ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್ ರೂಪಿಸಿದ 'ನವ-ಕೇನ್ಸಿಯನ್ ಮಾದರಿ'ಗಳು ಇಂದು ಜಗತ್ತಿನ ಬಹುತೇಕ ಕೇಂದ್ರ ಬ್ಯಾಂಕುಗಳ ಮತ್ತು ಹಣಕಾಸು ಇಲಾಖೆಗಳ ದೈನಂದಿನ ದಿಕ್ಸೂಚಿಯಾಗಿವೆ. ಆ ಕಾರಣಕ್ಕೆ ಅವರಿಗೆ 2026ರ ಅರ್ಥಶಾಸ್ತ್ರದ ನೊಬೆಲ್ ಸ್ಮರಣಾರ್ಥ ಪುರಸ್ಕಾರ ದೊರೆತಿದೆ.
1968ರಲ್ಲಿ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪ್ರಾರಂಭವಾಯಿತು. ಇದು 58ನೇ ಪ್ರಶಸ್ತಿ. ಇಲ್ಲಿಯವರೆಗೆ 99 ಜನರಿಗೆ ನೀಡಲಾಗಿದೆ. ರಾಯಲ್ ಸ್ವೀಡಿಷ್ ಅಕಾಡೆಮಿಯು 2026ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಸ್ಮರಣಾರ್ಥ ಪ್ರಶಸ್ತಿಯನ್ನು ಅಮೆರಿಕದ ರಾಬರ್ಟ್ ಇ. ಹಾಲ್ (ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ) ಮತ್ತು ಮೈಕಲ್ ವುಡ್‌ಫೋರ್ಡ್ (ಕೊಲಂಬಿಯಾ ವಿಶ್ವವಿದ್ಯಾಲಯ) ಅವರಿಗೆ ಜಂಟಿಯಾಗಿ ಘೋಷಿಸಿದೆ.
ಅವರ ಕೊಡುಗೆಯನ್ನು ಸರಳವಾಗಿ ಹೀಗೆ ಅರ್ಥಮಾಡಿಕೊಳ್ಳಬಹುದು: ಯಾವುದೇ ದೇಶದ ಆರ್ಥಿಕತೆಯೂ ಒಂದು ಸರಳ ರೇಖೆಯಲ್ಲಿ ಸಾಗುವುದಿಲ್ಲ. ಅದು ಏಳುಬೀಳುಗಳ ‘ರೋಲರ್ ಕೋಸ್ಟರ್’ ಸವಾರಿ. ದಿಢೀರ್ ಹಿಂಜರಿತ ಉಂಟಾದಾಗ ಅದಕ್ಕೆ ಪ್ರೇರಣೆ ನೀಡಿ ಅದನ್ನು ಮುಂದಕ್ಕೆ ತಳ್ಳಬೇಕು. ಮಿತಿಮೀರಿ ಬೆಲೆ ಏರಿದಾಗ ಬ್ರೇಕ್ ಹಾಕಿ ನಿಲ್ಲಿಸಬೇಕು. ಇದನ್ನು ಸಾಮಾನ್ಯವಾಗಿ ಅರ್ಥಶಾಸ್ತ್ರದಲ್ಲಿ ‘ಆರ್ಥಿಕ ಸ್ಥಿರೀಕರಣ ನೀತಿ’ ಎಂದು ಕರೆಯುತ್ತಾರೆ. ಇಂತಹ ನಿಯಂತ್ರಣ ಸೂಕ್ತ ಸಮಯದಲ್ಲಿ ಆಗಬೇಕು. ಇಲ್ಲದೇ ಹೋದರೆ ದೇಶ ದೀರ್ಘಕಾಲದ ನಿರುದ್ಯೋಗಕ್ಕೋ ಅಥವಾ ನಿಯಂತ್ರಣ ತಪ್ಪಿದ ಹಣದುಬ್ಬರಕ್ಕೋ ಬಲಿಯಾಗುತ್ತದೆ.
