ಪ್ರಜಾಪ್ರಭುತ್ವದಲ್ಲಿ ಮತದಾನದ ಹಕ್ಕು ಕೇವಲ ಒಂದು ಆಡಳಿತಾತ್ಮಕ ದಾಖಲೆಯಲ್ಲ; ಅದು ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ನೀಡಿರುವ ಅತ್ಯಂತ ಮೂಲಭೂತ ರಾಜಕೀಯ ಹಕ್ಕು. ಚುನಾವಣೆಗಳು ಪ್ರಜಾಪ್ರಭುತ್ವದ ಹಬ್ಬವಾಗಿದ್ದರೆ, ಮತದಾರರ ಪಟ್ಟಿ ಅದರ ಅಡಿಪಾಯ. ಆದರೆ, ಆ ಅಡಿಪಾಯವನ್ನೇ ದುರ್ಬಲಗೊಳಿಸಲು ಚುನಾವಣಾ ಆಯೋಗ ಮುಂದಾಗಿದೆ. ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ತಲೆಕೆಳಗಾಗಿ ಮಾಡಲು ಮೋದಿ ಸರ್ಕಾರ ಮತ್ತು ಚುನಾವಣಾ ಆಯೋಗ ಜಂಟಿಯಾಗಿ ತಂತ್ರ-ಕುತಂತ್ರ ಹೆಣೆದಿವೆ. ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ನಿಂದ ಬರೋಬ್ಬರಿ 1 ಕೋಟಿ ಅರ್ಹ ಮತದಾರರ ಹೆಸರುಗಳು ಅಳಿಸಿಹೋಗುವ ಆತಂಕವಿದೆ.
ಈವರೆಗೆ, ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ನವೀಕರಿಸಿ ದೋಷಗಳನ್ನು ಸರಿಪಡಿಸುತ್ತಿತ್ತು. ಆದರೆ, ಈಗ ಅರ್ಹ ಮತದಾರರ ಹಕ್ಕು-ಅರ್ಹತೆಯನ್ನೂ ಪ್ರಶ್ನಿಸುತ್ತಿದೆ. ಸಾಮಾನ್ಯರ ಬಳಿ ದೊರೆಯದ ದಾಖಲೆಗಳನ್ನು ಕೇಳುವುದು, ಸಣ್ಣ-ಪುಟ್ಟ ತಾಂತ್ರಿಕ ದೋಷಗಳನ್ನು ಮುಂದಿಡುವ ಮೂಲಕ ಅರ್ಹಯನ್ನೂ ಮತದಾನದ ಹಕ್ಕಿನಿಂದ ಹೊರಹಾಕುತ್ತಿದೆ.
ಲಭ್ಯವಿರುವ ಮಾಹಿತಿ, ಕ್ಷೇತ್ರಮಟ್ಟದ ವರದಿಗಳು ಹಾಗೂ ವಿವಿಧ ವಲಯಗಳು ವ್ಯಕ್ತಪಡಿಸಿರುವ ಅಂದಾಜುಗಳ ಪ್ರಕಾರ, ಎಸ್ಐಆರ್ನಿಂದಾಗಿ ಕರ್ನಾಟಕದಲ್ಲಿ 1 ಕೋಟಿ ಅರ್ಹ ಮತದಾರರು ಮತಪಟ್ಟಿಯಿಂದ ಡಿಲೀಟ್ ಆಗುವ ಆತಂಕವಿದೆ. ಅದಕ್ಕೆ, ಚುನಾವಣಾ ಆಯೋಗದ ಕೃತ್ಯಗಳೇ ಪ್ರಮುಖ ಕಾರಣಗಳೂ ಆಗಿವೆ;
