ಕಾಂಗ್ರೆಸ್ ಸರ್ಕಾರಕ್ಕೆ 3 ವರ್ಷ: ಒಳಮೀಸಲಾತಿಯ ಮೂರು ವರ್ಷಗಳ ಹಿನ್ನೋಟ!

Date:

ಬಹುಶಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಮೂರು ವರ್ಷಗಳಲ್ಲಿ ಅತಿಹೆಚ್ಚು ಪೀಕಲಾಟಕ್ಕೆ ಒಳಗಾಗಿದ್ದು ಒಳಮೀಸಲಾತಿ ವಿಚಾರದಲ್ಲೇ ಇರಬಹುದು ಅನಿಸುತ್ತದೆ.

- Advertisement -

2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗೆದ್ದದ್ದು ಕೇವಲ ಆಡಳಿತ ವಿರೋಧಿ ಅಲೆಯಿಂದಾಗಿ ಮಾತ್ರವಲ್ಲ. ಸಮುದಾಯಗಳ ಬೇಡಿಕೆಗಳನ್ನು ಕೇಂದ್ರೀಕರಿಸಿದ್ದ ಕಾಂಗ್ರೆಸ್, ಅವುಗಳನ್ನು ಈಡೇರಿಸುವ ವಾಗ್ದಾನ ನೀಡಿತ್ತು. ಜಾತಿವಾದಿ ಅರ್ಥಾತ್ ಕೋಮುವಾದಿ ಶಕ್ತಿಗಳ ಅಧಿಕಾರದಿಂದಾಗಿ ಬೇಸತ್ತಿದ್ದ ದಲಿತರಿಗೆ ಕಾಂಗ್ರೆಸ್ ನೀಡಿದ್ದ ಭರವಸೆಗಳು ನಂಬಿಕೆ ಹುಟ್ಟಿಸಿದ್ದವು. ಅದರಲ್ಲೂ ದಶಕಗಳಿಂದ ಚರ್ಚೆಯ ಕೇಂದ್ರವಾಗಿದ್ದ ಒಳಮೀಸಲಾತಿ ವಿಚಾರದಲ್ಲಿ ಸ್ಪಷ್ಟ ನಿಲುವನ್ನು ಕಾಂಗ್ರೆಸ್ ಪಕ್ಷ ತಾಳಿತ್ತು. ಹೀಗಾಗಿ ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣ ಸಮರ್ಪಕವಾಗಿ ಜಾರಿಯಾಗಲೇಬೇಕು ಎಂದು ಆಗ್ರಹಿಸುತ್ತಿದ್ದ ಸಮುದಾಯಗಳು ಕಾಂಗ್ರೆಸ್‌ನಿಂದ ದೂರಸರಿಯಲಿಲ್ಲ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್, ಅಧಿಕಾರಕ್ಕೇರಿ ಈಗ ಮೂರು ವರ್ಷ ತುಂಬಿದೆ. ಈ ಮೂರು ವರ್ಷಗಳಲ್ಲಿ ಒಳಮೀಸಲಾತಿ ವಿಚಾರವು ಕಂಡ ಏಳುಬೀಳುಗಳನ್ನು ಪುನರಾವಲೋಕನ ಮಾಡಿ, ಇನ್ನೂ ಆಗಬೇಕಿರುವ ಕೆಲಸಗಳತ್ತ ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸುವ ಜರೂರಿದೆ.

ಆ ದಿನಗಳು ಹೀಗಿದ್ದವು..

ಅವಿಭಜಿತ ಆಂಧ್ರಪ್ರದೇಶದಲ್ಲಿ ತಾರಕ್ಕೇರಿದ ಒಳಮೀಸಲಾತಿ ಹೋರಾಟವು ಕರ್ನಾಟಕ್ಕೆ ಕಾಲಿಟ್ಟು ಮೂರು ದಶಕಗಳೇ ಆಗಿತ್ತು. ಆದರೆ ಆಂಧ್ರದಲ್ಲಿ ಮಾಲ\ಹೊಲೆಯ (ಬಲಗೈ), ಮಾದಿಗ (ಎಡಗೈ) ತಿಕ್ಕಾಟ ದೊಡ್ಡ ಮಟ್ಟದಲ್ಲಿತ್ತು. ಆ ಸಂಘರ್ಷ ಕರ್ನಾಟಕದಲ್ಲಿ ಉಲ್ಭಣಿಸದಂತೆ ಇರುವುದಕ್ಕೆ ಇಲ್ಲಿನ ಜಾಗೃತ ದಲಿತ ಪ್ರಜ್ಞೆಯೇ ಕಾರಣವಾಗಿತ್ತು. ಒಳಮೀಸಲಾತಿಯು ಸಾಂವಿಧಾನಿಕ ಹಕ್ಕು ಮತ್ತು ಹಂಚಿಕೆ ಇಲ್ಲದೆ ಒಂದಾಗಲು ಸಾಧ್ಯವಿಲ್ಲ ಎಂಬ ಅರಿವು ಸಮಸ್ತ ಅಸ್ಪೃಶ್ಯ ಸಮುದಾಯದಲ್ಲಿ ಮೂಡಲು ಸಮಯ ತೆಗೆದುಕೊಂಡಿತು. ಬಿಜೆಪಿಯ ದುರಾಡಳಿತವನ್ನು ಕಂಡಿದ್ದ ದಲಿತರು ಒಂದೆಡೆ ಒಂದಾಗುತ್ತಲೂ ಮತ್ತೊಂದೆಡೆ ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಜಾರಿಯಾಗಲೇಬೇಕು ಎಂಬ ನಿಲುವಿಗೂ ಬಂದರು.

ಒಳಮೀಸಲಾತಿ 14

2022ರಲ್ಲಿ ನಡೆದ ಒಳಮೀಸಲಾತಿ ಹೋರಾಟ ಕರ್ನಾಟಕದ ದಲಿತ ಚಳವಳಿಯಲ್ಲಿ ಒಂದು ಮೈಲುಗಲ್ಲಾಗಿ ಉಳಿಯುತ್ತದೆ. ಬಿಜೆಪಿಯ ಅಸಲಿ ಬಣ್ಣವನ್ನು ತೊಳೆದು ನಿಲ್ಲಿಸಿದ ಇಸವಿ 2022. ಒಂದು ಕಡೆ ಒಳಮೀಸಲಾತಿ ಜಾರಿ ಮಾಡುತ್ತೇವೆ ಎನ್ನುತ್ತಿದ್ದ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಒಳಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತರುವ ಅನಿವಾರ್ಯತೆ ಅಂದು ಇತ್ತು. ಆದರೆ ಕೋರ್ಟ್ನಲ್ಲಿ ಕೇಸ್ ಇದೆ ಎಂಬ ನೆಪದಲ್ಲಿ ನಾಟಕವಾಡುತ್ತಲೇ ಇತ್ತು. ತಮಗೆ ಬೇಕಾದ ಜನವಿರೋಧಿ ಕಾನೂನುಗಳನ್ನು ಯಾವುದೇ ನ್ಯಾಯಾಂಗವನ್ನೂ ನೋಡದೆ ಸುಗ್ರೀವಾಜ್ಞೆ ಮೂಲಕ ತರುವಷ್ಟು ದಾಷ್ಟ್ಯ ತೋರುತ್ತಿದ್ದ ಬಿಜೆಪಿ, ಸಬ್ ಜ್ಯುಡೀಸ್ (ನ್ಯಾಯಾಂಗದಲ್ಲಿ ಪ್ರಕರಣವಿದೆ) ಎಂಬ ನೆಪ ಹೇಳುತ್ತಿದ್ದನ್ನು ದಲಿತ ಸಮುದಾಯ ಗಮನಿಸುತ್ತಿತ್ತು. ಒಂದು ಸಮಯದಲ್ಲಿ “ಒಳಮೀಸಲಾತಿ ಜಾರಿ ಪ್ರಸ್ತಾಪ ನಮ್ಮ ಮುಂದೆ ಇಲ್ಲ” ಎಂದು ಅಂದಿನ ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯದ ರಾಜ್ಯ ಖಾತೆ ಸಚಿವ ಎ.ನಾರಾಯಣಸ್ವಾಮಿ ಸದನದಲ್ಲೇ ಹೇಳಿದ್ದುಂಟು.

