ಉತ್ತರ ಪ್ರದೇಶದ ಪ್ರಸ್ತುತ ರಾಜಕೀಯ ಆಳ-ಅಗಲ ಹಾಗೂ ಚುನಾವಣಾ ಸಮೀಕರಣಗಳನ್ನು ಗ್ರಹಿಸಲು 'ದಿ ಇಂಡಿಯನ್ ಎಕ್ಸ್‌ಪ್ರೆಸ್'ನ ಹಿರಿಯ ಪತ್ರಕರ್ತೆ ವಂದಿತಾ ಮಿಶ್ರ ಅವರು ಆ ರಾಜ್ಯದ ಆರು ಜಿಲ್ಲೆಗಳಲ್ಲಿ ಸುದೀರ್ಘ ಪ್ರವಾಸ ಕೈಗೊಂಡಿದ್ದರು. ಅಲ್ಲಿನ ಸಾಮಾನ್ಯ ನಾಗರಿಕರು, ಯುವ ಸಮೂಹ ಹಾಗೂ ಉದ್ಯಮಿಗಳೊಂದಿಗೆ ಅವರು ಮುಖಾಮುಖಿ ಸಂವಾದಗಳನ್ನು ನಡೆಸಿದ್ದರು. ಈ ಪ್ರವಾಸ ಮತ್ತು ಚರ್ಚೆಗಳಲ್ಲಿ ಕಣ್ಣಾರೆ ಕಂಡ ನೆಲಮಟ್ಟದ ವಾಸ್ತವ ಸ್ಥಿತಿ, ಜನರ ಆಳವಾದ ಅಸಮಾಧಾನಗಳು ಹಾಗೂ ರಾಜಕೀಯ ಒಳಗುದಿಗಳನ್ನು ಒಗ್ಗೂಡಿಸಿ ಅವರು ‘ಗ್ರೌಂಡ್ ರಿಪೋರ್ಟ್’ ಬರೆದಿದ್ದಾರೆ. ಅವರ ಲೇಖನದ ಸಾರ ಇಲ್ಲಿದೆ.
ಪ್ರಸ್ತುತ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇವೆ. ಕಳೆದ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸ್ಥಾನಗಳು ಗಣನೀಯವಾಗಿ ಕುಸಿದಿರುವುದು ನಿಜವಾದರೂ, ಪ್ರಸ್ತತ ಸಂದರ್ಭದಲ್ಲಿ, ಸಮಾಜವಾದಿ ಪಕ್ಷ (ಎಸ್‌ಪಿ) ನೇತೃತ್ವದ ವಿರೋಧ ಪಕ್ಷಗಳು ಪ್ರಬಲವಾಗಿ ಗೆಲ್ಲುತ್ತವೆ ಎಂಬುದಕ್ಕಿಂತ ಮಿಗಿಲಾಗಿ, ಮೂರು ಬಾರಿ ಮೋದಿಯವರ ಮತ್ತು ಎರಡು ಬಾರಿ ಯೋಗಿಯವರ ನೇತೃತ್ವವನ್ನು ಕಂಡಿರುವ ಬಿಜೆಪಿ ತನ್ನನ್ನು ತಾನೇ ಸೋಲಿಸಿಕೊಳ್ಳಬಹುದಾದ ಸ್ಥಿತಿಯಲ್ಲಿದೆ. ಅಲ್ಲಿ ವಿರೋಧ ಪಕ್ಷಗಳಿಗಿಂತ ಹೆಚ್ಚಾಗಿ ‘ಬಿಜೆಪಿ ವರ್ಸಸ್ ಬಿಜೆಪಿ’ ಎಂಬ ಹೊಸದೊಂದು ಆಂತರಿಕ ಅಸಮಾಧಾನದ ಪಿಸುಮಾತುಗಳು ಕೇಳಿಬರುತ್ತಿವೆ.
