ತಡವಾದ ಮುಂಗಾರು: ಮೊದಲ ಬೆಳೆ ಖೋತಾ, ರೈತರ ಕೈ ಹಿಡಿಯುವುದೇ ಜುಲೈ ಮಳೆ?

Date:

ತಡವಾದ ಮುಂಗಾರು ಬೆಳೆಗಳ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ವಿಶೇಷವಾಗಿ ಅವಧಿ-ಆಧಾರಿತ ಬೆಳೆಗಳಾದ ಭತ್ತ, ಮುಸುಕಿನ ಜೋಳ, ಕಡಲೆ ಮತ್ತು ಇತರೆ ಬೆಳೆಗಳಲ್ಲಿ ಇಳುವರಿ ಕುಸಿಯುವ ಸಾಧ್ಯತೆ ಹೆಚ್ಚಿದೆ. ತಡವಾದ ಬಿತ್ತನೆಯಿಂದ ರೋಗ-ಕೀಟಗಳ ದಾಳಿ, ಅಕಾಲಿಕ ಮಳೆಯಂತಹ ಸಮಸ್ಯೆಗಳು ಎದುರಾಗಬಹುದು. 

ಕರ್ನಾಟಕದಲ್ಲಿ 2026ರ ಮುಂಗಾರು ಹಂಗಾಮು ಸಾಮಾನ್ಯಕ್ಕಿಂತ ತಡವಾಗಿ ಆರಂಭವಾಗಿದ್ದು, ಜೂನ್‌ನಲ್ಲಿ ಮಳೆಯ ಕೊರತೆಯಿಂದ ಬಿತ್ತನೆ ಕಾರ್ಯ ತೀವ್ರವಾಗಿ ಕುಂಠಿತಗೊಂಡಿತು. ಈಗ ಜುಲೈ ಆರಂಭದಲ್ಲಿ ಮಳೆ ಸುರಿಯುತ್ತಿರುವುದರಿಂದ ರೈತರು ತಡವಾದ ಬಿತ್ತನೆಗೆ ಮುಂದಾಗುತ್ತಿದ್ದಾರೆ. ಆದರೆ ಈ ವಿಳಂಬವು ರಾಜ್ಯದ ಎಲ್ಲ ಪ್ರದೇಶಗಳಲ್ಲಿ ಗಣನೀಯ ಪರಿಣಾಮ ಬೀರಿದೆ.

- Advertisement -

ಮೇ ಮೊದಲ ವಾರದಿಂದ ಮುಂಗಾರು ಪೂರ್ವ ಮಳೆ ಸುರಿದಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಇದಕ್ಕಾಗಿ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ ಸಂಗ್ರಹಿಸಿಕೊಂಡ ರೈತರು ಬಿತ್ತನೆಗೆ ಸಜ್ಜು ಮಾಡಿಕೊಂಡಿದ್ದರು. ರಾಜ್ಯಾದ್ಯಂತ ಸಾಮಾನ್ಯ ಮಳೆಯ ಪ್ರಮಾಣ ಶೇ.43ರಷ್ಟು ಕಡಿಮೆಯಾಗಿದೆ. ಮುಂಗಾರಿನ ಮೊದಲ ಬೆಳೆ ಜೂನ್‌ ಮೊದಲ ವಾರದಿಂದಲೇ ಬಿತ್ತನೆಯಾಗುತ್ತವೆ. ಜುಲೈ ಎರಡನೇ ವಾರದಿಂದ ಆಗಸ್ಟ್‌ ಅಂತ್ಯದೊಳಗೆ ಎರಡನೇ ಬೆಳೆಗಳು ಬಿತ್ತನೆಯಾಗುತ್ತವೆ. ಜೂನ್‌ನಲ್ಲಿ ಶೇ.84.1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಗುರಿ ಹೊಂದಲಾಗಿತ್ತಾದರೂ, ಕೇವಲ ಶೇ.36.5 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.42ರಷ್ಟು ಮುಂಗಾರು ಬೆಳೆ ಬಿತ್ತನೆಯಾಗಿತ್ತು. ಇದೀಗ ಎರಡನೇ ಬೆಳೆ ಬಿತ್ತನೆಗೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಬೆಳಗಾವಿಯ ರೈತರು ಬಿತ್ತನೆ ಮಾಡಿ ಮಳೆಗಾಗಿ ಕಾದು ಕುಳಿತಿದ್ದರು. ಮಳೆ ಬೀಳುವುದನ್ನು ನೋಡಿಕೊಂಡು ಬಿತ್ತನೆ ಪುನರಾರಂಭಿಸುವಂತೆ ಕೃಷಿ ಇಲಾಖೆಯಿಂದ ಸೂಚಿಸಲಾಗಿತ್ತು. ಇದೀಗ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣ ನದಿಗೆ ನೀರು ಬರಲಾರಂಭಿಸಿದೆ. ಇರಿಂದಾಗಿ ಆಲಮಟ್ಟಿ, ಹಿಡಕಲ್ ಜಲಾಶಯಕ್ಕೂ ಒಳಹರಿವು ಆರಂಭವಾಗಿದ್ದು, ಚಿಕ್ಕೋಡಿ ತಾಲೂಕಿನ ರೈತರ ಮೊಗದಲ್ಲಿ ಮಂದಹಾಸ ಬೀರಿದೆ. ಕೊನೆಪಕ್ಷ ಮುಂದಿನ ಬೆಳೆಯನ್ನಾದರೂ ಬೆಳೆದುಕೊಳ್ಳಬಹುದೆಂಬ ಆಶಾಭಾವನೆ ಮೂಡಿಸಿದೆ.

