ಒಳ್ಳೆಯ ಮಾರ್ಗದಲ್ಲಿ ನಡೆಯುವುದು, ಮಾನವೀಯತೆಗೆ ಬದ್ಧರಾಗುವುದು ಸುಲಭವಲ್ಲ. ಕ್ರೀಡಾ ಚಟುವಟಿಕೆಗಳು ಇಂಥ ಬದುಕಿಗೆ ನಮ್ಮನ್ನು ಸಜ್ಜುಗೊಳಿಸುತ್ತವೆ. ಕ್ರೀಡೆಯು ಆತ್ಮಾವಲೋಕನದ ಮೂಲಕ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು, ಸ್ಥಿತಪ್ರಜ್ಞತೆ ಸಾಧಿಸಲು ಸಹಾಯ ಮಾಡುತ್ತವೆ ಎಂದು ʼಒಂದು ಜಗತ್ತು-ಒಂದು ಕುಟುಂಬʼ ಮಾನವೀಯ ಸೇವಾ ಅಭಿಯಾನದ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.
ತಾಲ್ಲೂಕಿನ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಭಾನುವಾರ ನಡೆದ ‘ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ‘ವಿಶ್ವ ಮಾನವರಾಗಲು ಸತತ ಪ್ರಯತ್ನ ಅಗತ್ಯ. ಸತ್ಯ ಸಾಯಿ ಗ್ರಾಮವು ಇಡೀ ಜಗತ್ತಿಗೆ ಮಾನವೀಯತೆ ಕಲಿಸುವ ಕೇಂದ್ರವಾಗಿ ಬೆಳೆಯುತ್ತಿದೆ’ ಎಂದು ಹರ್ಷಿಸಿದರು.
1976 ರಲ್ಲಿ ಭಗವಾನ್ ಸತ್ಯ ಸಾಯಿ ಬಾಬಾ ಈ ಕ್ಷೇತ್ರಕ್ಕೆ ‘ಸತ್ಯ ಸಾಯಿ ಗ್ರಾಮ’ ಎಂದು ನಾಮಕರಣ ಮಾಡಿದ್ದರು. ಅಳಿಕೆ ಎನ್ನುವ ಹಳ್ಳಿಯಲ್ಲಿದ್ದು ಲೋಕಕಲ್ಯಾಣದ ಕನಸು ಕಂಡ ಮಡಿಯಾಳ ನಾರಾಯಣ ಭಟ್ ಅವರ ಹೆಜ್ಜೆಗಳಲ್ಲಿ ನಡೆಯಲು ಬದ್ಧತೆ ಬಹಳ ಮುಖ್ಯ. ಈ ಕ್ರೀಡಾ ಉತ್ಸವದ ಮೂಲಕ ನಾವು ಶಕ್ತಿಪ್ರದರ್ಶನ ಮಾಡುತ್ತಿಲ್ಲ; ನಮ್ಮ ಬದ್ಧತೆಯನ್ನು ತೋರುತ್ತಿದ್ದೇವೆ ಎಂದು ವಿಶ್ಲೇಷಿಸಿದರು.
ದೆಹಲಿಯಲ್ಲಿರುವ ಕರ್ನಾಟಕ ಸರ್ಕಾರದ ಪ್ರತಿನಿಧಿ ಟಿ.ಬಿ.ಜಯಚಂದ್ರ ಮಾತನಾಡಿ, ‘ಸತ್ಯ ಸಾಯಿ ಗ್ರಾಮವು ಬೆಳೆಯುತ್ತಿರುವ ರೀತಿ, ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಮಾಡುತ್ತಿರುವ ಕೆಲಸ ಪವಾಡದಂತೆ ಭಾಸವಾಗುತ್ತಿದೆ. ಈ ದೇಶದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಇದು ಮಾದರಿ. ಈ ಸಂಸ್ಥೆಯ ಶಿಸ್ತನ್ನು ನಮ್ಮ ಸರ್ಕಾರ, ಅಧಿಕಾರಿಗಳು ಗಮನಿಸಬೇಕು ಈ ದೇಶಕ್ಕೆ ಹೊಸ ದಿಕ್ಕು ಕೊಡುವ ಈ ಪ್ರಯತ್ನವನ್ನು ಇಡೀ ದೇಶ ಅನುಸರಿಸಬೇಕು’ ಎಂದು ಕರೆ ನೀಡಿದರು.
ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ತರಬೇತುದಾರ ಗುಂಡಪ್ಪ ವಿಶ್ವನಾಥ್ (ಜಿ.ಆರ್.ವಿಶ್ವನಾಥ್) ಮಾತನಾಡಿ, ‘ಜನರು ಕ್ರೀಡೆಯ ಬಗ್ಗೆ ಮಾತನಾಡುವಾಗ ದಾಖಲೆಗಳ ಬಗ್ಗೆ, ಅಂಕಿ-ಅಂಶಗಳ ಬಗ್ಗೆ, ಗೆದ್ದ ಪಂದ್ಯಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಕ್ರೀಡಾ ಸಾಧಕರು ಸಾರ್ಥಕ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾರೆ. ಒತ್ತಡದಲ್ಲಿ ಒಬ್ಬ ಮನುಷ್ಯ ಹೇಗೆ ವರ್ತಿಸುತ್ತಾನೆ ಎನ್ನುವುದು ಬಹಳ ಮುಖ್ಯ. ಸೋಲು ನಮಗೆ ಬದುಕು ಕಲಿಸುತ್ತದೆ, ಪುಟಿದೇಳುವ ಛಲ ರೂಢಿಸುತ್ತದೆ’ ಎಂದು ವಿಶ್ಲೇಷಿಸಿದರು.
ಕ್ರಿಕೆಟ್ ದಂತಕತೆಯಾದ ಮತ್ತು ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ನ ಟ್ರಸ್ಟಿ ಸುನಿಲ್ ಗವಾಸ್ಕರ್ ವಿಡಿಯೊ ಸಂದೇಶದ ಮೂಲಕ ಮಾತನಾಡಿದರು. ‘ಕ್ರೀಡೆಯು ಸೋಲನ್ನು ಹೇಗೆ ಜೀರ್ಣಿಸಿಕೊಳ್ಳಬೇಕು, ಇನ್ನೊಬ್ಬರಿಂದ ಏನು ಪಾಠ ಕಲಿಯಬೇಕು ಎನ್ನುವುದನ್ನು ತಿಳಿಸುತ್ತದೆ. ಜೀವನದಲ್ಲಿಯೂ ಪ್ರತಿಸಲ ನಾವು ಗೆಲ್ಲುವುದಿಲ್ಲ. ಗೆದ್ದಾಗ ನಾವು ವಿನಯದಿಂದ ವರ್ತಿಸಬೇಕು. ಕೆಲವು ಸಲ ನಮ್ಮ ಎದುರಾಳಿಗಳೂ ಚೆನ್ನಾಗಿ ಆಡುತ್ತಾರೆ ಎನ್ನುವುದನ್ನು ಒಪ್ಪಿಕೊಳ್ಳುವ ಮನೋಭಾವ ಕಲಿಸುತ್ತದೆ’ ಎಂದು ಕಿವಿಮಾತು ಹೇಳಿದರು.
ಜಿಲ್ಲಾಧಿಕಾರಿ ಪ್ರಭು ಜಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ, ಪ್ರಶಾಂತಿ ಬಾಲಮಂದಿರ ಟ್ರಸ್ಟ್‌ನ ಅಧ್ಯಕ್ಷರಾದ ಡಾ ಬಿ.ಎನ್.ನರಸಿಂಹಮೂರ್ತಿ ಇತರರು ಉಪಸ್ಥಿತರಿದ್ದರು.