ASDDO ವರ್ಗೀಕರಣ
ಮತದಾರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ಮತದಾರರು ಹೊರಗುಳಿಯಲು ಮುಖ್ಯ ಕಾರಣಗಳಲ್ಲಿ ASDDO (Absent, Shifted, Dead, Duplicate, Others) ವರ್ಗೀಕರಣ ಪ್ರಧಾನವಾದುದು. ಲಭ್ಯವಿರುವ ಮಾಹಿತಿಯ ಪ್ರಕಾರ, ಕಳೆದ ಸುಮಾರು 25 ದಿನಗಳಲ್ಲಿ ಈ ವರ್ಗೀಕರಣದ ಅಡಿಯಲ್ಲಿ ಸುಮಾರು 53 ಲಕ್ಷ ಮತದಾರರ ಹೆಸರುಗಳು ಕರಡು ಪಟ್ಟಿಯಿಂದ ಹೊರಗಿಡಲ್ಪಟ್ಟಿವೆ. ರಾಜ್ಯದ ಒಟ್ಟು ಮತದಾರರಲ್ಲಿ ಇನ್ನೂ ಸುಮಾರು 30% ಡಿಜಿಟೈಸೇಶನ್ ಬಾಕಿಯಿದ್ದು, ಅದರಲ್ಲಿ ಹೆಚ್ಚುವರಿಯಾಗಿ 15 ರಿಂದ 20 ಲಕ್ಷ ಮತದಾರರು ಇದೇ ವರ್ಗೀಕರಣದಿಂದಾಗಿ ಮತಪಟ್ಟಿಯಿಂದ ಹೊರಹೋಗುವ ಸಾದ್ಯತೆ ಇದೆ. ಈ ಅಂದಾಜುಗಳ ಪ್ರಕಾರ, ಅಂತಿಮವಾಗಿ ಸುಮಾರು 70 ರಿಂದ 75 ಲಕ್ಷ ಮತದಾರರ ಹೆಸರುಗಳು ಕರಡು ಪಟ್ಟಿಯಿಂದಲೇ ನಾಪತ್ತೆಯಾಗುವ ಸಾಧ್ಯತೆ ಇದೆ.
ಈ ಪರಿಸ್ಥಿತಿ ಏಕೆ ಉಂಟಾಗಿರಬಹುದು ಎಂಬ ಪ್ರಶ್ನೆಗೆ ಕ್ಷೇತ್ರಮಟ್ಟದಿಂದ ಹಲವು ಅಭಿಪ್ರಾಯಗಳು ಕೇಳಿಬರುತ್ತಿವೆ. ಆರಂಭಿಕ ಹಂತದಲ್ಲಿ ಎನ್ಯುಮರೇಷನ್ ಫಾರ್ಮ್ಗಳ ವಿತರಣೆ ನಿರೀಕ್ಷಿತ ಮಟ್ಟದಲ್ಲಿ ನಡೆದಿರಲಿಲ್ಲ. ಆದ್ದರಿಂದ, ಚುನಾವಣಾ ಆಯೋಗವು ಗುರಿಯನ್ನು ಪೂರ್ಣಗೊಳಿಸುವ ಒತ್ತಡವನ್ನು ಬಿಎಲ್ಒಗಳ ಮೇಲೆ ಹೆಚ್ಚಿಸಿತು. ಪರಿಣಾಮ, ಹಲವು ಭಾಗಗಳಲ್ಲಿ ಮತದಾರರನ್ನು ನೇರವಾಗಿ ಸಂಪರ್ಕಿಸದೆ ‘Absent’ (ಲಭ್ಯವಿಲ್ಲ) ಅಥವಾ ‘Permanently Shifted’ (ಖಾಯಂ ಸ್ಥಳಾಂತರ) ಎಂದು ದಾಖಲಿಸಿರುವ ಸಾಧ್ಯತೆ ಹೆಚ್ಚಿದೆ ಎಂದು ಕೆಲವು ಸಿಬ್ಬಂದಿ ಮತ್ತು ಸ್ಥಳೀಯ ವರದಿಗಳು ಸೂಚಿಸುತ್ತವೆ.
ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಬಾಡಿಗೆ ಮನೆ ಬದಲಿಸಿದವರಿಗೆ ಹೊಸ ವಿಳಾಸದಲ್ಲಿ ಫಾರ್ಮ್ ನೀಡುವ ಬದಲು ‘ಖಾಯಂ ಸ್ಥಳಾಂತರ’ ಎಂದು ದಾಖಲಿಸಿರುವ ಪ್ರಕರಣಗಳಿವೆ ಎಂಬ ದೂರುಗಳು ಕೇಳಿಬರುತ್ತಿವೆ. ಬೆಂಗಳೂರಿನಂತಹ ನಗರಗಳಲ್ಲಿ ASDDO ಪ್ರಮಾಣ ಹೆಚ್ಚಾಗಿದೆ ಎಂಬ ಅಂದಾಜುಗಳು ವ್ಯಕ್ತವಾಗಿವೆ.
Logical Discrepancy (ತಾರ್ಕಿಕ ವ್ಯತ್ಯಾಸ)
ಎಸ್ಐಆರ್ ಪ್ರಕ್ರಿಯೆಯೇ ಅಸಂವಿಧಾನಿಕವೆಂಬ ಆಕ್ಷೇಪಗಳು ಕೇಳಿಬರುತ್ತಿವೆ. ಇಂತಹ ಸಮಯದಲ್ಲಿ, ಚುನಾವಣಾ ಆಯೋಗವು ‘ತಾರ್ಕಿಕ ವ್ಯತ್ಯಾಸ’ ಎಂಬ ಅತಾರ್ಕಿಕ ವ್ಯವಸ್ಥೇಯನ್ನು ಎಸ್ಐಆರ್ನಲ್ಲಿ ಪರಿಚಯಿಸಿದೆ. ಹೆಸರು, ವಿಳಾಸಗಳಲ್ಲಿ ಸಣ್ಣ-ಪುಟ್ಟ ‘ಸ್ಪೆಲ್ಲಿಂಗ್ ಮಿಸ್ಟೇಕ್’ಗಳನ್ನು ಉಲ್ಲೇಖಿಸಿ ಮತದಾರರನ್ನು ಅನುಮಾನಿಸಿ, ನೋಟಿಸ್ ಕೊಡುವ ಮತ್ತು ಮತಪಟ್ಟಿಯಿಂದ ಹೊರಹಾಕುವ ದೊಡ್ಡ ಷಡ್ಯಂತ ಇದರ ಹಿಂದಿದೆ.
ಲಭ್ಯವಿರುವ ಮಾಹಿತಿಯ ಪ್ರಕಾರ, ಉತ್ತಮ ಪ್ರಗತಿ ಸಾಧಿಸಿದೆ ಎನ್ನಲಾಗುತ್ತಿರುವ ಬೆಳಗಾವಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರದಲ್ಲಿ 88% ಡಿಜಿಟೈಸೇಶನ್ ಪೂರ್ಣಗೊಂಡಾಗಲೇ ಸುಮಾರು 32 ಸಾವಿರ ಮತದಾರರ ಹೆಸರಿನಲ್ಲಿ ‘ತಾರ್ಕಿಕ ವ್ಯತ್ಯಾಸ’ವನ್ನು ಗುರುತಿಸಲಾಗಿದೆ ಎಂದು ಹೇಳಲಾಗುತ್ತಿದೆ. ಉಳಿದ ಡಿಜಿಟೈಸೇಶನ್ ಪೂರ್ಣಗೊಂಡರೆ ಈ ಸಂಖ್ಯೆ ಸುಮಾರು ‘36 ಸಾವಿರ’ ತಲುಪಬಹುದು ಎಂಬ ಅಂದಾಜಿದೆ.
ಈ ಲೇಖನ ಓದಿದ್ದೀರಾ?: SIR | ಮುಸ್ಲಿಮರು, ಅಲ್ಪಸಂಖ್ಯಾತರ ಮೇಲೆ ತೀವ್ರ ಪರಿಣಾಮ; ವಿಶ್ವಸಂಸ್ಥೆ ಕಳವಳ
ಈ ಒಂದು ಕ್ಷೇತ್ರದ ಅನುಪಾತವನ್ನು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಿಗೆ ಅನ್ವಯಿಸಿದರೆ, ರಾಜ್ಯದಲ್ಲಿ ಸುಮಾರು ‘80 ಲಕ್ಷ’ಕ್ಕೂ ಹೆಚ್ಚು ಮತದಾರರಿಗೆ ‘ತಾರ್ಕಿಕ ವ್ಯತ್ಯಾಸ’ದಡಿ ನೋಟಿಸ್ ಹೋಗುವ ಸಾಧ್ಯತೆ ಇದೆ.