ಇಂತಹ ಬೂಟಾಟಿಕೆಯ ಬಿಜೆಪಿಯ ಜೊತೆ ಸೆಣಸಾಡುವುದು ಅನಿವಾರ್ಯವಾಗಿತ್ತು. ಆದರೆ ಬಿಜೆಪಿ ಸರ್ಕಾರ ಪರಿಶಿಷ್ಟರ ಮೀಸಲಾತಿಯನ್ನು ಹೆಚ್ಚಿಸುವ ಶಿಫಾರಸ್ಸಿಗಾಗಿ ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ಸಮಿತಿ ರೂಪಿಸಿ, ಅದು ಕೊಟ್ಟ ವರದಿಯನ್ನು ಪರಿಗಣಿಸಿ ಶೇ.15ರಷ್ಟಿದ್ದ ಎಸ್ಸಿ ಮೀಸಲಾತಿಯನ್ನು ಶೇ.17ಕ್ಕೆ ಏರಿಸುವ ನಿರ್ಧಾರ ಕೈಗೊಂಡಿತು. ಆದರೆ ಇದು ಕೇಂದ್ರದಿಂದ ಊರ್ಜಿತವಾಗಿರಲಿಲ್ಲ, ಅರ್ಥಾತ್ ಸಂವಿಧಾನದ 9ನೇ ಶೆಡ್ಯೂಲ್ಗೆ ಸೇರಿಸಿ ನ್ಯಾಯಾಂಗ ಪ್ರಕ್ರಿಯೆಯಿಂದ ಒಳಮೀಸಲಾತಿಯನ್ನು ಹೊರಗಿಡುವ ಕೆಲಸವನ್ನು ಬಿಜೆಪಿ ಮಾಡಲಿಲ್ಲ. ಈ ಎಚ್ಚರ ಪರಿಶಿಷ್ಟರಲ್ಲಿತ್ತು.

2022ರ ಸನ್ನಿವೇಶದ ಚಿತ್ರಣಕ್ಕೆ ಮತ್ತೆ ಹೊರಳುವುದಾದರೆ, ಒಳಮೀಸಲಾತಿ ಬಿತ್ತಿದ್ದ ಜಾಗೃತ ಪ್ರಜ್ಞೆಯ ಮತ್ತೊಂದು ಫಸಲು ಈ ಸಂದರ್ಭದಲ್ಲಿ ಮೊಳೆಯಲಾರಂಭಿಸಿತು. ಅಸ್ಪೃಶ್ಯರು ಕಿತ್ತಾಡುತ್ತಿದ್ದೇವೆ, ಆದರೆ ನಮ್ಮ ಕಿತ್ತಾಟದ ನಡುವೆ ಸ್ಪೃಶ್ಯ ಸಮುದಾಯಗಳು ತಮ್ಮ ಪಾಲನ್ನು ಪಡೆಯುತ್ತಿವೆ. ನಾವೀಗ ಒಂದಾಗದಿದ್ದರೆ ಮೀಸಲಾತಿಯು ಮರೀಚಿಕೆಯಾಗುತ್ತದೆ. ಯಾವುದೇ ಸರ್ಕಾರದ ಮೇಲೂ ಹಿಡಿತ ಸಾಧಿಸುತ್ತಾ ಬಂದಿರುವ ಸ್ಪಶ್ಯರು, ನಮ್ಮ ಅನ್ನದ ಬಟ್ಟಲಿಗೆ ಕೈಹಾಕಿರುವುದನ್ನು ನಾವು ಸುಮ್ಮನೆ ನೋಡುತ್ತಾ ಕೂರುವುದು ಬೇಡ ಎಂಬ ಅರಿವನ್ನು ಹೋರಾಟ ಬಿತ್ತಲಾರಂಭಿಸಿತು. 2022ರ ಡಿಸೆಂಬರ್ 6ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ‘ದಲಿತರ ಸಾಂಸ್ಕೃತಿಕ ಪ್ರತಿರೋಧ ಬೃಹತ್ ಸಮಾವೇಶ’ವು ಎರಡು ಮುಖ್ಯ ಸಂದೇಶವನ್ನು ರವಾನಿಸಿತು. ಛಿದ್ರಛಿದ್ರವಾಗಿದ್ದ ದಲಿತ ಸಂಘರ್ಷ ಸಮಿತಿಯ ಹತ್ತಾರು ಧಾರೆಗಳು ಒಂದು ವೇದಿಕೆಗೆ ಬಂದವು. ಹೊಲೆಯ ಮಾದಿಗರು ಸೇರಿ ಕಟ್ಟಿದ ದಸಂಸ ದಶಕಗಳ ನಂತರ ಐಕ್ಯ ವೇದಿಕೆಯಾಗಿ ಕಾಣಿಸಿಕೊಂಡಿತು.

image 130 3

ಈ ಪ್ರತಿರೋಧ ವೇದಿಕೆಯು ಕೊಟ್ಟ ಮತ್ತೊಂದು ಸಂದೇಶ- ‘ಒಳಮೀಸಲಾತಿಯನ್ನು ಸರ್ಕಾರ ಜಾರಿಗೆ ತರಬೇಕು’ ಎಂಬುದಾಗಿತ್ತು. ಅದರ ಮುಂದುವರಿದ ಭಾಗವಾಗಿ ನಡೆಯುತ್ತಿದ್ದ ಮಾದಿಗರ ಕಾಲ್ನಡಿಗೆ ಜಾಥಾ ಬೆಂಗಳೂರು ತಲುಪಿದಾಗ ಬಲಗೈ ಸಮುದಾಯದ ಸಹೋದರರು ಬಂದು ನಿಂತರು. ದನಿ ಇಲ್ಲದ ಅಲೆಮಾರಿ ಮತ್ತು ಅತಿ ಸೂಕ್ಷ್ಮ ಅಸ್ಪೃಶ್ಯರು ಈ ಮಹಾ ಹೋರಾಟದ ಭಾಗವಾದರು. ‘ಜೈ ಮಾದಿಗ’ ಎಂಬ ಘೋಷಣೆ ಕೂಗಬಾರದು, ಒಳಮೀಸಲಾತಿ ಹೋರಾಟವು ಎಲ್ಲ ಅಸ್ಪೃಶ್ಯ, ಅಲೆಮಾರಿಗಳ ಚಳವಳಿಯಾಗಿ ರೂಪುಗೊಂಡಿದೆ; ಸಮುದಾಯಗಳಲ್ಲಿ ಸಾಮರಸ್ಯ ಮತ್ತೆ ಚಿಗುರೊಡೆಯುತ್ತಿದೆ ಎಂಬ ಸಂದೇಶ ರವಾನಿಸಿದ ಚಳವಳಿಗಾರರು ತಮ್ಮ ಹೋರಾಟದ ಬ್ಯಾನರ್ ಹೆಸರನ್ನೇ ಬದಲಿಸಿದರು. ‘ಮಾದಿಗ ಮೀಸಲಾತಿ ಹೋರಾಟ ಸಮಿತಿ’, ‘ಮಾದಿಗ ದಂಡೋರ’ ಹೆಸರಲ್ಲಿ ಮುಂದುವರಿದಿದ್ದ ಚಳವಳಿಯ ವೇದಿಕೆ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ’ ಹೆಸರಲ್ಲಿ ಮರುಹುಟ್ಟು ಪಡೆಯಿತು.

