ಕಾಕ್ರೋಚ್ ಜನತಾ ಪಾರ್ಟಿ ಈ ಜನರೇಷನ್ ನ ಸಣ್ಣ ವಿದ್ಯಮಾನವಾಗಿ ಜಾರಿಯಾಗಿದ್ದು ಕಾಡ್ಗಿಚ್ಚಿನಂತೆ ಹಬ್ಬಲು, ಈ ಯುವಕರ ಅವಲಂಬನೆಯ ವಿಶ್ವ ಹೆಚ್ಚು ವ್ಯಾಪಕವಾಗಿ ವಿಸ್ತರಣೆಗೊಂಡಿರುವುದೇ ಕಾರಣ ಆಗಿದೆ. ಹಾಗಾಗಿ ಜನರೇಷನ್ ಝೆಡ್ ಜೊತೆ ಎದುರು ಹಾಕಿಕೊಳ್ಳುವವರು ನಾಮಾವೇಷವಾಗುವಂತೆ ಮಾಡುವ ತಾಕತ್ತು ಈ ಯುವ ಸಮೂಹದಲ್ಲಿದೆ.
ಯಾವುದೇ ಕ್ರಾಂತಿ ಸಂಭವಿಸುವುದರ ಹಿಂದೆ ಮುಖ್ಯವಾಗಿ ಸಮಾನತೆಯ ಆಶಯ ಮುಖ್ಯವಾಗುತ್ತದೆ. ಬಹುಷಃ ಈ ಜನರೇಷನ್ ಗೆ ಫ್ರೆಂಚ್ ಕ್ರಾಂತಿಯಿಂದ ಉಂಟಾದ ರಾಜಶಾಹಿಗಳ ವಿರುದ್ದದ ಹೋರಾಟ, ಆ ನಂತರ ರೂಪುಗೊಂಡ ವಸಾಹತುಸಾಹಿ ವಿರುದ್ದದ ಹೋರಾಟ, ಸ್ಥಳೀಯತೆ, ಪ್ರಾದೇಶಿಕತೆ, ದೇಶೀಯ ನೆಲೆಯ ಅಸ್ಮಿತೆಗಳ ಜೊತೆ ಪ್ರಜಾಪ್ರಭುತ್ವದ ಆಶಯಗಳು ನೇರವಾಗಿ ಪ್ರಭಾವ ಬೀರದಿದ್ದರೂ ಸಾಮಾಜಿಕ ಜಾಲತಾಣಗಳಿಂದ ಇದರ ಬಗ್ಗೆ ಹೊಸತನದ ಅರಿವು ಪಡೆದುಕೊಂಡಿದೆ.
ಆನಂತರ ಬಂದ ಮಾರ್ಕ್ಸ್ ವಾದ, ಭಾರತೀಯ ಸಮಾಜವಾದ, ಗಾಂಧೀಜಿಯ ಸತ್ಯಾಗ್ರಹ ಕಲ್ಪನೆಗಳು ಹಾಗೂ ವಿಶ್ವದಾದ್ಯಂತ ಪ್ರಜಾಪ್ರಭುತ್ವ ದ ಹೋರಾಟ ಹಲವು ಆಶಯಗಳನ್ನು ಬಿತ್ತಿ ಪ್ರಪಂಚದಾದ್ಯಂತ ದೇಶಗಳಿಗೆ ಅವರದೇ ಸಂವಿಧಾನ ಪ್ರಜೆಗಳೆ ಆಯ್ಕೆ ಮಾಡುವ ವಿಧಾನಗಳನ್ನು ಮುನ್ನಡೆಸಿತು. ಈ ಧೋರಣೆಗಳು ಜೆನ್ ಝೀಗಳು ತಮ್ಮದೇ ರೀತಿಯಲ್ಲಿ ಅರ್ಥಮಾಡಿಕೊಂಡಿವೆ.