ಇತ್ತೀಚೆಗೆ ನಡೆದ NEET ಪರೀಕ್ಷೆಯ ರದ್ದತಿ ಮತ್ತು ಮರುಪರೀಕ್ಷೆಯ ನಿರ್ಧಾರವು ವಿದ್ಯಾರ್ಥಿಗಳು, ಅವರ ಕುಟುಂಬಗಳು ಹಾಗೂ ಸಮಾಜದ ಇತರ ವರ್ಗದ ಜನರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿದೆ. ಈ ಆತಂಕವು ಉತ್ತರ ಪ್ರದೇಶದ ಸರ್ಕಾರಿ ಪರೀಕ್ಷೆಗಳಲ್ಲಿ ಪದೇ ಪದೇ ನಡೆಯುವ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಗಳ ರದ್ದತಿ ಹಾಗೂ ಫಲಿತಾಂಶಗಳ ವಿಳಂಬದಂತಹ ದೀರ್ಘಕಾಲದ ಅಭದ್ರತೆಗಳೊಂದಿಗೆ ಕೈಜೋಡಿಸಿ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ.
ಜೊತೆಗೆ, ಎಲ್ಲೋ ದೂರದಲ್ಲಿ ನಡೆತ್ತಿರುವ ಯುದ್ಧದ ಪರಿಣಾಮಗಳಿಂದಾಗಿ ದಿನೇದಿನೇ ಉಲ್ಬಣಗೊಳ್ಳುತ್ತಿರುವ ಬೆಲೆ ಏರಿಕೆಯು ಸಾಮಾನ್ಯ ಜನರ ಗೃಹ ಬಜೆಟ್‌ಗಳ ಮೇಲೆ ಭಾರೀ ಹೊರೆಯಾಗಿ ಪರಿಣಮಿಸಿದೆ. ಇದು ಜಾತಿ ಮತ್ತು ವರ್ಗ ಶ್ರೇಣಿಯಲ್ಲಿ ಕೆಳಸ್ತರದಲ್ಲಿರುವ ಬಡ ಜನರನ್ನು ನಿತ್ಯದ ಬದುಕಿಗಾಗಿ ಅತ್ಯಂತ ಕಠಿಣ ಆಯ್ಕೆಗಳನ್ನು ಮಾಡವಂತೆ ಮಾಡಿದೆ. ಅನಿಶ್ಚಿತತೆಗಳಿಂದ ಕಂಗೆಟ್ಟಿರುವ ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ, ಭವಿಷ್ಯಕ್ಕೆ ಭದ್ರತೆ ನೀಡುವ ‘ಸರ್ಕಾರಿ’ ಉದ್ಯೋಗಾವಕಾಶಗಳು ಸಂಪೂರ್ಣವಾಗಿ ಕುಸಿಯುತ್ತಿರುವುದರ ಬಗ್ಗೆ ಯುವ ಪೀಳಿಗೆ ತೀವ್ರ ಕಳಕಳಿ ವ್ಯಕ್ತಪಡಿಸುತ್ತಿದೆ.
ಮತ್ತೊಂದೆಡೆ, ರಾಜ್ಯದಲ್ಲಿ ಅಧಿಕಾರಿಶಾಹಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದ್ದು, ಸರ್ವಶಕ್ತ ಮುಖ್ಯಮಂತ್ರಿ ಕಚೇರಿಯು (CMO) ಶಾಸಕರು ಮತ್ತು ಮಂತ್ರಿಗಳ ರೆಕ್ಕೆಗಳನ್ನು ಕತ್ತರಿಸಿದೆ ಎಂಬ ಭಾವನೆ ಜನರಲ್ಲಿದೆ. ಯೋಗಿ ಆಡಳಿತದ ಅವಧಿಯಲ್ಲಿ ಕೆಳಮಟ್ಟದಲ್ಲಿ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗಿದೆ ಎಂದು ಜನರು ಮುಕ್ತವಾಗಿ ಮಾತನಾಡಿಕೊಳ್ಳುತ್ತಿದ್ದಾರೆ.