2022ರ ಡಿಸೆಂಬರ್ ಆರಂಭದಲ್ಲಿಯೇ ದಸಂಸದ ಮೊದಲ ಸಂಚಾಲಕ ಬಿ.ಕೃಷ್ಣಪ್ಪನವರ ಕರ್ಮಭೂಮಿ ಹರಿಹರದಿಂದ ಮಾದಿಗ ಸಮುದಾಯ ಕಾಲ್ನಡಿಗೆ ಜಾಥಾವನ್ನು ಶುರು ಮಾಡಿತ್ತು.  ಪ್ರತಿ ಊರಿನಲ್ಲಿ ಈ ಜಾಥಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಯಿತು. ನೂರಾರು ಯುವಜನರು ಜಾಥಾದೊಂದಿಗೆ ಹೆಜ್ಜೆ ಹಾಕಿದರು. ಡಿಸೆಂಬರ್ 11ಕ್ಕೆ ಬೆಂಗಳೂರು ತಲುಪಿದ ಕಾಲ್ನಡಿಗೆಗೆ ಹಲವು ಸಾವಿರಾರು ಜನ ಹರಿದು ಬಂದರು. ಫ್ರೀಡಂ ಪಾರ್ಕ್ ಸುತ್ತಲಿನ ಎಲ್ಲಾ ರಸ್ತೆಗಳಲ್ಲಿ ನೀಲಿ ಬಾವುಟಗಳು ಆರ್ಭಟಿಸಿದವು. ಎಡ-ಬಲ ಎನ್ನದೇ ಎಲ್ಲಾ ದಲಿತರು ಒಟ್ಟಾಗಿ ದೊಡ್ಡ ಪ್ರತಿರೋಧ ತೋರಿದರು. ಹೋರಾಟಗಾರರನ್ನು ಸಮಾಧಾನ ಮಾಡಲು ಸರ್ಕಾರದ ಪ್ರತಿನಿಧಿಯಾಗಿ ಬಂದ ವಿ.ಸೋಮಣ್ಣನಿಗೆ ಘೇರಾವ್ ಹಾಕಿ ಓಡಿಸಲಾಯಿತು. ಸಿಎಂ ಬರಬೇಕೆಂದು ಒತ್ತಾಯಿಸಲಾಯಿತು. ಸಿಟ್ಟಾದ ಸರ್ಕಾರ, ಸಾರ್ವಜನಿಕರಿಗೆ ಅಡಚಣೆ ಉಂಟು ಮಾಡಿ ಪ್ರತಿಭಟನೆ ನಡೆಸಿದ್ದಾರೆಂದು ನೆಪವೊಡ್ಡಿ ಪ್ರತಿ ಹೋರಾಟಗಾರರ ಮೇಲೆ ಕೇಸ್ ಜಡಿಯಿತು.

ಆದರೆ, ಸಮುದಾಯ ಪಟ್ಟುಬಿಡಲಿಲ್ಲ. ತದನಂತರ ಅದೇ ಫ್ರೀಡಂ ಪಾರ್ಕ್ನಲ್ಲಿ ಬರೋಬ್ಬರಿ 111 ದಿನಗಳ ಕಾಲ ನಿರಂತರವಾಗಿ ಸತ್ಯಾಗ್ರಹ ನಡೆಸಿತು. ಹೊಲೆಯ, ಮಾದಿಗ ಸಮುದಾಯಗಳ ಒಗ್ಗಟ್ಟು ಈ ವೇದಿಕೆಯಲ್ಲಿ ಪ್ರದರ್ಶನವಾಯಿತು. ಆನಂತರ ಮಾಧುಸ್ವಾಮಿ ನೇತೃತ್ವದ ಕ್ಯಾಬಿನೆಟ್ ಸಬ್ ಕಮಿಟಿಯನ್ನು ಬಿಜೆಪಿ ಸರ್ಕಾರ ರಚನೆ ಮಾಡಿತು. ಚುನಾವಣೆ ಹೊಸ್ತಿಲಿನ ಸ್ಟಂಟ್ ಆಗಿದ್ದ ಸಮಿತಿಯು, ಅದು ಸದಾಶಿವ ಆಯೋಗದ ವರದಿಯನ್ನು ಮೂಲೆಗೆ ತಳ್ಳಿ, ತನ್ನದೇ ಹೊಸ ರೀತಿಯ ವರ್ಗೀಕರಣವನ್ನು ತರಾತುರಿಯಲ್ಲಿ ಕೇಂದ್ರಕ್ಕೆ ಕಳುಹಿಸಿತು. ಆಂಧ್ರ, ಪಂಜಾಬ್ ರಾಜ್ಯಗಳ ಅರ್ಜಿಗಳು ಸೇರಿದಂತೆ ವಿವಿಧ 23 ಮನವಿಗಳು ಸುಪ್ರೀಂಕೋರ್ಟ್ ಮುಂದೆ ಇವೆ ಎಂಬ ನೆಪದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರದೆ ಕೇಂದ್ರದಲ್ಲಿ ಹತ್ತು ವರ್ಷಗಳಿಂದ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ದಲಿತ ಸಮುದಾಯವನ್ನು ವಂಚಿಸಿದ್ದು ಮುಂದುವರಿಯಿತು. ಶೇ.3ರಷ್ಟಿರುವರ ಬ್ರಾಹ್ಮಣ, ಬನಿಯಾಗಳಿಗೆ ಶೇ.10ರಷ್ಟು ಮೀಸಲಾತಿಯನ್ನು ‘ಇಡಬ್ಲ್ಯುಎಸ್’ ಅಡಿಯಲ್ಲಿ ಕೇವಲ ಒಂದೇ ವಾರದಲ್ಲಿ ಜಾರಿಗೆ ತಂದಿದ್ದ ಬಿಜೆಪಿಗೆ ಮೂವತ್ತು ವರ್ಷಗಳ ಸುದೀರ್ಘ ಹೋರಾಟದ ನೋವು ಅರಿವಾಗಲೇ ಇಲ್ಲ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ್ದ ಕಾಂಗ್ರೆಸ್‌, ಒಳಮೀಸಲಾತಿ ವಿಚಾರದಲ್ಲಿ ಖಚಿತ ನಿರ್ಧಾರಕ್ಕೆ ಬರುವ ಜೊತೆಗೆ, ನಾವಿನ್ನು ಒಳಮೀಸಲಾತಿ ವಿರುದ್ಧವಿಲ್ಲ ಎಂಬ ನಿಲುವು ತೆಗೆದುಕೊಳ್ಳಲೇಬೇಕಾದ ಒತ್ತಡ ಸೃಷ್ಟಿಯಾಯಿತು. 

2023ರ ಜನವರಿ 8ರಂದು ಚಿತ್ರದುರ್ಗದಲ್ಲಿ ಕಾಂಗ್ರೆಸ್ ನಡೆಸಿದ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಐಕ್ಯತಾ ಸಮಾವೇಶ’ವು ಚುನಾವಣಾ ಫಲಿತಾಂಶದ ಮೇಲೆ ಬಹುದೊಡ್ಡ ಪರಿಣಾಮ ಬೀರಿತ್ತು. ಕಾರಣ ಕಾಂಗ್ರೆಸ್‌ ನಾಯಕರು ದಲಿತರಿಗೆ ಕೊಟ್ಟ ಭರವಸೆಗಳಲ್ಲಿ ಎರಡು ಮುಖ್ಯ ಸಂಗತಿಗಳಿದ್ದವು: 1. ಎಸ್ಸಿ (SC) ಮೀಸಲಾತಿಯನ್ನು ಶೇ. 15 ರಿಂದ 17ಕ್ಕೆ ಮತ್ತು ಎಸ್ಟಿ (ST) ಮೀಸಲಾತಿಯನ್ನು ಶೇ.3 ರಿಂದ 7ಕ್ಕೆ ಹೆಚ್ಚಿಸಿರುವ ಕಾನೂನನ್ನು ಸಂವಿಧಾನದ 9ನೇ ಶೆಡ್ಯೂಲ್‌ಗೆ (Schedule 9) ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವುದು ಹಾಗೂ ರಾಜ್ಯ ಮಟ್ಟದಲ್ಲಿ ಇದಕ್ಕೆ ಸಂಪೂರ್ಣ ಸಾಂವಿಧಾನಿಕ ಬದ್ಧತೆ ನೀಡುವುದು. 2. ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯ ಆಧಾರದ ಮೇಲೆ, ಎಸ್ಸಿ ವರ್ಗದ ಎಲ್ಲ ಉಪ ಜಾತಿಗಳ ಹಿತಾಸಕ್ತಿಗಳನ್ನು ಕಾಯ್ದಿರಿಸಿ, ಸಾಮಾಜಿಕ ನ್ಯಾಯದಡಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಉಭಯ ಸದನಗಳ ಒಪ್ಪಿಗೆ ಪಡೆದು ಕೇಂದ್ರಕ್ಕೆ ಶಿಫಾರಸು ಮಾಡುವುದು.