ಆಷಾಢ ಸಮೀಪಿಸುತ್ತಿದೆ ಎಂದು ಅಬ್ಬರಿಸುತ್ತಿದ್ದ ತಂಗಾಳಿಯೇ ಸಾರಿ ಹೇಳುತ್ತಿತ್ತು. ಮಳೆಯ ಆಸೆ ಹುಟ್ಟಿಸುತ್ತಾ ತೇಲಿದ ಮೋಡಗಳ ಅಡಿಯಲ್ಲಿ ಬಾಲಕರು ತೊಯ್ದಾಡುತ್ತಿದ್ದರು. ಅವರು ಕೆಳಗಿಳಿದಾಗ ಹರ್ಷೋದ್ಗಾರ, ಸಂಭ್ರಮ, ಚಪ್ಪಾಳೆ. ಮನಸ್ಸಿನ ತುಂಬ ಧನ್ಯತೆಯ ಭಾವ. ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದ ಸುವರ್ಣ ಮಹೋತ್ಸವದ ಅಂಗವಾಗಿ ಭಾನುವಾರ ನಡೆದ ‘ಶ್ರೀ ಸತ್ಯ ಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆʼಯ ವಾರ್ಷಿಕ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವವು ಹಲವು ಅಪರೂಪದ ಸಾಹಸಮಯ ಕ್ಷಣಗಳಿಗೆ ಸಾಕ್ಷಿಯಾಯಿತು.
ಸಾಯಿ ಕೃಷ್ಣನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿಂತಿದ್ದ ಎರಡು ಕ್ರೇನ್‌ಗಳು ನೋಡನೋಡುತ್ತಿದ್ದಂತೆ ಒಂದಿಷ್ಟು ರಿಂಗ್‌ಗಳನ್ನು ಮೇಲೇರಿಸಿದವು. ಅದರಲ್ಲಿದ್ದ ಬಾಲಕರು ಹಲವು ಸಾಹಸ ಪ್ರದರ್ಶನಗಳನ್ನು ನೀಡಿ ಮೆಚ್ಚುಗೆಯ ಚಪ್ಪಾಳೆ ಪಡೆದರು. ಈ ಹುಡುಗರ ಜೆರ್ಸಿ ಮೇಲೆ “Touch The Sky With Sai” (ಸಾಯಿ ಜೊತೆಗೆ ಮುಗಿಲು ಮುಟ್ಟು) ಎನ್ನುವ ಘೋಷವಾಕ್ಯವಿತ್ತು.
ಇದನ್ನು ಓದಿದ್ದೀರಾ..?ಕೆಜಿಎಫ್ | ಬಿಜೆಪಿ ಮುಖಂಡರಿಂದ ದುಡಿಯುವ ರೈತನಿಗೆ ‘ಚಡ್ಡಿ ಚಂದ್ರಯ್ಯ’ ಎಂದು ಅವಮಾನ
ನಂತರ ಪ್ರದರ್ಶಿಸಿದ ಕರಾಟೆ, ಮೈನವಿರೇಳಿಸುವ ಸಿಂಹ ನೃತ್ಯ, ಬೈಕ್ ಸಾಹಸಗಳೂ ನೋಡುಗರ ಗಮನ ಸೆಳೆದವು. ಕರ್ನಾಟಕ, ತೆಲಂಗಾಣ ಮತ್ತು ತಮಿಳುನಾಡಿನ 24 ಕ್ಯಾಂಪಸ್‌ಗಳಿಂದ ಬಂದಿದ್ದ 2800 ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರಿಂದ ಸತ್ಯ ಸಾಯಿ ಗ್ರಾಮದಲ್ಲಿ ಅಕ್ಷರಶಃ ಜನಜಾತ್ರೆಯೇ ನಿರ್ಮಾಣವಾಗಿತ್ತು.
ಸಂಜೆ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ಕ್ಯಾಂಪಸ್‌ಗಳ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಂದ ಯಕ್ಷಗಾನ, ಬಾಂಗ್ರಾ ನೃತ್ಯ, ವಾರ್ಕರಿ, ಕಾವಾಡಿ, ಕಂಸಾಳೆ ನೃತ್ಯ, ದಂಡಿಯಾ ರಾಸ್, ಗರ್ಭಾ ನೃತ್ಯ ಹಾಗೂ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ತಮ್ಮ ಮಕ್ಕಳನ್ನು ಅಕ್ಕರೆಯಿಂದ ಮಾತನಾಡಿಸುತ್ತಿದ್ದ ಪೋಷಕರು, ಅವರ ಕೈಹಿಡಿದು ಓಡಾಡುತ್ತಿದ್ದ ಮಕ್ಕಳು ಎಲ್ಲೆಡೆ ಕಾಣಿಸುತ್ತಿದ್ದರು.




