ಸಮಾಜದಲ್ಲಿ ಸಂಭಾವಿತರಂತೆ ಕಾಣುವ, ಸಮಾಜಸೇವೆಗೆ ಸದಾಸಿದ್ಧ ಎನ್ನುವ ತಿಮ್ಮನಂತಹ ಪರೋಪಕಾರಿಗಳು ಈಗ ಎಲ್ಲಾ ಕಡೆ ಕಾಣಸಿಗುತ್ತಾರೆ. ಅಂಥವರ ಅಸಲಿಯತ್ತೇನು ಎಂಬುದನ್ನು ವಿಡಂಬನಾತ್ಮಕ ಶೈಲಿಯಲ್ಲಿ ಬಿಡಿಸಿಟ್ಟಿದ್ದಾರೆ ಲೇಖಕರು…
ಕರ್ಪೂರ ಸುಟ್ಟು ದೇವರನ್ನು ಒಲಿಸಿಕೊಳ್ಳಬಹುದು; ಲಂಚ ಕೊಟ್ರು ಅಧಿಕಾರಿ ಒಲಿಯುವುದು ಕಷ್ಟ ಅಂತಿದ್ದ ತಿಮ್ಮ, ಒಮ್ಮೊಮ್ಮೆ ಕ್ರಾಂತಿಕಾರಿಯಾಗಿ ಬಿಡುತ್ತಿದ್ದ, ಅನ್ಯಾಯದ ವಿರುದ್ಧ ಉಪವಾಸ ಕುಳಿತು, ನೊಂದವರ ಕಣ್ಣೀರು ಒರೆಸುತ್ತಿದ್ದ. ವಂಚಿತ ಸಮುದಾಯಕ್ಕೆ ಸಾಂತ್ವನ ಹೇಳುತ್ತಿದ್ದ. ರೈತರ ಪರವಾದ ಧ್ವನಿಯಾಗುವ ಪ್ರಯತ್ನ ಮಾಡುತ್ತಿದ್ದ. ವಿಧವಾ ವಿವಾಹಕ್ಕೆ ಪ್ರೋತ್ಸಾಹಿಸುತ್ತಿದ್ದ, ಬಾಲ್ಯ ವಿವಾಹದ ವಿರುದ್ಧ ಎಷ್ಟೋ ಸಲ ಹರತಾಳ ಮಾಡಿ, ಬೆಳೆಯುವ ಮಕ್ಕಳ ಬದುಕು ಕಾಪಾಡಿದ್ದ.
ಪಡಿತರ ಚೀಟಿಗಾಗಿ ಸಾಲು ನಿಂತು ಬಡವರಿಗಾಗಿ ದುಡಿಯುತ್ತಿದ್ದ ಬಾಲಕಾರ್ಮಿಕರರನ್ನು ಗುರುತಿಸಿ ಮುಖ್ಯವಾಹಿನಿಗೆ ತಂದಿದ್ದ. ಸರ್ಕಾರಕ್ಕೆ ನೀತಿ ಪಾಠ ಹೇಳಿ ದಾರಿ ತೋರಿಸಿದ್ದ. ಘನ ಸರ್ಕಾರ ತಿಮ್ಮನ ಸಹಕಾರವಿಲ್ಲದೆ ಆಡಳಿತ ಮಾಡುವಂತಿರಲಿಲ್ಲ, ತಿಮ್ಮನ ಪ್ರಯತ್ನಕ್ಕೆ ಸಮಾಜ ತಲೆದೂಗಿತ್ತು.
ನಮ್ಮೂರಲ್ಲಿ ತಿಮ್ಮ ಇರುವುದು ನಮ್ಮ ಜನ್ಮ ಸಾರ್ಥಕ ಎಂದಿದ್ದರು, ಎಷ್ಟೋ ಲೀಡರ್‌ಗಳು ಬಂದು ಹೋದ್ರು ಆದರೆ, ನಮ್ಮ ಪಾಡು ಮರೆತರು, ತಿಮ್ಮ ಅಂತವನಲ್ಲ ನೌಕರಿ ಮಾಡುತ್ತಲೇ ಊರಿನ ಏಳ್ಗೆಗಾಗಿ ಮೈಮರೆತವನು ಎಂದು ಜನ ಕೊಂಡಾಡುತ್ತಿದ್ದರು.
