ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪ ಹೊತ್ತಿರುವ ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮಿಗೆ ವಿಚಾರಣಾ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವುದಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2026ರ ಮೇ 6ರಂದು ವಚನಾನಂದ ಸ್ವಾಮಿಗೆ ನಿರೀಕ್ಷಣಾ ಜಾಮೀನು ನೀಡಿ ಹೊರಡಿಸಿರುವ ಆದೇಶ ರದ್ದು ಕೋರಿ ಪ್ರಕರಣದ ಸಂತ್ರಸ್ತ ಬಾಲಕನ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿತ್ತು.
ಈ ಸಂದರ್ಭದಲ್ಲಿ, “ಪೋಕ್ಸೊ ಹಾಗೂ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡುವ ಪ್ರಶ್ನೆಯೇ ಇರುವುದಿಲ್ಲ. ಈ ಪ್ರಕರಣದಲ್ಲಿ ದೂರು ಹಾಗೂ ಎಫ್ಐಆರ್ ದಾಖಲಾಗುವ ಮುನ್ನವೇ ವಿಚಾರಣಾ ನ್ಯಾಯಾಲಯವು ಆರೋಪಿಯಾದ ವಚನಾನಂದ ಸ್ವಾಮಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದು ಖಂಡಿತವಾಗಿಯೂ ಆಘಾತಕಾರಿ” ಎಂದು ಕಳವಳ ವ್ಯಕ್ತಪಡಿಸಿದೆ.
“ಪ್ರಕರಣಲ್ಲಿ ಪೋಕ್ಸೊ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಇನ್ನಿತರ ಶಿಕ್ಷಾರ್ಹ ಅಪರಾಧವೆಸಗಿದ ಆರೋಪವಿದೆ. ಆರೋಪಿಗೆ ದೂರು ಹಾಗೂ ಎಫ್ಐಆರ್ ದಾಖಲಾಗುವ ಮುನ್ನ ನಿರೀಕ್ಷಣಾ ಜಾಮೀನು ನೀಡಲಾಗಿದೆ. ಈ ರೀತಿ ಜಾಮೀನು ಮಂಜೂರು ಮಾಡಬಾರದಿತ್ತು. ಆದರೆ, ಜಾಮೀನು ಆದೇಶದ ಫಲಾನುಭವಿಯ ವಾದ ಆಲಿಸದೆ ಯಾವುದೇ ಆದೇಶ ಹೊರಡಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅರ್ಜಿಯ ಮುಂದಿನ ವಿಚಾರಣೆ ದಿನಾಂಕದೊಳಗೆ ಪೊಲೀಸರು ವಚನಾನಂದ ಸ್ವಾಮಿಗೆ ನೋಟಿಸ್ ಜಾರಿಗೊಳಿಸಬೇಕು” ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಮುಂದೂಡಿದೆ.
ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಡಿ ಆರ್ ರವಿಶಂಕರ್, “ಪ್ರಕರಣ ಸಂಬಂಧ 2026ರ ಮೇ 7ರಂದು ದೂರು ನೀಡಲಾಗಿದೆ. ಮೇ 8ರಂದು ಎಫ್ಐಆರ್ ದಾಖಲಾಗಿದೆ. ಆದರೆ, ಅದಕ್ಕೂ ಮೊದಲೇ ಅಂದರೆ ಮೇ 6ರಂದೇ ಆರೋಪಿಗೆ ವಿಚಾರಣಾ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ” ಎಂದರು.
ಪ್ರಕರಣದ ಹಿನ್ನೆಲೆ: ಸಂತ್ರಸ್ತ ಬಾಲಕನ ತಾಯಿ 2026ರ ಮೇ 7ರಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಠಾಣೆಯಲ್ಲಿ ದೂರು ದಾಖಲಿಸಿ, “2021-2024ರ ಅವಧಿಯಲ್ಲಿ ಮಠದಲ್ಲಿ ಮಕ್ಕಳು ಶಾಲೆಗೆ ಹೋಗುವ ಮುನ್ನ ಮಠದ ಸ್ನಾನ ಗೃಹದಲ್ಲಿ ಮಕ್ಕಳ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ, ವಚನಾನಂದ ಸ್ವಾಮಿ ತಾವೂ ಸಹ ಬೆತ್ತಲೆಯಾಗಿ ಮಕ್ಕಳಿಂದ ತಮ್ಮ ದೇಹದ ಖಾಸಗಿ ಭಾಗಗಳಿಗೆ ಮಸಾಜ್ ಮಾಡಿಸಿಕೊಳ್ಳುವುದು ಹಾಗೂ ಮಕ್ಕಳ ಖಾಸಗಿ ಅಂಗಗಳನ್ನು ತಾವೂ ಮುಟ್ಟುತ್ತ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಮಕ್ಕಳು ಪ್ರತಿರೋಧ ಮಾಡಿದಾಗ ಅವರಿಗೆ ಹೊಡೆದಿದ್ದು, ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿ, ಊಟ ನೀಡದೆ ಸತಾಯಿಸಿದ್ದಾರೆ. ತಮ್ಮ ಮಗ ಹಾಗೂ ಇತರರ ಮೇಲೂ 2024ರ ಮಾರ್ಚ್ 20ರಂದು ವಚನಾನಂದ ಸ್ವಾಮಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ” ಎಂದು ಆರೋಪಿಸಿದ್ದರು.
ಇದನ್ನೂ ಓದಿದ್ದೀರಾ? ರಾಯಚೂರು | ಪದೇ-ಪದೇ ವಿದ್ಯುತ್ ವ್ಯತ್ಯಯ: ಗ್ರಾಮಸ್ಥರಿಂದ ಪ್ರತಿಭಟನೆ
ಕೃತ್ಯ ಹರಿಹರದಲ್ಲಿ ನಡೆದಿದ್ದರಿಂದ ಪ್ರಕರಣವನ್ನು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಮೇ 8ರಂದು ಎಫ್ಐಆರ್ ದಾಖಲಿಸಲಾಗಿತ್ತು.





