಕ್ಕೆ ಬಂದಾಗ ಮೀಸಲಾತಿ ಸುಲಭವಾಗಿ ನೀಡಲಿಲ್ಲ. ಚುನಾವಣೆ ಹತ್ತಿರ ಬಂದಾಗ ಮುಸ್ಲಿಮ್ ರ 2ಬಿ ಮೀಸಲಾತಿ ತೆಗೆದು, ಪಂಚಮಸಾಲಿಗಳಿಗೆ ೨ಡಿ ಎನ್ನುವ ಒಂದು ಪ್ರವರ್ಗ ಸೃಷ್ಟಿಸಿ ಕೈತೊಳೆದುಕೊಂಡರು. ಆ ಸರ್ಕಾರಿ ಆದೇಶಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಗುತ್ತದೆ ಎಂದು ತಿಳಿದೂ ಹಾಗೆ ಮಾಡಲಾಗಿತ್ತು. ಆ ಆದೇಶದಲ್ಲಿ ಯಾವುದೇ ಸ್ಪಷ್ಟತೆ ಇರಲಿಲ್ಲ ಮತ್ತು ಅದು ಯಾವುದೆ ಆಯೋಗದ ಶಿಫಾರಸ್ಸಿನ ಅನ್ವಯ ಮಾಡಿರಲಿಲ್ಲ. ಹೋರಾಟಕ್ಕೆ ತೆರೆಯ ಮರೆಯಲ್ಲಿ ಬೆಂಬಲಿಸಿ ಅಸ್ಪಷ್ಟ ಮೀಸಲಾತಿ ನೀಡಿದವರು ನ್ಯಾಯಾಲಯದಲ್ಲಿ ಅದನ್ನು ನೀಗಿಸಿಕೊಳ್ಳಬೇಕಿತ್ತು. ಇಡಬ್ಲ್ಯೂಎಸ್ ಮೀಸಲಾತಿಯ ವಿರುದ್ಧದ ಎಲ್ಲಾ ೪೦ ಕ್ಕೂ ಹೆಚ್ಚಿನ ಸಂಖ್ಯೆಯ ತಕರಾರು ಅರ್ಜಿ ನೀಗಿಕೊಂಡವರಿಗೆ ಪಂಚಮಸಾಲಿಗಳ ಬೇಡಿಕೆಯ ಕುರಿತು ಯಾಕೆ ಕರುಣೆ ಬರಲಿಲ್ಲ ಎನ್ನುವ ಪ್ರಶ್ನೆ ಹೋರಾಟಗಾರರಿಗೆ ಹೊಳೆಯಲಿಲ್ಲ. ಒಟ್ಟಾರೆ ಪಂಚಮಸಾಲಿ ಮೀಸಲಾತಿ ಬೇಡಿಕೆ ಹಲವು ಗೊಂದಲಗಳಿಂದ ಜಠಿಲವಾಗುತ್ತಾ ಸಾಗಿ ಕೊನೆಗೂ ಅದು ಈಡೇರಲೇಯಿಲ್ಲ. ಸಾಮಾನ್ಯ ಪಂಚಮಸಾಲಿಗಳಿಗೆ ಮೀಸಲಾತಿ ಆಶೆ ತೋರಿಸಿ ರಾಜಕಾರಣಿಗಳು ಮತ್ತು ಮಠಾಧೀಶರು ತಮ್ಮ ಬೇಳೆ ಬೇಯಿಸಿಕೊಂಡರು.