image 130 4

“ಒಳಮೀಸಲಾತಿ ಜಾರಿಗೆ ಬದ್ಧ” ಎಂಬ ನಿಲುವೇ ಕಾಂಗ್ರೆಸ್ಗೆ ವರದಾನವಾಯಿತು. ಚುನಾವಣೆಯಲ್ಲೂ ಗೆದ್ದಿತು. ಕೋರ್ಟ್ ನೆಪವನ್ನಿಟ್ಟು ನಾಟಕವಾಡಿದ ಬಿಜೆಪಿ ಸೋತು ಮನೆಗೆ ಸೇರಿತು. ಅಧಿಕಾರಕ್ಕೆ ಏರಿದ ಕಾಂಗ್ರೆಸ್, ಸುಮಾರು ಒಂದು ವರ್ಷ ಕಾಲ ಒಳಮೀಸಲಾತಿ ವಿಚಾರದಲ್ಲಿ ನಿರ್ಲಕ್ಷ್ಯ ತಾಳಿದ್ದು ಮತ್ತೆ ಸಮುದಾಯದಲ್ಲಿ ಆಕ್ರೋಶ ಭುಗಿಲೇಳಲು ಕಾರಣವಾಯಿತು.  ಅಂತಿಮವಾಗಿ ನ್ಯಾಯಾಂಗದಿಂದಲೇ ನ್ಯಾಯ ದೊರಕಿತು. ಸುಪ್ರೀಂಕೋರ್ಟ್ 2024ರ ಆಗಸ್ಟ್ 1ರಂದು ತೀರ್ಪು ನೀಡಿ, ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂಬ ಮಹತ್ವದ ಸಂದೇಶ ಸಾರಿತು. ಆ ನಂತರ ರಾಜ್ಯ ಸರ್ಕಾರ ತಡವಾಗಿಯಾದರೂ ಜಸ್ಟಿಸ್ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚನೆ ಮಾಡಿತು. ಆನಂತರ ನಡೆದ ಬೆಳವಣಿಗೆಗಳು ಆಶಾದಾಯಕವಾಗಿಯೇನೂ ಇರಲಿಲ್ಲ. ಒಳಮೀಸಲಾತಿ ವಿಚಾರ ಕಳೆದ ಮೂರು ವರ್ಷಗಳಿಂದಲೂ ಎಳೆದಾಡಿಕೊಂಡು ಬಂದಿರುವ ರೀತಿಯು ಕರ್ನಾಟಕ ರಾಜಕಾರಣದ ಮತ್ತೊಂದು ಮಗ್ಗುಲನ್ನು ತೆರೆದಿಡುತ್ತದೆ.

ಜಸ್ಟಿಸ್ ಎಚ್.ಎನ್.ನಾಗಮೋಹನ ದಾಸ್ ವರದಿ

ಸುಪ್ರೀಂಕೋರ್ಟ್ ನೀಡಿದ ಅಂತಿಮ ತೀರ್ಪಿನ ಅನ್ವಯ ರಾಜ್ಯ ಸರ್ಕಾರಗಳೀಗ ಮೀಸಲಾತಿ ವರ್ಗೀಕರಣ ಮಾಡುವ ಹಕ್ಕು ಪಡೆದಿವೆ. ಅದರ ಭಾಗವಾಗಿ ತೆಲಂಗಾಣ, ಆಂಧ್ರ ಪ್ರದೇಶದಲ್ಲಿ ಒಳಮೀಸಲಾತಿ ಜಾರಿಯಾಯಿತು. ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿ ವಿಳಂಬವಾಗುತ್ತಲೇ ಇತ್ತು. ಅದಕ್ಕೆ ಇಲ್ಲಿದ್ದ ಸಂಕೀರ್ಣ ಜಾತಿ ದೃಢೀಕರಣ ಪತ್ರಗಳೂ ಕಾರಣವಾಗಿದ್ದವು. ಇನ್ನೊಂದೆಡೆ ಪ್ರಬಲ ಸ್ಪೃಶ್ಯ ಸಮುದಾಯಗಳ ಎದುರಿಸುವ ಛಾತಿಯೂ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲವಾಗಿದ್ದು ಗೋಚರಿಸುತ್ತಿತ್ತು.

ಕರ್ನಾಟಕದಲ್ಲಿ ಹೊಲೆಯ, ಮಾದಿಗರಿಬ್ಬರೂ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಹೆಸರಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆದಿರುವುದರಿಂದ ಯಾರು ಯಾವ ಜಾತಿ ಎಂಬುದು ತಿಳಿಯುವುದು ಅನಿವಾರ್ಯವಾಗಿತ್ತು. ಮೀಸಲಾತಿ ವರ್ಗೀಕರಿಸಬೇಕಾದರೆ ಜನಸಂಖ್ಯೆಯನ್ನು ತಿಳಿಯುವುದು ಅಗತ್ಯವಿತ್ತು. ಅದಕ್ಕಾಗಿ ಸರ್ಕಾರವು ಜಸ್ಟಿಸ್ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವನ್ನು ರಚಿಸಿತು. ಜಸ್ಟಿಸ್ ದಾಸ್ ಆಯೋಗವು ಸುಮಾರು ಒಂದೂವರೆ ತಿಂಗಳ ಕಾಲ ನಡೆಸಿದ ಸುದೀರ್ಘ ಸಮೀಕ್ಷೆ ನಂತರ ಸರ್ಕಾರಕ್ಕೆ ತನ್ನ ವರದಿಯನ್ನು ನೀಡಿತು.

ಬಿಜೆಪಿ ಅವಧಿಯಲ್ಲಿ ಶೇ.2ರಷ್ಟು ಮೀಸಲಾತಿಯನ್ನು ಹೆಚ್ಚಿಸಲಾಗಿತ್ತು. ಅದನ್ನು ಪರಿಗಣನೆಗೆ ತೆಗೆದುಕೊಂಡು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪರಿಶಿಷ್ಟರನ್ನು ಐದು ವಿಭಾಗಗಳನ್ನಾಗಿ ಮಾಡಿದ ಜಸ್ಟಿಸ್ ದಾಸ್ ಅವರು ಮೀಸಲಾತಿ ಹಂಚಿಕೆ ಮಾಡಿದರು. ಅತೀ ಹಿಂದುಳಿದ ಅಲೆಮಾರಿ ಮತ್ತು ಅತಿ ಸೂಕ್ಷ್ಮ ಅಸ್ಪೃಶ್ಯರನ್ನು ‘ಪ್ರವರ್ಗ ಎ’ಗೆ ಸೇರಿಸಿ ಶೇ. 1, ಮಾದಿಗ ಮತ್ತು ಸಂಬಂಧಿತ ಸಮುದಾಯಗಳನ್ನು ‘ಪ್ರವರ್ಗ ಬಿ’ಗೆ ಸೇರಿಸಿ ಶೇ. 6, ಹೊಲೆಯ ಮತ್ತು ಸಂಬಂಧಿತ ಸಮುದಾಯಗಳನ್ನು ಪ್ರವರ್ಗ ‘ಸಿ’ಗೆ ಸೇರಿಸಿ ಶೇ. 5, ಸ್ಪೃಶ್ಯರಾದ ಲಂಬಾಣಿ, ಭೋವಿ, ಕೊರಚ ಮತ್ತು ಕೊರಮರನ್ನು ‘ಪ್ರವರ್ಗ ಡಿ’ಗೆ ಸೇರಿಸಿ ಶೇ. 4 ಹಾಗೂ ಸಮೀಕ್ಷೆಯಲ್ಲೂ ಜಾತಿಯನ್ನು ನಮೂದಿಸದೆ ಎಕೆ, ಎಡಿ, ಎಎ ಎಂದು ಬರೆಸಿದವರಿಗೆ ಪ್ರವರ್ಗ ‘ಇ’ ಎಂದು ಘೋಷಿಸಿ ಶೇ.1ರಷ್ಟು ಮೀಸಲಾತಿಯನ್ನು ಜಸ್ಟಿಸ್ ದಾಸ್ ಶಿಫಾರಸ್ಸು ಮಾಡಿದರು. ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಪರಿಗಣಿಸಬೇಕೆಂದು ಸುಪ್ರೀಂಕೋರ್ಟ್ ಹೊರಡಿಸಿರುವ ಮಾನದಂಡದ ಅನ್ವಯ ವರ್ಗೀಕರಣ ಮಾಡಿದ್ದರು ಜಸ್ಟಿಸ್ ದಾಸ್. ಆದರೆ ಆಯೋಗದ ವಿರುದ್ಧ ಮತ್ತೊಂದು ಸುತ್ತಿನ ಅಸಹನೆ ವ್ಯಕ್ತವಾಗತೊಡಗಿತು. ಬಲಗೈ ಸಮುದಾಯವು, “ಇಲ್ಲಿ ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಲಾಗಿದೆ, ನಮಗೆ ಕಡಿಮೆ ಪಾಲು ಕೊಡಲಾಗಿದೆ, ಹೊಲೆಯ ಸಂಬಂಧಿತ ಪರಯಾ ಮತ್ತು ಮೊಗೇರರನ್ನು ಮಾದಿಗರ ಗುಂಪಿಗೆ ಹಾಕಲಾಗಿದೆ” ಎಂದು ಆಕ್ಷೇಪಿಸಿದರೆ, ಸ್ಪೃಶ್ಯ ಸಮುದಾಯಗಳು ತಮ್ಮ ಪಾಲನ್ನು ಹೆಚ್ಚಿಸಿಕೊಳ್ಳುವ ಕಸರತ್ತನ್ನು ತೆರೆಮರೆಯಲ್ಲೇ ಮಾಡಲಾರಂಭಿಸಿದವು.