ಆ ಊರಲ್ಲಿ ಕೋರ್ಟು ಕಚೇರಿಗೆ ಜನ ಹೋಗ್ತಿರ್ಲಿಲ್ಲ, ಪೊಲೀಸರು ಕೇಸುಗಳಿಲ್ಲದೆ ಕಂಗಾಲಾಗಿದ್ದರು. ಅಪಘಾತ, ಆತ್ಮಹತ್ಯೆಯಂತಹ ಎಲ್ಲಾ ಕೇಸ್‌ಗಳು ವಕೀಲರ ಬಳಿ ಸುಳಿಯುತ್ತಿರಲಿಲ್ಲ, ತಿಮ್ಮ ಊರಿನ ಯಾವುದೇ ಜಗಳಗಳು ಪೊಲೀಸ್ ಠಾಣೆಗೆ ಹೋಗದಂತೆ ತಾನೇ ತೇಪೆ ಹಚ್ಚಿ ಒಪ್ಪಂದ ಮಾಡಿಸುತ್ತಿದ್ದ. ಜನ ಸೇವೆಗಾಗಿ ಕಂಡಕ್ಟರ್ ಹುದ್ದೆಯನ್ನು ಬಿಟ್ಟಿದ್ದ.
ಮಾತಿನಿಂದ ಲಕ್ಷ ಜನರನ್ನು ಒಂದೆಡೆ ಸೇರಿಸಿ ಬಿಟ್ಟೂಬಿಡದೆ, ಎರಡು ತಾಸು ಮಾತನಾಡಿ, ಕೇಳುಗರ ಮನಸ್ಸು ಹೊಕ್ಕು ಆಳುತ್ತಿದ್ದ. ಉದ್ಯೋಗವಿಲ್ಲದವನು, ಮದುವೆಯಾಗದವನು, ಹೊಸ ವ್ಯಾಪಾರ ಶುರು ಮಾಡುವವನು, ರಾಜಕೀಯಕ್ಕೆ ಸೇರಬೇಕೆಂದವನು, ಆರ್ಥಿಕವಾಗಿ ದಿವಾಳಿಯಾದವನು ತಿಮ್ಮನ ಮೊರೆ ಹೋಗುತ್ತಿದ್ದರು. ಲಂಚಕ್ಕೆ ಬಲಿಯಾದವನು, ಲಂಚ ಪಡೆಯುವವನನ್ನು ಕರೆಸಿ ಬುದ್ದಿ ಹೇಳುತ್ತಿದ್ದ .
“ಕಾಗದ, ಕಡತಗಳಿಗೆ ದೇವರಿಂದ ರುಜು ಮಾಡಿಸಬಹುದು, ಲಂಚವಿಲ್ಲದೆ ಅಧಿಕಾರಿಗಳಿಂದ ಸಹಿ ಮಾಡಿಸುವುದು ಕಷ್ಟ. ನೈವೇದ್ಯವಿಲ್ಲದೆ ದೇವರನ್ನು ಕೂಗಿ ಕರೆಯಬಹುದು, ದುಡ್ಡಿಲ್ಲದೆ ಒಬ್ಬ ಕ್ಲರ್ಕನ್ನೂ ಒಲಿಸಲು ಸಾಧ್ಯವಿಲ್ಲ. ದೇವರಿಗಿಂತ ಅಧಿಕಾರಿ ದೊಡ್ಡವನಾಗಿ, ಮನುಷ್ಯರ ಸವಾರಿ ಮಾಡುತ್ತಾನೆ” ಎಂದು ತಿಮ್ಮ ನೊಂದು ನುಡಿಯುತ್ತಿದ್ದ. ತಿಮ್ಮನ ಕಳಕಳಿಗೆ ಜನರು ಮಾರು ಹೋಗಿದ್ದರು.