ಇದೆಲ್ಲದರ ನಡುವೆ, ಪ್ರಾದೇಶಿಕ ಪಕ್ಷಗಳನ್ನು ಸರಣಿಯಾಗಿ ಒಡೆಯುವ ಮೂಲಕ, ತನಗೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗದ ಸಂಸದೀಯ ಬಹುಮತವನ್ನು ಆಕ್ರಮಣಕಾರಿಯಾಗಿ ಜೋಡಿಸುತ್ತಿರುವ ಆಡಳಿತಾರೂಢ ಬಿಜೆಪಿಗೆ ಸದ್ಯಕ್ಕಿರುವ ಸಮಾಧಾನದ ಸಂಗತಿಯೆಂದರೆ, ಈ ಅಸಮಾಧಾನಗಳು ಇನ್ನೂ ಸಂಪೂರ್ಣವಾಗಿ ಸರ್ಕಾರದ ವಿರುದ್ಧದ ಆಕ್ರೋಶವಾಗಿ ಬದಲಾಗಿಲ್ಲ. ಇಂದಿಗೂ ಅನೇಕರು ‘ವ್ಯವಸ್ಥೆ’ ಮತ್ತು ‘ಸರ್ಕಾರ’ದ ನಡುವೆ ವ್ಯತ್ಯಾಸವನ್ನು ಗುರುತಿಸುತ್ತಿದ್ದಾರೆ. ಆಡಳಿತ ನಡೆಸುವ ನಾಯಕರನ್ನು ದೋಷಮುಕ್ತಗೊಳಿಸಲು ವ್ಯವಸ್ಥೆಯ ಲೋಪದೋಷಗಳ ಮೇಲೆಯೇ ಗೂಬೆ ಕೂರಿಸುತ್ತಿದ್ದಾರೆ.
ಇದಕ್ಕೆ ಪ್ರಮುಖ ಕಾರಣ ರಾಜಕೀಯ ಪರ್ಯಾಯದ ಕೊರತೆ. ಸಮಾಜವಾದಿ ಪಕ್ಷವು ಇಂದಿಗೂ ಮುಸ್ಲಿಂ-ಯಾದವ್ ಪಕ್ಷ ಎಂಬ ತನ್ನ ಹಳೆಯ ಇಮೇಜ್‌ನಿಂದ ಹೊರಬರಲು ಸಾಧ್ಯವಾಗಿಲ್ಲ ಎಂದೇ ಜನರು ಭಾವಿಸುತ್ತಿದ್ದಾರೆ. ವಿಶೇಷವಾಗಿ, ವಾರಾಣಸಿ ಮತ್ತು ಗೋರಖ್‌ಪುರದಲ್ಲಿ, ಚಾಲ್ತಿಯಲ್ಲಿರುವ ಬೃಹತ್ ಕಲ್ಯಾಣ ಯೋಜನೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಮೂಲಸೌಕರ್ಯಗಳನ್ನು ಪ್ರಸ್ತಾಪಿಸುವ ಜನರು ಮೋದಿ-ಯೋಗಿ ಆಡಳಿತದ ಅನಿವಾರ್ಯತೆಯನ್ನು ಒತ್ತಿಹೇಳುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ, ಯೋಗಿ ಸರ್ಕಾರದ ‘ಬಿಗಿ ಪ್ರಶಾಸನ’ ಮತ್ತು ಕಾನೂನು ಸುವ್ಯವಸ್ಥೆಯ ಮೇಲಿನ ಬಲವಾದ ಹಿಡಿತವು ಇಂದಿಗೂ ಜನರ ಮೆಚ್ಚುಗೆ ಮತ್ತು ಬೆಂಬಲವನ್ನು ಗಳಿಸುತ್ತಲೇ ಇದೆ.
ಆದಾಗ್ಯೂ, ಹಳೆಯ ಬೆಂಬಲದ ಮರೆಯಲ್ಲಿ ಹತ್ತಿಕ್ಕಲ್ಪಟ್ಟ ಹೊಸ ಕೋಲಾಹಲವನ್ನು ಮೀರಿ, ಮತ್ತೊಂದು ರೀತಿಯ ಧ್ವನಿಗಳ ಸರಣಿಯು ಈಗ ದೃಢವಾಗಿ ಕೇಳಿಬರುತ್ತಿದೆ. ತಮ್ಮನ್ನು ತಾವು ಬಿಜೆಪಿಯ ‘ನಿಷ್ಠಾವಂತರು’ ಅಥವಾ ‘ಕಟ್ಟಾ ಬಿಜೆಪಿಗರು’ ಎಂದು ಕರೆದುಕೊಳ್ಳುವವರೇ ಈಗ ತಮ್ಮ ಮಾತುಗಳ ಕೊನೆಯಲ್ಲಿ ‘ಆದರೆ…’ ಎಂಬ ತಕರಾರನ್ನು ಜೋಡಿಸುತ್ತಿದ್ದಾರೆ.
