ಕರ್ನಾಟಕ ವಿಧಾನಸಭೆಯ 2028ರ ಚನಾವಣೆಯ ಮೇಲೆ ಕಣ್ಣಿಟ್ಟಿರುವ ನಾಗಪುರದ ಸಂಘಿ ಬ್ರಾಹ್ಮಣರು ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂದು ಎಲ್ಲಾ ನಾಮ ಮಾರ್ಗಗಳನ್ನು ತುಳಿಯುತ್ತಿದ್ದಾರೆ. ಯಡಿಯೂರಪ್ಪ ಕುಟುಂಬವನ್ನು ಹಿನ್ನೆಲೆಗೆ ಸರಿಸಿ, ಲಿಂಗಾಯತ ಪ್ರಾಬಲ್ಯವನ್ನು ನಗಣ್ಯಗೊಳಿಸಿ ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣ ಪ್ರಾಬಲ್ಯದ ಬಿಜೆಪಿ ಸರ್ಕಾರ ತರುವ ಗುರಿ ಹೊಂದಿರುವ ಸಂಘಿಗಳು ಕಳೆದ ಮೂರು ವರ್ಷಗಳಿಂದ ಅನೇಕ ಬಗೆಯ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಲಿಂಗಾಯತರ ಅಸ್ಮಿತೆ ಹಾಗು ಪ್ರತ್ಯೇಕ ಐಡೆಂಟಿಟಿಯನ್ನು ಅಳಿಸಿ ಹಾಕಿ ಅವರನ್ನು ಚಾತುರ್ವರ್ಣ ವ್ಯವಸ್ಥೆಯ ಭಾಗವಾಗಿಸಿ ಗುಲಾಮಗಿರಿಗೆ ತಳ್ಳುವ ಯೋಜನೆಯೂ ಒಂದು. ಅದರ ಭಾಗವಾಗಿ ವಚನ ಸಿದ್ಧಾಂತವನ್ನು ತಿರುಚುವ ಕುಕೃತ್ಯ ನಿರಂತರವಾಗಿ ನಡೆಯುತ್ತಿದೆ. ಪೀತ ಪತ್ರಿಕೆಯೊಂದರಲ್ಲಿ ಜನಮೇಜಯ ಉಮರ್ಜಿ ಎನ್ನುವ ಬಾಗಲಕೋಟೆ ಮೂಲದ ಸಂಘಿ ಬ್ರಾಹ್ಮಣನೊಬ್ಬ, ಮತ್ತೊಬ್ಬ ಅನಿವಾಸಿ ಭಾರತೀಯ ವೀರಶೈವ ಲಿಂಗೀ ಬ್ರಾಹ್ಮಣನೊಂದಿಗೆ ಸೇರಿ ಇನ್ನಿಲ್ಲದ ಸಾಹಸ ಮಾಡುತ್ತಿದ್ದಾನೆ. ಇದಾವುದೂ ಪ್ರಜ್ಞಾವಂತ ಲಿಂಗಾಯತ ಸಮಾಜದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತಿಲ್ಲ ಮತ್ತು ಇವರ ಈ ಕುಕೃತ್ಯಕ್ಕೆ ಲಿಂಗಾಯತ ವಿದ್ವಾಂಸರು ಸೂಕ್ತವಾದ ತಾತ್ವಿಕ ಪ್ರತಿಕ್ರಿಯೆ ನೀಡಿ ಬಾಯಿ ಮುಚ್ಚಿಸುತ್ತಿದ್ದಾರೆ.