ಸ್ಥಿರೀಕರಣಕ್ಕೆ ಬೇಕಾದ ನೀತಿಗಳನ್ನು ಕೇವಲ ಊಹೆಗಳ ಮೇಲೆ ರೂಪಿಸುವುದಕ್ಕೆ ಸಾಧ್ಯವಿಲ್ಲ. ಅವುಗಳು ವೈಜ್ಞಾನಿಕವಾಗಿ ಹೇಗೆ ಕೆಲಸ ಮಾಡುತ್ತದೆ ಎಂಬುದರ ಅರಿವು ಇರಬೇಕು. ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್ ಆ ಪ್ರಕ್ರಿಯೆಯನ್ನು ಗಣಿತೀಯವಾಗಿ ನಿರೂಪಿಸಿದ್ದಾರೆ. ಆ ಕಾರಣಕ್ಕೆ ಅವರಿಗೆ 2026ರ ಅರ್ಥಶಾಸ್ತ್ರದ ನೊಬೆಲ್ ಸ್ಮರಣಾರ್ಥ ಪುರಸ್ಕಾರ ದೊರೆತಿದೆ. ಇವರು ರೂಪಿಸಿದ ‘ನವ-ಕೇನ್ಸಿಯನ್ ಮಾದರಿ’ಗಳು ಇಂದು ಜಗತ್ತಿನ ಬಹುತೇಕ ಕೇಂದ್ರ ಬ್ಯಾಂಕುಗಳು ಮತ್ತು ಹಣಕಾಸು ಇಲಾಖೆಗಳ ದೈನಂದಿನ ದಿಕ್ಸೂಚಿಯಾಗಿವೆ. ರೆಪೋ ದರದ ಲೆಕ್ಕಾಚಾರದ ಹಿಂದೆಯೂ ಕೆಲಸ ಮಾಡುತ್ತಿರುವುದು ಇಂತಹುದೇ ನೀತಿ.
1. ಹಳೆಯ ಮಾದರಿಗಳು ಎಡವಿದ್ದೆಲ್ಲಿ?
ಸುಮಾರು ನೂರು ವರ್ಷಗಳ ಹಿಂದೆಯೇ ಜಾನ್ ಮೇನಾರ್ಡ್ ಕೇನ್ಸ್ ಒಂದು ಮಾತು ಹೇಳಿದ್ದರು: ಮಾರುಕಟ್ಟೆಯಲ್ಲಿ ಉತ್ಪಾದನೆಯಾಗುವ ಎಲ್ಲ ಸರಕು-ಸಾಮಗ್ರಿಗಳನ್ನು ಕೊಳ್ಳಲು ಜನರಿಂದ ತಾನಾಗಿಯೇ ಬೇಡಿಕೆ ಹುಟ್ಟಿಕೊಳ್ಳುವುದಿಲ್ಲ; ಬೇಡಿಕೆ ಮತ್ತು ಪೂರೈಕೆ ತಂತಾನೇ ಸರಿದೂಗಿಕೊಳ್ಳುತ್ತವೆ ಎಂಬುದು ಭ್ರಮೆ. ಬೇಡಿಕೆ ಕುಸಿದರೆ ಆರ್ಥಿಕತೆಯನ್ನು ಚುರುಕುಗೊಳಿಸಬೇಕು, ಆಕ್ಸಿಲರೇಟರ್ ಒತ್ತಬೇಕು. ಬೇಡಿಕೆ ಮಿತಿಮೀರಿದರೆ ಅದನ್ನು ನಿಧಾನಗೊಳಿಸಬೇಕು. ಅಂದರೆ ಬ್ರೇಕ್ ಹಾಕಬೇಕು.
ಆದರೆ 1970ರ ದಶಕದವರೆಗೆ ಅರ್ಥಶಾಸ್ತ್ರಜ್ಞರು ಬಳಸುತ್ತಿದ್ದ ಹಳೆಯ ಮಾದರಿಗಳಲ್ಲೊಂದು ದೊಡ್ಡ ತಪ್ಪು ಕಲ್ಪನೆಯಿತ್ತು. ಹಣದುಬ್ಬರ, ನಿರುದ್ಯೋಗ, ರಾಷ್ಟ್ರೀಯ ಆದಾಯದಂತಹ ಸಮಗ್ರ ಅಂಕಿಅಂಶಗಳ ನಡುವಿನ ಸಂಬಂಧ ಸದಾ ಒಂದೇ ಸಮನಾಗಿರುತ್ತದೆ ಎಂದು ಅವರು ನಂಬಿದ್ದರು. ಉದಾಹರಣೆಗೆ, ನಿರುದ್ಯೋಗ ಹೆಚ್ಚಾದಾಗ ಹಣದುಬ್ಬರ ಇಳಿಯುತ್ತದೆ (ಫಿಲಿಪ್ಸ್ ರೇಖೆ) ಎಂದೂ ಜನರ ಕೈಗೆ ಹಣ ಬಂದ ತಕ್ಷಣ ಅದಕ್ಕೆ ತಕ್ಕಂತೆ ಖರ್ಚು ಹೆಚ್ಚಿಸುತ್ತಾರೆ ಎಂದೂ ಅವರು ಭಾವಿಸಿದ್ದರು.