ಲಕ್ನೋದ ಹಳೆಯ ಹೆಗ್ಗುರುತಾದ ಶರ್ಮಾಜಿಯವರ ಚಹಾ ಅಂಗಡಿಯಲ್ಲಿ ಮುಂಜಾನೆ ಕುಲ್ಹಡ್ ಚಹಾ ಹೀರುತ್ತಾ ಆಸ್ತಿ ವ್ಯವಹಾರ ಮಾಡುವ ನೀರಜ್ ಎಂಬುವವರು, ‘ದೇಶ ಮತ್ತು ದೇಶದ ಯುವಜನರು ಮುಂದೆ ಹೋಗುತ್ತಿಲ್ಲ. ಅಭಿವೃದ್ಧಿ ಕಾಣುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸುತ್ತಾರೆ.
ಅವರ ಜೊತೆಗಿದ್ದ ಬ್ಯಾಂಕ್ ಉದ್ಯೋಗಿ ದೀಪ್, “ಕೇಂದ್ರದಲ್ಲೂ, ರಾಜ್ಯದಲ್ಲೂ ಸರ್ಕಾರಗಳನ್ನು ಬದಲಾಯಿಸುತ್ತಿರಬೇಕು, ಇಲ್ಲದಿದ್ದರೆ ಸರ್ವಾಧಿಕಾರ ಬರುತ್ತದೆ. ದೊಡ್ಡ ಕೈಗಾರಿಕೆಗಳೆಲ್ಲ ದಕ್ಷಿಣ ಮತ್ತು ಪಶ್ಚಿಮ ಭಾರತದತ್ತ ಮುಖ ಮಾಡುತ್ತಿದ್ದು, ಉತ್ತರ ಪ್ರದೇಶಕ್ಕೆ ಯಾರೂ ಬರುತ್ತಿಲ್ಲ” ಎನ್ನುತ್ತಾರೆ.
ಉತ್ತರ ಪ್ರದೇಶದ ಕಾನೂನು ಸುವ್ಯವಸ್ಥೆಯ ಬಗ್ಗೆ ಮಾತನಾಡುವ ನೀರಜ್, “ಅಪರಾಧಿಗಳ ಕಾಲಿಗೆ ಗುಂಡು ಹಾರಿಸಿ ಅರೆ ಎನ್‌ಕೌಂಟರ್ ಮಾಡುವುದು, ಬುಲ್ಡೋಜರ್ ಬಳಸಿ ಮನೆಗಳನ್ನು ಕೆಡವುವುದು ಸ್ವಲ್ಪ ಅತಿಯಾಗಿಯೇ ಆಯ್ತು. ಒಂದು ಮನೆ ಕಟ್ಟುವುದು ಎಷ್ಟು ಕಷ್ಟ ಎಂಬುದು ಕಟ್ಟಿದವರಿಗೇ ಗೊತ್ತು. ಮುಖ್ಯವಾಗಿ ಇಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ” ಎಂದು ಬೇಸರ ವ್ಯಕ್ತಪಡಿಸುತ್ತಾರೆ. ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಹತ್ತಿಕ್ಕಲಾಗುತ್ತಿದೆ ಮತ್ತು ಸರ್ಕಾರವನ್ನು ಪ್ರಶ್ನಿಸಿದರೆ ತಕ್ಷಣ ದೇಶದ್ರೋಹಿ ಎಂಬ ಪಟ್ಟ ಕಟ್ಟಲಾಗುತ್ತಿದೆ ಎಂಬುದು ಅವರ ಆಕ್ರೋಶ.