ಇವೆಲ್ಲ ತೀವ್ರವಾದ ಹೋರಾಟ, ಸಂಘರ್ಷ, ಅಹಿಂಸಾವಾದದ ಕಲ್ಪನೆಗಳಿಂದ ರೂಪುಗೊಂಡಿದೆ ಎಂದು ಅದಕ್ಕೆ ಗೊತ್ತಿದೆ. ಇದನ್ನು ಈಗ ವಿಶ್ವದಾದ್ಯಂತ ಸಾಮಾಜಿಕ ಜಾಲತಾಣಗಳಿಂದ ಅರಿಯುತ್ತಿರುವ ಜೆನ್ ಝೀ ಚಳವಳಿಯಾಗಿ ಹೇಗೆ ಹುಟ್ಟಿತು. ಇದೆಲ್ಲದರ ಪ್ರಭಾವ ಈ ಸಂಘಟನೆಗಳ ಮೇಲೆ ಆಗುತ್ತಿದೆಯಾ? ಅನ್ನುವುದನ್ನು ನೋಡಲು ಹೊರಟರೆ ಹಲವು ಮಗ್ಗಲುಗಳು ಗೋಚರವಾಗುತ್ತದೆ.
ಜನರೇಷನ್ ಝೆಡ್ ಎನ್ನುವುದು 1997-2012 ರಲ್ಲಿ ಹುಟ್ಟಿದವರು. ಇದರ ನಂತರದ ಜನರೇಷನ್ ಅಲ್ಪಾ ಜನರೇಷನ್ ಎಂದು. ಈ ಜನರೇಷನ್ ಝೆಡ್ ಕಾಲಕ್ಕೆ ಸ್ಮಾರ್ಟ್ ಪೋನ್ ಗಳು ಎಲ್ಲರ ಕೈಗೆ ಸಿಕ್ಕಿತ್ತು. ಈ ಸ್ಮಾರ್ಟ್ ಪೋನುಗಳು ಮುಖ್ಯವಾಗಿ ಜಗತ್ತಿನ ಬೇರೆ ಬೇರೆ ಸಂಸ್ಕೃತಿ, ಜನಜೀವನ, ಆಡಳಿತ ವಿಚಾರಗಳು, ಕ್ರಾಂತಿಗಳು ಎಲ್ಲವನ್ನು ಸಂಕ್ಷಿಪ್ತ ವಾಗಿ ವಿಡಿಯೋಗಳ ಮೂಲಕ ಯುವಕ- ಯುವತಿಯರ ಬಳಿ ಬರಲು ಶುರುವಾಯಿತು. ಇದರ ನಂತರದ ಆಲ್ಪಾ ಜನರೇಷನ್ ಎಐ ಮೂಲಕ ತ್ವರಿತವಾಗಿ ಮಾಹಿತಿಗಳನ್ನು ಹೆಕ್ಕಿ ತೆಗೆಯುತ್ತಿದೆ. ಈ ಅಲ್ಪಾ ಜನರೇಷನ್ ಮುಂದೆ ಬರುವ ಕ್ವಾಂಟಂ ಯುಗಕ್ಕೆ ಕಾಲಿಟ್ಟರೆ ಜಗತ್ತಿನಾದ್ಯಂತ ಯುವಕ-ಯುವತಿಯರು ಒಂದಾಗಿ ಕ್ವಾಂಟಂ ಕಾನ್ಶಿಯಸ್ ನೆಸ್ , ಕನೆಕ್ಟೆಡ್ ಯೂನಿವರ್ಸ್ ಅಂದರೆ ಒಂದಕ್ಕೊಂದು ಸಂಬಂಧವಿರುವ ವಿಶ್ವದಲ್ಲಿ ಪರಿಸರ, ಪ್ರಕೃತಿ, ಆಡಳಿತವೆಲ್ಲ ಸಮತೋಲನದಿಂದ ಹೋಗಬೇಕೆಂಬ ಅರಿವು ಪಡೆಯುವ ಜನಾಂಗ. ಇವರು “ಜ್ಞಾನೋದಯ” ಯುಗಕ್ಕೆ ಸೇರುತ್ತಾರೆ. ಆಗ ಸರ್ವಾಧಿಕಾರಿಗಳು, ಪ್ರಜಾಪ್ರಭುತ್ವ ವಿರೋಧಿಗಳು ಎಲ್ಲಾ ಕಾಲ್ಕಿತ್ತು ಓಡುವ ಹಂತ ಬಂದರೂ ಬರಬಹುದು.
