ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಲಿ ಎಂಬ ಉದ್ದೇಶದಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕುಡಿಯುವ ನೀರಿನ ಘಟಕಗಳನ್ನು ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅಳವಡಿಸಲಾಗಿದೆ. ಆದರೆ, ನಿರ್ವಹಣೆಯ ಕೊರತೆ ಮತ್ತು ತಾಂತ್ರಿಕ ಕಾರಣಗಳಿಂದ ಅರ್ಧಕ್ಕೂ ಹೆಚ್ಚು ನೀರಿನ ಘಟಕಗಳು ಸಾರ್ವಜನಿಕರ ಬಳಕೆಗೆ ಬಾರದೆ ಬಾಗಿಲು ಮುಚ್ಚಿವೆ. ಹಲವೆಡೆ ಕುಡುಕರ ಅಡ್ಡೆಯಾಗಿವೆ.
ಬೇಸಿಗೆಯಲ್ಲಿ ನದಿ, ಕೆರೆ, ಬಾವಿ, ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿ ಸಹಜವಾಗಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಕಲುಷಿತ ನೀರು ಮತ್ತು ನಿಗದಿಗಿಂತ ಅತ್ಯಧಿಕ ಪ್ರಮಾಣದಲ್ಲಿನ ಫ್ಲೋರೈಡ್, ನೈಟ್ರೇಟ್, ಗಡಸುತನ ಮತ್ತು ಕರಗಿದ ಘನ ಅಂಶಗಳು ನೀರಿನೊಂದಿಗೆ ಜನರ ಹೊಟ್ಟೆ ಸೇರದೆ ಇರಲಿ ಎಂದು ಶುದ್ಧ ಕುಡಿಯುವ ನೀರಿನ ಘಕಗಳನ್ನು ನಿರ್ಮಾಣ ಮಾಡಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ 674 ಶುದ್ಧ ಕುಡಿಯುವ ನೀರಿನ ಘಕಗಳಿದ್ದರೂ ಗ್ರಾಮೀಣ ಮತ್ತು ನಗರ ಪ್ರದೇಶಕ್ಕೆ ಜಲಮೂಲಗಳಿಂದ ಶುದ್ಧ ಕುಡಿಯುವ ನೀರು ಪೂರೈಸಲು ಸಾಧ್ಯವಾಗಿಲ್ಲ. ಏಕೆಂದರೆ 674ರಲ್ಲಿ ಗ್ರಾಮ ಪಂಚಾಯತ್ ಸುಪರ್ದಿಯಲ್ಲಿರುವ ಘಟಕಗಳು 585 ಅದರಲ್ಲಿ 304 ಕೆಲಸ ನಿರ್ವಹಿಸುತ್ತಿವೆ. ನಿರ್ವಹಣೆಯಿಲ್ಲದ 281 ಘಟಕಗಳು ಬಾಗಿಲು ಮುಚ್ಚಿವೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್), ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಾಗೂ ಸಹಕಾರಿ ಸಂಘಗಳ ಸಹಕಾರದೊಂದಿಗೆ ಕೊಪ್ಪಳಕ್ಕೆ ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜೂರಾಗಿವೆ.
ಬಹುತೇಕ ಕುಡಿಯುವ ನೀರಿನ ಘಟಕಗಳ ನಿರ್ವಹಣೆಯನ್ನು ಆಯಾ ಗ್ರಾಮ ಪಂಚಾಯಿತಿಗಳಿಗೆ ವಹಿಸಲಾಗಿದೆ. ಕೆಲವೆಡೆ ಏಜೆನ್ಸಿಗಳಿಗೆ ನೀಡಲಾಗಿದೆ. ನಿರ್ವಹಣೆಯ ಕೊರತೆ, ಜನ ನೀರು ಬಳಸದೆ ಇರುವುದು, ಕಾಯಿನ್ ಬೂತ್ ಇಲ್ಲದಿರುವುದು, ಪೈಪ್‌ಲೈನ್ ಸಮಸ್ಯೆ, ಕೆಲವು ಕಡೆ ಶುದ್ಧ ನೀರಿನ ಘಟಕಗಳಲ್ಲಿ ಕಿಟಕಿ ಗಾಜು, ಬಾಗಿಲು ಒಡೆದು ಘಟಕಗಳು ಸ್ಥಗಿತಗೊಂಡಿವೆ ಎನ್ನುತ್ತಾರೆ ಸ್ಥಳೀಯರು.
2025-26ನೇ ಸಾಲಿನಲ್ಲಿ ನಿರುಪಯುಕ್ತವಾದ ಶುದ್ಧ ಘಟಕಗಳ ದುರಸ್ತಿಗಾಗಿ ₹376.96 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪುನಃ ಆರಂಭಿಸಲು (SAP) ಎಂಬ ಸರ್ಕಾರದ ಒಂದು ವಿಶೇಷ ಕ್ರಿಯಾ ಯೋಜನೆ (Action Plan)ಯಡಿ ಸ್ಥಗಿತಗೊಂಡ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪುನಃ ಪ್ರಾರಂಭಿಸಲು (EAP) ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಆದ್ಯತೆಯ ಆಧಾರದ ಮೇಲೆ ಕಾರ್ಯನಿರ್ವಹಿಸದ ಘಟಕಗಳನ್ನು ದುರಸ್ತಿ ಮಾಡಿ ಮರುಚಾಲನೆಗೊಳಿಸಲು ಕಲ್ಯಾಣ ಕರ್ನಾಟಕ ಜಿಲ್ಲೆಯವರಿಗೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ.