ತಿಮ್ಮ ಎಂಬ ಇಂತಹ ಪರೋಪಕಾರಿ ಮೊದ ಮೊದಲು ಬಸ್ ಕಂಡಕ್ಟರ್ ಆಗಿ ಕೆಲಸ ಮಾಡ್ತಿದ್ದ, ಬಸ್ಸಿನ ಕಿಟಕಿ ಗಾಜಿನಿಂದ ಟೈರ್‌ವರೆಗೂ ಎಲ್ಲವೂ ಸ್ವಂತಕ್ಕೆ ಮಾರಿಕೊಂಡು ಇಲಾಖೆಯನ್ನ ದಿವಾಳಿಯೆಬ್ಬಿಸಿದ್ದ. ಮೇಲಾಧಿಕಾರಿಗಳು ಬಂದರೆ ಲಂಚದ ಪಾಲಲ್ಲಿ ಅರ್ಧ ಕೊಟ್ಟು ಬಾಯಿ ಮುಚ್ಚಿಸಿದ್ದ. ಈ ಮುಂಚೆ ಸರ್ಕಾರಿ ಆಸ್ಪತ್ರೆಗಳಿಗೆ ಮೊಟ್ಟೆ ಪೂರೈಕೆ ಮಾಡುವ ಏಜೆಂಟ್ ಆಗಿದ್ದಾಗ, ರೋಗಿಗಳ ಪಾಲಿನ ಎಲ್ಲಾ ಮೊಟ್ಟೆಗಳನ್ನು ಖಾಸಗಿಯವರಿಗೆ ಮಾರಿ ಮೂರ್ನಾಲ್ಕು ಸೈಟು ಖರೀದಿಸಿದ್ದ. ಈತನ ಮೊಟ್ಟೆಯ ಮಹಿಮೆ ಮೇಲಾಧಿಕಾರಿಗಳಿಗೆ ಗೊತ್ತಾಗಿ ಏಜೆನ್ಸಿ ರದ್ದುಪಡಿಸಿದರು. ಅಷ್ಟರಲ್ಲಿ ತಿಮ್ಮನಿಗೂ ಅದು ಬ್ಯಾಸರಾಗಿತ್ತು.
ಊರ್ ಜನಕ್ಕೆ ತಿಮ್ಮನ ಕಂಡಕ್ಟ್ರಗಿರಿ ಇಷ್ಟವಾಗಿತ್ತು. ಕಾಸಿಲ್ದಿದ್ರು ಬಸ್ ಹತ್ತಿಸಿ ಊರ ಜನರ ಸುಖ ಸಂತೋಷ ವಿಚಾರಿಸಿ ಪುಕ್ಕಟೆ ಊರು ಮುಟ್ಟಿಸುತ್ತಿದ್ದ. ಬಸ್ಸಲ್ಲಿ ಸ್ವಂತೂರಿನ ಜನ ಹತ್ತಿದ್ರೆ ದುಡ್ಡು ಇಸ್ಕೊಳ್ಳುತ್ತಿರಲಿಲ್ಲ, “ಹೊಡ್ಲೆನ್ ಮುಖಕ ಹೆಚ್ಚಾಗ್ಯವನ ರೊಕ್ಕ ಇಟ್ಟಗ ಜೇಬಿನ್ಯಾಗ” ಅಂತಿದ್ದ. ಊರಿಗೆಲ್ಲ ಇದು “ತಿಮ್ಮನ ಬಸ್ಸು” ಎಂದು ಫೇಮಸ್ ಆಗಿತ್ತು. ಸ್ವಂತೂರಿನ ಜನಕ್ಕೆ ಮಾತ್ರ ಪುಕ್ಕಟೆ ಪ್ರಯಾಣ, ಉಳಿದ ಪ್ರಯಾಣಿಕರಿಗೆ ಚಿಲ್ಲರೆ ವಾಪಸ್ಸು ನೀಡುತ್ತಿರಲಿಲ್ಲ ದುಡ್ಡು ಕೊಟ್ಟರೂ ಟಿಕೆಟ್ ಕೊಡುತ್ತಿರಲಿಲ್ಲ. ಗೊತ್ತಿಲ್ಲದವರು ಟಿಕೆಟ್ ಎಂದು ಕೇಳಿದರೆ “ತಗ” ಅಂತ ಕಾಲಿ ಚೀಟಿ ಮೇಲೆ ತೂತು ಹಾಕಿ ಕೊಡುತ್ತಿದ್ದ. ಬಸ್ಸಿಗೆ ಬಸ್ಸು ಲೂಟಿ ಹೊಡೆದು ಇಲಾಖೆಗೆ ನಾಮ ಹಾಕುವ ಧೈರ್ಯವಾನ. ಲಂಚದ ಹಣದಲ್ಲಿ ಮೂರ್ನಾಲ್ಕು ಶಿಫ್ಟ್ ಬಾಡಿಗೆ ಓಡಿಸುತ್ತಿದ್ದ ಆದರೂ ತಿಮ್ಮ ಊರು ಜನಕ್ಕೆ “ಸಭ್ಯ ಕಂಡಕ್ಟ್ರು”.
