ಶ್ವೇತಭವನವು ಕೇವಲ ಟ್ರಂಪ್‌ನ ಆಸ್ತಿಯೇನಲ್ಲ. ಅದು ಇಡೀ ಅಮೆರಿಕದ ಪ್ರಜಾಪ್ರಭುತ್ವದ ಪ್ರತಿಬಿಂಬ. ಅದನ್ನು ಖಾಸಗಿ ಉದ್ಯಮದ ಲಾಭಕ್ಕೆ, ಕೇಜ್ ಫೈಟ್‌ನಂತಹ ರಕ್ತಸಿಕ್ತ ಕಾದಾಟದ ಪ್ರದರ್ಶನಕ್ಕೆ ಮತ್ತು ತನಗೆ ಲಾಭ ನೀಡುವ ಕಾರ್ಪೊರೇಟ್ ಬ್ರ್ಯಾಂಡಿಂಗ್‌ಗೆ ಟ್ರಂಪ್ ಬಳಸಿಕೊಂಡಿರುವುದು ಎಷ್ಟು ಸರಿ?
ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನ (ವೈಟ್‌ಹೌಸ್) ಕೇವಲ ಒಂದು ಕಟ್ಟಡವಲ್ಲ. ಇದು ಜಾಗತಿಕ ರಾಜಕಾರಣದ ಶಕ್ತಿ ಕೇಂದ್ರ ಎಂದೇ ಪರಿಗಣಿಸಲಾಗುತ್ತದೆ. 1792ರಲ್ಲಿ ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಕಾಲದಲ್ಲಿ ಶ್ವೇತಭವನದ ನಿರ್ಮಾಣ ಕಾರ್ಯ ಆರಂಭವಾಗಿದೆ. ಅದಾದ ಬಳಿಕ ಅಮೆರಿಕದ ಎರಡನೇ ಅಧ್ಯಕ್ಷ ಜಾನ್ ಆಡಮ್ಸ್ ಅವರ ಕಾಲದಿಂದ ಹಿಡಿದು ಇಂದಿನವರೆಗೂ ಪ್ರತಿಯೊಬ್ಬ ಅಮೆರಿಕದ ಅಧ್ಯಕ್ಷರೂ ಇಲ್ಲಿ ವಾಸಿಸಿದ್ದಾರೆ. ಆದರೆ ಇಷ್ಟು ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಶ್ವೇತಭವನವನ್ನು ರಕ್ತಸಿಕ್ತ ಕುಸ್ತಿ ಅಖಾಡವನ್ನಾಗಿಸಿದ, ತನ್ನ ಸ್ವಂತ ಹಿತಾಸಕ್ತಿಗೆ ವಾಣಿಜ್ಯ ಮಾರುಕಟ್ಟೆ ಮಾಡಿದ ಅಪಖ್ಯಾತಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸಲ್ಲುತ್ತದೆ!
ಅಮೆರಿಕದಲ್ಲಿ ಜಾಗತಿಕ ರಾಜತಾಂತ್ರಿಕತೆಯ ಅತ್ಯಂತ ಗೌರವಯುತ ಸಂಕೇತವೆಂದು ಪರಿಗಣಿಸಲ್ಪಟ್ಟಿರುವ ಶ್ವೇತಭವನದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (MMA) ಕದನವಾದ ‘UFC Freedom 250 ಕೇಜ್ ಫೈಟ್’ ಅಂದರೆ ಪಂಜರದೊಳಗಿನ ಕುಸ್ತಿ ಆಯೋಜಿಸಲಾಗಿತ್ತು. ಜೂನ್ 14ರಂದು ಡೊನಾಲ್ಡ್ ಟ್ರಂಪ್ 80ನೇ ಜನ್ಮದಿನ ಮತ್ತು ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸದ್ಯ ಟ್ರಂಪ್‌ನ ಈ ‘ಕೇಜ್ ಫೈಟ್’ ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗುತ್ತಿದೆ.