ಈ ಬಗ್ಗೆ ದುರುಗೇಶ್ ಬರಗೂರು ಮಾತನಾಡಿ, “ಶುದ್ಧ ಕುಡಿಯುವ ನೀರಿನ ಘಟಕಗಳು ಹಾಳು ಬಿದ್ದು ಸುಮಾರು ವರ್ಷಗಳೇ ಕಳೆದಿವೆ. ಮನೆ ಮನೆಗೆ ಜೆಜೆಎಂ ಕೂಡ ಒಂದು ಹನಿ ನೀರು ಬರದೆ ಸ್ಥಗಿತಗೊಂಡಿದೆ. ಅದೇ ರೀತಿ ಗ್ರಾಮ ಮಟ್ಟದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಯೋಜನೆ ಜಾರಿಗೆ ತಂದರೂ ಜನರಿಗೆ ಕೆರೆ, ಬೋರವೆಲ್ ನೀರೆ ಗತಿಯಾಗಿದೆ. ಗ್ರಾಮ ಪಂಚಾಯಿತಿಯವರು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡದ ಕಾರಣಕ್ಕೆ ಬಹುತೇಕ ಘಟಕಗಳು ಬಂದ್ ಆಗಿವೆ. ಕೆಲವು ಏಜೆನ್ಸಿಯವರು ನಿರ್ವಹಣೆ ಮಾಡದೆ ಘಟಕಗಳು ಕುಡುಕರ ಅಡ್ಡೆಯಾಗಿವೆ. ಸಂಬಂಧಪಟ್ಟವರು ಕೂಡಲೇ ಈ ಕುರಿತು ಕ್ರಮ ಕೈಗೊಳ್ಳಬೇಕು” ಎಂದರು.
ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಮುಖಂಡ ನಜೀರ್ ಸಾಬ್ ಮೂಲಿಮನಿ ಮಾತನಾಡಿ, “ಸೂಕ್ತ ನಿರ್ವಹಣೆಯ ಕೊರತೆಯಿಂದ ಅರ್ಧಕ್ಕೂ ಹೆಚ್ಚು ಘಟಕಗಳ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಕೇವಲ ಹೆಸರಿಗೆ ಮಾತ್ರ ಶುದ್ಧ ನೀರಿನ ಘಟಕಗಳು. ಕೆಲವೆಡೆ ಉದ್ಘಾಟನೆಯಾದ ನಂತರ ಒಂದು ವಾರವೂ ಸರಿಯಾಗಿ ಕೆಲಸ ಮಾಡಿಲ್ಲ. ಹಾಳಾದ ಯಂತ್ರಗಳನ್ನು ದುರಸ್ತಿ ಮಾಡದ ಕಾರಣ ಅವು ತುಕ್ಕು ಹಿಡಿಯುತ್ತಿವೆ. ಸುಮ್ಮನೆ ಯೋಜನೆಗಳನ್ನು ಮಾಡುವುದಲ್ಲ. ಅವುಗಳನ್ನು ಸರಿಯಾಗಿ ಅನುಷ್ಠಾನಗೊಳಿಸಲು ಕೂಡ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ, ಯೋಜನೆ ಮಾಡಿಯೂ ಅನರ್ಥವಾಗುತ್ತದೆ. ಈ ಬಗ್ಗೆ ನಗರಸಭೆ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ನೀಡಿದ್ದೆವು. ಆದರೂ ಸಮಸ್ಯೆ ಬಗೆಹರಿಯಲಿಲ್ಲ. ಯಂತ್ರಗಳು ಸರಿಯಾಗಿವೆಯೇ, ಹಾಳಾಗಿವೆಯೇ ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲ. ಸುಮ್ಮನೆ ಕಟ್ಟಿ ಬಿಟ್ಟಿದ್ದಾರಷ್ಟೇ” ಎಂದು ಬೇಸರ ವ್ಯಕ್ತಪಡಿಸಿದರು.

ಗ್ರಾಮಗಳಲ್ಲಿ ಸ್ಥಾಪಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕೆಲವು ಕಡೆಗಳಲ್ಲಿ ಅವು ಕುಡುಕರ ಅಡ್ಡವಾಗಿದ್ದು, ಇನ್ನೂ ಕೆಲವು ಕಡೆಗಳಲ್ಲಿ ಹಂದಿಗಳು ಮಲಗುವ ತಾಣಗಳಾಗಿ ಮಾರ್ಪಟ್ಟಿವೆ ಎಂದು ಹೇಳಿದರು.
