ರಾಮಮಂದಿರ ದೇಣಿಗೆ ಸಂಗ್ರಹದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ಗಂಭೀರ ಆರೋಪ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಮಂದಿರದ ಆವರಣದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ನೌಕರರ ಕಾಲ್ ಡಿಟೇಲ್ ರೆಕಾರ್ಡ್ಗಳನ್ನು (CDR) ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಂದಿರದ ಆವರಣದಲ್ಲಿ ಕೆಲಸ ಮಾಡುತ್ತಿರುವವರ ಕಾಲ್ ರೆಕಾರ್ಡ್ಗಳನ್ನು ಪರಿಶೀಲಿಸಿದರೆ, ಅವರಲ್ಲಿ ಶೇ. 99.9ರಷ್ಟು ಜನರು ಬಿಜೆಪಿಯವರೇ ಆಗಿರುತ್ತಾರೆ ಎಂಬುದು ಸಾಬೀತಾಗುತ್ತದೆ. ಅದು ಬಯಲಾದರೆ ಬಿಜೆಪಿಯೊಳಗೆ ದೊಡ್ಡ ಸಂಚಲನವೇ ಉಂಟಾಗುತ್ತದೆ. ಈಗಾಗಲೇ ಆ ಪಕ್ಷದಿಂದ ವಲಸೆ ಆರಂಭವಾಗಿದ್ದು, ಅನೇಕರು ನಮ್ಮ ಸಂಪರ್ಕದಲ್ಲಿದ್ದಾರೆ” ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ದೇಣಿಗೆ ಹಗರಣದ ತನಿಖೆಗೆ ರಚಿಸಲಾದ SIT ಕಾರ್ಯವೈಖರಿಯನ್ನು ಪ್ರಶ್ನಿಸಿರುವ ಅಖಿಲೇಶ್, ಇದು ಕೇವಲ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ಎಂದು ಆರೋಪಿಸಿದ್ದಾರೆ. “ಈ SIT ರಚಿಸಿದ್ದು ಯಾರು? ಇದರ ಸದಸ್ಯರೊಬ್ಬರ ವಿರುದ್ಧವೇ ವಂಚನೆಯ ಪ್ರಕರಣವಿದೆ. ಇಂತಹ ವ್ಯಕ್ತಿ ತನಿಖಾ ತಂಡದಲ್ಲಿ ಮುಂದುವರಿಯಲು ಸಾಧ್ಯವೇ?” ಎಂದು ಕಿಡಿಕಾರಿದ್ದಾರೆ.
ದೇಣಿಗೆ ಹಗರಣದ ಹಿನ್ನೆಲೆಯಲ್ಲಿ ಕೆಲವರು ರಾಜೀನಾಮೆ ನೀಡುತ್ತಿರುವ ʼX’ ನಲ್ಲಿ ಪ್ರತಿಕ್ರಿಯಿಸಿರುವ ಅವರು, “ಕೇವಲ ರಾಜೀನಾಮೆ ನೀಡಿದರೆ ಸಾಲದು, ಇಡೀ ಟ್ರಸ್ಟ್ ಅನ್ನು ವಿಸರ್ಜಿಸಬೇಕು. ರಾಜೀನಾಮೆ ನೀಡಿದವರ ಸಹಿಯ ಅಡಿಯಲ್ಲಿ ನಡೆದಿರುವ ಎಲ್ಲಾ ಭೂ ವ್ಯವಹಾರಗಳು ಮತ್ತು ಇತರ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು. ರಾಜೀನಾಮೆ ಎನ್ನುವುದು ತನಿಖೆಯಿಂದ ತಪ್ಪಿಸಿಕೊಳ್ಳುವ ಮಾರ್ಗವಾಗಬಾರದು” ಎಂದಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಲೂಟಿ | ಸಿಬಿಐ ತನಿಖೆ ಕೋರಿದ ಮತ್ತೆರಡು ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್
ಬಿಜೆಪಿಯು ಚುನಾವಣಾ ಲಾಭಕ್ಕಾಗಿ ಧಾರ್ಮಿಕ ಮೌಲ್ಯಗಳನ್ನು ಕಡೆಗಣಿಸಿ, ತನ್ನ ಸಿದ್ಧಾಂತವನ್ನು ಬದಲಿಸಿಕೊಳ್ಳುತ್ತಿದೆ. ದೇಣಿಗೆ ಹಗರಣದ ತನಿಖೆಗಾಗಿ ಜೂನ್ 13ರಂದು ಲಖನೌ ವಿಭಾಗೀಯ ಆಯುಕ್ತ ವಿಜಯ್ ವಿಶ್ವಾಸ್ ಪಂತ್, ಐಜಿ ಎಸ್. ಕಿರಣ್ ಮತ್ತು ವಿಶೇಷ ಕಾರ್ಯದರ್ಶಿ (ಹಣಕಾಸು) ನೀಲ್ ರತನ್ ಅವರನ್ನೊಳಗೊಂಡ ಎಸ್ಐಟಿ ರಚಿಸಲಾಗಿತ್ತು. ಈ ಪೈಕಿ ವಿಜಯ್ ವಿಶ್ವಾಸ್ ಪಂತ್ ಅವರ ಮೇಲೆ ಫೋರ್ಜರಿ ಆರೋಪವಿದೆ. ಈ ವಂಚನೆ ಜಾಲದ ಎಫ್ಐಆರ್ನಲ್ಲಿ ಅವರನ್ನು ಆರೋಪಿ ಸಂಖ್ಯೆ 14 ಎಂದು ಹೆಸರಿಸಲಾಗಿದೆ. ಪಂತ್ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 420 (ವಂಚನೆ) ಮತ್ತು ಸೆಕ್ಷನ್ 465 (ನಕಲಿ ದಾಖಲೆ ಸೃಷ್ಟಿ) ಸೇರಿದಂತೆ ಹಲವು ಗಂಭೀರ ಸೆಕ್ಷನ್ಗಳಡಿ ಪ್ರಕರಣ ದಾಖಲಾಗಿದೆ.