ಯಾಕೆ ಈ ಜನರೇಷನ್ ಗಳು ಹೆಚ್ಚು ಜ್ಞಾನೋದಯಗೊಂಡವರಾಗಿ ಇರುತ್ತಾರೆ ಎಂದರೆ ಇಡೀ ವಿಶ್ವವೇ ಮಾಹಿತಿಗಳ ಕಣಜ. ಈಗ ಬುದ್ದನಿಗೆ ಜ್ಞಾನೋದಯವಾಗಿದೆ ಎಂದು ಹೇಳುತ್ತೇವೆ. ಏನದು ಜ್ಞಾನೋದಯವೆಂದರೆ? ಜ್ಞಾನೋದಯವೆಂದರೆ ಕ್ವಾಂಟಂ ಎಂಬ ಸೂಕ್ಷ್ಮ ಸ್ಥಿತಿಯಲ್ಲಿ ಅಥವಾ ಪ್ರಜ್ಞೆಯಲ್ಲಿ ದೇಹ ಹಾಗೂ ದೇಹದಿಂದ ಆಚೆ ಟೈಮ್ ಟ್ರಾವೆಲ್ ಮಾಡುವ ವಿಧಾನ. ಈ ವಿಧಾನದಲ್ಲಿ ಮೂಲವಸ್ತು ಅದು ಜೈವಿಕವಿರಲಿ, ಅಜೈವಿಕವಿರಲಿ ತನ್ನ ಸ್ವಂತಿಕೆಯ ಮೇಲೆ ನಿಂತಿಲ್ಲ, ಒಂದಕ್ಕೊಂದರ ಪರಸ್ಪರಾವಲಂಬನೆಯಲ್ಲಿ ಇರುವುದರಿಂದಲೇ ಜಗತ್ತು ನಡೆಯುತ್ತಿರುತ್ತದೆ. ಕತ್ತಲೆ ಜೊತೆ ಬೆಳಕು ಇಂಟರ್ ಕನೆಕ್ಟ್ ಆಗಿರುತ್ತೆ ಎಂಬ ಅರಿವು. ಈಗ ನಾವು ದಪ್ಪ ನೆಲೆಯಲ್ಲಿ ನೋಡುವ ವಸ್ತುಗಳು ಸೂಕ್ಷ್ಮವಾದ ಕ್ವಾಂಟಂ ಸ್ಥಿತಿಯಲ್ಲಿ ಚಲನೆಯುಳ್ಳ ಶಕ್ತಿಪಾತವೇ ಆಗಿರುತ್ತದೆ ಮತ್ತು ಇದು ವಿಶ್ವದ ಎಲ್ಲಾ ಚರಾಚರದೊಡನೆ ಒಂದಾಗಿರುವ ಮೂಲ ಮಾತೃಕೆಯನ್ನು ಪರಿಚಯಿಸುತ್ತದೆ. ಇದನ್ನೆ ಕರುಣಾ- ಮೈತ್ರಿ ಎಂದು ಬುದ್ದ ಧರ್ಮದಲ್ಲಿ ಹೇಳುವುದು. ಮೈತ್ರಿ ಎಂದರೆ ಪರಸ್ಪರಾವಲಂಬನೆ, ಕರುಣಾ ಎಂದರೆ ಈ ಅವಲಂಬನೆಯ ಕಾರಣಕ್ಕೆ ಎಲ್ಲದರ ಮೇಲೆ ಉಂಟಾಗುವ ಕರುಣೆ. ಹೀಗೆ ಸಮತೋಲಿತ ವಿದ್ಯಮಾನ ಧ್ಯಾನದ ಮೂಲಕ ಅಥವಾ ಅಂತಹ ಬೇರೆ ವಿದ್ಯಮಾನಗಳಿಂದ ರೂಪುತಳೆದದ್ದು.