ಪ್ರತಿ ಶುದ್ಧ ನೀರಿನ ಘಟಕಕ್ಕೆ ಸಂಬಂಧಿಸಿದ ಗ್ರಾಮದಿಂದ ಒಬ್ಬರನ್ನು ನೇಮಕ ಮಾಡಿ, ಅದರ ನಿರ್ವಹಣೆಗೆ ಜವಾಬ್ದಾರಿ ನೀಡಬೇಕೆಂದು ಅವರು ಸಲಹೆ ನೀಡಿದರು. ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದರ ಜೊತೆಗೆ, ಘಟಕಗಳ ಸರಿಯಾದ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದರು.
ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಘಟಕಗಳು ಸರಿಯಾಗಿ ಉಪಯೋಗವಾಗದೆ ಹಾಳಾಗುತ್ತಿರುವುದು ದುಃಖಕರ ಸಂಗತಿಯಾಗಿದೆ. ಸರ್ಕಾರ ಹೊಸ ಯೋಜನೆಗಳನ್ನು ಜಾರಿಗೆ ತರುವ ಬದಲು, ಈಗಾಗಲೇ ಇರುವ ಘಟಕಗಳ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಸರಕಾರಿ ಕಚೇರಿಗಳಲ್ಲಿಯೂ ಸಹ, ಹಳೆಯ ಶುದ್ಧ ನೀರಿನ ಘಟಕಗಳು ನಿರ್ವಹಣೆ ಕೊರತೆಯಿಂದ ನಿಷ್ಕ್ರಿಯವಾಗಿರುವ ಸಂದರ್ಭದಲ್ಲಿ, ಅದೇ ಆವರಣದಲ್ಲಿ ಹೊಸ ಘಟಕಗಳನ್ನು ನಿರ್ಮಿಸಿರುವ ಹಲವು ಉದಾಹರಣೆಗಳಿವೆ ಎಂದು ಹೇಳಿದರು.
ಪ್ರಸ್ತುತ ಬೇಸಿಗೆ ಹಿನ್ನಲೆಯಲ್ಲಿ, ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಕ್ಷಣ ಸರಿಪಡಿಸಿ, ಸಾರ್ವಜನಿಕರಿಗೆ ಕುಡಿಯುವ ನೀರು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಇದನ್ನೂ ಓದಿ: ಕೊಪ್ಪಳ | 3 ತಿಂಗಳ ಮಗುವಿನೊಂದಿಗೆ ಭಿಕ್ಷಾಟನೆ: ಪೊಲೀಸರಿಂದ ಮಗು ರಕ್ಷಣೆ
ಫ್ಲೋರೈಡ್‌ಯುಕ್ತ ಕಲುಷಿತ ನೀರನ್ನೇ ಕುಡಿಯುವ ಅನಿವಾರ್ಯತೆಯಲ್ಲಿರುವ ಗ್ರಾಮೀಣ ಜನತೆಗೆ ಈ ಘಟಕಗಳು ಸಂಜೀವಿನಿಯಾಗಬೇಕಿತ್ತು. ಆದರೆ, ತಾಂತ್ರಿಕ ದೋಷ ಮತ್ತು ಗ್ರಾಮ ಪಂಚಾಯಿತಿಗಳ ನಿರ್ಲಕ್ಷ್ಯದಿಂದಾಗಿ ಅರ್ಧಕ್ಕೂ ಹೆಚ್ಚು ಘಟಕಗಳು ಸ್ತಬ್ಧವಾಗಿರುವುದು ದುರದೃಷ್ಟಕರ. 2025-26ನೇ ಸಾಲಿನಲ್ಲಿ ದುರಸ್ತಿಗಾಗಿ ಬಿಡುಗಡೆಯಾಗಿರುವ ₹376.96 ಲಕ್ಷ ಅನುದಾನ ಮತ್ತು ಸರ್ಕಾರದ ವಿಶೇಷ ಕ್ರಿಯಾ ಯೋಜನೆ (SAP) ಬೇಸಿಗೆಯ ಬಿಸಿ ಏರುವ ಮೊದಲೇ ಕಾರ್ಯರೂಪಕ್ಕೆ ಬರಬೇಕಿದೆ. ರೈತ ಮುಖಂಡರು ಸೂಚಿಸಿದಂತೆ, ಪ್ರತಿ ಘಟಕಕ್ಕೆ ಸ್ಥಳೀಯ ಯುವಕರನ್ನು ನಿರ್ವಾಹಕರನ್ನಾಗಿ ನೇಮಿಸಿ ಹೊಣೆಗಾರಿಕೆ ನೀಡುವುದು ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಬಲ್ಲದು. ಹೊಸ ಯೋಜನೆಗಳನ್ನು ಘೋಷಿಸುವ ಉತ್ಸಾಹದ ಜೊತೆಗೆ, ಹಳೆಯ ಆಸ್ತಿಪಾಸ್ತಿಗಳನ್ನು ರಕ್ಷಿಸುವ ಇಚ್ಛಾಶಕ್ತಿಯನ್ನು ಆಡಳಿತ ಮಂಡಳಿ ಪ್ರದರ್ಶಿಸಬೇಕಿದೆ. ಆಗ ಮಾತ್ರ ಜನತೆಗೆ ಶುದ್ಧ ನೀರು ಸಿಗಲು ಸಾಧ್ಯ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್