ನಾಗಮೋಹನ್ ದಾಸ್ 1

 ಮೂವತ್ತು ವರ್ಷ ಚಳವಳಿಯನ್ನು ಕಟ್ಟಿದ ಹಿರಿಯ ಮಾದಿಗ ಹೋರಾಟಗಾರರು ಅಂತಿಮ ಸುತ್ತಿನ ಹೋರಾಟಕ್ಕೆ ಸಜ್ಜಾದರು. ಈಗಾಗಲೇ ಎದ್ದಿದ್ದ ಭಿನ್ನಾಭಿಪ್ರಾಯಗಳನ್ನು ಮರೆತು ಫ್ರೀಡಂಪಾರ್ಕ್ನಲ್ಲಿ 2025ರ ಆಗಸ್ಟ್ 11ರಿಂದ ಹೋರಾಟಕ್ಕೆ ಕುಳಿತ ಹಿರಿಯ ಜೀವಗಳ ಒತ್ತಾಯಕ್ಕೆ ಸರ್ಕಾರ ಆರಂಭದಲ್ಲಿ ಮಣಿಯಲಿಲ್ಲ. ಸರ್ಕಾರ ವರದಿ ಸ್ವೀಕರಿಸಿದ್ದರೂ ಕ್ಯಾಬಿನೆಟ್ ಸಭೆಗಳಲ್ಲಿ ವಿಷಯವನ್ನು ಮುಂದಕ್ಕೆ ಹಾಕುತ್ತಲೇ ಇತ್ತು. ಹೀಗಾಗಿ ಅಂತಿಮ ಹೋರಾಟ ಸುಮಾರು ಹದಿನೈದು ದಿನಗಳ ಕಾಲ ಬಿರುಸಾಗಿ ನಡೆಯಿತು. ಫ್ರೀಡಂ ಪಾರ್ಕ್ನ ಟೆಂಟ್ನಲ್ಲಿ ಅಹೋರಾತ್ರಿ ಚಳವಳಿ ನಡೆಸಲಾಯಿತು. ನಾಡಿನ ಹಿರಿಯರು, ಹೋರಾಟಗಾರರು, ಸಂಘಟನೆಗಳು, ಯುವಜನರು ಅಣಿನೆರೆದರು. ನಟ್ಟಿರುಳ ನಾದ ಎಂಬ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮ ನಡೆಯಿತು. ಹಾಗಾಗಿ ಸರ್ಕಾರ ವರದಿ ಜಾರಿ ಮಾಡುವ ಅನಿವಾರ್ಯತೆಗೆ ಸಿಲುಕಿತು. ಇನ್ನೊಂದೆಡೆ ಜಸ್ಟಿಸ್ ದಾಸ್ ಆಯೋಗದ ವರದಿ ವಿರುದ್ಧ ಭುಗಿಲೆದ್ದಿದ್ದ ಅಸಮಾಧಾನವನ್ನೂ ಪರಿಹರಿಸುವ ಸವಾಲೂ ಕೂಡ ಸರ್ಕಾರದ ಮುಂದಿತ್ತು.

ಎಲ್ಲ ರೀತಿಯ ಒತ್ತಡಕ್ಕೆ ಮಣಿದ ಸರ್ಕಾರ ಆಗಸ್ಟ್ 19ರಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ದಾಸ್ರವರು ವಿಂಗಡಿಸಿದ್ದ ಐದು ಪ್ರವರ್ಗಗಳನ್ನು ಕೈಬಿಟ್ಟು, ಮೂರು ಪ್ರವರ್ಗಗಳನ್ನಾಗಿ ವಿಂಗಡಣೆ ಮಾಡಿ ಪ್ರವರ್ಗ ‘ಎ’ನಲ್ಲಿ ಮಾದಿಗ ಗುಂಪಿಗೆ ಶೇ. 6, ಪ್ರವರ್ಗ ‘ಬಿ’ನಲ್ಲಿ ಹೊಲೆಯ ಗುಂಪಿಗೆ ಶೇ.6ರಷ್ಟು ಮೀಸಲಾತಿಯನ್ನು ನೀಡಿತು. ಜೊತೆಗೆ ಜಸ್ಟಿಸ್ ದಾಸ್ ಅವರು ಪ್ರತ್ಯೇಕವಾಗಿಸಿದ್ದ ಎಕೆ, ಎಡಿ, ಎಎಗಳನ್ನು ಪ್ರವರ್ಗ ಎ ಮತ್ತು ಪ್ರವರ್ಗ ಬಿ ಎರಡಲ್ಲೂ ಸೇರಿಸಿತು. ಪ್ರವರ್ಗ ‘ಸಿ’ಗೆ ಅಲೆಮಾರಿ ಮತ್ತು ಅತಿಸೂಕ್ಷ್ಮ ಅಸ್ಪೃಶ್ಯರನ್ನು ಸೇರಿಸಿ, ಸ್ಪೃಶ್ಯ ಜಾತಿಗಳ ಗುಂಪಿಗೆ ಶೇ.5ರಷ್ಟು ಮೀಸಲಾತಿ ನೀಡಿತು. ತಬ್ಬಲಿ ಸಮುದಾಯಗಳಾದ ಅಲೆಮಾರಿ ಮತ್ತು ಅತೀ ಸೂಕ್ಷ್ಮ ಅಸ್ಪೃಶ್ಯರನ್ನು ಬಲಾಢ್ಯರ ಗುಂಪಿಗೆ ಸೇರಿಸಿದ್ದು ಚಾರಿತ್ರಿಕ ಅನ್ಯಾಯ. ಸರ್ಕಾರದ ಮಟ್ಟಿಗೆ ಇದೊಂದು ರಾಜಕೀಯ ನಿರ್ಧಾರ. ಆದರೆ ರಾಜಕೀಯಕ್ಕಾಗಿ ಇನ್ನೊಬ್ಬರ ಪಾಲನ್ನು ಕಿತ್ತುಕೊಳ್ಳುವುದು ಸಾಮಾಜಿಕ ನ್ಯಾಯದ ಅಣಕವಾಗಿತ್ತು. ಕೊನೆಗೆ ಅಲೆಮಾರಿಗಳು ಕೋರ್ಟ್ ಮೆಟ್ಟಿಲೇರಿದರು.