ಲಕ್ಷಾಂತರ ನೋಟಿಸ್ಗಳು ಬಂದರೆ ವ್ಯವಸ್ಥೆ ನಿಭಾಯಿಸಬಹುದೇ?
‘ತಾರ್ಕಿಕ ವ್ಯತ್ಯಾಸ’ವೆಂದು ಗುರುತಿಸಲ್ಪಟ್ಟರೆ ಸಂಬಂಧಿಸಿದ ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ನಂತರ ಅವರು ಕುಟುಂಬಸ್ಥರ ಸಂಬಂಧ, ಗುರುತು, ವಿಳಾಸ ಹಾಗೂ ಇತರ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಇಲ್ಲಿ ಮೂಲಭೂತ ಪ್ರಶ್ನೆಯೆಂದರೆ; ಲಕ್ಷಾಂತರ ಜನರ ದಾಖಲೆಗಳನ್ನು ಕೇವಲ ಎರಡು ತಿಂಗಳ ಅವಧಿಯಲ್ಲಿ ಸಮರ್ಪಕವಾಗಿ ಪರಿಶೀಲಿಸುವುದು ಆಡಳಿತಾತ್ಮಕವಾಗಿ ಸಾಧ್ಯವೇ? ಪ್ರತಿದಿನ ನೂರಾರು ಪ್ರಕರಣಗಳನ್ನು ಅಧಿಕಾರಿಗಳು ಗುಣಮಟ್ಟದಿಂದ ಪರಿಶೀಲಿಸಬಹುದೇ? ದಾಖಲೆಗಳಲ್ಲಿ ಸಣ್ಣ ವ್ಯತ್ಯಾಸಗಳಿದ್ದರೆ ಯಾವ ಮಾನದಂಡದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ? ಈ ಪ್ರಶ್ನೆಗಳಿಗೆ ಚುನಾವಣಾ ಆಯೋಗದಿಂದ ಸ್ಪಷ್ಟ ಕಾರ್ಯಯೋಜನೆ ಮತ್ತು ಸಾರ್ವಜನಿಕ ವಿವರಣೆ ಅಗತ್ಯವಿದೆ. ಆದರೆ, ಅಂತಹ ವಿವರಣೆ ನೀಡಲು ಆಯೋಗ ಸಿದ್ಧವಿಲ್ಲ. ನಾಗರಿಕ ಸಮಾಜ ಕೇಳುತ್ತಿರುವ ಪ್ರಶ್ನೆಗಳಿಗೆ ಆಯೋಗದ ಆಧಿಕಾರಿಗಳು ಉತ್ತರವನ್ನೂ ನೀಡುತ್ತಿಲ್ಲ.
2002ರ ದಾಖಲೆಗಳ ಸಮಸ್ಯೆ
ಮತದಾರರ ಪಟ್ಟಿಯಿಂದ ಹೆಚ್ಚಿನ ಮತದಾರರು ತಮ್ಮ ಹೆಸರುಗಳನ್ನು ಕಳೆದುಕೊಳ್ಳಲು ಮತ್ತೊಂದು ಪ್ರಮುಖ ಮತ್ತು ಆತಂಕಕಾರಿ ಅಂಶವೆಂದರೆ; 2002ರ ಮತದಾರರ ದಾಖಲೆಗಳು.
ಅಂದಹಾಗೆ, ಮತದಾರರ 2002ರ ಮತಪಟ್ಟಿಯ ಮಾಹಿತಿಗಳನ್ನು ನೀಡಬೇಕಿರುವುದು ಚುನಾವಣಾ ಆಯೋಗವೇ ಆಗಿದೆ. ಆದರೆ, ಆಯೋಗವು 2002ರಲ್ಲಿ ಮತಪಟ್ಟಿಯಲ್ಲಿ ಹೆಸರು ಹೊಂದಿದ್ದ ಎಲ್ಲ ಮತದಾರರ ಪಟ್ಟಿಯಲ್ಲಿ ತನ್ನ ವೆಬ್ಸೈಟ್ ಮತ್ತು ಎಸ್ಐಆರ್ ನಡೆಸುವ ಬಿಎಲ್ಒಗಳಿಗೆ ಕೊಟ್ಟೇ ಇಲ್ಲ.