ಇಲಾಖೆಯ ಗಿಂಬಳದಲ್ಲಿ ತನ್ನ ಸಂಬಳ ಎಷ್ಟು ಎಂದು ತಿಳಿದಿರಲಿಲ್ಲ. ಊರಿನ ಜನರೆಲ್ಲ ವರ್ಷಕ್ಕೊಮ್ಮೆ ರಾಜ್ಯೋತ್ಸವ ಆಚರಿಸಿ ಸಂಭ್ರಮದಿಂದ ಬೀಗುತ್ತಿದ್ದರು. ಇವರೆಲ್ಲಾ ಪ್ರತಿ ವರ್ಷ ‘ನಿಷ್ಠ ಕನ್ನಡಿಗʼರನ್ನು ಗುರುತಿಸಿ ಸನ್ಮಾನಿಸುವ ಕೆಲಸ ಮಾಡುತ್ತಿದ್ದರು. ತಿಮ್ಮ ಕೈ ತುಂಬಾ ದೇಣಿಗೆ ನೀಡಿ ರಾಜ್ಯೋತ್ಸವದ ಸಂಯೋಜಕರನ್ನು ಪ್ರೋತ್ಸಾಹಿಸುತ್ತಿದ್ದ. ಟಿಕೆಟ್ ಇಲ್ಲದೆ ಬಸ್ಸೇರುವ ಊರಿನ ಜನ ರಾಜ್ಯೋತ್ಸವದ ದಿನ ತಿಮ್ಮನನ್ನು ತಾಯಿ ಭುವನೇಶ್ವರಿಯ ಫೋಟೋ ಮುಂದೆ ತೆರೆದ ವಾಹನದಲ್ಲಿ ಮೆರೆಸಿದ್ರು ʼಕನ್ನಡದ ಆದರ್ಶ ಕಂಡಕ್ಟ್ರುʼ ಎಂದು ಬಿರುದು ನೀಡಿದ್ರು.
ಒಳ್ಳೆ ಮಾತುಗಾರ ತಿಮ್ಮ, ಗಾಂಧೀ ಕೋಲಿನ ಬಗ್ಗೆ ಒಂದಿಷ್ಟು ಮಾತಾಡಿದ, “ಗಾಂಧಿ ಕೋಲು ಕಳುವಾಗಿದೆ ಎಂದು ನಮ್ಮೂರಿನವರು ನೊಂದಿದ್ದಾರೆ. ಗಾಂಧಿ ಆದರ್ಶಗಳು ಕಳುವಾಗಿವೆ ಅದಕ್ಕೆ ನಾವು ಅಳಬೇಕಾಗಿದೆ, ಗಾಂಧೀ ಕೋಲಿಗಲ್ಲ. ಗಾಂಧೀ ತತ್ವಗಳು ನುಚ್ಚು ನೂರಾಗಿವೆ, ಕೋಲು ಹೋದರೆ ಏನಾಯ್ತು ಹೊಸ ಕೋಲು ಕೊಡಿಸ್ತೀನಿ, ಕನ್ನಡಕ ಕಳೆದರೆ ಕಳೀಲಿ, ಹೊಸ ಚಾಳೀಸು ಮಾಡಿಸಿ ಗಾಂಧೀಗೆ ತೊಡ್ಸಾನ…” ಎನ್ನುತ್ತಿದ್ದ .