ಕಾನ್ಪುರದ ಕಾಕಾದೇವ್ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ವ್ಯವಹಾರದಲ್ಲಿರುವ ದಿವ್ಯಾಂಶು ಅವರ ಪ್ರಕಾರ, “ಹಿಂದಿನ ಎಸ್‌ಪಿ ಆಡಳಿತದಲ್ಲಿದ್ದ ಗೂಂಡಾಗಿರಿಗೆ ಹೋಲಿಸಿದರೆ ಈ ಸರ್ಕಾರ ಸುರಕ್ಷತೆ ನೀಡಿದೆ ನಿಜ. ಆದರೆ, ಭ್ರಷ್ಟಾಚಾರ ಮತ್ತು ಅಧಿಕಾರಿಗಳಿಗೆ ನೀಡಬೇಕಾದ ಕಮಿಷನ್ ಗಣನೀಯವಾಗಿ ಹೆಚ್ಚಾಗಿದೆ. ‘ಬಿಜೆಪಿ ಸರ್ಕಾರ ಹೋದರೆ ನಾವು ಅಸುರಕ್ಷಿತರಾಗುತ್ತೇವೆ’ ಎಂಬುದನ್ನು ನಮ್ಮ ಇಚ್ಛೆಗೆ ವಿರುದ್ಧವಾಗಿಯೇ ನಮ್ಮ ತಲೆಯಲ್ಲಿ ತುಂಬಲಾಗಿದೆ. ನಮ್ಮನ್ನು ಬ್ರೈನ್‌ವಾಶ್ ಮಾಡಲಾಗಿದೆ” ಎಂದು ಅವರು ತಮ್ಮ ಅಸಹಾಯಕತೆಯನ್ನು ಒಪ್ಪಿಕೊಳ್ಳುತ್ತಾರೆ.
ನಗರದ ಝಡ್ ಸ್ಕ್ವೇರ್ ಮಾಲ್‌ನಲ್ಲಿ ಸಿಕ್ಕ ಉದ್ಯಮಿಗಳ ಗುಂಪಿನಲ್ಲಿಯೂ ಇದೇ ಭ್ರಮನಿರಸನ ಎದ್ದುಕಾಣುತ್ತಿತ್ತು. “ಕಾನ್ಪುರದಲ್ಲಿ ಒಂದು ಕಿಲೋಮೀಟರ್‌ನಷ್ಟು ಸುಗಮ ರಸ್ತೆಯೂ ಇಲ್ಲ. ಅಧಿಕಾರಿಗಳು ನಿರಂಕುಶ ಪ್ರವೃತ್ತಿ ಹೊಂದಿದ್ದಾರೆ. ರಸ್ತೆಯ ದುಸ್ಥಿತಿಯನ್ನು ತೋರಿಸಿದರೆ, ಹೆದ್ದಾರಿಯ ಕಡೆಗೆ ನೋಡಿ ಎಂದು ನಮಗೆ ಹೇಳಲಾಗುತ್ತದೆ. ಈಗ ಅನಿವಾರ್ಯತೆಯಿಂದ ನಾವು ‘ಜೈ ಶ್ರೀ ರಾಮ್’ ಎಂದು ಹೇಳಬೇಕಾಗಿ ಬಂದಿದೆ” ಎನ್ನುತ್ತಾರೆ ಉದ್ಯಮಿ ವಿನೀತ್.
ವಾರಾಣಸಿಯ ಕಂಪನಿ ಬಾಗ್‌ನಲ್ಲಿ ಮುಂಜಾನೆಯ ಮಹಿಳೆಯರ ಯೋಗ ತರಗತಿಯಲ್ಲಿ ಸಿಕ್ಕ ಶಾಲಿನಿ, ಯೋಗಿ ಸರ್ಕಾರದ ಕಟ್ಟುನಿಟ್ಟಾದ ಶೈಲಿಯನ್ನು ಶ್ಲಾಘಿಸುತ್ತಲೇ, “ಸರ್ಕಾರದ ಭಯ ಎಲ್ಲೆಡೆ ಆವರಿಸಿದೆ. ವಿರೋಧ ಪಕ್ಷವಾಗಲಿ ಅಥವಾ ಮಾಧ್ಯಮವಾಗಲಿ ಧ್ವನಿ ಎತ್ತಿದರೆ ಅವರ ಮೇಲೆ ಮೊಕದ್ದಮೆಗಳನ್ನು ಹೂಡಿ, ಮನೆಗಳ ಮೇಲೆ ದಾಳಿ ನಡೆಸಿ ಪವಾಡದಂತೆ ನಗದು ಅಥವಾ ಮದ್ಯವನ್ನು ವಶಪಡಿಸಿಕೊಳ್ಳಲಾಗುತ್ತದೆ” ಎಂಬ ಕಠೋರ ಸತ್ಯವನ್ನು ಬಿಚ್ಚಿಡುತ್ತಾರೆ.