ಈ ಲೇಖನ ಓದಿದ್ದೀರಾ?: ಮಹಿಳಾ ಮೀಸಲಾತಿ | ಮುಸ್ಲಿಂ ಮಹಿಳೆಯರಿಗೆ ಒಳಮೀಸಲಾತಿ ನೀಡುವುದರಲ್ಲಿ ತಪ್ಪೇನಿದೆ?

ಎ.ಕೆ., ಎ.ಡಿ., ಎಎ.ಗಳನ್ನು ಎರಡೂ ಕಡೆಗೆ ಹಂಚಿರುವುದು ಕೂಡ ಸರಿಯಾದ ಕ್ರಮ ಆಗಿರಲಿಲ್ಲ. ಜಸ್ಟಿಸ್ ದಾಸ್ ಆಯೋಗದ ವರದಿಯನ್ನು ಸೂಕ್ಷ್ಮವಾಗಿ ನೋಡಿದರೆ ಎ.ಕೆ., ಎ.ಎ., ಎ.ಡಿ ಎಂದು ಬರೆಸಿದವರು ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಔದ್ಯೋಗಿಕವಾಗಿ ಮುಂದುವರಿದಿರುವುದು ಮೇಲು ನೋಟಕ್ಕೆ ಕಾಣುತ್ತಿತ್ತು. ಈ ಕಾರಣಕ್ಕೆ ಅವರನ್ನು ಪ್ರತ್ಯೇಕವಾಗಿ ಇಡುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಎ.ಕೆ., ಎ.ಡಿ. ಮತ್ತು ಎ.ಎ. ಎಂಬುದು ಪರಿಶಿಷ್ಟರಲ್ಲಿ 101 ಜಾತಿಗಳ ಪಟ್ಟಿಯಲ್ಲಿ ಜಾತಿಗಳಾಗಿಯೇ ನಮೂದಾಗಿರುವುದನ್ನು ಗಮನಿಸಬೇಕು. ಈ ಮೂರನ್ನು ಜಾತಿಪಟ್ಟಿಯಿಂದ ಹೊರಗಿಟ್ಟರೆ ಮಾತ್ರ ಸಮಸ್ಯೆ ಬಗೆಹರಿಯಬಹುದು ಎಂಬ ಅಭಿಪ್ರಾಯ ಬಂದಿತು.  ಆದರೆ ಅವರು ಸಹ ಅಸ್ಪೃಶ್ಯತೆಯ ನೋವುಂಡವರು ಎಂಬ ಅಭಿಪ್ರಾಯ ಬಂದಿತು. ಇನ್ನೊಂದೆಡೆ ತಮ್ಮ ಸಾಂವಿಧಾನಿಕ ಪಾಲಿಗಾಗಿ ಬೀದಿ ಹೋರಾಟಗಳನ್ನು ನಡೆಸಿದ ಅಲೆಮಾರಿಗಳು ಸರ್ಕಾರದಿಂದ ಪಾಲು ಪಡೆಯಲಾಗದೆ ನ್ಯಾಯಾಂಗದ ಕದ ತಟ್ಟುವುದು ಅನಿವಾರ್ಯವಾಯಿತು. ಸರ್ಕಾರವು ಒಳಮೀಸಲಾತಿಯನ್ನು ಶೇ.17ರ ಅನ್ವಯ ಪರಿಗಣಿಸಿರುವುದರಿಂದ ವಾಸ್ತವದಲ್ಲಿ ಶೇ.50ರ ಮೀಸಲಾತಿ ಮಿತಿ ಮೀರಿದಂತಾಗಿದೆ ಎಂಬ ಪ್ರಶ್ನೆಯು ನ್ಯಾಯಾಂಗದ ಮುಂದೆ ಬಂದಿತು. ಮತ್ತೆ ಒಳಮೀಸಲಾತಿ ಪರಿಷ್ಕರಣೆಗೆ ಸರ್ಕಾರ ಮುಂದಾಯಿತು.

ರೋಸ್ಟರ್ ಗೊಂದಲ

ಸರ್ಕಾರ ಜಾರಿಗೆ ತಂದಿದ್ದ ಪರಿಶಿಷ್ಟ ಮೀಸಲಾತಿ ವರ್ಗೀಕರಣದಲ್ಲಿ ಮಾದಿಗ ಸಮುದಾಯವನ್ನು ಪ್ರವರ್ಗ ‘ಎ’ನಲ್ಲಿ ಇರಿಸಿದ್ದರಿಂದ ಸಹಜವಾಗಿ ಅವರಿಗೆ ಮೊದಲ ಅವಕಾಶ ಸಿಗುತ್ತದೆ. ಯಾವುದೇ ಸರ್ಕಾರಿ ಇಲಾಖೆಯಲ್ಲಿ ಒಂದುವೇಳೆ ಕಡಿಮೆ ಹುದ್ದೆಗಳ ನೇಮಕಾತಿ ನಡೆದು, ಅದರಲ್ಲಿ ಪ.ಜಾತಿಗೆ 2 ಅಥವಾ 3 ಹುದ್ದೆಗಳಷ್ಟೇ ಸಿಕ್ಕಿದಂತಹ ಸಂದರ್ಭದಲ್ಲಿ ಆಗ ಮೊದಲ ಅವಕಾಶ ಪ್ರವರ್ಗ ‘ಎ’ಗೆ ಸಿಗುವುದು ನಿಯಮಬದ್ಧವಾಗಿತ್ತು. ಆದರೆ ಕಡಿಮೆ ಇರುವ ಹುದ್ದೆಗಳಲ್ಲಿ ಬಲ ಸಮುದಾಯಕ್ಕೆ ಮತ್ತು ಸ್ಪೃಶ್ಯರಿಗೆ ಅವಕಾಶವೇ ಸಿಗುವುದಿಲ್ಲ ಎಂದು ವಿವಾದ ಎದ್ದಿತು. ವಿಶ್ವವಿದ್ಯಾಲಯಗಳ ಆಯಾಕಟ್ಟಿನ ಹುದ್ದೆಗಳಲ್ಲಿ ನೇಮಕಾತಿ ನಡೆದರೆ ಮಾದಿಗರಿಗೆ ಆದ್ಯತೆ ಸಿಗುತ್ತದೆ, ಇನ್ನುಳಿದವರಿಗೆ ಅವಕಾಶ ದೊರಕಲು ಕನಿಷ್ಠ 30 ವರ್ಷಗಳಾದರೂ ಬೇಕಾಗುತ್ತದೆ ಎಂದು ಸಮುದಾಯಗಳ ನಡುವೆ ಕಿಡಿ ಹೊತ್ತಿಸಲಾಯಿತು. ಅವಕಾಶ ವಂಚಿತ ಮಾದಿಗರಿಗೆ ಒಮ್ಮೆ ಇಂತಹದೊಂದು ಅವಕಾಶ ಬಿಟ್ಟುಕೊಡುವುದು ಮಾನವೀಯ ನೆಲೆಯಲ್ಲೂ ಮತ್ತು ಕಾನೂನಿನ ದೃಷ್ಟಿಯಲ್ಲೂ ಸರಿಯಾದ ಕ್ರಮವೇ ಆಗಿತ್ತು.