ಒಟ್ಟಾರೆಯಾಗಿ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಸಮಸ್ತ ಲಿಂಗಾಯತ ಸಮಾಜ ಒಂದೆಡೆ ಸೇರಿ ಅದಕ್ಕೊಂದು ಶಾಸ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳಿಗೆ ರಾಜಕೀಯ ಹಿತಾಸಕ್ತಿಗಳು ಅವಕಾಶ ಕೊಡಲಿಲ್ಲ. ಅಂದು ದೇವೆಗೌಡರು ಒಕ್ಕಲಿಗರಿಗೆ ಕೇಂದ್ರದಲ್ಲಿ ಮೀಸಲಾತಿ ಸಿಗುವಂತೆ ಮಾಡಿದರು. ಇಂದಿನ ಲಿಂಗಾಯತ ರಾಜಕಾರಣಿಗಳಿಗೆ ಆ ಇಚ್ಛಾಶಕ್ತಿ ಇಲ್ಲ. ರಾಜ್ಯದಲ್ಲಿ ೨ಎ ಪ್ರವರ್ಗದಲ್ಲಿ ಇರುವ ಬಲಿಷ್ಠ ಲಿಂಗಾಯತ ಉಪವರ್ಗಗಳಾದ ಬಣಜಿಗ, ಗಾಣಿಗ ಮುಂತಾದ ಎಲ್ಲವನ್ನು ೩ಬಿ ಪ್ರವರ್ಗದಲ್ಲಿ ಐಕ್ಯಗೊಳಿಸುವುದು ಮತ್ತು 2ಎ ಪ್ರವರ್ಗದಲ್ಲಿರುವ ಲಿಂಗಾಯತ ಉಪವರ್ಗಗಳಾದ ಮಡಿವಾಳ, ಕುಂಬಾರ, ಕಂಬಾರ, ಹಡಪದ ಮುಂತಾದ ಉಪವರ್ಗಗಳನ್ನು ೨ಎ ನಲ್ಲಿಯೇ ಇರಿಸಿ, ಅವರಿಗೆ ಹಿಂದು ಕುಂಬಾರ ಇತ್ಯಾದಿ ಬದಲಿಗೆ ಲಿಂಗಾಯತ ಕುಂಬಾರ ಇತ್ಯಾದಿ ಜಾತಿ ಪ್ರಮಾಣ ಪತ್ರ ನೀಡಬೇಕೆಂಬ ಬೇಡಿಕೆ ಇಡಬೇಕು. ಕೇಂದ್ರದಲ್ಲಿ ಲಿಂಗಾಯತ ಎಲ್ಲಾ ಉಪವರ್ಗಗಳಿಗೆ ಮೀಸಲಾತಿಯ ಬೇಡಿಕೆ ಹಾಗು ಅಲ್ಪಸಂಖ್ಯಾತರ ಸೌಲಭ್ಯದ ಬೇಡಿಕೆಗೂ ಲಿಂಗಾಯತರು ಒಂದಾಗಿ ಹೋರಾಡಬೇಕು. ಇದರಲ್ಲಿ ಬರುವ ರಾಜಕೀಯ ಒತ್ತಡಗಳಿಗೆ ಸಮಸ್ತ ಲಿಂಗಾಯತರು ಒಗ್ಗಟ್ಟಿನಿಂದ ನಿಲ್ಲಬೇಕು. ಇದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ ಹಾಗು ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವ ವಹಿಸಿಕೊಳ್ಳಬೇಕು. ಒಟ್ಟಾರೆ, ಹಿಂದುತ್ವದ ಅಲೆಯಲ್ಲಿ ಲಿಂಗಾಯತದ ಅಸ್ತಿತ್ವ ಮತ್ತು ಅಸ್ಮಿತೆ ಕಳೆದು ಹೋಗದಂತೆ ಎಚ್ಚರಿಕೆ ವಹಿಸಬೇಕು.