ಕಲ್ಯಾಣ ಕರ್ನಾಟಕದಲ್ಲಿ ಸೋಯಾಬೀನ್, ತೊಗರಿ, ಹೆಸರು, ಉದ್ದು, ಜೋಳ ಮುಂತಾದ ಪ್ರಮುಖ ಬೆಳೆಗಳ ಬಿತ್ತನೆ ಕುಸಿದಿದೆ. ತಡವಾದ ಸಮಯದಲ್ಲಿ ಅಲ್ಪಾವಧಿ ತೊಗರಿ, ಹೆಸರು, ಉದ್ದು, ಜೋಳ, ನೆಲಗಡಲೆ ಮತ್ತು ಸೂರ್ಯಕಾಂತಿ ಬಿತ್ತನೆ ಮಾಡಬಹುದು. ಆದರೆ ಇಳುವರಿ ಕಡಿಮೆಯಾಗುವ ಸಾಧ್ಯತೆ ಅಧಿಕವಾಗಿದೆ.

ಕಲಬುರಗಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಮುಂಗಾರು ವಿಳಂಬದಿಂದ ಬಿತ್ತನೆಗೆ ಅಡ್ಡಿಯುಂಟಾಗಿದ್ದು, ಕ್ರಮವಾಗಿ ಶೇ.12.86 ಮತ್ತು ಶೇ.30ರಷ್ಟು ಬಿತ್ತನೆಯಾಗಿದೆ. ಆದರೂ ಕೃಷಿ ಇಲಾಖೆ ಅಧಿಕಾರಿಗಳು ರೈತರು ಬಿತ್ತನೆ ಮುಂದೂಡುವಂತೆ ಸೂಚಿಸಿದ್ದರು. ಇದರ ಹಿನ್ನೆಲೆಯಲ್ಲೇ ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಿ ಪರಿಹಾರ ಕ್ರಮಗಳನ್ನು ಪ್ರಾರಂಭಿಸಬೇಕೆಂದು ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

 ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಜೂನ್‌ ಮೊದಲ ವಾರದಿಂದಲೇ ಬಿತ್ತನೆ ಆರಂಭವಾಗುತ್ತದೆ. ಈ ವೇಳೆ, 60 ದಿನಗಳ ಬೆಳೆಗಳಾದ ಉದ್ದು, ಹೆಸರು, ಸೋಯಾಬೀನ್‌ ಬೆಳಗಳನ್ನು ಬಿತ್ತನೆ ಮಾಡಲಾಗುತ್ತದೆ. ಜುಲೈ ಅಂತ್ಯದಲ್ಲಿ ಈ ಬೆಳೆಗಳನ್ನು ಕಟಾವು ಮಾಡಿ, ಹೊಲಗಳನ್ನು ಮತ್ತೆ ಹಸನು ಮಾಡಿ ತೊಗರಿ, ಬಿಳಿಜೋಳ, ಸೂರ್ಯಕಾಂತಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಮೇನಲ್ಲಿ ಸುರಿದ ಮಳೆಗೆ ಕೆಲವೆಡೆ ಉದ್ದು ಹೆಸರು ಬೆಳೆಗಳನ್ನು ಬಿತ್ತನೆ ಮಾಡಲಾಯಿತು. ಬಿತ್ತನೆ ಮುಂದೂಡುವಂತೆ ಕೃಷಿ ಇಲಾಖೆ ನಿರ್ದೇಶಿಸಿದ್ದರಿಂದ ಬಿತ್ತನೆ ಕಾರ್ಯ ನಡೆದಿಲ್ಲ. ಕೆಲವು ತಾಲೂಕುಗಳಲ್ಲಿ 100ಕ್ಕೆ ಶೇ.7ರಷ್ಟು ಬಿತ್ತನೆಯಾಗಿದೆ. ಬಿತ್ತಿರುವ ಬೆಳೆಗಳು ಮಳೆಯಿಲ್ಲದೆ ಭೂಮಿಯಿಂದ ಮೇಲೇಳಲೇ ಇಲ್ಲ. ಭೂಮಿಯಿಂದ ಮೇಲೆ ಬಂದಿರುವ ಬೆಳೆಗಳು ನೀರಿಲ್ಲದೆ ಸೊರಗಿವೆ” ಎಂದು ಬೇಸರ ವ್ಯಕ್ತಪಡಿಸಿದರು.