ಶ್ವೇತಭವನದ ದಕ್ಷಿಣ ಲಾನ್ (South Lawn) ಎನ್ನುವುದು ರೂಢಿಗತವಾಗಿ ಜಾಗತಿಕ ನಾಯಕರನ್ನು ಸ್ವಾಗತಿಸುವ, ದೇಶಕ್ಕಾಗಿ ಪ್ರಾಣತೆತ್ತ ಯೋಧರನ್ನು ಗೌರವಿಸುವ ಮತ್ತು ಅತ್ಯುನ್ನತ ರಾಜತಾಂತ್ರಿಕ ಕಾರ್ಯಕ್ರಮಗಳನ್ನು ನಡೆಸುವ ಸ್ಥಳ. ಆದರೆ ಕೇವಲ ಒಂದು ಖಾಸಗಿ ಕ್ರೀಡಾ ಸಂಸ್ಥೆಯಾದ ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್ಸ್ (UFC) ಪ್ರಚಾರಕ್ಕಾಗಿ ಡೊನಾಲ್ಡ್ ಟ್ರಂಪ್ ಶ್ವೇತಭವನವನ್ನು ಬಳಸಿಕೊಂಡಿದ್ದಾರೆ. ಐತಿಹಾಸಿಕ ಕಟ್ಟಡದ ಘನತೆಯನ್ನು ತಗ್ಗಿಸಿ, ಅದನ್ನು ಒಂದು ವಾಣಿಜ್ಯ ಮತ್ತು ರಕ್ತಸಿಕ್ತ ಕ್ರೀಡಾಂಗಣವನ್ನಾಗಿ ಪರಿವರ್ತಿಸಿರುವುದು ಯುಕ್ತವೇ?
ಇದನ್ನು ಓದಿದ್ದೀರಾ? ಭಾರತ-ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ: ಡೊನಾಲ್ಡ್ ಟ್ರಂಪ್ ಪುನರುಚ್ಚಾರ
ಕಾರ್ಯಕ್ರಮದ ಹಿಂದೆ ಅಡಿಗಿದೆ ಟ್ರಂಪ್ ವೈಯಕ್ತಿಕ ಲಾಭ!
ಅಮೆರಿಕದ 250ನೇ ಸ್ವಾತಂತ್ರ್ಯೋತ್ಸವ, ಅಮೆರಿಕ ಅಧ್ಯಕ್ಷರ ಜನ್ಮದಿನ ನೆಪದಲ್ಲಿ ಶ್ವೇತಭವನದಲ್ಲಿ ಹಿಂಸಾತ್ಮಾಕ ಕಾರ್ಯಕ್ರಮವನ್ನು ನಡೆಸಿದ್ದನ್ನು ಖಂಡಿಸುವಾಗಲೇ ಇದರ ಹಿಂದೆ ಇರುವ ಲಾಭ, ವೈಯಕ್ತಿಕ ಹಿತಾಸಕ್ತಿ ಕಡೆ ಕಣ್ಣಾಡಿಸುವುದು ಸೂಕ್ತ. ಅದಕ್ಕೆ ಸೂಕ್ತ ದಾಖಲೆಗಳೂ ಇವೆ. ಯುಎಸ್ ಆಫೀಸ್ ಆಫ್ ಗವರ್ನಮೆಂಟ್ ಎಥಿಕ್ಸ್ (OGE) ಮೇ 8ರಂದು ಬಿಡುಗಡೆ ಮಾಡಿದ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ಅಫಿಡವಿಟ್ UFC ಸಂಸ್ಥೆ ಜತೆ ಟ್ರಂಪ್‌ಗೆ ಇರುವ ನಂಟನ್ನು ಬಯಲಾಗಿಸಿದೆ.