ಕನ್ನಡಿಗರ ಔದಾರ್ಯ ಎಂತದ್ದು, ಜೇಬಲ್ಲಿ ದುಡ್ಡಿಲ್ಲದಿದ್ರು ಬಸ್ ಹತ್ತಿ ಊರು ಮುಟ್ಟುವ ಸ್ವಾಭಿಮಾನಿಗಳು ಎಂದು ತಿಮ್ಮ ಸನ್ಮಾನ ಸ್ವೀಕರಿಸಿ ಮಾತನಾಡಿದ್ದ. ಬಸ್ಸಿಗೆ ಬಸ್ಸು ಲೂಟಿ ಹೊಡೆದರು ತಿಮ್ಮನಿಗೆ ಊರಿನ ʼಆದರ್ಶ ಕಂಡಕ್ಟರ್’ ಎಂದು ಬಿರುದು ಕೊಟ್ಟಿದ್ದರಿಂದ ಈರನಿಗೆ ಸಿಟ್ಟು ಬಂದಿತ್ತು, ತಿಮ್ಮನ ವಿರುದ್ಧ ಹೋರಾಟ ಮಾಡಿದ, ಅವನ ಆಸ್ತಿ ಪಾಸ್ತಿಯೆಲ್ಲ ಅಕ್ರಮ ಎಂಬುದನ್ನು ಬಟಾಬಯಲು ಮಾಡಲು ಕರಪತ್ರ ಹಂಚಿ ಜನರಿಗೆ ತಿಳಿವಳಿಕೆ ಮೂಡಿಸಿದ. ತಿಮ್ಮನ ಋಣದಲ್ಲಿದ್ದ ಊರಿನ ಪುಕ್ಕಟೆ ಪ್ರಯಾಣಿಕರು ಈರನ ಹೋರಾಟಕ್ಕೆ ಬೆಲೆ ನೀಡಲಿಲ್ಲ. ಉದ್ಯೋಗವಿಲ್ಲದ ಈರನಿಗೆ ತಿಮ್ಮನ ಆದರ್ಶಗಳು ಹೊಟ್ಟೆ ಉರಿವಂತೆ ಮಾಡಿವೆ, ದುಡ್ಡು ಹೊಡೆಯಲು ತಿಮ್ಮನಿಗೆ ಕಳಂಕ ತರಲು ಪ್ರಯತ್ನಿಸಿದ್ದಾನೆಂದು ಊರವರು ನಿಂದನೆ ಮಾಡಿದ್ದರು.
ಆ ಊರಿನ ಜನ ಕಲೆಕ್ಟರ್ ಬಂದ್ರು ಅಷ್ಟು ಗೌರವ ನೀಡುತ್ತಿರಲಿಲ್ಲ ಕಂಡಕ್ಟರ್ ತರ್ಲೆಯನ್ನೇ ಕಲೆಕ್ಟರ್ ಅಂತ ತಿಳಿದಿದ್ರು. ಅಂಥವನ ವಿರುದ್ಧ ಗುಂಪು ಕಟ್ಟಿ ಈರ ಮಾನ ಕಳೆದುಕೊಂಡಿದ್ದ. ಊರಲ್ಲಿ ಸಣ್ಣ ಜಗಳಾದರೂ ತಿಮ್ಮ ಸಾಂತ್ವನ ಹೇಳಿ ಸುಮ್ಮನಿರುಸುತ್ತಿದ್ದ, ಊರಿನ ಶಾಸಕ ಎಲೆಕ್ಷನ್ನು ನಿಲ್ಲುವ ಮುನ್ನ ಊರ್ ಹನುಮಪ್ಪಗ ಕಾಯಿ ಹೊಡ್ಸೋದಕ್ಕು ಮೊದ್ಲು ತಿಮ್ಮನ ಮನೆಗೆ ಭೇಟಿ ನೀಡುತ್ತಿದ್ದ.