ಇದಕ್ಕೆ ಪೂರಕವಾಗಿ, ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದ ನಂತರ ಹತಾಶೆಗೆ ಒಳಗಾದ ಸಂಘಿಗಳು ಲಿಂಗಾಯತ ಮಠಾಧೀಶರು ಕಳೆದ ವರ್ಷ ಹಮ್ಮಿಕೊಂಡಿದ್ದ ಬಸವ ಸಂಸ್ಕೃತಿ ಅಭಿಯಾನದ ಅಭೂತಪೂರ್ವ ಯಶಸ್ಸಿಗೆ ಹೆದರಿ ಕಂಗಾಲಾಗಿದ್ದಾರೆ. ಈ ಚಟುವಟಿಕೆಗಳಿಂದ ಸಂಘಟಿತರಾಗುತ್ತಿರುವ ಲಿಂಗಾಯತರಲ್ಲಿ ಗೊಂದಲ ಮೂಡಿಸಲು ಕರ್ನಾಟಕ ಮೂಲದ ಮಹಾರಾಷ್ಟ್ರದ ಬಸವ ಪರಂಪರೆಯ ಮಠವೊಂದರ ನೀಚ ಕಾವಿಧಾರಿಯೊಬ್ಬನನ್ನು ಲಿಂಗಾಯತರ ಮೇಲೆ ಛೂ ಬಿಟ್ಟಿದ್ದಾರೆ. ಬಿಜೆಪಿಯಲ್ಲಿರುವ ಟಕೆಟ್ ಆಕಾಂಕ್ಷಿ ಲಿಂಗಾಯತ ಪುಢಾರಿಗಳ ಆರ್ಥಿಕ ಸಹಾಯ ಹಾಗು ಬಸವದ್ವೇಷಿ ವೀರಶೈವ ಶಿವಾಚಾರ್ಯ ಜಾತಿ ಜಂಗಮರ ಸಹಾಯದಿಂದ ಈ ಅಜ್ಞಾನಿ ಕಾವಿಧಾರಿ ಕರ್ನಾಟಕದಾದ್ಯಂತ “ಬಸವಾದಿ ಶಿವಶರಣರ ಹಿಂದೂ ಸಮಾವೇಶ“ದ ಮುಖವಾಡದಲ್ಲಿ ಬಿಜೆಪಿಯ ಮುಂಬರುವ ಚುನಾವಣೆಯ ಪೂರ್ವ ಸಿದ್ಧತಾ ಸಭೆಗಳನ್ನು ಮಾಡುತ್ತಿದ್ದಾನೆ. ಈತನ ಮುಸ್ಲಿಮ್ ದ್ವೇಷ, ಬಸವದ್ವೇಷ, ಮತ್ತು ಅನೇಕ ವಿಷಯಗಳಲ್ಲಿನ ಅಜ್ಞಾನ ಭರಪೂರಾಗಿ ಪ್ರದರ್ಶನಗೊಳ್ಳುತ್ತಿದೆ. ಈತ ಎಲ್ಲೆಲ್ಲಿ ಬಸವಾದಿ ಶರಣರ ಹೆಸರಲ್ಲಿ ಹಿಂದೂ ಸಮಾವೇಶ ಮಾಡಿದ್ದಾನೊ ಅಲ್ಲೆಲ್ಲಾ ತನ್ನಲ್ಲಿರುವ ಸಂಪೂರ್ಣ ಅಜ್ಞಾನವನ್ನು ಹೊರಹಾಕಿದ್ದಾನೆ. “ಮಾನುಳ್ಳವರು ಮಾನಕ್ಕೆ ಹೆದರಿದರೆ ಮಾನಗೇಡಿಯು ತನಗೆ ಹೆದರಿದರು” ಎನ್ನುವಂತೆ ಈತನ ನಡೆಯಾಗಿದೆ.