“ರೋಸ್ಟರ್ ಬಿಂದು ಸರಿಪಡಿಸಿ, ಒಳಮೀಸಲಾತಿ ಜಾರಿಗೆ ತನ್ನಿ ಎನ್ನಬೇಕಿದ್ದವರು, ಒಳಮೀಸಲಾತಿಯನ್ನೇ ಬೇಡ” ಎನ್ನುವ ಮಟ್ಟಕ್ಕೆ ಹೋಗಿದ್ದರ ಹಿಂದೆ ಕೋಮುವಾದಿ ಶಕ್ತಿಗಳ ಹಿಕಮತ್ತು ಇತ್ತೆಂದು ಹೋರಾಟಗಾರರು ಹೇಳುತ್ತಾರೆ. ಎಡ ಮತ್ತು ಬಲ ಸಮುದಾಯಗಳಲ್ಲಿ ಸಕ್ರಿಯರಾಗಿದ್ದ ಕೋಮುವಾದಿ ಶಕ್ತಿಗಳ ಕೈಗೊಂಬೆಗಳು- ಈ ಬಿಕ್ಕಟ್ಟಿನ ನಡುವೆ ಚೆನ್ನಾಗಿಯೇ ಬೇಳೆ ಬೇಯಿಸಿಕೊಳ್ಳಲು ನೋಡಿದವು. ರೋಸ್ಟರ್ ಬಿಂದು ವಿವಾದ ಉಂಟಾದದ್ದು ಮತ್ತು ಶೇ. 17ರ ಮೀಸಲಾತಿ ಪ್ರಮಾಣದ ಸಂಬಂಧ ಹೈಕೋರ್ಟ್ ಮಧ್ಯಪ್ರವೇಶ ಮಾಡಿದ್ದರಿಂದ ಒಳಮೀಸಲಾತಿ ಬಿಕ್ಕಟ್ಟು ಮತ್ತೊಂದು ಸುತ್ತಿಗೆ ಜಿಗಿಯಿತು. ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ತಾಂತ್ರಿಕ ಸಮಿತಿಯನ್ನು ರಚಿಸಿ, ಅದು ಕೊಟ್ಟ ಶಿಫಾರಸ್ಸುಗಳನ್ನು ಆಧರಿಸಿ ಮೀಸಲಾತಿ ಹಂಚಿಕೆ ಮಾಡಲು ಸರ್ಕಾರ ನಿರ್ಧರಿಸಿತು.

Nagamohandas

2026ರ ಏಪ್ರಿಲ್ 24ರಂದು ಕ್ಯಾಬಿನೆಟ್ ಕೈಗೊಂಡ ನಿರ್ಧಾರದ ಅನ್ವಯ ಹೊಸ ವರ್ಗೀಕರಣ ಸದ್ಯ ಚಾಲ್ತಿಯಲ್ಲಿದೆ. ಶೇ. 15ರ ಮೀಸಲಾತಿ ಪ್ರಮಾಣದಲ್ಲಿ ಪ್ರವರ್ಗ ‘ಎ’ಗೆ ಶೇ. 5.25, ಪ್ರವರ್ಗ ‘ಬಿ’ಗೆ ಶೇ. 5.25 ಮತ್ತು ಪ್ರವರ್ಗ ‘ಸಿ’ಗೆ ಶೇ. 4.5ರಂತೆ ಹಂಚಿಕೆ ಮಾಡಲಾಗಿದೆ. ಅಲೆಮಾರಿಗಳ ಪ್ರತಿರೋಧವನ್ನು ಶಮನ ಮಾಡಲು ಶೇ. 4.5ರಲ್ಲಿಯೇ ಶೇ. 20ರಷ್ಟು ಹುದ್ದೆಗಳನ್ನು ಮೀಸಲಿಡುವುದಾಗಿಯೂ ಮತ್ತು ಮೀಸಲಿಟ್ಟ ಹುದ್ದೆಗಳು ಅಲೆಮಾರಿಗಳಿಂದ ಭರ್ತಿಯಾಗದಿದ್ದರೆ ‘ಸಿ’ ಗುಂಪಿನ ಇತರೆ ಸಮುದಾಯಗಳಿಗೆ ವರ್ಗಾಯಿಸುವುದಾಗಿಯೂ ಸರ್ಕಾರ ಹೇಳಿದೆ. ರೋಸ್ಟರ್ ವ್ಯವಸ್ಥೆಯಲ್ಲಿ ಗೊಂದಲ ಮುಂದುವರಿದಿದೆ. ಎ, ಬಿ, ಸಿ- ಈ ಮೂರು ಗುಂಪುಗಳಿಗೂ ಏಕಕಾಲದಲ್ಲಿ ಹುದ್ದೆಗಳು ಸಿಗದೆ ಹೋದಲ್ಲಿ ರೋಸ್ಟರ್ ಬಿಂದುವಿನಲ್ಲಿ ‘ಎಸ್ಸಿ ಜನರಲ್’ ಎಂದು ನಮೂದಿಸುವುದಾಗಿ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಮಾದಿಗ ಸಮುದಾಯವು ಉನ್ನತ ಹುದ್ದೆಗಳನ್ನು ಪಡೆಯುವುದು ಈಗಲೂ ಮರೀಚಿಕೆಯಂತಾಗಿದೆ. ರೋಸ್ಟರ್ ಬಿಂದು ಸರಿಪಡಿಸಲು ಮತ್ತೆ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆದರೆ ಬೃಹತ್ ನೇಮಕಾತಿಗಳಲ್ಲಿ ಪ್ರಾತಿನಿಧ್ಯ ಸಿಗುವುದು ಖಚಿತವಾಗಿದೆ.

ಸಮಾಧಾನದ ಸಂಗತಿ ಎಂದರೆ, ಒಳಮೀಸಲಾತಿಯನ್ನು ಎಲ್ಲ ಸಮುದಾಯಗಳು ಒಪ್ಪಿಕೊಳ್ಳಲೇಬೇಕಾದ ಮಟ್ಟಕ್ಕೆ ಚರಿತ್ರೆ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಒಳಮೀಸಲಾತಿ ಜಾರಿಗೆ ಬಿಡುವುದಿಲ್ಲ ಎನ್ನುತ್ತಿದ್ದವರು ಅನಿವಾರ್ಯವಾಗಿ ಸಾಮಾಜಿಕ ನ್ಯಾಯಕ್ಕೆ ತಲೆಬಾಗಲೇಬೇಕಾಗಿದೆ. ತಪ್ಪು ಸರಿಗಳಾಚೆಯಾದರೂ ಒಳಮೀಸಲಾತಿ ಜಾರಿಗೆ ಬಂದಿದೆ. ಎಷ್ಟೇ ಒತ್ತಡ, ಮೇಲಾಟಗಳಿದ್ದರೂ ಇದ್ದದ್ದರಲ್ಲಿ ತಕ್ಕಮಟ್ಟಿಗೆ ಎಲ್ಲರಿಗೂ ಒಪ್ಪಿಗೆಯಾಗುವಂತಹ ವರ್ಗೀಕರಣವನ್ನು ಮಾಡಿದಂತೆ ಕಾಣುತ್ತಿದೆ. ಬಹುಶಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಮೂರು ವರ್ಷಗಳಲ್ಲಿ ಅತಿಹೆಚ್ಚು ಪೀಕಲಾಟಕ್ಕೆ ಒಳಗಾಗಿದ್ದು ಒಳಮೀಸಲಾತಿ ವಿಚಾರದಲ್ಲೇ ಇರಬಹುದು ಅನಿಸುತ್ತದೆ.

ಒಳಮೀಸಲಾತಿಯ ಕಾವು ಜೋರಾಗಿದ್ದ ತೆಲಂಗಾಣ- ಆಂಧ್ರಪ್ರದೇಶದಲ್ಲಿ ಸುಲಭವಾಗಿ ಜಾರಿಯಾದ ಪರಿಶಿಷ್ಟ ಜಾತಿ ಮೀಸಲಾತಿ ವರ್ಗೀಕರಣ, ಕರ್ನಾಟಕದಲ್ಲಿ ಗೊಂದಲದ ಗೂಡಾಗಿದ್ದಕ್ಕೆ ಕೆಲವು ಕಾರಣಗಳನ್ನು ಹೋರಾಟಗಾರರು ಗುರುತಿಸುತ್ತಾರೆ.

1. ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಕರ್ನಾಟಕದಲ್ಲಿ ಇರುವಂತೆ ಸ್ಪೃಶ್ಯ ಸಮುದಾಯಗಳ ಮೇಲಾಟವಿಲ್ಲ. ಕರ್ನಾಟಕದಲ್ಲಿ ಪರಿಶಿಷ್ಟರ ಪಟ್ಟಿಯೊಳಗೆ ಬರುವ ಭೋವಿ, ಲಂಬಾಣಿ ಸಮುದಾಯಗಳು ರಾಜಕೀಯ ಪ್ರಭಾವವನ್ನು ಹೊಂದಿದ್ದು, ಸರ್ಕಾರದ ಮಟ್ಟದಲ್ಲಿ ಒತ್ತಡ ಸೃಷ್ಟಿಸಬಲ್ಲ ಗುಂಪುಗಳಾಗಿ ಬೆಳೆದಿವೆ.

