ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಸ್ಥಾನದಿಂದ ‘ಹೊರಹಾಕಬೇಕು’ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಹೇಳಿದ್ದಾರೆ ಎನ್ನಲಾದ ಆಡಿಯೊ ತುಣುಕೊಂದು ಇಂದು(ಜೂ.29) ವೈರಲ್ ಆಗಿದ್ದು, ರಾಜ್ಯ ಕಮಲ ಪಾಳಯದಲ್ಲಿ ಭಾರಿ ಸಂಚಲನ ಹಾಗೂ ಆಘಾತ ಮೂಡಿಸಿದೆ.
ವೈರಲ್ ಆಗಿರುವ ಆಡಿಯೊದಲ್ಲಿ ಸದಾನಂದ ಗೌಡರು ‘ಪ್ರದೀಪ್ ಜಿ’ ಎಂಬುವವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದ್ದು, ಈ ಸಂಭಾಷಣೆಯಲ್ಲಿ ವಿಜಯೇಂದ್ರ ಅವರ ಹೆಸರನ್ನು ಪ್ರಸ್ತಾಪಿಸಲಾಗಿದೆ. “ನವೆಂಬರ್‌ಗೆ ಅವರ (ವಿಜಯೇಂದ್ರ) ಅಧ್ಯಕ್ಷ ಸ್ಥಾನದ ಮೂರು ವರ್ಷದ ಅವಧಿ ಪೂರ್ಣಗೊಳ್ಳಲಿದೆ. ಇನ್ನೆರಡು ತಿಂಗಳು ನಾವು ಏಕೆ ಗೊಂದಲ ಸೃಷ್ಟಿಸಬೇಕು? ಮುಂದಿನ ಎರಡು ತಿಂಗಳು ಸುಮ್ಮನಿದ್ದು ಅವರನ್ನು ಹೊರಕಳುಹಿಸಬೇಕು. ಆಗ ಅವರ ಅವಧಿಯೂ ಮುಗಿಯುವುದರಿಂದ ಅಧ್ಯಕ್ಷರ ಪದಚ್ಯುತಿಯ ಬಗ್ಗೆ ಯಾರೂ ದೂರುವುದಿಲ್ಲ ಹಾಗೂ ಪಕ್ಷದೊಳಗೆ ಗೊಂದಲಗಳೂ ಇರುವುದಿಲ್ಲ. ಜುಲೈ, ಆಗಸ್ಟ್, ಸೆಪ್ಟೆಂಬರ್.. ಅಕ್ಟೋಬರ್‌ನಲ್ಲಿ ಅವರನ್ನು ಕಿತ್ತು ಹಾಕಿ” ಎಂದು ಆಡಿಯೊದಲ್ಲಿ ಹೇಳಲಾಗಿದೆ.
ಇದನ್ನು ಓದಿದ್ದೀರಾ? ಜಗತ್ತೇ ಸಂಭ್ರಮಿಸುವ ಫಿಫಾ ವಿಶ್ವಕಪ್: ಭಾರತದ ತಂಡ ಯಾಕೆ ಆಡುತ್ತಿಲ್ಲ?
ಆದರೆ, ಈ ಆಡಿಯೊದಲ್ಲಿರುವ ಧ್ವನಿ ತಮ್ಮದೇ ಎಂಬ ಆರೋಪವನ್ನು ಡಿ.ವಿ. ಸದಾನಂದ ಗೌಡರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಈ ಕುರಿತು ದೂರು ನೀಡುತ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ನಾನು ಏಕೆ ದೂರು ನೀಡಬೇಕು? ಅದು ನನ್ನ ಪ್ರತಿದಿನದ ಕೆಲಸವೇ? ಇದರ ತನಿಖೆಯಾಗಬೇಕು. ಆದರೆ ಈ ವಿಚಾರವನ್ನು ಮುಚ್ಚಿಹಾಕಬೇಕು ಎಂದು ನಾನು ಹೇಳುತ್ತಿಲ್ಲ, ಇದರಲ್ಲಿ ಗಂಭೀರ ವಿಚಾರಗಳಿವೆ. ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸಬಾರದು. ಈ ಬಗ್ಗೆ ರಾಷ್ಟ್ರೀಯ ಮಟ್ಟದ ನಾಯಕರು ನನ್ನನ್ನು ಕೇಳಿದರೆ ಮಾತ್ರ ನಾನು ಸ್ಪಷ್ಟೀಕರಣ ನೀಡುತ್ತೇನೆ” ಎಂದು ಖಾರವಾಗಿ ಉತ್ತರಿಸಿದ್ದಾರೆ.
ಇತ್ತೀಚೆಗಷ್ಟೇ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿನ ಅಡ್ಡಮತದಾನದ ಆಘಾತದಿಂದಲೇ ಬಿಜೆಪಿ ಇನ್ನೂ ಹೊರಬಂದಿಲ್ಲ. ಪರಿಷತ್ ಚುನಾವಣೆಯಲ್ಲಿ ಒಟ್ಟು 11 ಮಂದಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಡ್ಡಮತದಾನ ಮಾಡಿದ್ದರು ಮತ್ತು ಒಬ್ಬ ಬಿಜೆಪಿ ಶಾಸಕರ ಮತ ಅಸಿಂಧುವಾಗಿತ್ತು. ಈ ಬಗ್ಗೆ ಸತ್ಯಶೋಧನಾ ಸಮಿತಿಯು ಮಧ್ಯಂತರ ವರದಿ ನೀಡಿದ್ದರೂ, ಅಡ್ಡಮತದಾನ ಮಾಡಿದವರ ವಿರುದ್ಧ ಪಕ್ಷವು ಇದುವರೆಗೂ ಯಾವುದೇ ಅಧಿಕೃತ ಕ್ರಮ ಕೈಗೊಂಡಿಲ್ಲ.ಇದರ ಬೆನ್ನಲ್ಲೇ ರಾಜ್ಯ ನಾಯಕತ್ವದ ಬಗ್ಗೆ ಕೆಲವು ಹಿರಿಯ ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಲಾರಂಭಿಸಿದ್ದಾರೆ.