ಆದರೆ 1970ರ ತೈಲ ಬಿಕ್ಕಟ್ಟಿನ ಸಮಯದಲ್ಲಿ ಈ ಲೆಕ್ಕಾಚಾರಗಳು ತಿರುಗುಮುರುಗಾದವು. ನಿರುದ್ಯೋಗ ಹೆಚ್ಚುತ್ತಿತ್ತು. ಜೊತೆಗೆ ಹಣದುಬ್ಬರವೂ ವಿಪರೀತವಾಗುತ್ತಿತ್ತು. ಸರ್ಕಾರಗಳು ನೀಡಿದ ಆರ್ಥಿಕ ಪ್ರಚೋದನೆಗಳು ನಿರೀಕ್ಷೆಗೆ ವ್ಯತಿರಿಕ್ತವಾದ ಪರಿಣಾಮ ಬೀರಿದವು.
ಅರ್ಥಶಾಸ್ತ್ರಜ್ಞ ರಾಬರ್ಟ್ ಲ್ಯೂಕಾಸ್ ಒಂದು ಎಚ್ಚರಿಕೆ ನೀಡಿದರು: “ಕೇವಲ ಮೇಲ್ನೋಟದ ಒಟ್ಟಾರೆ ಅಂಕಿ-ಅಂಶಗಳನ್ನು ನೋಡಿ, ದೇಶದ ಆರ್ಥಿಕತೆಯನ್ನು ಅಳೆಯುವುದಕ್ಕೆ ಸಾಧ್ಯವಿಲ್ಲ. ಸರ್ಕಾರ ನಿಯಮ ಬದಲಿಸಿದಾಗ, ಜನರೂ ಅದಕ್ಕೆ ತಕ್ಕಂತೆ ತಮ್ಮ ಯೋಜನೆಗಳನ್ನು ಬದಲಿಸಿಕೊಳ್ಳುತ್ತಾರೆ. ಹಾಗಾಗಿ, ತಳಮಟ್ಟದಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಅಥವಾ ಸಣ್ಣ ಕಂಪನಿ ಹೇಗೆ ಯೋಚಿಸಿ ಖರ್ಚು ಮಾಡುತ್ತದೆ ಎಂಬುದನ್ನು ತಿಳಿಯದೆ, ಇಡೀ ದೇಶದ ಆರ್ಥಿಕತೆಯನ್ನು ಅಂದಾಜು ಮಾಡಲು ಸಾಧ್ಯವೇ ಇಲ್ಲ. ಈ ಅರಿವಿಲ್ಲದೆ ಯಾವುದೇ ಆರ್ಥಿಕ ಯೋಜನೆಯೂ ಯಶಸ್ವಿಯಾಗುವುದಿಲ್ಲ.
ಈಗ ಸಮಸ್ಯೆ ಅಂದರೆ ಜನರು ಖರ್ಚುಮಾಡುವ ಕ್ರಮವನ್ನು ತಿಳಿದುಕೊಳ್ಳುವುದು ಹೇಗೆ ಎಂಬುದು. ಲ್ಯೂಕಾಸ್ ಅವರ ಸವಾಲಿಗೆ ಉತ್ತರ ಕಂಡುಕೊಳ್ಳಬೇಕಾದರೆ ಈ ತೊಡಕನ್ನು ಮೊದಲು ಬಿಡಿಸಿಕೊಳ್ಳಬೇಕು.