ಇದೇ ನವೆಂಬರ್ 3 ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಈ ಬಸವಾದಿ ಶರಣರ ಮುಖವಾಡದ ಬಿಜೆಪಿ ಸಮಾವೇಶದಲ್ಲಿ ಈ ಮನುಷ್ಯ “ಅಂಬೇಡ್ಕರ್ ಅವರು ಮನುಸ್ಮೃತಿಯ ಕುರಿತು ಸರಿಯಾಗಿ ತಿಳಿದುಕೊಳ್ಳದೆ ಅದನ್ನು ಸುಟ್ಟು ಆಮೇಲೆ ಪಶ್ಚಾತ್ತಾಪ ಪಟ್ಟರು” ಎನ್ನುವ ಅರ್ಥದ ಮಾತನಾಡಿದ್ದಾನೆ. ಅಂಬೇಡ್ಕರ್ ಅವರು ಓದಿದ್ದು ಅಶುದ್ಧ ಮನುಸ್ಮೃತಿ ಎನ್ನುವುದು ಈತನ ವಾದ. ಈತ ಅಶುದ್ಧ ಹಾಗು ಶುದ್ಧವಾದ ಎರಡು ಬಗೆಯ ಮನುಸ್ಮೃತಿಗಳ ಸಂಶೋಧನೆ ಮಾಡಿದ ಮಹಾನ್ ಸಂಶೋಧಕನಂತೆ ಮಾತನಾಡಿದ್ದಾನೆ. ಜಗತ್ತಿನಲ್ಲಿ ಎರಡು ಬಗೆಯ ಜನರು ತುಂಬಾ ಆತ್ಮವಿಶ್ವಾಸದಿಂದ ಯಾವ ಅಳುಕೂ ಇಲ್ಲದಂತೆ ಮಾತನಾಡುತ್ತಾರೆ. ಇವರಲ್ಲಿ ಎಲ್ಲಾ ವಿಷಯಗಳ ಕುರಿತು ಆಳವಾದ ಜ್ಞಾನ ಉಳ್ಳವರು ಒಂದು ಗುಂಪಾದರೆ ಏನೇನೂ ಗೊತ್ತಿಲ್ಲದ ಭಂಡ ಅಜ್ಞಾನಿಗಳದ್ದು ಇನ್ನೊಂದು ಗುಂಪು. ಈ ಕಾಡು ಮನುಷ್ಯ ಎರಡನೇ ಗುಂಪಿಗೆ ಸೇರಿದ್ದಾನೆ. ಈತನಿಗೆ ಮನುಸ್ಮೃತಿಯ ಪರಿಚಯವು ಇಲ್ಲ, ಡಾ. ಅಂಬೇಡ್ಕರ್ ಅವರ ಜ್ಞಾನದ ಪರಿಚಯವೂ ಇಲ್ಲ. ಈತ ಬಸವಾದಿ ಶರಣರ ಶುದ್ಧ ವಚನಗಳ ಬಗ್ಗೆ ಮಾತನಾಡದೆ ಕೇವಲ ಹದಿನೈದನೇ ಶತಮಾನದಲ್ಲಿ ವೀರಶೈವ ಆರಾಧ್ಯರ ಕಲಾಸೇವೆಯಿಂದ ಅಶುದ್ಧಗೊಂಡ, ಸಂಗತಿ ಬ್ರಾಹ್ಮಣರು ಹೇಳಿಕೊಟ್ಟ ಪ್ರಕ್ಷಿಪ್ತ ವಚನಗಳ ಕುರಿತು ಅಜ್ಞಾನಿಯಂತೆ ಮಾತನಾಡುತ್ತಾನೆ.

ಮನುಸ್ಮೃತಿಯ ಕರಾಳತೆ, ಜೀವ ವಿರೋಧಿ, ಸ್ತ್ರೀ ವಿರೋಧಿ, ಮನುಷ್ಯ ವಿರೋಧಿ ನಿಲುವುಗಳ ಕುರಿತು ಡಾ. ಅಂಬೇಡ್ಕರ್ ಅವರು ಆಳವಾಗಿ ಅಧ್ಯಯನ ಮಾಡಿದ್ದಾರೆ. ಅಂಬೇಡ್ಕರ್ ಮಾತ್ರವಲ್ಲದೆ ಅವರ ಅತ್ಯಂತ ಆತ್ಮೀಯ ಒಡನಾಡಿ ಗಂಗಾಧರ ನೀಲಕಂಠ ಸಹಸ್ರಬುದ್ಧೆ ಎನ್ನುವ ಬ್ರಾಹ್ಮಣ ವ್ಯಕ್ತಿ ಕೂಡ ಮನುಸ್ಮೃತಿ ದಹನ ಕಾರ್ಯದಲ್ಲಿ ಅಂಬೇಡ್ಕರ್ ಜೊತೆಗೆ ಕೈ ಜೋಡಿಸಿದ್ದರು ಎನ್ನುವ ಸಂಗತಿ ಈ ಮೂರ್ಖನಿಗೆ ಗೊತ್ತಿಲ್ಲ. ಗಂಗಾಧರ ನೀಲಕಂಠ ಸಹಸ್ರಬುದ್ಧೆ (ಬಾಪುಸಾಹೇಬ್ ಸಹಸ್ರಬುದ್ಧೆ) ಮಹಾರಾಷ್ಟ್ರದ ಒಬ್ಬ ಪ್ರಸಿದ್ಧ ಭಾರತೀಯ ಸಾಮಾಜಿಕ ಕಾರ್ಯಕರ್ತ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ನಿಕಟ ಸಹವರ್ತಿ ಆಗಿದ್ದರು. ಇವರು ಮಹಾರಾಷ್ಟ್ರದ ಮರಾಠಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರು ಸಮಾಜ ಸೇವೆಗೆ ಹೆಸರಾಗಿದ್ದ Social Service League ಮತ್ತು ಸಹಕಾರಿ ಚಳವಳಿಗಳ ಮುಂಚೂಣಿ ನಾಯಕರಾಗಿದ್ದರು. 1927 ರಲ್ಲಿ ದಲಿತರ ಜಲ ಹಕ್ಕುಗಳಿಗಾಗಿ ನಡೆದ ಐತಿಹಾಸಿಕ ಮಹಾಡ್ ಸತ್ಯಾಗ್ರಹದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಸಹಾಯ ಮಾಡಿದ ಪ್ರಮುಖರಲ್ಲಿ ಸಹಸ್ರಬುದ್ಧೆ ಒಬ್ಬರು. ಸುರೇಂದ್ರನಾಥ್ ಟಿಪ್ನಿಸ್ ಮತ್ತು ಎ.ವಿ. ಚಿತ್ರೆ ಅವರೊಂದಿಗೆ ಸೇರಿ ಇವರು ಸತ್ಯಾಗ್ರಹವನ್ನು ಯಶಸ್ವಿಗೊಳಿಸಲು ಶ್ರಮಿಸಿದರು.
ಮನುಸ್ಮೃತಿ ದಹನ: ಡಿಸೆಂಬರ್ 25, 1927 ರಂದು ನಡೆದ ಜಾತೀಯತೆ ಮತ್ತು ಅಸ್ಪೃಶ್ಯತೆಯ ವಿರೋಧಿ ಹೋರಾಟದ ಭಾಗವಾಗಿ ‘ಮನುಸ್ಮೃತಿ’ ಗ್ರಂಥವನ್ನು ದಹಿಸುವ ನಿರ್ಣಯವನ್ನು ಮಂಡಿಸಿದವರು ಮತ್ತು ಅದರ ಚಿತೆಯನ್ನು ಸಿದ್ಧಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಗಂಗಾಧರ ನೀಲಕಂಠ ಸಹಸ್ರಬುದ್ಧೆ. ತಾವು ಸ್ವತಃ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೂ, ಜಾತಿ ಪದ್ಧತಿಯ ಅಸಮಾನತೆಯನ್ನು ವಿರೋಧಿಸಿ ಅಂಬೇಡ್ಕರ್ ಅವರ ಸಿದ್ಧಾಂತಕ್ಕೆ ಬೆಂಬಲ ನೀಡಿದ ಇವರ ನಡೆ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದಾಗಿದೆ. 1940 ರ ದಶಕದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನಡೆಸುತ್ತಿದ್ದ ‘ಜನತಾ’ ವಾರಪತ್ರಿಕೆಯ ಸಂಪಾದಕರಾಗಿ ಸಹಸ್ರಬುದ್ಧೆ ಅವರು ಸುದೀರ್ಘ ಕಾಲ ಕಾರ್ಯನಿರ್ವಹಿಸಿದರು ಮತ್ತು ಬಹುಜನ ಸಮಾಜದ ಜಾಗೃತಿಗೆ ಲೇಖನಗಳ ಮೂಲಕ ಶ್ರಮಿಸಿದರು.