ಅಸ್ಸಿ ಘಾಟ್ ಬಳಿಯ ಪ್ರಸಿದ್ಧ ‘ಪಪ್ಪು ಕಿ ದುಕಾನ್’ನಲ್ಲಿ (ಚಹಾ ಅಂಗಡಿ) ಚರ್ಚೆಯಲ್ಲಿ ನಿರತರಾಗಿದ್ದ ಧ್ರುವ್ ಎಂಬುವವರು, “ಯೋಗಿ ಎಂದಿಗೂ ಶಿಕ್ಷಣ, ಉದ್ಯೋಗ ಅಥವಾ ಬೆಲೆ ಏರಿಕೆಯ ಬಗ್ಗೆ ಮಾತನಾಡುವುದಿಲ್ಲ. ರಸ್ತೆಯಲ್ಲಿ ನಮಾಜ್ ಮಾಡುವುದನ್ನು ನಿಷೇಧಿಸುವ ಈ ಧೋರಣೆಯನ್ನು ನಾಳೆ ಬರುವ ಮತ್ತೊಂದು ಸರ್ಕಾರ ಹಿಂದು ಹಬ್ಬಗಳ ಮೇಲೆಯೂ ಹೇರಿದರೆ ಏನಾಗಬಹುದು?” ಎಂದು ಆತಂಕ ವ್ಯಕ್ತಪಡಿಸುತ್ತಾರೆ.
ಈ ಲೇಖನ ಓದಿದ್ದೀರಾ?: ಪ್ಯಾಲೆಸ್ತೀನ್ ಮಕ್ಕಳ ನರಮೇಧ: ಇಸ್ರೇಲ್ ಕುತಂತ್ರ ಬೆತ್ತಲೆ ಮಾಡಿದ ನ್ಯಾ. ಎಸ್ ಮುರಳೀಧರ್ ಯಾರು?
ಗೋರಖ್‌ಪುರದಲ್ಲಿ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಬೋಧಿಸುವ ವಿನಯ್, ಪ್ರಶ್ನೆಪತ್ರಿಕೆ ಸೋರಿಕೆಗಳಿಂದಾಗಿ ತಮ್ಮ ಮಗಳ ಭವಿಷ್ಯದ ಬಗ್ಗೆ ಆತಂಕಗೊಂಡಿದ್ದಾರೆ. ವ್ಯವಸ್ಥೆಯನ್ನು ಸುಧಾರಿಸುವ ಪ್ರತಿಯೊಂದು ಅವಕಾಶವನ್ನು ಬಿಜೆಪಿ ಕಳೆದುಕೊಂಡಿದೆ ಎನ್ನುವ ಅವರು, “ಪ್ರಾದೇಶಿಕ ಪಕ್ಷಗಳನ್ನು ಒಡೆಯುವ ಬಿಜೆಪಿಯ ಪ್ರವೃತ್ತಿಯು ಅಧಿಕಾರವನ್ನು ಕಾಯಂ ಆಗಿ ತನ್ನ ಬಳಿಯೇ ಇಟ್ಟುಕೊಳ್ಳುವ ಹಠದಂತೆ ಕಾಣುತ್ತಿದೆ” ಎನ್ನುತ್ತಾರೆ.