ರಾಬರ್ಟ್ ಹಾಲ್ ಈ ವಿಚಾರವನ್ನು ಸಂಪೂರ್ಣ ಭಿನ್ನವಾದ ನೆಲೆಯಲ್ಲಿ ನೋಡಿದರು. ಅವರ ಪ್ರಕಾರ, ಜನ ಕೇವಲ ಇಂದಿನ ಆದಾಯವನ್ನು ನೋಡಿ ಖರ್ಚು ಮಾಡುವುದಿಲ್ಲ; ಬದಲಿಗೆ, ಭವಿಷ್ಯದಲ್ಲಿ ತಮಗೆ ಬರಬಹುದಾದ ಒಟ್ಟು ಆದಾಯದ ನಿರೀಕ್ಷೆಯನ್ನಿಟ್ಟುಕೊಂಡು ಇಂದಿನ ಖರ್ಚನ್ನು ನಿರ್ಧರಿಸುತ್ತಾರೆ. ಆದರೆ ಈ ‘ನಿರೀಕ್ಷೆ’ ಎಂಬುದು ಮನುಷ್ಯನ ಮನಸ್ಸಿನೊಳಗೆ ನಡೆಯುವ ಸೂಕ್ಷ್ಮ ಲೆಕ್ಕಾಚಾರವಷ್ಟೇ? ಕಣ್ಣಿಗೆ ಕಾಣದ ಈ ಮನಸ್ಸಿನ ಲೆಕ್ಕವನ್ನು ಹೊರಗಿನಿಂದ ಅಳೆಯುವುದು ಹೇಗೆ?
ಹಾಲ್ ಒಂದು ಸರಳವಾದ ವಾದವನ್ನು ಮುಂದಿಟ್ಟರು.
• ಜನರು ಭವಿಷ್ಯದ ನಿರೀಕ್ಷೆಗಳ ಆಧಾರದ ಮೇಲೆಯೇ ಖರ್ಚು ಮಾಡುವುದಾದರೆ, ಅವರ ಇಂದಿನ ಖರ್ಚು-ವೆಚ್ಚವನ್ನು ಗಮನಿಸಿದರೆ ಅವರ ಮನಸ್ಸನ್ನು ಗ್ರಹಿಸಿಕೊಳ್ಳುವುದಕ್ಕೆ ಸಾಧ್ಯ. ಅಂದರೆ ಅವರು ಮಾಡುವ ಖರ್ಚು ಅವರ ಮನಸ್ಸಿನ ನಿರೀಕ್ಷೆಗೆ ಕನ್ನಡಿ!
• ಜನರು ಭವಿಷ್ಯದ ಬಗ್ಗೆ ಆಶಾವಾದಿಗಳಾಗಿದ್ದರೆ ಹೆಚ್ಚು ಖರ್ಚು ಮಾಡುತ್ತಾರೆ, ಆತಂಕವಿದ್ದರೆ ಕೈಬಿಗಿ ಹಿಡಿಯುತ್ತಾರೆ.
• ಹೀಗಿರುವಾಗ, ಜನರ ಖರ್ಚಿನ ಕ್ರಮ ಬದಲಾಗಬೇಕೆಂದರೆ ಅವರಿಗೆ ಸಂಪೂರ್ಣ ಹೊಸ ಮತ್ತು ಅನಿರೀಕ್ಷಿತ ಮಾಹಿತಿ ಸಿಗಬೇಕು. ಅದು ಅವರ ಖರ್ಚಿನ ಮೇಲೆ ಪರಿಣಾಮ ಬೀರುತ್ತದೆ.