ಈಗ ಸದ್ಯ ಹರಿಹರ ಪಂಚಮಸಾಲಿ ಟ್ರಸ್ಟ್ ಹಾಗು ಪೀಠಗಳು ದೊಡ್ಡ ಮಟ್ಟದಲ್ಲಿ ಹೆಸರು ಕೆಡಿಸಿಕೊಂಡಿವೆ. ಕೂಡಲಸಂಗಮ ಟ್ರಸ್ಟ್ ಆ ರೀತಿಯ ಹಗರಣಗಳಿಂದ ಮುಕ್ತವಾಗಿದೆ, ಆದರೆ ಪೀಠದಿಂದ ಉಚ್ಛಾಟನೆ ಆಗಿರುವ ಸ್ವಾಮಿಗಳಿಂದ ಸಮಾಜಕ್ಕೆ ಒಂದಷ್ಟು ಹಿನ್ನಡೆಯಾಗಿದ್ದು ನಿಜ. ಪಂಚಮಸಾಲಿಗಳು ಈಗ ಮುಂದೇನು ಮಾಡಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಇಂತದ್ದರಲ್ಲಿ “ಈ ಟ್ರಸ್ಟ್ ಮತ್ತು ಪೀಠಗಳ ಹಗರಣದಿಂದ ನಮಗೆ ಮುಜುಗರ ಆಗುತ್ತಿದೆ, ನಮಗೆ ಪೀಠಗಳ ಅಗತ್ಯವೇ ಇರಲಿಲ್ಲ, ನಾವು ವೀರಶೈವ ಪಂಚಪೀಠಗಳಿಗೆ ನಡೆದುಕೊಳ್ಳುತ್ತಾ ಆರಾಮವಾಗಿದ್ವಿ” ಎನ್ನುವ ಅರ್ಥದಲ್ಲಿ ಹರಿಹರದ ಮಾಜಿ ಶಾಸಕ ಶಿವಶಂಕರ್ ಮಾತನಾಡಿದ್ದಾರೆ. ಅವರ ಈ ಮಾತು ಇಡೀ ಪಂಚಮಸಾಲಿ ಸಮುದಾಯವನ್ನು ಮರಳಿ ಸ್ವಾಭಿಮಾನ ಹೀನರನ್ನಾಗಿ ಮಾಡುವ ಪ್ರಯತ್ನದ ಭಾಗ. ಅಷ್ಟಕ್ಕೂ ಶಿವಶಂಕರ್ ಪಂಚಮಸಾಲಿಗಳಿಗೆ ಪ್ರತ್ಯೇಕ ಪೀಠಗಳಾದಾಗಲೂ ವೀರಶೈವ ಪಂಚಪೀಠಗಳ ನಂಟು ಬಿಟ್ಟಿರಲಿಲ್ಲ. ಪಂಚಮಸಾಲಿಗಳ ಸ್ವಾಭಿಮಾನಕ್ಕೆ ಧಕ್ಕೆ ತರುವ ಮಾತುಗಳನ್ನು ಶಿವಶಂಕರ್ ಅಥವಾ ಇನ್ನಾರದರೂ ಸರಿ, ಆಡಬಾರದು. ಪಂಚಮಸಾಲಿ ಸಮಾಜದ ಬೇಡಿಕೆಗಳಿಗೆ ಧ್ವನಿಯಾಗುವ ಪರ್ಯಾಯ ರಾಜಕೀಯ ಮಾರ್ಗಗಳನ್ನು ಆ ಉಪವರ್ಗ ಕಂಡುಕೊಳ್ಳಬೇಕು. ಆ ರೀತಿಯ ರಾಜಕೀಯೇತರ, ಮಠೇತರ ಸಂಘಟನೆಯ ಕಾರ್ಯ ಪಂಚಮಸಾಲಿ ಸಮಾಜ ಮಾಡಬೇಕಿದೆ. ಅದಕ್ಕೆ ಏಕೈಕ ಪರಿಹಾರವೆಂದರೆ ಬಸವ ಮಾರ್ಗವನ್ನು ತನ್ನದಾಗಿಸಿಕೊಳ್ಳುವುದು.

ಪಂಚಮಸಾಲಿ ಉಪವರ್ಗ ಮುಂದೇನು ಮಾಡಬೇಕು?

ವರ್ತಮಾನದ ಎಲ್ಲಾ ಗೊಂದಲಗಳಿಂದ ಹೊರಬರಲು ಪಂಚಮಸಾಲಿ ಸಮಾಜಕ್ಕೆ ಉಳಿದಿರುವ ಏಕೈಕ ಮಾರ್ಗವೆಂದರೆ ಅದು ಬಸವ ಮಾರ್ಗ, ಅಂದರೆ, ಬಸವಣ್ಣನವರ ತತ್ವಾದರ್ಶಗಳಂತೆ ನಡೆಯುವುದು. ಇದರನಸುಸಾರ ಅವರು ಮಾಡಬೇಕಾದ ಕಾರ್ಯವೆಂದರೆ:

1. ಮಠ, ಪೀಠ, ಟ್ರಸ್ಟ್ ಗಳು ಸಮುದಾಯದ ಅಭಿವೃದ್ಧಿ ಮಾಡುವುದಿಲ್ಲ ಎಂಬುದನ್ನರಿತು ಅವುಗಳಿಂದ ದೂರವಿರುವುದು. ಅಷ್ಟಕ್ಕೂ ಮಠ ಬೇಕು ಅಂದರೆ, ರಾಜಕೀಯ ರಹಿತವಾಗಿ ಬಸವ ತತ್ವ ಪ್ರಚಾರ ಮಾಡುವ ಯಾರಾದರು ಚರಜಂಗಮರನ್ನು ಧಾರ್ಮಿಕ ಕಾರ್ಯಗಳಿಗಾಗಿ ಬಳಸಿಕೊಳ್ಳುವುದು.
2. ಸಮುದಾಯವನ್ನು ಬಳಸಿಕೊಳ್ಳುವ ಪಂಚಮಸಾಲಿ ರಾಜಕಾರಣಿಗಳನ್ನು ದೂರವಿಟ್ಟು ಸಮುದಾಯದ ಕಷ್ಟಸುಖಗಳಿಗೆ ಸ್ಪಂದಿಸುವ ಇತರ ಲಿಂಗಾಯತ ಉಪವರ್ಗದ ಅಥವಾ ಲಿಂಗಾಯತೇತರ ರಾಜಕಾರಣಿಗಳನ್ನು ಬೆಂಬಲಿಸುವುದು. ಉದಾಹರಣೆಗೆ: ಕಲಬುರಗಿ ಜಿಲ್ಲೆಯಲ್ಲಿ ಲಿಂಗಾಯತ ಶಾಸಕರು ಲಿಂಗಾಯತರ ಕಷ್ಟಕ್ಕೆ ಆಗದಿದ್ದಾಗ, ಹಿಂದುಳಿದ ವರ್ಗದ ಅತ್ಯಲ್ಪ ಮತದಾರರಿರುವ ಶಾಸಕರನ್ನು ನಾಲ್ಕು ಸಾಮಾನ್ಯ ಕ್ಷೇತ್ರದಲ್ಲಿ ನಾಲ್ಕಾರು ಅವಧಿಗೆ ಆಯ್ಕೆ ಮಾಡಿ ಲಿಂಗಾಯತರು ತಮ್ಮ ಕೆಲಸ ಮಾಡಿಕೊಂಡಿರುವ ಪ್ರಯೋಗವನ್ನು ಅನುಸರಿಸುವುದು. ತನ್ನ ಸಮುದಾಯದ ಮತದಾರರು ಇಲ್ಲದಿದ್ದರೆ, ಅಂತಹ ಶಾಸಕ ನಮ್ಮನ್ನು ಗೌರವಿಸಿ, ಉಳಿದವರ ಕೆಲಸ ಕಾರ್ಯಗಳನ್ನು ಮಾಡಬಲ್ಲ. ಇದು ಕಲಬುರಗಿ ಜಿಲ್ಲೆಯ 3-4 ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಯಶಸ್ಸು ಕಂಡಿದೆ.
3. ಪಂಚಮಸಾಲಿ ಉಪವರ್ಗದ ಸಾಮಾನ್ಯ ಜನರು ಹರಿಹರ ಟ್ರಸ್ಟ್ ಮತ್ತು ಪೀಠವನ್ನು ಸಂಪೂರ್ಣವಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು. ಸಾಧ್ಯವಾಗದಿದ್ದರೆ ಸಮಾಜದ ಒಳಿತಿಗಾಗಿ ಕೂಡಲಸಂಗಮ ಟ್ರಸ್ಟ್ ಗೆ ಶಕ್ತಿ ತುಂಬಬೇಕು. ಅದೂ ಸಾಧ್ಯವಾಗದಿದ್ದರೆ ಸಮಾಜದ ಸಾಮಾನ್ಯರು ಸೇರಿ ಒಂದು ಟ್ರಸ್ಟ್ ಸ್ಥಾಪಿಸಿಕೊಳ್ಳಬೇಕು. ಅದರಡಿಯಲ್ಲಿ ಯಾವುದೇ ಪೀಠ ಸ್ಥಾಪಿಸದೆ ಪ್ರತಿ ತಾಲೂಕಿನಲ್ಲಿ ಒಂದೊಂದು ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಬಡ ಪಂಚಮಸಾಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಸರೆಯಾಗಬೇಕು. ಇಂತಹ ಕಾರ್ಯಕ್ಕೆ ದೇಣಿಗೆ ಕೊಡುವ ಮೂಲಕ ಟ್ರಸ್ಟ್ ನ್ನು ಬೆಂಬಲಿಸುವ ಜನರು ಸಮಾಜದಲ್ಲಿದ್ದಾರೆ.
4. ಪಂಚಮಸಾಲಿ ಮಹಾಪುರುಷರಾದ ಸರ್ ಸಿದ್ಧಪ್ಪ ಕಂಬಳಿ, ಅರಟಾಳ್ ರುದ್ರಗೌಡ, ಅದರಗುಂಚಿ ಶಂಕರಗೌಡ, ಲಿಂಗಾನಂದ ಸ್ವಾಮಿಗಳು ಮುಂತಾದವರ ಹೆಸರಿನಲ್ಲಿ ವಿದ್ಯಾರ್ಥಿ ವೇತನಗಳನ್ನು ಘೋಷಿಸಬೇಕು. ಆ ಮಹಾ ಪುರುಷರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಕೊಡಬೇಕು. ಕಿತ್ತೂರು ಚೆನ್ನಮ್ಮ ತಾಯಿಯ ಸಾಹಸ, ಶೌರ್ಯ, ಸರ್ವ ಜನರನ್ನು ಆದರಿಸುವ ಗುಣ, ಮತ್ತು ಕಿತ್ತೂರು ಸಂಸ್ಥಾನದ ನಾಶಕ್ಕೆ ವೈದಿಕರು ಮಾಡಿರುವ ಹುನ್ನಾರಗಳ ಕುರಿತು ಸಮಾಜದವರಿಗೆ ತಿಳುವಳಿಕೆ ಕೊಡಬೇಕು.
5. ಸಮಾಜದಲ್ಲಿ ಬೇರೂರಿರುವ ವೈದಿಕ ಮೌಢ್ಯಗಳಿಂದ ಸಮಾಜವನ್ನು ಹೊರತಂದು ಬಸವ ತತ್ವ ಎಲ್ಲರ ಜೀವನ ಮಾರ್ಗವಾಗಿಸಲು ಟ್ರಸ್ಟ್ ವತಿಯಿಂದ ವಚನಮೂರ್ತಿಗಳು ಹಾಗು ಧರ್ಮ ಪ್ರಚಾರಕರನ್ನು ನೇಮಿಸಬೇಕು.