ಟ್ರಂಪ್‌ನ ಅಫಿಡವಿಟ್ ಹೇಳುವಂತೆ, ಮಾರ್ಚ್ 25ರಂದು ಟ್ರಂಪ್ UFC ಸಂಸ್ಥೆಯ ಪೋಷಕ ಕಂಪನಿ ಟಿಕ್ಒ ಗ್ರೂಪ್ ಹೋಲ್ಡಿಂಗ್ಸ್ (TKO Group Holdings)ನಲ್ಲಿ $15,000ರಿಂದ $50,000 ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಅಂದರೆ ಶ್ವೇತಭವನದಲ್ಲಿ ನಡೆಯುವ ಈ ಪ್ರಚಾರದಿಂದ ಆರ್ಥಿಕ ಲಾಭ ಬರುವುದು ಸ್ವತಃ ಟ್ರಂಪ್‌ಗೆ! UFC ಪಂದ್ಯಾವಳಿಯ ಅಧಿಕೃತ ಘೋಷಣೆಯಾದ ಕೇವಲ ಎರಡು ವಾರಗಳಲ್ಲೇ ಟ್ರಂಪ್ ಈ ಹೂಡಿಕೆ ಮಾಡಿದ್ದಾರೆ ಎಂಬುದು ಗಮನಾರ್ಹ!
ವಿವಾದವು ಕೇವಲ $50,000 ಮೌಲ್ಯದ ಷೇರುಗಳಿಗೆ ಮಾತ್ರ ಸೀಮಿತವಾಗಿಲ್ಲ. ಇದಕ್ಕಿಂತಲೂ ದೊಡ್ಡ ಮಟ್ಟದ ಆರ್ಥಿಕ ಹಿತಾಸಕ್ತಿ ಟ್ರಂಪ್ ಕುಟುಂಬದ ಕ್ರಿಪ್ಟೋಕರೆನ್ಸಿ ವ್ಯವಹಾರದೊಂದಿಗೆ ಬೆಸೆದುಕೊಂಡಿದೆ. ಟ್ರಂಪ್ ಮತ್ತು ಅವರ ಪುತ್ರರು ಆರಂಭಿಸಿರುವ ಕ್ರಿಪ್ಟೋಕರೆನ್ಸಿ ಸಂಸ್ಥೆ ವರ್ಲ್ಡ್ ಲಿಬರ್ಟಿ ಫೈನಾನ್ಷಿಯಲ್ (World Liberty Financial). ಅಫಿಡವಿಟ್ ಹೇಳುವಂತೆ ಟ್ರಂಪ್ ಈ ಸಂಸ್ಥೆಯಲ್ಲಿ ಸುಮಾರು $50 ಮಿಲಿಯನ್‌ಗಿಂತಲೂ ಅಧಿಕ ಹೂಡಿಕೆ ಮಾಡಿದ್ದಾರೆ. ಇದೀಗ ಶ್ವೇತಭವನದ ಪಂದ್ಯಾವಳಿಯಲ್ಲಿ ಭಾಗವಹಿಸುವ UFC ಫೈಟರ್‌ಗಳಿಗೆ ನೀಡಲಾಗುವ $250,000 ವಿಶೇಷ ಬೋನಸ್ ಅನ್ನು ಟ್ರಂಪ್ ಕುಟುಂಬದ ಒಡೆತನದ ಈ ವರ್ಲ್ಡ್ ಲಿಬರ್ಟಿ ಫೈನಾನ್ಷಿಯಲ್ ಸಂಸ್ಥೆಯ USD1 ಸ್ಟೇಬಲ್‌ಕಾಯಿನ್ (Stablecoin) ರೂಪದಲ್ಲಿ ವಿತರಿಸಲಾಗುತ್ತಿದೆ. ಅಂದರೆ ಟ್ರಂಪ್ ಅವರ ಸ್ವಂತ ಕ್ರಿಪ್ಟೋ ಕಂಪನಿಗೆ ಜಾಗತಿಕ ಮಟ್ಟದ ಬಿಟ್ಟಿ ಪ್ರಚಾರ!