ಇದನ್ನು ಸರಳವಾಗಿ ಹೇಳುವುದಾದರೆ, ಒಬ್ಬ ಜಾಣ ವ್ಯಕ್ತಿ ತನ್ನ ಇಂದಿನ ಆದಾಯವಷ್ಟೇ ಅಲ್ಲ, ಭವಿಷ್ಯದಲ್ಲಿ ತನಗೆ ನಿವೃತ್ತಿಯವರೆಗೆ ಬರಬಹುದಾದ ಆದಾಯ, ಬಡ್ತಿ, ಪಿಂಚಣಿ ಎಲ್ಲವನ್ನೂ ಲೆಕ್ಕಹಾಕಿಯೇ ಇಂದಿನ ಖರ್ಚನ್ನು ನಿರ್ಧರಿಸಿರುತ್ತಾನೆ. ಹೀಗಿರುವಾಗ ಅವನ ಖರ್ಚು ದಿಢೀರನೆ ಬದಲಾಗುವುದು ಯಾವಾಗ? ಆತನ ಲೆಕ್ಕಾಚಾರವೇ ತಲೆಕೆಳಗಾಗುವಂತಹ ಯಾವುದೋ ಅನಿರೀಕ್ಷಿತ ಘಟನೆ ನಡೆದಾಗ ಮಾತ್ರ (ಉದಾಹರಣೆಗೆ: ದಿಢೀರ್ ಲಾಟರಿ ಹೊಡೆಯುವುದು, ಕೆಲಸ ಕಳೆದುಕೊಳ್ಳುವುದು, ಅಥವಾ ಗಂಭೀರ ಕಾಯಿಲೆ ಬರುವುದು). ಇಂತಹ ಅನಿರೀಕ್ಷಿತ ಘಟನೆಗಳು ಯಾವಾಗ ನಡೆಯುತ್ತವೆ ಎಂದು ಊಹಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿಯೇ ಅವನ ಖರ್ಚು ಯಾವಾಗ ಬದಲಾಗುತ್ತದೆ ಎಂಬುದನ್ನೂ ಮೊದಲೇ ಊಹಿಸಲು ಸಾಧ್ಯವಿಲ್ಲ!
ಹಾಲ್ ಅವರ ಈ ವಾದ ಸಂಪೂರ್ಣ ಸರಿಯೆಂದು ಸಾಬೀತಾಯಿತು. ಜೊತೆಗೆ, ಹಾಲ್ ಮತ್ತು ಫ್ರೆಡ್ರಿಕ್ ಮಿಶ್ಕಿನ್ (1982) ನಡೆಸಿದ ಅಧ್ಯಯನದಲ್ಲಿ ಮತ್ತೊಂದು ವಾಸ್ತವ ಬಯಲಾಯಿತು: ಸಮಾಜದಲ್ಲಿ ಸುಮಾರು 80% ಜನರು ಹೀಗೆ ಭವಿಷ್ಯವನ್ನು ಯೋಚಿಸಿ ಜಾಣ್ಮೆಯಿಂದ ಖರ್ಚು ಮಾಡಿದರೆ, ಉಳಿದ 20% ಜನರಿಗೆ ಭವಿಷ್ಯದ ಯೋಚನೆ ಮಾಡಲು ಸಾಧ್ಯವೇ ಇರುವುದಿಲ್ಲ; ಅವರು ಯಾವುದೇ ಉಳಿತಾಯವಿಲ್ಲದೆ ದಿನದ ಕೂಲಿಯನ್ನೇ ನೆಚ್ಚಿ (Hand-to-mouth) ಅನಿವಾರ್ಯವಾಗಿ ಬದುಕುತ್ತಾರೆ. ಈ ವಾಸ್ತವಿಕ ಅಳತೆಗೋಲು ಇಂದಿನ ಆರ್ಥಿಕ ಮಾದರಿಗಳ ಬಹುಮುಖ್ಯ ಅಂಗವಾಯಿತು.

2. ಮೈಕಲ್ ವುಡ್‌ಫೋರ್ಡ್ ಅವರ ಚೌಕಟ್ಟು: ಆಧುನಿಕ ಕೇಂದ್ರ ಬ್ಯಾಂಕ್‌ಗಳ ಪ್ರಯೋಗಾಲಯ
ಹಾಲ್ ಅವರ ಈ ತಳಮಟ್ಟದ ಒಳನೋಟವನ್ನು ಇಟ್ಟುಕೊಂಡು, ಮೈಕಲ್ ವುಡ್‌ಫೋರ್ಡ್ (2003) ಇಡೀ ಆರ್ಥಿಕತೆಯನ್ನು ವಿವರಿಸುವ ಮೂರು ಸರಳ ಸಮೀಕರಣಗಳ ಒಂದು ಸಮಗ್ರ ‘ನವ-ಕೇನ್ಸಿಯನ್ ಮಾದರಿ’ಯನ್ನು ಸೃಷ್ಟಿಸಿದರು. ಇದು ನೀತಿ ನಿರೂಪಕರಿಗೆ ಒಂದು ಕಂಪ್ಯೂಟರ್ ಸಿಮ್ಯುಲೇಶನ್ ಅಥವಾ ಪ್ರಯೋಗಾಲಯದಂತೆ ಕೆಲಸಮಾಡಿತು.