ಪಂಚಮಸಾಲಿಗಳು ತಮ್ಮದೆಯಾದ ಸಂಘಟನೆ, ಟ್ರಸ್ಟ್ ಮತ್ತು ಪೀಠಗಳು ಸ್ಥಾಪಿಸುವ ಮೊದಲು ವೀರಶೈವ ಪಂಚಪೀಠಗಳಿಗೆ ನಿಷ್ಠರಾಗಿದ್ದರು. ಪಂಚಪೀಠಗಳು ಪಂಚಮಸಾಲಿಗಳನ್ನು ಧಾರ್ಮಿಕವಾಗಿ ಪೋಷಿಸುತ್ತಿವೆ ಎನ್ನುವ ಸತ್ಯ ತಿಳಿದ ಮೇಲೆ ಪಂಚಪೀಠಗಳಿಂದ ಪಂಚಮಸಾಲಿ ಬುದ್ದಿವಂತರು ದೂರ ಸುರಿಯಲಾರಂಭಿಸಿದರು. ಇದನ್ನೆ ಬಂಡವಾಳ ಮಾಡಿಕೊಂಡ ಪಂಚಮಸಾಲಿ ರಾಜಕಾರಣಿಗಳು ತಮ್ಮದೇ ಸಂಘಟನೆ, ಟ್ರಸ್ಟ್ ಹಾಗು ಪೀಠ, ಮೀಸಲಾತಿಗಳ ಆಸೆಯನ್ನು ಪಂಚಮಸಾಲಿ ಮುಗ್ಧ ಜನರಲ್ಲಿ ಬಿತ್ತುವಲ್ಲಿ ಯಶಸ್ವಿಯಾದರು. ರಾಜ್ಯಾದ್ಯಂತ ಏಕೈಕ ಪಂಚಮಸಾಲಿ ಸಂಘಟನೆ, ಟ್ರಸ್ಟ್ ಅಥವಾ ಪೀಠ ಮಾಡುವಲ್ಲಿ ಪಂಚಮಸಾಲಿ ಸಮಾಜ ಆರಂಭದಲ್ಲಿಯೇ ಎಡವಿತು. ಮುಂದೆ ಪಂಚಮಸಾಲಿ ಸಂಘಟನೆ, ಟ್ರಸ್ಟ್ ಮತ್ತು ಪೀಠಗಳು ಪಂಚಮಸಾಲಿ ಜನರನ್ನು ಉಪೇಕ್ಷಿಸಿ ರಾಜಕೀಕರಣಗೊಂಡವು. ಅದರ ಪರಿಣಾಮದಿಂದ ಪಂಚಮಸಾಲಿ ಸಂಘಟನೆ ಮತ್ತು ಪೀಠಗಳಲ್ಲಿ ಇಂದಿನ ಗೊಂದಲ, ಅರಾಜಕತೆ, ಹಗರಣಗಳು ಹುಟ್ಟಿಕೊಂಡವು. ಈಗ ಆ ಗೊಂದಲಗಳು ಬೆಳೆದು ಸಂಘಟನೆ ಮತ್ತು ಪೀಠಗಳು ಗುಣಪಡಿಸಲಾಗದ ರೋಗಗ್ರಸ್ಥ ಹಂತಕ್ಕೆ ತಲುಪಿವೆ. ಪಂಚಮಸಾಲಿಗಳನ್ನು ಅಂದು ವೀರಶೈವರು ಶೋಷಿಸುತ್ತಿದ್ದರು, ಇಂದು ಅವರದೇ ಸಂಘಟನೆ, ಪೀಠಗಳು ಶೋಷಿಸುತ್ತಿವೆ. ಈಗ ಪಂಚಮಸಾಲಿಗಳು ಎಚ್ಚರಗೊಳ್ಳುವ ಕಾಲ ಸನ್ನಿಹಿತವಾಗಿದೆ.