ಇವೆಲ್ಲವೂ ವಿವಾದವಾಗುತ್ತಿದ್ದಂತೆ ಟ್ರಂಪ್ ಅವರ ಎಲ್ಲ ಆಸ್ತಿ ಮತ್ತು ಹೂಡಿಕೆಗಳನ್ನು ಅವರ ಹಿರಿಯ ಪುತ್ರರಾದ ಡೊನಾಲ್ಡ್ ಜೂನಿಯರ್ ಮತ್ತು ಎರಿಕ್ ಟ್ರಂಪ್ ನೇತೃತ್ವದ ಸ್ವತಂತ್ರ ಟ್ರಸ್ಟ್ ನಿರ್ವಹಿಸುತ್ತಿದೆ. ಇದರಲ್ಲಿ ಅಧ್ಯಕ್ಷರ ನೇರ ಪಾತ್ರವಿಲ್ಲ ಎಂದು ಶ್ವೇತಭವನದ ವಕ್ತಾರರು ಸಮರ್ಥನೆಗೆ ಇಳಿದಿದ್ದಾರೆ. ಆದರೆ ನೇರವಾಗಿ ಹೇಳುವುದಾರೆ ಇದು ‘ಬ್ಲೈಂಡ್ ಟ್ರಸ್ಟ್’ (Blind Trust) ಅಲ್ಲ. ಅಂದರೆ ಹೂಡಿಕೆದಾರನಿಗೆ ತನ್ನ ಹಣ ಎಲ್ಲಿ ಹೂಡಿಕೆಯಾಗಿದೆ ಎಂದು ತಿಳಿಯದಂತೆ ಹೂಡಿಕೆ ಮಾಡುವ ಟ್ರಸ್ಟ್ ಏನಲ್ಲ. ಹಾಗಿದ್ದಾಗ ಟ್ರಂಪ್‌ಗೆ ತಮ್ಮ ಹಣ ಟಿಕ್ಒ ಗ್ರೂಪ್ ಹೋಲ್ಡಿಂಗ್ಸ್‌ನಲ್ಲಿದೆ ಎಂಬುದು ತಿಳಿಯದಿರುತ್ತದೆಯೇ?
ಇದನ್ನು ಓದಿದ್ದೀರಾ? ವೆನೆಜುವೆಲಾ ಮೇಲೆ ಅಮೆರಿಕ ದಾಳಿ: ಅಧ್ಯಕ್ಷ ಮಡುರೊ ದಂಪತಿ ಸೆರೆ; ಡೊನಾಲ್ಡ್ ಟ್ರಂಪ್ ಘೋಷಣೆ
ಇನ್ನೊಂದೆಡೆ ಈ ಇಡೀ ಪಂದ್ಯಾವಳಿಗೆ ‘Crypto.com’ ಪ್ರಮುಖ ಪ್ರಾಯೋಜಕತ್ವ ನೀಡಿತ್ತು. ಇದೇ ಕಂಪನಿ ಕಳೆದ 18 ತಿಂಗಳುಗಳಲ್ಲಿ ಟ್ರಂಪ್ ಚುನಾವಣಾ ನಿಧಿಗೆ ಸುಮಾರು 35 ಮಿಲಿಯನ್ ಡಾಲರ್ ದೇಣಿಗೆ ನೀಡಿದೆ. ಹಾಗಿದ್ದಾಗ ಶ್ವೇತಭವನದಂತಹ ಸಾರ್ವಜನಿಕ ಆಸ್ತಿಯನ್ನು ಟ್ರಂಪ್ ತನ್ನ ರಾಜಕೀಯ ದೇಣಿಗೆದಾರರ ವಾಣಿಜ್ಯ ಲಾಭಕ್ಕೆ ಬಳಸಿಕೊಂಡಿದ್ದು ಸ್ಪಷ್ಟ.
ಕ್ರೀಡೆಯ ಹೆಸರಿನಲ್ಲಿ ಮಾಜಿ ಪ್ರಥಮ ಮಹಿಳೆಯ ನಿಂದನೆ!
ಇಷ್ಟು ಮಾತ್ರವಲ್ಲದೆ ಕ್ರೀಡೆಯ ಹೆಸರಿನಲ್ಲಿ ಶ್ವೇತಭವನದ ಆವರಣವನ್ನು ಅಸಭ್ಯ ಮತ್ತು ರಾಜಕೀಯ ದ್ವೇಷದ ವೇದಿಕೆಯನ್ನಾಗಿ ಬಳಸಿಕೊಳ್ಳಲಾಗಿದೆ. ಪಂದ್ಯ ಮುಗಿದ ನಂತರ ಹೆವಿವೇಯ್ಟ್ ಫೈಟರ್ ಜೋಶ್ ಹೋಕಿಟ್, ರಿಂಗ್‌ನಲ್ಲೇ ಮೈಕ್ರೊಫೋನ್ ಹಿಡಿದು ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮಾ ಅವರ ವಿರುದ್ಧ ಅತ್ಯಂತ ಕೀಳು ಮಟ್ಟದ ವೈಯಕ್ತಿಕ ನಿಂದನೆಯನ್ನು ಮಾಡಿದ್ದಾರೆ.