ಈಗ ಪುಕುವೋಕಾ ಅಂತಹ ಸಹಜ ಕೃಷಿಯ ಜನಕ ಸಸ್ಯದ ಮೇಲಿನ ರೋಗಭಾದೆಯನ್ನು ಕಂಡುಕೊಳ್ಳಲು ದಿನಗಟ್ಟಲೆ ಸೂಕ್ಷ್ಮ ದರ್ಶಕದ ಮೂಲಕ ನೋಡುತ್ತಾ ಕುಳಿತವನು ಆ ಧ್ಯಾನದಿಂದ ಕ್ವಾಟಂ ಲೋಕಕ್ಕೆ ಕನೆಕ್ಟ್ ಆಗಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಪರಸ್ಪರ ಅವಲಂಬನೆಯ ಪ್ರಕೃತಿಯನ್ನು ಒಡೆದು ನೋಡಬೇಕಿಲ್ಲ. ಎಲ್ಲವೂ ಒಂದಕ್ಕೊಂದರ ಸಂಬಂಧದಲ್ಲಿದೆ. ಈ ಅವಲಂಬನೆಯ ವಿಶ್ವದ ಜೊತೆ ಛೇದ ಮಾಡುವ ಮನುಷ್ಯನ ಬುದ್ದಿ ಮಾರಕ. ಹಾಗಾಗಿ ಸಹಜವಾಗಿ ಇರುವ ಪ್ರಜ್ಞೆಯ ಮೂಲಕ ಸಹಜಕೃಷಿ ಮಾಡಬಹುದೆಂದು ಜಗತ್ತಿಗೆ ತೋರಿಸಿದ. ಹಾಗಾದರೆ ಈ ಜ್ಞಾನೋದಯಕ್ಕೂ ಈಗಿನ ಜೆನ್ ಝೆಡ್ ಸಮುದಾಯಕ್ಕೂ ಏನು ಸಂಬಂಧ ಅಂತ ಕೇಳಬಹುದು. ಈ ಜನರೇಷನ್ ಗೆ ಇದ್ಯಾವುದೂ ಗೊತ್ತಿಲ್ಲದೆ ಇರಬಹುದು. ಆದರೆ ಈ ಜನರೇಷನ್ ನ್ನು ಒಟ್ಟಿಗೆ ಸಂಬಂಧ ಬೆಳೆಸಲು ಸ್ಪಾರ್ಟ್ ಪೋನನ್ನು ಕೈಗೆ ಕೊಟ್ಟಿದೆ. ಕನೆಕ್ಟ್ ಮಾಡಿದೆ. ಆ ಮೂಲಕ ಅವರೊಳಗೆ ಉಂಟಾಗುತ್ತಿರುವ ಪ್ರಜ್ಞಾ ಪ್ರವಾಹ ನಾವು ಭಿನ್ನಭೇದ ಮಾಡಬೇಕಿಲ್ಲ ಎಂಬ ಅರಿವು ಮೂಡಿಸಿದೆ.
ಈ ಜನರೇಷನ್ ಸಿದ್ದಾಂತಗಳಿಗೆ ಬೆನ್ನು ಬೀಳುವುದಿಲ್ಲ. ಆದರೂ ಸಮಾನತೆಯ ಸಿದ್ದಾಂತದ ಆಶಯಗಳು ಇವರಿಗೆ ಹಲವು ವಿಧದಲ್ಲಿ ಸಾಮಾಜಿಕ ಜಾಲತಾಣಗಳು ಕೊಡುತ್ತಿವೆ. ಇನ್ನು ವೈಜ್ಞಾನಿಕ ಸಂಶೋಧನೆಯ ಎಲ್ಲೆಗಳು ಮನುಷ್ಯನನ್ನು ಕ್ಲೀನ್ ಎನರ್ಜಿಯ, ಬಡವ ಶ್ರೀಮಂತ ಎನ್ನುವ ಭೇದವಿಲ್ಲದ, ಸರ್ವಾಧಿಕಾರದ ಧೋರಣೆಗಳಿಲ್ಲದ ಒಂದು ವಿಶ್ವವಾಗಿ ಮುಖ್ಯವಾಗಿ ನ್ಯೂರೋ ಸೈನ್ಸ್, ಕ್ವಾಂಟಂ ವಿಜ್ಞಾನಗಳು ಬೆಸೆಯುತ್ತಿರುವ ವಿಶ್ವದ ಪರಿಕಲ್ಪನೆಗಳು ಸಿದ್ದಾಂತಗಳಿಗಿಂತ ಹೆಚ್ಚು ಇವರನ್ನು ಅವೇ ಸಮಾನತೆಯ ಸಿದ್ದಾಂತದಷ್ಟೆ ಪ್ರಕರವಾಗಿ ಸೆಳೆಯುತ್ತಿದೆ. ಹಾಗಾದರೆ ಇದು ಓದಿರುವವರ ಅಹಂಕಾರವಷ್ಟೆ ಎನ್ನಬಹುದು. ಹಾಗಲ್ಲ ಸ್ಪಾರ್ಟ್ ಪೋನ್ ಹಾಗೂ ಸಾಮಾಜಿಕ ಜಾಲತಾಣದ ಜೊತೆ ಕನೆಕ್ಟ್ ಆದ ಯುವಕ-ಯುವತಿಯರಾಗಿದ್ದರೆ ಸಾಕು, ಇವರಿಗೆ ಅಪಾರದ ಜ್ಞಾನವನ್ನು ಎಐಗಳೆ ಬಿಡಿಸಿ ಬಿಡಿಸಿ ಹೇಳಿಕೊಡುತ್ತವೆ. ಅದೂ ತ್ರಿಡಿ ವಿಡಿಯೋಗಳ ಮೂಲಕ. ಇಂತಹ ಜನರೇಷನ್ ನ ಕೂಸುಗಳು ಕ್ವಾಂಟಂ ಕಂಪ್ಯೂಟರ್ ಕಾಲಕ್ಕೆ ಜಗತ್ತಿನಾದ್ಯಂತ ಒಂದಾಗುತ್ತವೆ. ಆಗ ಜಗತ್ತನ್ನು ಬೆಸೆಯುವ ವಿಶ್ವಸರ್ಕಾರದ ಬಗ್ಗೆಯೂ ಹೇಳಬಹುದು. ಇಲ್ಲದಿದ್ದರೆ ತನ್ನ ದೇಶ, ಪ್ರಾದೇಶಿಕತೆ, ಕಡೆಗೆ ಸೂಕ್ಷ್ಮ ಕಣದವರೆಗಿನ ಸೂಕ್ಷ್ಮತೆ ಈ ಜನರೇಷನ್ ಗೆ ಇರುತ್ತದೆ.