ವುಡ್‌ಫೋರ್ಡ್ ಮಾದರಿಯ ಮೂರು ಮುಖ್ಯ ಆಧಾರಸ್ತಂಭಗಳು:
1. ಮೊದಲನೆಯದಾಗಿ ಅವರು ಹೇಳುವಂತೆ ಹಣದ ಪೂರೈಕೆಯಲ್ಲ, ಬಡ್ಡಿದರ ಮುಖ್ಯ: ಹಿಂದೆ ರಿಸರ್ವ್ ಬ್ಯಾಂಕ್‌ಗಳು ಮಾರುಕಟ್ಟೆಯಲ್ಲಿರುವ ನೋಟುಗಳ ಚಲಾವಣೆಯನ್ನು ನಿಯಂತ್ರಿಸುತ್ತಿದ್ದವು. ಆದರೆ ನಟ್ ವಿಕ್ಸೆಲ್ ಅವರ ಸಿದ್ಧಾಂತದಿಂದ ಪ್ರೇರಿತರಾದ ವುಡ್‌ಫೋರ್ಡ್, ಕೇಂದ್ರ ಬ್ಯಾಂಕ್ ಕೇವಲ ಅಲ್ಪಾವಧಿ ಬಡ್ಡಿದರಗಳನ್ನು ಹೆಚ್ಚಿಸುವ ಮತ್ತು ಇಳಿಸುವ ಮೂಲಕ ಮೂಲಕವೇ ಜನರ ಉಳಿತಾಯ ಮತ್ತು ಖರ್ಚನ್ನು ನಿಯಂತ್ರಿಸಬಹುದು ಎಂದು ತೋರಿಸಿಕೊಟ್ಟರು. ಬಡ್ಡಿದರ ಇಳಿದರೆ ಜನ ತಕ್ಷಣವೇ ಖರ್ಚನ್ನು ಹೆಚ್ಚಿಸುತ್ತಾರೆ. ಬಡ್ಡಿದರ ಏರಿದರೆ ಉಳಿತಾಯಕ್ಕೆ ಮುಂದಾಗುತ್ತಾರೆ.
2. ಎರಡನೆಯದಾಗಿ ಬೆಲೆಗಳ ಜಡತ್ವ ಮತ್ತು ನಿರೀಕ್ಷೆಗಳು: ಕಚ್ಚಾವಸ್ತುಗಳ ಬೆಲೆ ಬದಲಾದ ತಕ್ಷಣ ಅಂಗಡಿಯವರು ಅಥವಾ ಕಂಪನಿಗಳು ಪ್ರತಿದಿನ ಬೆಲೆ ಬದಲಾಯಿಸುವುದಿಲ್ಲ (ಬೆಲೆಗಳು ಜಡವಾಗಿರುತ್ತವೆ). ಕಂಪನಿಯೊಂದು ಬೆಲೆ ಬದಲಾಯಿಸುವಾಗಲೂ, ಭವಿಷ್ಯದಲ್ಲಿ ತನ್ನ ಪ್ರತಿಸ್ಪರ್ಧಿಗಳು ಏನು ಮಾಡುತ್ತಾರೆ. ವೆಚ್ಚಗಳು ಹೇಗೆ ಬದಲಾಗಬಹುದು ಎಂದು ಯೋಚಿಸಿಯೇ ಬೆಲೆ ಏರಿಸುತ್ತಾರೆ. ಆದ್ದರಿಂದ, ಭವಿಷ್ಯದ ಬಡ್ಡಿದರಗಳ ಬಗ್ಗೆ ಕೇಂದ್ರ ಬ್ಯಾಂಕ್ ಮಾರುಕಟ್ಟೆಗೆ ನೀಡುವ ಸ್ಪಷ್ಟ ಮಾಹಿತಿ ಮತ್ತು ವಿಶ್ವಾಸಾರ್ಹತೆ (Forward Guidance) ಹಣದುಬ್ಬರ ನಿಯಂತ್ರಣಕ್ಕೆ ಅತಿಮುಖ್ಯ.