ಮಿಷೆಲ್ ಒಬಾಮಾ ಅವರ ಲಿಂಗ ಗುರುತಿನ (Gender Identity) ಕುರಿತಾಗಿ ಸಾಮಾಜಿಕ ಮಾಧ್ಯಮದಲ್ಲಿ ದೀರ್ಘಕಾಲದಿಂದ ಬಲಪಂಥೀಯರು ಕೀಳು ಮಟ್ಟದ ಪ್ರಚಾರ ಮಾಡುತ್ತಿದ್ದಾರೆ. ಇದನ್ನು ಉಲ್ಲೇಖಿಸಿದ ಜೋಶ್ ಹೋಕಿಟ್, ಮಿಚೆಲ್ ಒಬಾಮಾ ಅವರನ್ನು ಗೌರವಯುತವಾಗಿ ಮಹಿಳೆ ಎಂದು ಕರೆಯುವ ಬದಲು ಅತ್ಯಂತ ಅಸಭ್ಯ ಹಾಗೂ ಅವಹೇಳನಕಾರಿ ಪದಗಳಿಂದ ನಿಂದಿಸಿದ್ದಾರೆ. ಅಷ್ಟಕ್ಕೂ ಪಂದ್ಯ ಮುಗಿದ ತಕ್ಷಣ ಕ್ರೀಡೆಯ ಬಗ್ಗೆ ಮಾತನಾಡುವ ಬದಲು, ಅದಕ್ಕೆ ಯಾವುದೇ ಸಂಬಂಧವಿಲ್ಲದ ರಾಜಕೀಯ ವ್ಯಕ್ತಿಗಳನ್ನು, ಅದರಲ್ಲೂ ಒಬ್ಬ ಮಹಿಳೆಯನ್ನು ವೈಯಕ್ತಿಕವಾಗಿ ನಿಂದಿಸಲು ಆ ವೇದಿಕೆಯನ್ನು ಬಳಸಿಕೊಂಡಿದ್ದು ಕ್ರೀಡಾ ಸಂಸ್ಕೃತಿಗೆ ಬಗೆದ ದ್ರೋಹವಲ್ಲವೇ? ಒಬ್ಬ ಪ್ರಭಾವಿ ಮಹಿಳೆಯನ್ನು ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಕುಗ್ಗಿಸಲು ಸೃಷ್ಟಿಸಲಾದ ಇಂತಹ ಸುಳ್ಳುಗಳನ್ನು ಅಧಿಕೃತ ವೇದಿಕೆಯಲ್ಲಿ ನಿಜವೆಂಬಂತೆ ಬಿಂಬಿಸಲು ಟ್ರಂಪ್ ಸಾಥ್ ನೀಡಿದ್ದಲ್ಲವೇ?
ಪ್ಯಾರಾಮೌಂಟ್ ಸ್ಕೈಡ್ಯಾನ್ಸ್‌ಗೆ ಬ್ರಾಡ್‌ಕಾಸ್ಟಿಂಗ್ ಹಕ್ಕು ದೊರಕಿದ್ದು ಹೇಗೆ?
ದೀರ್ಘಾವಧಿಯ ಮಾತುಕತೆಗಳ ನಂತರ, ಡೇವಿಡ್ ಎಲಿಸನ್ ನೇತೃತ್ವದ ಸ್ಕೈಡ್ಯಾನ್ಸ್ ಮೀಡಿಯಾ ಸಂಸ್ಥೆಯು ಪ್ಯಾರಾಮೌಂಟ್ ಗ್ಲೋಬಲ್ ಅನ್ನು ಸ್ವಾಧೀನಪಡಿಸಿಕೊಂಡು ಎರಡೂ ಕಂಪನಿಗಳು ಒಂದಾದವು. ವಿಲೀನ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ, ಪ್ಯಾರಾಮೌಂಟ್ ಸ್ಕೈಡ್ಯಾನ್ಸ್ ಸಂಸ್ಥೆಯು ಕ್ರೀಡಾ ಜಗತ್ತನ್ನು ಬೆರಗುಗೊಳಿಸುವಂತಹ ಒಪ್ಪಂದವನ್ನು ಪ್ರಕಟಿಸಿದೆ.