ಸಹಸ್ರಬುದ್ಧೆ ಅವರು 1958ರಲ್ಲಿ ನಿಧನರಾದರು. ಜಾತೀಯತೆಯ ವಿರುದ್ಧದ ಹೋರಾಟದಲ್ಲಿ ಜಾತಿ ಗಡಿಗಳನ್ನು ಮೀರಿ ನಿಂತ ಅವರ ಸಾಮಾಜಿಕ ಕಳಕಳಿ ಇಂದಿಗೂ ಸ್ಮರಣೀಯವಾಗಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಚೌದಾರ್ ಕೆರೆಯ ನೀರನ್ನು ಬಳಸುವ ಹಕ್ಕಿಗಾಗಿ ಮಹಾಡ್ನಲ್ಲಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಇದರ ಭಾಗವಾಗಿ 1927ರ ಡಿಸೆಂಬರ್ 25ರಂದು ನಡೆದ ಸಮ್ಮೇಳನದಲ್ಲಿ, ಸಮಾಜದಲ್ಲಿದ್ದ ಅಸಮಾನತೆ ಹಾಗೂ ಅಸ್ಪೃಶ್ಯತೆಯನ್ನು ಪ್ರತಿಭಟಿಸಲು ಮನುಸ್ಮೃತಿ ಗ್ರಂಥವನ್ನು ಬಹಿರಂಗವಾಗಿ ದಹಿಸಲು ನಿರ್ಧರಿಸಲಾಯಿತು.
ಸಮ್ಮೇಳನದಲ್ಲಿ ಮನುಸ್ಮೃತಿಯನ್ನು ದಹಿಸುವ ಅಧಿಕೃತ ನಿರ್ಣಯವನ್ನು ಮಂಡಿಸಿದವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಗಂಗಾಧರ ನೀಲಕಂಠ ಸಹಸ್ರಬುದ್ಧೆ. ಈ ನಿರ್ಣಯಕ್ಕೆ ದಲಿತ ಮುಖಂಡರಾದ ಪಿ.ಎನ್. ರಾಜಭೋಜ್ ಅವರು ಅನುಮೋದನೆ ನೀಡಿದರು. ಸಹಸ್ರಬುದ್ಧೆ ಹಾಗೂ ಇತರ ಐದಾರು ಜನ ದಲಿತ ಸಂತರು ಸೇರಿ ಗ್ರಂಥವನ್ನು ದಹಿಸಲು ಚಿತೆಯನ್ನು ಸಿದ್ಧಪಡಿಸಿದರು. ಆ ಚಿತೆಯ ಸುತ್ತಲೂ “ಅಸ್ಪೃಶ್ಯತೆಯನ್ನು ನಾಶಮಾಡಿ, ಬ್ರಾಹ್ಮಣ್ಯವನ್ನು ಹೂತುಹಾಕಿ” ಎಂಬ ಘೋಷಣೆಗಳ ಬ್ಯಾನರ್ಗಳನ್ನು ಕಟ್ಟಲಾಗಿತ್ತು. ನಂತರ ಸಹಸ್ರಬುದ್ಧೆ ಮತ್ತು ಇತರ ಕಾರ್ಯಕರ್ತರು ಮನುಸ್ಮೃತಿಯ ಪ್ರತಿಗಳಿಗೆ ಅಗ್ನಿಸ್ಪರ್ಶ ಮಾಡಿದರು. ಅಂಬೇಡ್ಕರ್ ಅವರ ಹೋರಾಟವು ಕೇವಲ ಒಂದು ನಿರ್ದಿಷ್ಟ ಜಾತಿಯ ವಿರುದ್ಧವಾಗಿರದೆ, ಅಸಮಾನತೆಯನ್ನು ಪೋಷಿಸುವ “ಸಿದ್ಧಾಂತ ಹಾಗೂ ವ್ಯವಸ್ಥೆಯ” ವಿರುದ್ಧವಾಗಿತ್ತು ಎಂಬುದಕ್ಕೆ ಸಹಸ್ರಬುದ್ಧೆ ಅವರ ಪಾಲ್ಗೊಳ್ಳುವಿಕೆ ಅತ್ಯಂತ ದೊಡ್ಡ ಸಾಕ್ಷಿಯಾಗಿದೆ. ಈ ದಿನವನ್ನು ಇಂದಿಗೂ ‘ಮನುಸ್ಮೃತಿ ದಹನ ದಿನ’ ಎಂದು ಆಚರಿಸಲಾಗುತ್ತದೆ. ಇದೆಲ್ಲರ ಕುರಿತು ಏನೇನೂ ತಿಳಿಯದ ಈ ಅಜ್ಞಾನಿ ಕಾವಿಧಾರಿ ಮಠದಲ್ಲಿ ಅಧ್ಯಾತ್ಮ ಸಾಧನೆ ಮಾಡುವುದು ಬಿಟ್ಟು ಮೂರನೇ ದರ್ಜೆಯ ಕೋಮು ರಾಜಕಾರಣದಲ್ಲಿ ತೊಡಗಿದ್ದಾನೆ.