ಜೇವರ್ಗಿ, ಚಿತಾಪುರ, ಕಲಬುರಗಿಯ ಅರ್ಧಭಾಗ ಸೇರಿದಂತೆ ಕೆಲವೆಡೆ ಕಬ್ಬು ಬಿತ್ತನೆ ಮಾಡಲಾಗಿದೆ. ನೀರಿಲ್ಲದೆ ಕಬ್ಬು ಬೆಳೆಯೂ ಒಣಗಲಾರಂಭಿಸಿದೆ. ಜಿಲ್ಲೆಯ ಜೀವನಾಡಿಯಾಗಿರುವ ಭೀಮಾ ನದಿ ಸಂಪೂರ್ಣವಾಗಿ ಬರಿದಾಗಿದ್ದು, ಮಹಾರಾಷ್ಟ್ರದ ಉಜಿನಿ ಡ್ಯಾಮ್‌ನಿಂದ ಕರ್ನಾಟಕದ ಭೀಮಾ ನದಿಗೆ 15 ಟಿಎಂಸಿ ನೀರು ಬಿಡುಗಡೆ ಮಾಡಬೇಕೆಂಬುದು ವಾಡಿಕೆ. ಆದರೆ ವಾಡಿಕೆಯ ನೀರನ್ನು ಬಿಡದ ಅವರು, ಡ್ಯಾಮ್‌ ಭರ್ತಿಯಾದಾಗ ಮಾತ್ರ ಆ ನೀರನ್ನು ಹೊರಗೆ ಬಿಡುತ್ತಾರೆ. ರಾಜ್ಯ ಸರ್ಕಾರ, ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತನಾಡಿ, ವಾಡಿಕೆ ನೀರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಬೇಕು” ಎಂದರು.

“ಸೋಯಾಬೀನ್‌ನಂತಹ ಬೆಳೆಗಳು ಸಕಾಲದಲ್ಲಿ ಬಿತ್ತನೆಯಾಗದಿದ್ದರೆ ಇಳುವರಿ ಕುಸಿಯುತ್ತದೆ. ಬೀಜ ಮತ್ತು ರಸಗೊಬ್ಬರಗಳಿಗೆ ಖರ್ಚಾಗಿರುವ ಹಣವೂ ಇಲ್ಲ, ಬೆಳೆಯೂ ಇಲ್ಲದೆ ರೈತರು ಆರ್ಥಿಕ ಒತ್ತಡಕ್ಕೆ ಒಳಗಾಗಿದ್ದಾರೆ. ಬರಗಾಲದ ಛಾಯೆಯಿಂದ ಸಾಲದಂತಹ ಸಮಸ್ಯೆಗಳು ಹೆಚ್ಚಾಗುತ್ತವೆ” ಎಂದು ಬೇಸರ ವ್ಯಕ್ತಪಡಿಸಿದರು.

“ಇಂದು ಸಿಎಂ ಡಿ ಕೆ ಶಿವಕುಮಾರ್‌ ಅವರು ಕಲಬುರಗಿ ಜಿಲ್ಲೆಗೆ ಆಗಮಿಸಿದ್ದರು. ಜಿಲ್ಲೆಯನ್ನು ಬರಪೀಡಿತವೆಂದು ಘೋಷಿಸಬೇಕು, ಮುಂಚೆ ಹಾಕಿರುವ ಬೆಳೆಗಳಿಗೆ ಪರಿಹಾರ ಕ್ರಮ ಕೈಗೊಳ್ಳಬೇಕು. ಭೀಮಾ ನದಿಗೆ ನೀರು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಲಾಗಿದೆ. ಸಂಪುಟದಲ್ಲಿ ನಿರ್ಧರಿಸುವುದಾಗಿ ತಿಳಿಸಿದರ. ಈ ಬಾರಿಯಂತು ಬರಗಾಲಕ್ಕೆ ಸಿಲುಕಿದೆವು. ಒಂದು ಬೆಳೆ ಕಳೆದುಕೊಂಡಿದ್ದೇವೆ. ಇನ್ನೊಂದು ಬೆಳೆಯೂ ಕೈತಪ್ಪುವ ಸಾಧ್ಯತೆ ಗಾಢವಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.