ಈ ಒಪ್ಪಂದದ ಒಟ್ಟು ಮೌಲ್ಯ ಬರೋಬ್ಬರಿ $7.7 ಬಿಲಿಯನ್ (ಸುಮಾರು 770 ಕೋಟಿ ಡಾಲರ್) ಅಂದರೆ 64,000 ಕೋಟಿಯಿಂದ 73,000 ಕೋಟಿ ರೂಪಾಯಿ. ಇದು 7 ವರ್ಷಗಳ ಸುದೀರ್ಘಾವಧಿಯ ಒಪ್ಪಂದವಾಗಿದ್ದು, ಇದರ ಸರಾಸರಿ ವಾರ್ಷಿಕ ಮೌಲ್ಯ ಸುಮಾರು $1.1 ಬಿಲಿಯನ್ (10,417 ಕೋಟಿ ರೂಪಾಯಿ) ಆಗುತ್ತದೆ.
ಅದಕ್ಕೂ ಮುಖ್ಯವಾಗಿ ಅಮೆರಿಕದ ನಿಯಂತ್ರಕ ಮಂಡಳಿಗಳು ಮತ್ತು ಟ್ರಂಪ್ ಆಡಳಿತದ ನ್ಯಾಯಾಂಗ ಇಲಾಖೆಯು ಈ ಭಾರಿ ಮೌಲ್ಯದ ವಿಲೀನ ಪ್ರಕ್ರಿಯೆಗೆ ಯಾವುದೇ ಆಂಟಿ-ಟ್ರಸ್ಟ್ ಅಡ್ಡಿಗಳಿಲ್ಲದೆ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದೆ! ಅಂದರೆ ಎರಡು ಕಂಪನಿಗಳ ವಿಲೀನ ಅಥವಾ ಸ್ವಾಧೀನದಿಂದ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸೃಷ್ಟಿಯಾಗುವುದಿಲ್ಲ ಹಾಗೂ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಅಧಿಕೃತ ಅನುಮೋದನೆ ನೀಡಿದೆ.
ಹೀಗೆ ಶ್ವೇತಭವನ, ಸರ್ಕಾರಿ ಅಧಿಕಾರ ಮತ್ತು ನೀತಿಗಳನ್ನು ಟ್ರಂಪ್ ಆಡಳಿತ ಕಾರ್ಪೊರೇಟ್ ಕಂಪನಿಗಳ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿರುವುದು, ಅದರಿಂದ ಸ್ವಂತ ಲಾಭ ಮಾಡಿಕೊಳ್ಳುತ್ತಿರುವುದು ಸ್ಪಷ್ಟ. ಅಷ್ಟಕ್ಕೂ ಶ್ವೇತಭವನವು ಕೇವಲ ಟ್ರಂಪ್‌ನ ಆಸ್ತಿಯೇನಲ್ಲ. ಅದು ಇಡೀ ಅಮೆರಿಕದ ಪ್ರಜಾಪ್ರಭುತ್ವದ ಪ್ರತಿಬಿಂಬ. ಅದನ್ನು ಖಾಸಗಿ ಉದ್ಯಮದ ಲಾಭಕ್ಕೆ, ಕೇಜ್ ಫೈಟ್‌ನಂತಹ ರಕ್ತಸಿಕ್ತ ಕಾದಾಟದ ಪ್ರದರ್ಶನಕ್ಕೆ ಮತ್ತು ತನಗೆ ಲಾಭ ನೀಡುವ ಕಾರ್ಪೊರೇಟ್ ಬ್ರ್ಯಾಂಡಿಂಗ್‌ಗೆ ಟ್ರಂಪ್ ಬಳಸಿಕೊಂಡಿರುವುದು ಎಷ್ಟು ಸರಿ?

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