ಮುಕ್ತಾಯ….

WhatsApp Image 2025 11 17 at 3.54.12 PM
ಡಾ ಜೆ ಎಸ್‌ ಪಾಟೀಲ್‌
+ posts

ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಡಾ ಜೆ ಎಸ್‌ ಪಾಟೀಲ್‌
ಡಾ ಜೆ ಎಸ್‌ ಪಾಟೀಲ್‌
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹವಾಮಾನ ವರದಿ | ಮುಂದಿನ 3 ದಿನ ಗುಡುಗು ಸಹಿತ ಭಾರೀ ಮಳೆ

ಮನ್ನಾರ್ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಮತ್ತು ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದ...

ಬೀದರ್‌ | ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಶಿಸ್ತು ಮೈಗೂಡಿಸಿಕೊಳ್ಳಿ : ಜಯಕುಮಾರ ಶಿಂಧೆ

ಸಮಯ ಪ್ರಜ್ಞೆ ಹಾಗೂ ಶಿಸ್ತು ಮೈಗೂಡಿಸಿಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು ಎಂದು...

ಮುದ್ದೇಬಿಹಾಳದಲ್ಲಿ ತೀವ್ರ ಬರ; ಕಾಲುವೆಗಳಿಗೆ ನೀರು ಹರಿಸಲು ಶಾಸಕ ನಾಡಗೌಡ ಮನವಿ

ಬರದ ಬಿಸಿಲಿಗೆ ಮುದ್ದೇಬಿಹಾಳ ಮತ್ತು ತಾಳಿಕೋಟೆ ತಾಲೂಕುಗಳ ಗ್ರಾಮೀಣ ಬದುಕು ತತ್ತರಿಸುತ್ತಿರುವ...

ಈ ದಿನ ಸಂಪಾದಕೀಯ | ಪ್ರಧಾನಿಗೂ ಸಿಗದ ʼಬಾರಾಖೂನ್ ಮಾಫಿʼ ಗ್ಯಾನೇಶ್ ಕುಮಾರ್‌ಗೆ ಯಾಕೆ? ಕೊಡಿಸಿದವರು ಯಾರು?

ಚುನಾವಣೆಯ ಕಾವಲುಗಾರನಿಗೆ ಕಾನೂನಿನ ಕವಚ ಕುಂಡಲಗಳನ್ನು ನೀಡಿ, ಕಾನೂನಿನ ಕೈಗಳು ಮುಟ್ಟದಂತೆ,...