ಧಾರವಾಡ, ಗದಗ, ಹಾವೇರಿ, ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಳೆಯಿಲ್ಲದೆ ಬೆಳೆಗಳೆಲ್ಲವೂ ಅನಾವೃಷ್ಟಿಗೆ ಒಳಗಾಗಿದ್ದು, ಭೂಮಿಯಂತರಾಳದಲ್ಲೇ ಉಳಿದಿವೆ. ಧಾರವಾಡ ಜಿಲ್ಲೆಯಲ್ಲಿ 2.82 ಲಕ್ಷ ಹೆಕ್ಟೇರ್‌ನಲ್ಲಿ ಹೆಸರುಕಾಳು, ಸೋಯಾಬೀನ್, ಉದ್ದು ಮತ್ತು ಮೆಕ್ಕೆಜೋಳ ಬಿತ್ತನೆ ಮಾಡಲು ಗುರಿ ಹೊಂದಲಾಗಿತ್ತು. ಆದರೆ ಶೇ.80ರಷ್ಟು ದಾಟಿದೆ. ಮಳೆ ಕೊರತೆಯಿಂದಾಗಿ ಈ ಬೆಳೆಗಳೂ ಒಣಗಿವೆ. ಗದಗ ಜಿಲ್ಲೆಯಲ್ಲಿ ಬಿತ್ತನೆ ಪ್ರಮಾಣ ಶೇ.65ರಷ್ಟು ತಲುಪಿದ್ದು, ಬೆಳೆಗಳನ್ನು ರಕ್ಷಿಸಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಿದೆ ಎಂಬುದು ರೈತರ ಆತಂಕವಾಗಿದೆ.

ಹಾವೇರಿ ರೈತ ಮುಖಂಡ ಮಲ್ಲಿಕಾರ್ಜುನ ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಜಿಲ್ಲೆಯಲ್ಲಿ 55.13ರಷ್ಟು ಮಳೆ ಕೊರತೆಯಾಗಿದೆ, ಶೇ.98ರಷ್ಟು ಬೆಳೆ ಬಿತ್ತನೆಯಾಗಿದೆ. ಜೂನ್‌ ಮೊದಲ ವಾರದಲ್ಲಿಯೇ ಮೆಕ್ಕೆಜೋಳ, ಸೋಯಾಬೀನ್‌, ಭತ್ತ, ಹೆಸರು, ಉದ್ದು, ಹತ್ತಿಯಂತಹ ಬೆಳೆಗಳನ್ನು ಬಿತ್ತನೆ ಮಾಡುತ್ತೇವೆ. ಹೆಸರು, ಉದ್ದು ಬೆಳೆಗಳನ್ನು ಕಟಾವು ಮಾಡಿ ಎರಡನೇ ಬೆಳೆ ಬೆಳೆಯುತ್ತಿದ್ದೆವು. ಇದೀಗ ಮೊದಲ ಬೆಳೆಯೇ ಕೈಸೇರಿಲ್ಲ. ಬಿತ್ತಿದ ಬೆಳೆಗಳು ಭೂಮಿ ಬಿಟ್ಟು ಮೇಲೇ ಬರಲಿಲ್ಲ. ಬಂದ ಬೆಳೆಗಳು ಅದರ ಜೀವ ಕಳೆದುಕೊಂಡಿವೆ. ಈಗ ಮೋಡ ಬಿತ್ತನೆ ಮಾಡಿಯೂ ಪ್ರಯೋಜನವಿಲ್ಲ” ಎಂದು ಹೇಳಿದರು.

“ಬೆಳೆಗಳಂತೂ ಕೈಮೀರಿವೆ. ಕೆಲವೆಡೆ ಸರಿಯಾಗಿ ಬರದಿದ್ದ ಬೆಳೆಗಳನ್ನು ಅಳಿಸಿ ಮತ್ತೆ ಎರಡನೇ ಬೆಳೆಗೆ ಜಮೀನುಗಳನ್ನು ತಾಯರಿಗೊಳಿಸುತ್ತಿದ್ದಾರೆ. ಮಕ್ಕೆಜೋಳ ಹೇರಳವಾಗಿ ಬೆಳೆಯಲಾಗುತ್ತದೆ. ಆದರೆ ಈ ಬಾರಿ ಮೆಕ್ಕೆಜೋಳದ ಬೆಳೆ ಇಲ್ಲದಾಂತಾಯಿತು. ಈಗ ಬಿತ್ತಿದರೆ ಇಳುವರಿ ಬರುವುದಿಲ್ಲ. ಬಿತ್ತನೆಗೆ ತಡವಾಗಿದೆ. ಹಾಗಾಗಿ ಮಳೆಯಾದರೆ ಬಿಳಿಜೋಳ, ಸೋಯಾಬೀನ್‌, ಸೂರ್ಯಕಾಂತಿ ಬಿತ್ತನೆ ಮಾಡುತ್ತೇವೆ” ಎಂದು ಹೇಳಿದರು.

ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು ಜಿಲ್ಲೆಗಳು ಉತ್ತರದ ಶುಷ್ಕ ಪ್ರದೇಶ ಮತ್ತು ದಕ್ಷಿಣದ ಹೆಚ್ಚು ಮಳೆಯ ಪ್ರದೇಶಗಳ ನಡುವಿನ ಸಂಕ್ರಮಣ ಪ್ರದೇಶವಾಗಿದೆ. ಜೂನ್ ಆರಂಭದಲ್ಲಿ ಮೊದಲ ಮುಂಗಾರು ಬಿತ್ತನೆ ಮಾಡಲಾಗುತ್ತದೆ. ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಮೆಕ್ಕೆ ಜೋಳ, ನೆಲಗಡಲೆ, ಸೂರ್ಯಕಾಂತಿ, ಹೆಸರು, ಉದ್ದು ಸೇರಿದಂತೆ ಕೆಲವು ಭಾಗಗಳಲ್ಲಿ ರಾಗಿ, ನವಣೆ, ಸಾಮೆ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ. ಈ ಬಾರಿ ಸಮರ್ಪಕ ಮಳೆಯಾಗದ ಕಾರಣ ಬಿತ್ತನೆ ಕಾರ್ಯ ಕುಂಠಿತವಾಗಿದೆ. ಬೆಳೆಗಳ ಬಿತ್ತನೆಗೆ ತಡವಾಗಿರುವ ಕಾರಣ ಈ ಬಾರಿಯ ಮುಂಗಾರು ಬೆಳೆಗಳು ಕೈಗೆ ಸಿಗದಂತಾಗಿವೆ.

ದಾವಣಗೆರೆ ಜಿಲ್ಲೆಯಲ್ಲಿ ಕೇವಲ ಶೇ.6ರಷ್ಟು ಬಿತ್ತನೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.25ರಷ್ಟಿತ್ತು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಖಾನ್ ಮಾತನಾಡಿ, “ಸುಮಾರು ಒಂದು ವಾರ ಮಳೆಯಾಗದಿದ್ದರೆ, ರೈತರು ಮೆಕ್ಕೆಜೋಳ ಬಿತ್ತನೆ ಚಟುವಟಿಕೆಗಳನ್ನು ಕೈಬಿಡಬಹುದು. ಒಂದು ವೇಳೆ ಬಿತ್ತನೆಯಾದರೆ ಇಳುವರಿಯ ಮೇಲೂ ದುಷ್ಪರಿಣಾಮ ಬೀರಬಹುದು.‌ ಹಾಗಾಗಿ ಕಡಿಮೆ ನೀರಿನ ಅಗತ್ಯವಿರುವ ಬೆಳೆಗಳನ್ನು ಬಿತ್ತನೆ ಮಾಡಿದರೆ ಒಳಿತು” ಎಂದು ಹೇಳಿದರು. 

ಶಿವಮೊಗ್ಗದಲ್ಲಿ ಶೇ.12ರಷ್ಟು ಭತ್ತ ಬಿತ್ತನೆಯಾಗಿದೆ. ತುಂಗಭದ್ರಾ ಅಣೆಕಟ್ಟಿಗೆ ಹೊಸ ಕ್ರೆಸ್ಟ್ ಗೇಟ್‌ಗಳನ್ನು ಅಳವಡಿಸಲಾಗಿದೆಯಾದರೂ ಮುಂಗಾರು ವಿಳಂಬದಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಭತ್ತದ ಬೆಳೆ ನಾಟಿ ಮಾಡಲು ತಡವಾಗಿದೆ. ಇದರಿಂದಾಗಿ ರಾಜ್ಯದ ಅಕ್ಕಿ ಗಿರಣಿಗಳ ಮೇಲೆಯೂ ದುಷ್ಪರಿಣಾಮ ಬೀರಬಹುದು.

ರಾಜ್ಯದ ಪ್ರಮುಖ ಆಹಾರ ಧಾನ್ಯ ಬೆಳೆಗಳಲ್ಲಿ ಕೊರತೆ ಸ್ಪಷ್ಟವಾಗಿ ಕಂಡುಬರುತ್ತದೆ. ಮೈಸೂರು, ಮಂಡ್ಯ ಮತ್ತು ಹಾಸನ, ಕೊಡಗು ಚಾಮರಾಜನಗರ ಜಿಲ್ಲೆಗಳಲ್ಲಿ ಭತ್ತ, ರಾಗಿ, ಮೆಕ್ಕೆಜೋಳ, ತೊಗರಿ, ನೆಲಗಡಲೆ, ಕಬ್ಬು ಬೆಳೆಗಳನ್ನು ಹೇರಳವಾಗಿ ಬೆಳೆಯಲಾಗುತ್ತದೆ. ಕೇವಲ ಶೇ.41ರಷ್ಟು ಬಿತ್ತನೆಯಾಗಿದ್ದು, ಬೆಳೆಗಳು ಒಣಗಲು ಪ್ರಾರಂಭಿಸಿವೆ. ಕೆಲವೆಡೆ ಬಿತ್ತನೆ ಮಾಡದೆ ಜಮೀನುಗಳನ್ನು ಪಾಳುಬಿಡಲಾಗಿದೆ.