3. ಉತ್ಪನ್ನದ ಅಂತರ (Output Gap): ಒಂದು ದೇಶದ ಎಲ್ಲ ಕಾರ್ಖಾನೆಗಳು, ಸಂಪನ್ಮೂಲಗಳು ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡಿದಾಗ ಎಷ್ಟು ಉತ್ಪಾದನೆಯಾಗಬೇಕೋ, ಅದಕ್ಕೆ ‘ನೈಸರ್ಗಿಕ ಉತ್ಪಾದನೆ’ ಎನ್ನುತ್ತಾರೆ. ಪ್ರಸ್ತುತ ದೇಶದಲ್ಲಿ ನಿಜವಾಗಿ ಆಗುತ್ತಿರುವ ‘ವಾಸ್ತವಿಕ ಉತ್ಪಾದನೆ’ಗೂ ಮತ್ತು ಈ ನೈಸರ್ಗಿಕ ಸಾಮರ್ಥ್ಯಕ್ಕೂ ನಡುವಿನ ವ್ಯತ್ಯಾಸವೇ ‘ಉತ್ಪಾದನಾ ಅಂತರ’ (Output Gap).
ಮಾರುಕಟ್ಟೆಯಲ್ಲಿ ಸಾಮರ್ಥ್ಯಕ್ಕಿಂತ ಬೇಡಿಕೆ ಮಿತಿಮೀರಿದರೆ, ಕಂಪನಿಗಳು ಪೂರೈಸಲಾಗದೆ ಬೆಲೆ ಏರಿಸುತ್ತವೆ; ಆಗ ಹಣದುಬ್ಬರ ಭುಗಿಲೇಳುತ್ತದೆ.
ಅದೇ ಬೇಡಿಕೆ ಕುಸಿದು ಸಾಮರ್ಥ್ಯಕ್ಕಿಂತ ಕಡಿಮೆ ಉತ್ಪಾದನೆಯಾದರೆ, ಕಾರ್ಖಾನೆಗಳು ಬಾಗಿಲು ಹಾಕಿ ಕೆಲಸಗಾರರನ್ನು ತೆಗೆಯುತ್ತವೆ; ಇದು ಆರ್ಥಿಕ ಹಿಂಜರಿತಕ್ಕೆ ದಾರಿ ಮಾಡುತ್ತದೆ.
ಈ ಏರುಪೇರುಗಳಿಲ್ಲದೆ, ದೇಶದ ಉತ್ಪಾದನೆ ಮತ್ತು ಬೇಡಿಕೆ ಸರಿಯಾಗಿ ಸಮತೋಲನದಲ್ಲಿರುವಂತೆ (ಅಂದರೆ ಈ ಅಂತರವನ್ನು ಶೂನ್ಯದಲ್ಲಿ) ಕಾಯ್ದುಕೊಳ್ಳುವುದೇ ಕೇಂದ್ರ ಬ್ಯಾಂಕಿನ ಮುಖ್ಯ ಗುರಿ.
ಇದನ್ನು ಓದಿದ್ದೀರಾ?: ಮೋದಿ ಸರ್ಕಾರದ 200 ಅಧಿಕಾರಿಗಳು ನಮ್ಮ ಸಂಪರ್ಕದಲ್ಲಿದ್ದಾರೆ: ರಾಹುಲ್ ಗಾಂಧಿ
3. ಪೂರೈಕೆ ಆಘಾತಗಳನ್ನು ನಿಭಾಯಿಸಿದ ಬಗೆ (Supply Shocks)
ಯುದ್ಧಗಳು ಅಥವಾ ತೈಲ ಬೆಲೆ ಏರಿಕೆಯಂತಹ ಬಿಕ್ಕಟ್ಟುಗಳು ಎದುರಾದಾಗ ದೇಶದ ಸರಕು ಪೂರೈಕೆ ದಿಢೀರನೆ ಕುಸಿಯುತ್ತದೆ. ಆಗ ಜನರ ಬೇಡಿಕೆಯೇನೂ ಹೆಚ್ಚಿರುವುದಿಲ್ಲ; ಆದರೆ ಮಾರುಕಟ್ಟೆಯಲ್ಲಿ ಸಾಮಾನುಗಳ ಕೊರತೆ ಉಂಟಾಗುವುದರಿಂದ ಸಹಜವಾಗಿಯೇ ಬೆಲೆಗಳು ಗಗನಕ್ಕೇರುತ್ತವೆ.