ಸಣ್ಣಪುಟ್ಟ ಪುಡಿ ರಾಜಕಾರಣಿಗಳು ತಿಮ್ಮನನ್ನು ಚುನಾವಣೆಗೆ ನಿಲ್ಲಲು ಒತ್ತಾಯಿಸುತ್ತಿದ್ದರು. ಕಂಡಕ್ಟರ್ ಹುದ್ದೆ ಬಿಟ್ಟು ಮಿನಿಸ್ಟರ್ ಪದವಿಗೆ ಏರುವ ಎಲ್ಲಾ ಲಕ್ಷಣಗಳಿರುವ ತಿಮ್ಮನಿಗೆ ರಾಜಕೀಯ ಪಕ್ಷ ಸೇರಲು ಜನ ಗಂಟು ಬಿದ್ದಿದ್ರು. “ಇಲ್ಲ ,ಇಲ್ಲ… ಸಾರಿಗೆ ಸೇವೆಯೇ ನನ್ನ ಜನ ಸೇವೆ. ಊರು ಒಳ್ಳೆಯದು ಆಗಲು ಎಲೆಕ್ಷನ್ಗೆ ನಿಲ್ಲಬೇಕೆಂದಿಲ್ಲ , ಕಂಡಕ್ಟರ್ ಆಗಿಯೇ ಮಿನಿಷ್ಟ್ರಿಗಿಂತ ಹೆಚ್ಚು ಕೆಲಸ ಮಾಡಬಹುದು” ಅಂತ ಜನರಿಗೆ ಪಾಠ ಮಾಡ್ತಿದ್ದ. ಚುನಾವಣೆಯಲ್ಲಿ ಯಾರೇ ಗೆಲ್ಲಲಿ, ಯಾರೇ ಸೋಲಲಿ ಇವನೆದುರು ತಮ್ಮ ನೋವು ನಲಿವುಗಳನ್ನೆಲ್ಲ ತೋಡಿಕೊಂಡು ಕಣ್ಣೊರೆಸಿಕೊಳ್ಳುತ್ತಿದ್ದರು.
ಗೆದ್ದವರು ಮೊದಲಿಗೆ ತಿಮ್ಮನ ಕೊರಳಿಗೆ ಹಾರ ಹಾಕಿ ಹೊತ್ತು ಕುಣಿಯುತ್ತಿದ್ದರು. ಬುಲ್ಡಿ ಈರನಿಗಂತೂ ಈ ವೇದನೆ ತಾಳಲಾರದೆ ಗಡ್ಡ ಬೋಳಿಸುವುದು ಮರೆತು ಬಿಟ್ಟಿದ್ದ, ತಲೆಗೂದಲು ಕೆದರಿ ಊರಾಚೆ ಇರುವ ಕಲ್ಯಾಣಿ ಬಂಡಿಯಲ್ಲಿ ಕೂಡುತ್ತಿದ್ದ . ಒಮ್ಮೊಮ್ಮೆ ಬಂಡೆಯ ಮೇಲೆ ಸುಮ್ಮನೆ ಕುಳಿತು ಗೊಳೊ ಎಂದು ಅಳುತ್ತಿದ್ದ , ದಾರಿಯಲ್ಲಿ ಹೋಗುವ ಜನ ಈರನ ರೂಪಕ್ಕೆ ಗಾಬರಿಯಾಗಿ ʼದೇವರು ಬಂದವನೇʼ ಎಂದು ಈರನಿಗೆ ಅಡ್ಡ ಬೀಳುತ್ತಿದ್ದರು. ಉದ್ದನೆಯ ಗಡ್ಡ, ಕೆದರಿದ ಕೂದಲಿಗೆ ಜನ ಹೆದರಿ ಹೋಳಿಗೆ ಎಡೆ ಇಟ್ಟು ಹೋಗಿದ್ದರು. ಈರನಿಗೆ ಮತ್ತೂ ಸಿಟ್ಟು ಬಂದು ಊರಲ್ಲಿ ಕಾಲಿಡುವುದಿಲ್ಲ ಎಂದು ಪ್ರಮಾಣ ಮಾಡಿದ್ದ.