ಹಾಸನ ಜಿಲ್ಲೆಯ ರೈತ ಚಂದ್ರಶೇಖರ್‌ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಮುಂಗಾರು ಆರಂಭವಾದರೂ ಸಮರ್ಪಕ ಮಳೆಯಾಗದಿರುವ ಕಾರಣ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ನಿರೀಕ್ಷಿತ ಮಟ್ಟದಲ್ಲಿ ಚುರುಕುಗೊಂಡಿಲ್ಲ. ಇದೀಗ ಮಲೆನಾಡು ಭಾಗದಲ್ಲಿ ಮಳೆ ಬಿರುಸು ಪಡೆದಿರುವುದರಿಂದ ಹೇಮಾವತಿ ಸೇರಿದಂತೆ ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಜಲಾಶಯಗಳು ಭರ್ತಿಯಾಗಬಹುದಾದರೂ, ಮುಂಗಾರು ಬೆಳೆಗಳಿಗೆ ಪ್ರಯೋಜನವಾಗುವುದಿಲ್ಲ. ಜಲಾಶಯ ಪ್ರದೇಶದಲ್ಲಿ ಭತ್ತದಂತಹ ಬೆಳೆಗಳನ್ನು ಬೆಳೆಯಬಹುದು. ಆದರೆ ಒಟ್ಟಾರೆ ಜಿಲ್ಲೆಯಲ್ಲಿ ಬೆಳೆಹಾನಿಯಾಗಿದೆ. ಬಿತ್ತನೆಯೂ ಕುಂಠಿತಗೊಂಡಿದೆ. ದ್ವಿದಳ ಧಾನ್ಯಗಳಾದ ಅಲಸಂದೆ, ಹೆಸರು, ಆಲೂಗಡ್ಡೆ, ನೆಲಗಡಲೆಯಂತಹ ಬೆಳೆಗಳನ್ನು ಮೇ-ಜೂನ್‌ನಲ್ಲಿ ಬಿತ್ತನೆ ಮಾಡಿ, ಬಳಿಕ ಎರಡನೇ ಬೆಳೆಯಾಗಿ ರಾಗಿ, ಮೆಕ್ಕೆಜೋಳದಂತಹ ಬೆಳೆಗಳನ್ನು ಬಿತ್ತನೆ ಮಾಡುತ್ತಿದ್ದೆವು. ಈಗ ಇನ್ನೊಂದು ತಿಂಗಳು ಬಾಕಿಯಿದೆ. ಮುಂದೇನಾಗುವುದು ಎಂಬುದನ್ನು ಕಾದು ನೋಡಬೇಕು” ಎಂದರು.

ಚಿಕ್ಕಮಗಳೂರಿನ ಪ್ರಸ್ಥಭೂಮಿ ಪ್ರದೇಶದಲ್ಲಿ ಬರಗಾಲದಂತಹ ಪರಿಸ್ಥಿತಿ ತಲೆದೋರುತ್ತಿದೆ. ಅನೇಕ ರೈತರು ಬಿತ್ತನೆ ಆರಂಭಿಸಲು ಇನ್ನೂ ಮಳೆಗಾಗಿ ಕಾಯುತ್ತಿದ್ದರೆ, ಈಗಾಗಲೇ ಬಿತ್ತಿದ ಬೀಜಗಳು ಮೊಳಕೆಯೊಡೆಯಲು ಹೆಣಗಾಡುತ್ತಿವೆ. ಈ ಹಂತದಲ್ಲಿ ಎಳ್ಳು, ಹತ್ತಿ, ಭತ್ತ ಮತ್ತು ತೊಗರಿ ಬೆಳೆಯನ್ನು ಬಿತ್ತಲು ಸಾಧ್ಯವಿಲ್ಲ. ಏಕೆಂದರೆ ಕೊಯ್ಲು ವಿಳಂಬವಾದರೆ ರಾಗಿ ಮತ್ತು ಜೋಳದ ಬಿತ್ತನೆಗೆ ತಡವಾಗುತ್ತದೆ ಎಂದು ರೈತರು ಹೇಳುತ್ತಾರೆ. 