2. ದಲಿತರ ಒಗ್ಗಟ್ಟು ಮುರಿಯದೆ ಕರ್ನಾಟಕದಲ್ಲಿ ಉಳಿಗಾಲವಿಲ್ಲ ಎಂದು ಅರಿತಿರುವ ಕೋಮುವಾದಿ ಶಕ್ತಿಗಳು, ಎಡ-ಬಲ ಸಮುದಾಯಗಳಲ್ಲಿ ಎಕ್ಸ್ಟ್ರೀಮ್ ಗುಂಪುಗಳನ್ನು ಸೃಷ್ಟಿಸಿ, ಅವರ ಮೂಲಕ ಒಡೆದು ಆಳುವ ನೀತಿಯನ್ನು ಜಾರಿಗೆ ತರಲು ಮುಂದಾದರು. ಇದನ್ನು ದಲಿತ ಚಳವಳಿಯ ನಾಯಕರು ಸರಿಯಾಗಿ ಎದುರಿಸುವಲ್ಲಿ ಹಿನ್ನಡೆ ಅನುಭವಿಸಿದರು. ಸರ್ಕಾರದ ವಿಳಂಬ ಧೋರಣೆ, ಗೊಂದಲಕಾರಿ ನಿಲುವುಗಳು ಕೋಮುವಾದಿ ಶಕ್ತಿಗಳಿಗೆ ಅವಕಾಶ ಒದಗಿಸುತ್ತಾ ಹೋದದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ಒಳಮೀಸಲಾತಿ ವಿಚಾರದಲ್ಲಿ ಯಾರು ಯಾವ ಆಟ ಆಡಿದ್ದಾರೆಂಬುದನ್ನು ಎಚ್ಚೆತ್ತ ದಲಿತ ಪ್ರಜ್ಞೆ ನಿಧಾನವಾಗಿಯಾದರೂ ಅರಿಯಬಲ್ಲದು.

3. ತೆಲಂಗಾಣ ರಾಜ್ಯವನ್ನು ಉದಾಹರಣೆಯಾಗಿ ರಾಜ್ಯ ಸರ್ಕಾರ ನೋಡಬೇಕಿತ್ತು. ಮಾದಿಗರ ಪಾಲನ್ನು ಶೇ.9ರ ಬದಲು ಶೇ.11ಕ್ಕೆ  ಹೆಚ್ಚಿಸಬೇಕೆಂಬ ಒತ್ತಡ ಅಲ್ಲಿನ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರ ಮೇಲಿತ್ತು. ಆದರೆ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕಾನೂನಿನ ಬಿಕ್ಕಟ್ಟನ್ನು ಮನವರಿಕೆ ಮಾಡಿದ ರೆಡ್ಡಿಯವರು, ನ್ಯಾಯಮೂರ್ತಿ ಶಾಮೀಮ್ ಅಖ್ತರ್ ಆಯೋಗ ನೀಡಿದ ವರದಿಯನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದರು. ಇದೇ ರೀತಿಯಲ್ಲಿ ಜಸ್ಟಿಸ್ ನಾಗಮೋಹನ ದಾಸ್ ಆಯೋಗದ ವರದಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಎಲ್ಲ ಸಮುದಾಯಗಳ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂಜಾಗೃತೆ ವಹಿಸಬೇಕಿತ್ತು.

ಕೊನೆಯ ಮಾತು

ಸರ್ಕಾರ ಸರಿದಾರಿ ಕಂಡುಕೊಳ್ಳುವ ಪರದಾಟದಲ್ಲಿ ಒಳಮೀಸಲಾತಿ ಜಾರಿ ವಿಳಂಬವಾಗಿದ್ದು ಸತ್ಯ. ಆದರೆ ಕರ್ನಾಟಕ ರಾಜ್ಯ ಅತ್ಯಂತ ಸಂಕೀರ್ಣವಾದ ಪರಿಶಿಷ್ಟ ಜಾತಿ ಗುಚ್ಛವನ್ನು ಹೊಂದಿದೆ. ಸ್ವಲ್ಪ ಏರುಪೇರಾದರೂ ಕಾಂಗ್ರೆಸ್ ಪಕ್ಷವು ರಾಜಕೀಯ ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಎಡ-ಬಲ ಸಮುದಾಯಗಳ ನಡುವೆ ಕೋಮುವಾದಿ ಶಕ್ತಿಗಳು ಕಾರ್ಯಚಟುವಟಿಕೆ ಮತ್ತು ಸಹಜ ಮಾತುಕತೆಗಳು ನಡೆಯದಂತೆ ನಡೆದ ಘಟನೆಗಳ ನಡುವೆ ಒಳಮೀಸಲಾತಿ ವಿಚಾರವಾಗಿ ಒಂದು ನಿರ್ಧಾರಕ್ಕೆ ಸರ್ಕಾರ ಬಂದಿರುವುದು ಸ್ವಾಗತಾರ್ಹ ಸಂಗತಿ. ಆದರೆ ಆಗ್ರಹಗಳು ಮುಗಿದಿಲ್ಲ. ಹೋರಾಟಗಳು ಒಂದಲ್ಲ ಒಂದು ಕಾರಣಕ್ಕೆ ಮುಂದುವರಿಯುವೂ ಖಚಿತ.

ಪರಿಶಿಷ್ಟ ಮೀಸಲಾತಿಯನ್ನು ಹೆಚ್ಚಿಸಿದಾಗ, ಅದು ಶೇ. 50ರ ಮೀಸಲಾತಿ ಮಿತಿಗೆ ಒಳಪಡುವುದೇ ಎಂಬುದು ಮತ್ತೊಂದು ಗಂಭೀರ ಪ್ರಶ್ನೆ. ಕಾನೂನು ತಜ್ಞರು, “ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಇರಲೇಬೇಕಾಗುತ್ತದೆ. ಒಂದು ವೇಳೆ ಮೀಸಲಾತಿ ಮಿತಿ ಎದುರಾದಾಗ, ಕಡಿತ ಮಾಡಬೇಕಾಗಿದ್ದು ಒಬಿಸಿ ಮೀಸಲಾತಿಯನ್ನೇ ಹೊರತು, ಪರಿಶಿಷ್ಟರ ಮೀಸಲಾತಿಯನ್ನಲ್ಲ” ಎನ್ನುತ್ತಾರೆ. ಆದರೆ ಅದು ಮತ್ತೊಂದು ಸಂಘರ್ಷಕ್ಕೆ ಅವಕಾಶ ನೀಡುತ್ತದೆ. ಹೀಗಾಗಿ ಸ್ಪಷ್ಟ ಅಂಕಿ- ಅಂಶಗಳನ್ನು ಮುಂದಿಟ್ಟು, ಶೇ.50ರ ಮಿತಿ ಮೀರಲು ಬೇಕಾದ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಶೇ. 75ಕ್ಕೆ ಒಟ್ಟು ಮೀಸಲಾತಿಯನ್ನು ಹೆಚ್ಚಿಸುವ ಭರವಸೆ ನೀಡಿದ್ದ ಕಾಂಗ್ರೆಸ್, ಈ ದಿಕ್ಕಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಅಗತ್ಯವೂ ಇದೆ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು ದಸರಾ ಉದ್ಘಾಟನೆಗೆ ಅಭಿನವ ಗವಿಸಿದ್ದೇಶ್ವರ ಶ್ರೀಗೆ ಆಹ್ವಾನ

ಕೊಪ್ಪಳದ ಗವಿಸಿದ್ದೇಶ್ವರ ಮಠದ ಪೀಠಾಧಿಪತಿಗಳಾದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಈ...

ಪತ್ರಕರ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಮಹಿಳೆಯರಿಗೆ ಸುರಕ್ಷತೆಯೇ ಇಲ್ಲವೇ: ಮೋಶಾಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯ ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯರ ಮೇಲೆ...