ಊರಾಚೆ ಆಶ್ರಮವಾಸಿಯಾದ ಈರ, ಕುಲಗುರುವಾಗಿ ಬೆಳೆದ. ತಿಮ್ಮನ ಕುರಿತು ಈರನ ನಿಲುವು ಮುಂಚೆ ಹೆಂಗಿತ್ತು ಈಗ್ಲೂ ಹಾಗೆ ಇತ್ತು ಈರ ಊರಿನ ದೊಡ್ಡ ಯತಿಯಾಗಿ ಬೆಳೆದುಬಿಟ್ಟ, ತಿಮ್ಮ ಕೂಡ ಈರನ ಭಕ್ತನಾಗಿ ಊರು ಜನರ ಸೇವೆ ಮಾಡುತ್ತೇನೆಂದು ಆಶ್ರಮಕ್ಕೆ ದೇಣಿಗೆ ನೀಡಿದ. ತಿಮ್ಮನ ಸೇವಾ ಮನೋಭಾವ, ಆಶ್ರಮಕ್ಕೆ ನೀಡಿದ ದಾನ ದೇಣಿಗೆಗೆ ಈರ ಮಾರು ಹೋದ, ಎಷ್ಟಾಗಲಿ ನಮ್ಮವನೆ ಎಂದು ಸುಮ್ಮನಾದ. ಆಶ್ರಮಕ್ಕೆ ಕರೆಸಿ ತಿಮ್ಮನನ್ನು ವಿಶೇಷವಾಗಿ ಸನ್ಮಾನಿಸಿದ. ʻಏನೇ ಮಾಡು, ಎಷ್ಟೇ ಗಳಿಸು ಕುಲಬಾಂಧವರ ಉದ್ಧಾರ ಮಾಡುʼ ಎಂದು ಆಶೀರ್ವದಿಸಿದ.
ಒಮ್ಮೆ ತಿಮ್ಮನನ್ನು ದಸರಾ ಉತ್ಸವದಲ್ಲಿ ಸನ್ಮಾನಿಸುವಾಗ ಪೊಲೀಸ್ ವಾಹನ ಬಂತು, ತಿಮ್ಮನ ಕೈಗೆ ಕೋಳ ತೊಡಿಸಿತು. ಜನವೆಲ್ಲ ಗಾಬರಿಯಾದರು, ಸರಕಾರಿ ಬಸ್ಸು ಸ್ವಂತಕ್ಕೆ ಮಾರಿಕೊಂಡು ಇಲಾಖೆಗೆ ಪಂಗನಾಮ ಹಾಕಿ ಸ್ವಯಂ ನಿವೃತ್ತಿ ಪಡೆದಿದ್ದ. ಈರನ ಹಳೆಯ ಗುಂಪು ಕಂಪ್ಲೇಂಟ್ ಕೊಟ್ಟು ತಿಮ್ಮನನ್ನು ಜೈಲಿಗೆ ಕಳಿಸಿದ್ದರು, ಎರಡೇ ದಿನದಲ್ಲಿ ತಿಮ್ಮ ಲಂಚ ಕೊಟ್ಟು ಹೊರಗೆ ಬಂದವನು ಮತ್ತೆ ಜನಸೇವೆ ಮುಂದುವರಿಸಿದ.

ಅಜಮೀರ ನಂದಾಪುರ
ಅಧ್ಯಕ್ಷರು ಡಾ.ಸಿದ್ಧಯ್ಯ ಪುರಾಣಿಕ ಟ್ರಸ್ಟ್ ಕೊಪ್ಪಳ ಹಾಗೂ
ಸದಸ್ಯರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು.