ಮಳೆಯಾಶ್ರಿತ ಪ್ರದೇಶಗಳಲ್ಲಿ ಮುಂಗಾರಿನ ಆರಂಭದಲ್ಲಿಯೇ ಬಿತ್ತನೆ ಮಾಡಿದ ಅಲ್ಪಾವಧಿಯ ಬೆಳೆಗಳು ಮಳೆಯಿಲ್ಲದೆ ಭೂಮಿಯಿಂದ ಮೇಲೆ ಬರಲೇ ಇಲ್ಲ, ಬಂದ ಕೆಲವು ಬೆಳೆಗಳು ಬತ್ತಲಾರಂಭಿಸಿದವು. ಮೇ ಅಂತ್ಯ ಮತ್ತು ಜೂನ್ ಆರಂಭದಲ್ಲಿ ಮಧ್ಯಮ ಮಳೆಯ ನಂತರ ಬಿತ್ತನೆ ಪ್ರಾರಂಭಿಸಿದ ರೈತರು ಈಗ ಮಳೆಯಾಗುವುದು, ಇನ್ನೊಂದು ವಾರದಲ್ಲಿ ಮಳೆಯಾಗುವುದೆಂದು ಮೋಡವನ್ನು ದಿಟ್ಟಿಸುತ್ತಿದ್ದರು. ಸಮರ್ಪಕ ಮಳೆ ಬರಲೇ ಇಲ್ಲ. ಬರಗಾಲ ಮುಂದುವರೆದರೆ ನಷ್ಟ ಎದುರಿಸಬೇಕಾಗುತ್ತದೆ ಎಂಬ ಆತಂಕದಲ್ಲಿದ್ದರು ರೈತರು. 

ಹವಾಮಾನಶಾಸ್ತ್ರಜ್ಞ ಮತ್ತು ವಿಪತ್ತು ನಿರ್ವಹಣಾ ತಜ್ಞ, ಕೆಎಸ್‌ಎನ್‌ಡಿಎಂಸಿಯ ಮಾಜಿ ನಿರ್ದೇಶಕ ಜಿ ಎಸ್ ಶ್ರೀನಿವಾಸ ರೆಡ್ಡಯವರು, “ಹವಾಮಾನ ಮುನ್ಸೂಚನೆ ಸಾಮಾನ್ಯಕ್ಕಿಂತ ಕಡಿಮೆಯಾಗಿದ್ದು, ಜುಲೈ ಎರಡನೇ ವಾರದ ನಂತರ ಮಳೆ ಮುಂದುವರಿಯುವ ಸಾಧ್ಯತೆಯಿಲ್ಲ” ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

“ಕರಾವಳಿ, ಮಲೆನಾಡು ಮತ್ತು ಪಕ್ಕದ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ, ಆದರೆ ಅಲ್ಲಿಯೂ ಕೂಡ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ. ಜುಲೈ ಅತ್ಯಂತ ಪ್ರಮುಖ ತಿಂಗಳು. ಜುಲೈನಲ್ಲಿ ರಾಜ್ಯವು ಗರಿಷ್ಠ ಮಳೆಯನ್ನು ಪಡೆದಿದೆ ಮತ್ತು ಅದು ಸಾಮಾನ್ಯಕ್ಕಿಂತ ಕಡಿಮೆಯಾದರೆ, ನಾವು ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಆದರೂ ಅಧಿಕೃತವಾಗಿ ಬರ ಘೋಷಿಸುವ ಮೊದಲು ಪರಿಗಣಿಸಬೇಕಾದ ಹಲವು ನಿಯತಾಂಕಗಳಿವೆ” ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ 2026ರ ಮುಂಗಾರು ಹಂಗಾಮು ಸಾಮಾನ್ಯಕ್ಕಿಂತ ತಡವಾಗಿ ಆರಂಭವಾಗಿ ಜೂನ್‌ನಲ್ಲಿ ಮಳೆಯ ಕೊರತೆಯಿಂದ ಬಿತ್ತನೆ ಕಾರ್ಯ ತೀವ್ರವಾಗಿ ಕುಂಠಿತಗೊಂಡಿದೆ. ಜುಲೈ ಆರಂಭದಲ್ಲಿ ಮಳೆ ಸುರಿಯುತ್ತಿರುವುದರಿಂದ ರೈತರು ತಡವಾದ ಬಿತ್ತನೆಗೆ ಮುಂದಾಗುತ್ತಿದ್ದಾರೆ. ಆದರೆ ಈ ವಿಳಂಬವು ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಗಣನೀಯ ಪರಿಣಾಮ ಬೀರಿದೆ.