ಈ ಲೇಖನ ಓದಿದ್ದೀರಾ?: SIR | ಮಹದೇವಪುರದ ಹಲವು ಬೂತ್ಗಳ 2002ರ ಮತಪಟ್ಟಿಯೇ ನಾಪತ್ತೆ; 40 ಸಾವಿರಕ್ಕೂ ಹೆಚ್ಚು ಮತದಾರರ ಭವಿಷ್ಯ ಅತಂತ್ರ
ಲಭ್ಯವಿರುವ ಮಾಹಿತಿಯ ಪ್ರಕಾರ, ಈಗಾಗಲೇ ಸುಮಾರು 18 ಲಕ್ಷ ಮತದಾರರಿಗೆ ಸಂಬಂಧಿಸಿದ 2002ರ ಮಾಹಿತಿ ಆಯೋಗ ವೆಬ್ಸೈಟ್ನಲ್ಲಾಗಲೀ, ಬಿಎಲ್ಒಗಳ ಬಳಿಯಾಗಲೀ ಲಭ್ಯವಿಲ್ಲ. ಇನ್ನು, ಎನ್ಯೂಮರೇಷನ್ ಫಾರ್ಮ್ಗಳನ್ನು ಭರ್ತಿ ಮಾಡುವ ಮೊದಲ ಹಂತದ ಪ್ರಕ್ರಿಯೆ ಪೂರ್ಣಗೊಳ್ಳುವ ವೇಳೆಗೆ ಈ ಸಂಖ್ಯೆ 25 ಲಕ್ಷ ತಲುಪಬಹುದು ಎಂಬ ಅಂದಾಜುಗಳಿವೆ.
ಆಯೋಗವು ಈ ಮತದಾರರ ಮಾಹಿತಿಯನ್ನು ಒದಗಿಸದ ಕಾರಣ, ಹಲವಾರು ಮತದಾರರು ‘ಎನ್ಯುಮರೇಷನ್ ಫಾರ್ಮ್ನಲ್ಲಿ Self ಅಥವಾ Progeny Mapping ಕಾಲಂ ಭರ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ, ಈ ಎಲ್ಲ ಮತದಾರರಿಗೆ ಚುನಾವಣಾ ಆಯೋಗವು ತನ್ನದೇ ಲೋಪವಿದ್ದರೂ ನೋಟಿಸ್ ಕೊಡುವ ಆತಂಕವಿದೆ.
ಹಳೆಯ ದಾಖಲೆಗಳನ್ನು ಸಂಗ್ರಹಿಸಿ ಸಲ್ಲಿಸುವುದು ಎಲ್ಲರಿಗೂ ಸುಲಭವಲ್ಲ. ಆದ್ದರಿಂದ, ಒಂದು ಬೃಹತ್ ಮತವರ್ಗಕ್ಕೆ ಅನಗತ್ಯ ಸಂಕಷ್ಟ ಉಂಟಾಗುವ ಸಾಧ್ಯತೆಯಿದೆ.