ಇಂತಹ ಸಂದರ್ಭದಲ್ಲಿ ಹಳೆಯ ಕೇನ್ಸಿಯನ್ ಪದ್ಧತಿಯಂತೆ ಸರ್ಕಾರಗಳು ಮಾರುಕಟ್ಟೆಗೆ ಹಣ ಸುರಿದು ಉತ್ತೇಜನ ನೀಡಲು ಹೋದರೆ, ಹಣದುಬ್ಬರ ಇನ್ನಷ್ಟು ಸ್ಫೋಟಗೊಳ್ಳುತ್ತದೆ. ಆದರೆ ವುಡ್‌ಫೋರ್ಡ್ ಮಾದರಿಯು ಬೇರೆಯದೇ ದಾರಿ ತೋರುತ್ತದೆ: ಮಾರುಕಟ್ಟೆಯಲ್ಲಿ ಸಾಮಗ್ರಿಗಳ ಕೊರತೆಯಿರುವಾಗ ಬಡ್ಡಿದರ ಹೆಚ್ಚಿಸಿ ಜನರ ದುಂದುವೆಚ್ಚವನ್ನು ತಣಿಸಬೇಕು, ಆಗಲೇ ಬೆಲೆಗಳು ನಿಯಂತ್ರಣಕ್ಕೆ ಬರುತ್ತವೆ. ಈ ಸೈದ್ಧಾಂತಿಕ ಒಳನೋಟವಿದ್ದ ಕಾರಣಕ್ಕೇ, ಇತ್ತೀಚಿನ ಕೊರೊನಾ ಸಾಂಕ್ರಾಮಿಕ ಮತ್ತು ಜಾಗತಿಕ ಇಂಧನ ಬಿಕ್ಕಟ್ಟಿನ ವೇಳೆಯಲ್ಲೂ 1970ರ ದಶಕದಂತಹ ಭೀಕರ ಆರ್ಥಿಕ ದುರಂತಗಳು ಮರುಕಳಿಸದಂತೆ ವಿಶ್ವದ ಕೇಂದ್ರ ಬ್ಯಾಂಕುಗಳು ಯಶಸ್ವಿಯಾಗಿ ತಡೆದವು ಎನ್ನಲಾಗಿದೆ. ಹಾಲ್ ಮತ್ತು ವುಡ್‌ಫೋರ್ಡ್ ಅವರು ಆಕಾಶದಲ್ಲಿ ತೇಲುತ್ತಿದ್ದ ಸಮಗ್ರ ಅರ್ಥಶಾಸ್ತ್ರವನ್ನು ನೆಲಕ್ಕೆ ತಂದು, ಭೂಮಿಯ ಮೇಲಿನ ಸಾಮಾನ್ಯ ಕುಟುಂಬಗಳು ಮತ್ತು ಕಂಪನಿಗಳ ದೈನಂದಿನ ಮಾನಸಿಕ ಲೆಕ್ಕಾಚಾರಗಳ ಜೊತೆ ಬೆಸೆದರು.
ಈಗ ರಿಸರ್ವ್ ಬ್ಯಾಂಕುಗಳು ಬಡ್ಡಿದರವನ್ನು ಇಳಿಸಿ, ಏರಿಸುವ ಕ್ರಮಗಳ ಹಿಂದೆ ಇವರಿಬ್ಬರ ಗಣಿತೀಯ ಮಾದರಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ.

ಟಿ.ಎಸ್. ವೇಣುಗೋಪಾಲ್
ಕನ್ನಡದ ಪ್ರಮುಖ ಅರ್ಥಶಾಸ್ತ್ರಜ್ಞರು, ಅಂಕಣಕಾರರು ಹಾಗೂ ಲೇಖಕರು. ಅವರು ದೇಶದ ಆರ್ಥಿಕತೆ, ಜಿಡಿಪಿ (GDP) ಬೆಳವಣಿಗೆ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗಳು ಮತ್ತು ಸಾಮಾಜಿಕ-ಆರ್ಥಿಕ ಸ್ಥಿತ್ಯಂತರಗಳ ಕುರಿತು ಪ್ರಮುಖ ಮಾಧ್ಯಮಗಳಲ್ಲಿ ನಿಯಮಿತವಾಗಿ ವಿಶ್ಲೇಷಣಾತ್ಮಕ ಲೇಖನಗಳನ್ನು ಬರೆಯುತ್ತಾರೆ.