ಬೆಳಗಾವಿ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಸ್ವಲ್ಪ ಮಳೆಯಾಗಿದ್ದರೂ, ಇತರ ಜಿಲ್ಲೆ, ತಾಲೂಕುಗಳಲ್ಲಿ ಮಳೆ ಕೊರತೆ ಇದೆ. ಉದಾಹರಣೆಗೆ ಮಂಡ್ಯದಲ್ಲಿ ಬಹುತೇಕ ಮಳೆಯಾಗಿಲ್ಲ. ಹಾಗಾಗಿಯೇ ಸರ್ಕಾರ ರೈತರಿಗೆ ಜಾಗರೂಕರಾಗಿರಿ ಮತ್ತು ಮಳೆಯಾಗಿದ್ದರೆ ಮಾತ್ರ ಬಿತ್ತನೆ ಮಾಡಿ ಎಂದು ಹೇಳುತ್ತಿದೆ. ಒಟ್ಟಾರೆಯಾಗಿ, ಜುಲೈ ಕೂಡ ಜೂನ್‌ನಂತೆಯೇ ತೊಂದರೆಗೆ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿದ್ದೀರಾ?ರಾಯಚೂರು | ಮಳೆ ಕೊರತೆ: ಭೂಮಿಯಲ್ಲೇ ಉಳಿದ ಬಿತ್ತನೆಬೀಜ, ರೈತರಲ್ಲಿ ಹೆಚ್ಚಿದ ಭೀತಿ

ತಡವಾದ ಮುಂಗಾರು ಬೆಳೆಗಳ ಇಳುವರಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ವಿಶೇಷವಾಗಿ ಅವಧಿ-ಆಧಾರಿತ ಬೆಳೆಗಳಾದ ಭತ್ತ, ಮುಸುಕಿನ ಜೋಳ, ಕಡಲೆ ಮತ್ತು ಇತರೆ ಬೆಳೆಗಳಲ್ಲಿ ಇಳುವರಿ ಕುಸಿಯುವ ಸಾಧ್ಯತೆ ಹೆಚ್ಚಿದೆ. ತಡವಾದ ಬಿತ್ತನೆಯಿಂದ ರೋಗ-ಕೀಟಗಳ ದಾಳಿ, ಅಕಾಲಿಕ ಮಳೆಯಂತಹ ಸಮಸ್ಯೆಗಳು ಎದುರಾಗಬಹುದು.

ರೈತರು ತಡವಾದ ಬಿತ್ತನೆಗೆ ಸೂಕ್ತವಾದ ತಳಿಗಳನ್ನು(short-duration varieties) ಆಯ್ಕೆ ಮಾಡುವುದು, ಸಮಕ್ಕೆ ಸರಿಯಾಗಿ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಮಾಡುವುದು, ನೀರಾವರಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವುದು ಅತ್ಯಗತ್ಯ. ರಾಜ್ಯ ಸರ್ಕಾರ ಮತ್ತು ಕೃಷಿ ಇಲಾಖೆಯು ರೈತರಿಗೆ ಸಕಾಲದಲ್ಲಿ ಬಿತ್ತನೆಬೀಜ, ಗೊಬ್ಬರ ಸಹಾಯಧನ ಮತ್ತು ತಾಂತ್ರಿಕ ಮಾರ್ಗದರ್ಶನವನ್ನು ಒದಗಿಸಿದರೆ ಅಲ್ಪಪ್ರಮಾಣದ ನಷ್ಟವನ್ನಾದರೂ ಕಡಿಮೆ ಮಾಡಬಹುದು.

WhatsApp Image 2025 07 12 at 17.38.34 e1752322718567
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಬೆಳೆ ನಷ್ಟ: ಇಬ್ಬರ ರೈತರ ಸಾವು 

ಸಕಾಲಕ್ಕೆ ಮಳೆಯಾಗದೆ ಬೆಳೆ ನಷ್ಟ ಉಂಟಾಗಿದ್ದು, ಸಾಲ ತೀರಿಸಲಾಗದೆ ಮನನೊಂದ ಇಬ್ಬರು...

ಆಡಳಿತದಲ್ಲಿ ಪಾರದರ್ಶಕತೆಗೆ ಮಾಹಿತಿ ಹಕ್ಕು ಕಾಯ್ದೆ ಪ್ರಮುಖ ಅಸ್ತ್ರ: ಹಣಮಂತ ಶಿಂದೆ

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಬಳಕೆ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾಮಾಜಿಕ...

ಕಲಬುರಗಿಯಲ್ಲಿ ಅ.30ರಿಂದ ನ.1ರವರೆಗೆ ಎಸ್‌ಎಫ್‌ಐ ರಾಜ್ಯ ಸಮ್ಮೇಳನ

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕರ್ನಾಟಕ ರಾಜ್ಯ ಸಮಿತಿಯ ರಾಜ್ಯ ಸಮ್ಮೇಳನವು...

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...