ವಾರಾಣಸಿಯ ಪರಿಶಿಷ್ಟ ಜಾತಿಯ ಮಾಲಿನ್ ಬಸ್ತಿಯಲ್ಲಿ ವಾಸಿಸುವ ದಿನೇಶ್ ಮತ್ತು ಅವರ ಪತ್ನಿ, “ನಮಗೆ ಕೇವಲ ಬೆಲೆ ಏರಿಕೆಯಷ್ಟೇ ಉಡುಗೊರೆಯಾಗಿ ಸಿಕ್ಕಿದೆ. ಉಚಿತ ಪಡಿತರದಿಂದಲೇ ಜೀವನ ಸಾಗುವುದಿಲ್ಲ. ಸರ್ಕಾರ ಬಡವರ ಕಡೆ ಗಮನ ಹರಿಸುತ್ತಿಲ್ಲ” ಎಂದು ಅಳಲು ತೋಡಿಕೊಳ್ಳುತ್ತಾರೆ.
ಬಿಜೆಪಿ ಬೆಂಬಲಿಗರಲ್ಲಿನ ಈ ಆಂತರಿಕ ಅಸಮಾಧಾನವು ಸದ್ಯಕ್ಕೆ ತಣ್ಣಗಿದ್ದರೂ, ಪರ್ಯಾಯದ ಹುಡುಕಾಟದಲ್ಲಿ ಜನ ಒದ್ದಾಡುತ್ತಿರುವುದು ಸ್ಪಷ್ಟವಾಗಿದೆ. ಆದರೆ, ಸಾರ್ವಜನಿಕ ಚರ್ಚೆಯ ಮತ್ತು ಪ್ರತಿಭಟನೆಯ ಸ್ಥಳಗಳು ಒಂದೊಂದಾಗಿ ಇಲ್ಲವಾಗುತ್ತಿರುವ ಉತ್ತರ ಪ್ರದೇಶದಲ್ಲಿ, ಪ್ರಸ್ತುತ ಈ ಭಿನ್ನಾಭಿಪ್ರಾಯದ ಧ್ವನಿಗಳಿಗೆ ಮುಕ್ತವಾಗಿ ಹೊರಹೊಮ್ಮಲು ಯಾವುದೇ ಜಾಗವೇ ಇಲ್ಲದಂತಾಗಿದೆ.
ರಾಜಕೀಯ ಮತ್ತು ಬೌದ್ಧಿಕ ಕೇಂದ್ರವಾಗಿದ್ದ ಪ್ರಯಾಗ್‌ರಾಜ್‌ನಲ್ಲಿ ಹಿಂದೆ ವಿದ್ಯಾರ್ಥಿ ನಾಯಕರು ಚರ್ಚಿಸುತ್ತಿದ್ದ ಚಹಾ ಅಂಗಡಿಗಳ ರಾತ್ರಿ ಜೀವನ ಈಗ ಇಲ್ಲವಾಗಿದೆ. ನಿತ್ಯವೂ ಜನಸಾಮಾನ್ಯರ ಸಂಸತ್ತಿನಂತೆ ನಡೆಯುತ್ತಿದ್ದ ‘ಪುಲಿಯಾ ಪಾರ್ಲಿಮೆಂಟ್’ ನಿಂತುಹೋಗಿದೆ. ಐತಿಹಾಸಿಕ ರ್‍ಯಾಲಿಗಳಿಗೆ ಸಾಕ್ಷಿಯಾಗಿದ್ದ ಪಿ.ಡಿ. ಟಂಡನ್ ಪಾರ್ಕ್ ಅನ್ನು ಈಗ ಸುಂದರಗೊಳಿಸಿ, ಪ್ರತಿಭಟನೆಗಳನ್ನು ನಗರದ ಮೂಲೆಗೆ ತಳ್ಳಲಾಗಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಭಿನ್ನಾಭಿಪ್ರಾಯ ಅಥವಾ ಅಸಮಾಧಾನವು ಬಿಜೆಪಿಯ ಛತ್ರಿಯಡಿಯಲ್ಲೇ ಇದ್ದರೂ ಸಹ, ಇಂದು ತನಗೆ ತಾನೇ ಒಂದು ಹೆಸರನ್ನು ಕೊಟ್ಟುಕೊಳ್ಳಲು ಅಥವಾ ಬಹಿರಂಗವಾಗಿ ಧ್ವನಿ ಎತ್ತಲು ಹೆದರುತ್ತಿರುವ ಪರಿಸ್ಥಿತಿ ಯುಪಿಯಲ್ಲಿ ನಿರ್ಮಾಣವಾಗಿದೆ.