ಇದನ್ನೂ ಓದಿ ಹಾಲು, ಬಸ್ ದರ ಏರಿಕೆ; ಕಾಂಗ್ರೆಸ್ ಸರ್ಕಾರದ ಸರಣಿ ಎಡವಟ್ಟು!
ಹಿಂದುತ್ವದ ಹೆಸರಿನಲ್ಲಿ ರಾಜಕಾರಣ ಮಾಡುವ ಈ ತರಹದ ಅನೇಕ ಕಾವಿ ಪುಢಾರಿಗಳು ತಮ್ಮ ಮಠಗಳಲ್ಲಿ “ಗೋಶಾಲೆ”ಗಳನ್ನು ತೆರೆದು ದಂಧೆ ಮಾಡುತ್ತಿದ್ದಾರೆ. ದೇವರು ಹಾಗು ಧರ್ಮವನ್ನು ರಾಜಕೀಯ ಅಧಿಕಾರಕ್ಕೆ ಬಳಸುವ ಹಾಗು ಹಣ ಗಳಿಸುವ ಸಾಧನವಾಗಿಸಿಕೊಂಡಿದ್ದಾರೆ. ಗೋಶಾಲೆಯ ಹಸುಗಳನ್ನು ಗೋಮಾಂಸ ಮಾರುವ ಕಟುಕರಿಗೆ ಕದ್ದು ಮಾರುವ ಕರಾಳ ದಂಧೆಗಳು ಇತ್ತೀಚೆಗೆ ಮಿತಿ ಮೀರಿವೆ. ಮೊನ್ನೆ ಇದೇ ರೀತಿಯ ಒಂದು ಪ್ರಕರಣ ರಾಜ್ಯದ ಗಡಿ ಜಿಲ್ಲೆ ಬೆಳಗಾವಿಯ ನಿಪ್ಪಾಣಿಯಲ್ಲಿ ನಡೆದಿದೆ. ಮಾಧ್ಯಮಗಳಲ್ಲಿ ಸುದ್ದಿಯಾಗದಂತೆ ಅದನ್ನು ಮುಚ್ಚಿ ಹಾಕಲಾಗಿದೆ. ಹಿಂದುತ್ವದ ಮುಖವಾಡ ಧರಿಸಿ ಕರಾಳ ದಂಧೆ ಮಾಡುವ ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದತೆ ಕೆಡಿಸುವ ಲಿಂಗಾಯತರನ್ನು ಹಿಂದುತ್ವವಾದಿ ಪಕ್ಷದ ಗುಲಾಮರಾಗಿಸಲು ಮತ್ತು ಲಿಂಗಾಯತ ಸ್ವತಂತ್ರ ಧರ್ಮದ ಅಸ್ತಿತ್ವವನ್ನು ನಾಶ ಮಾಡಲು ಸುಪಾರಿ ಪಡೆದಿರುವ ಈ ಕೋಮುದ್ವೇಷಿ ಕಾವಿ ಪುಢಾರಿಗಳನ್ನು ಸರ್ಕಾರ ಸಮರ್ಥವಾಗಿ ಮಟ್ಟಹಾಕಬೇಕಿದೆ. ಇಲ್ಲದಿದ್ದರೆ ಇವರು ಸಮಾಜ ಕಂಟಕವಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಾರೆ.

ಡಾ ಜೆ ಎಸ್ ಪಾಟೀಲ್
ಬಸವ ತತ್ವ ಪ್ರಚಾರಕ, ಪ್ರಗತಿಪರ ಚಿಂತಕ