ಮ್ಯಾಪಿಂಗ್ ದೋಷಗಳು
ಕ್ಷೇತ್ರಮಟ್ಟದಲ್ಲಿ ಕೇಳಿಬರುತ್ತಿರುವ ಮತ್ತೊಂದು ಆತಂಕವೆಂದರೆಲ ಕೆಲವು ಕಡೆಗಳಲ್ಲಿ ಬಿಎಲ್ಒಗಳು ಮತದಾರರು ಹೊಸದಾಗಿ ಸಲ್ಲಿಸಿರುವ ಮಾಹಿತಿಯನ್ನು ಪರಿಗಣಿಸುವ ಬದಲು ಈಗಾಗಲೇ ಸಿಸ್ಟಂನಲ್ಲಿ ಇದ್ದ Mapping ಮಾಹಿತಿಯನ್ನೇ ಅಪ್ಲೋಡ್ ಮಾಡುತ್ತಿದ್ದಾರೆ. ಇದು ಸತ್ಯವಾಗಿದ್ದರೆ ಕುಟುಂಬ ಸಂಬಂಧಗಳ ಮ್ಯಾಪಿಂಗ್ನಲ್ಲಿ ದೋಷಗಳು ಉಂಟಾಗಿ, ಅನಗತ್ಯವಾಗಿ ಹೆಚ್ಚಿನ ಸಂಖ್ಯೆಯ ಮತದಾರರಿಗೆ ನೋಟಿಸ್ ಹೋಗುವ ಸಾಧ್ಯತೆ ಇದೆ.
ಒಟ್ಟಾರೆ ಎಷ್ಟು ಮಂದಿ ಬಾಧಿತರಾಗಬಹುದು?
ಲಭ್ಯವಿರುವ ಮಾಹಿತಿ ಮತ್ತು ವಿವಿಧ ವಲಯಗಳು ವ್ಯಕ್ತಪಡಿಸಿರುವ ಅಂದಾಜುಗಳನ್ನು ಒಟ್ಟುಗೂಡಿಸಿ ನೋಡಿದರೆ, ASDDO ವರ್ಗೀಕರಣದಿಂದಾಗಿ ಸುಮಾರು 70–75 ಲಕ್ಷ ಹೆಸರುಗಳು, ತಾರ್ಕಿಕ ವ್ಯತ್ಯಾಸದಿಂದಾಗಿ ಸುಮಾರು 80 ಲಕ್ಷ ಮಂದಿ ಹಾಗೂ 2002ರ ಮತಪಟ್ಟಿ ಮಾಹಿತಿ ದೊರೆಯದೆ 25 ಲಕ್ಷ ಮತದಾರರಿಗೆ ನೋಟಿಸ್ ಹೋಗುವ ಸಾಧ್ಯತೆ ಇದೆ. ಅಂದರೆ, ಒಟ್ಟು 1.8 ಕೋಟಿ ಮತದಾರರಿಗೆ ನೋಟಿಸ್ ಹೋಗಬಹುದು. ಈ ಪೈಕಿ ಸುಮಾರು 50%ರಷ್ಟು ಮತದಾರರು ತಮ್ಮ ದಾಖಲೆಗಳನ್ನು ಸಲ್ಲಿಸಿ, ಮತಪಟ್ಟಿಯಲ್ಲಿ ಹೆಸರು ಉಳಿಸಿಕೊಂಡರೂ, ಉಳಿದವರು ವಿವಿಧ ಕಾರಣಗಳಿಂದ ಅಗತ್ಯ ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗದೇ ಅಂತಿಮ ಪಟ್ಟಿಯಿಂದ ಹೊರಗುಳಿಯುವ ಅಪಾಯವಿದೆ. ಅಂದರೆ, ಅಗತ್ಯ ದಾಖಲೆಗಳನ್ನು ಒದಗಿಸಲಾಗದೆ, ಒಂದು ಕೋಟಿ ಮತದಾರರು ಮತಪಟ್ಟಿಯಲ್ಲಿ ಹೆಸರು ಕಳೆದುಕೊಳ್ಳುವ ಅಪಾಯವಿದೆ.
ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಒಂದೇ-ಒಂದು ಹೆಸರುಗಳೂ ಅಳಿಸಿಹೋಗಬಾರದು ಎಂದು ಹಲವಾರು ಸಂಘಟನೆಗಳು ರಾಜ್ಯದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಈ ರೀತಿಯಲ್ಲಿ ಕೆಲಸ ಮಾಡುತ್ತಿರುವ ಜಾಗೃತ ಕರ್ನಾಟಕ ಸಂಘಟನೆಯ ಮುತ್ತುರಾಜು ಅವರು ಈದಿನ.ಕಾಮ್ ಜೊತೆ ಮಾತನಾಡಿದ್ದು, “ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಚುನಾವಣಾ ಆಯೋಗದ ಸಂವಿಧಾನಬದ್ಧ ಕರ್ತವ್ಯ. ಆದರೆ, ಅದೇ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳು ತಪ್ಪಾಗಿ ಅಳಿದುಹೋದರೆ ಅದು ಕೇವಲ ಆಡಳಿತಾತ್ಮಕ ದೋಷವಲ್ಲ; ಪ್ರಜಾಪ್ರಭುತ್ವದ ಮೇಲಿನ ಜನರ ವಿಶ್ವಾಸವನ್ನೇ ಕುಂದಿಸುವ ಬೆಳವಣಿಗೆಯಾಗುತ್ತದೆ” ಎಂದು ಹೇಳಿದ್ದಾರೆ.
“ಚುನಾವಣಾ ಆಯೋಗವು ASDDO ವರ್ಗೀಕರಣದ ಸಂಪೂರ್ಣ ವಿವರಗಳನ್ನು ಸಾರ್ವಜನಿಕಗೊಳಿಸಬೇಕು. ತಾರ್ಕಿಕ ವ್ಯತ್ಯಾಸವನ್ನು ಗುರುತಿಸುವ ಮಾನದಂಡಗಳನ್ನು ಸ್ಪಷ್ಟಪಡಿಸಬೇಕು. ನೋಟಿಸ್ ಪಡೆದವರಿಗೆ ಸಾಕಷ್ಟು ಸಮಯ ಮತ್ತು ಸುಲಭವಾಗಿ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಯಾವುದೇ ಅರ್ಹ ಮತದಾರನ ಹೆಸರು ತಪ್ಪಾಗಿ ಅಳಿಸಿಹೋಗದಂತೆ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ವಿಶ್ವಾಸಾರ್ಹತೆಯು ಕೇವಲ ಮತದಾನದ ದಿನದ ಮೇಲೆ ಮಾತ್ರವಲ್ಲ, ಮತದಾರರ ಪಟ್ಟಿಯ ಮೇಲೂ ಅವಲಂಬಿತವಾಗಿದೆ. ಜನರಲ್ಲಿ ಹೆಚ್ಚಿನ ಆತಂಕಗಳು ಇರುವ ಈ ಸಮಯದಲ್ಲಿ, ಚುನಾವಣಾ ಆಯೋಗವು ಪಾರದರ್ಶಕ ಮಾಹಿತಿ, ಸ್ಪಷ್ಟ ಕಾರ್ಯವಿಧಾನ ಹಾಗೂ ಸಮರ್ಪಕ ಪರಿಹಾರ ವ್ಯವಸ್ಥೆಯ ಮೂಲಕ ಸಾರ್ವಜನಿಕರ ವಿಶ್ವಾಸವನ್ನು ಬಲಪಡಿಸಬೇಕು. ‘ಒಬ್ಬ ಅರ್ಹ ಮತದಾರನ ಹೆಸರೂ ತಪ್ಪಾಗಿ ಮತದಾರರ ಪಟ್ಟಿಯಿಂದ ಅಳಿಯಬಾರದು’ ಎಂಬ ತತ್ವದ ಮೇಲೆ ಕಾರ್ಯನಿರ್ವಹಿಸಬೇಕು. ಆದರೆ, ಚುನಾವಣಾ ಆಯೋಗವು ಮೋದಿ ಸರ್ಕಾರ ಕೈಗೊಂಬೆಯಾಗಿದೆ. ಬಿಜೆಪಿ ವಿರೋಧಿ ಮತಗಳನ್ನು ಅಳಿಸಿಹಾಕಿ, ಬಿಜೆಪಿಯ ಗೆಲುವಿನ ಹಾದಿಯನ್ನು ಸುಗಮ ಮಾಡಿಕೊಡಲು ನಿರಂತರವಾಗಿ ಶ್ರಮಿಸುತ್ತಿದೆ ಎಂಬ ಗಂಭೀರ ಆರೋಪಗಳಿವೆ.