ಜನರೇಷನ್ ಝೆಡ್ ಮುಂಚೆ ಇದ್ದ ಮಿಲೆನಿಯಲ್ಸ್ ಎನ್ನುವ ಜನರೇಷನ್, ವೈ ಜನರೇಷನ್ ಫೇಸ್ ಬುಕ್, ಬ್ರಾಂಡ್ ಬ್ಯಾಂಡ್ ಮೂಲಕ ಪಡೆದ ಜ್ಞಾನವನ್ನು ಜನರೇಷನ್ ಝೆಡ್ ಗೆ ವರ್ಗಾಯಿಸಿದೆ. ಈ ಮಾಹಿತಿ ಅಥವಾ ಜ್ಞಾನ ಯುಗದಲ್ಲಿ ಯಾವುದನ್ನು ಮುಚ್ಚಿ ಇಡಲು ಸಾಧ್ಯವಿಲ್ಲ. ಎಲ್ಲವೂ ತೆರೆದ ಪುಸ್ತಕ. ಈಗ ಮೋದಿ ಅಮೆರಿಕ- ನಾರ್ವೆ ಪ್ರವಾಸಕ್ಕೆ ಹೋಗಿದ್ದು ದೇಶಕ್ಕಾಗಿಯಲ್ಲ, ಶತಕೋಟಿ ಶ್ರೀಮಂತ ಅದಾನಿಗಾಗಿ ಎನ್ನುವ ಮಾಹಿತಿ ಚಿಟಿಕೆ ಹೊಡೆಯುವುದರಲ್ಲಿ ಸಿಗುತ್ತದೆ. ಈ ಯುಗದಲ್ಲಿ ಒಬ್ಬ ಐಷಾರಾಮಿ ಬದುಕು ಬಾಳುತ್ತಾ ಮತ್ತೊಬ್ಬ ಕಡುಬಡತನದಲ್ಲಿರುವ ಸ್ಥಿತಿ ಕಣ್ಣಿಗೆ ಕುಕ್ಕುತ್ತಿರುತ್ತದೆ. ಪದೇ ಪದೇ ರೀಲ್ಸ್ ಬೇರೆ ಬೇರೆ ಸಾಮಾಜಿಕ ಜಾಲತಾಣಗಳ ಪ್ಲಾಟ್‌ಫಾರ್ಮ್‌ಗಳ ಮೂಲಕ ಯುವಕ- ಯುವತಿಯರಲ್ಲಿ ಈ ಅಸಮಾನ ವ್ಯವಸ್ಥೆಯ ಬಗ್ಗೆ ಪಶ್ಚಾತ್ತಾಪ ಮನೆ ಮಾಡುತ್ತೆ. ಹಾಗಾಗಿ ರಿಯಾಲಿಟಿ ಶೋ ಇರಲಿ ಬೇರೆ ಯಾವುದೇ ಸಹಾಯಾರ್ಥ ವಿಷಯ ವಿರಲಿ ಬಡವರಿಗೆ ಬಹುಬೇಗ ಸ್ಪಂದನ ಸಿಕ್ಕುತ್ತಿದೆ. ಇಂಥ ಸಮಾನತೆಯ ವಿಶ್ವದ ಬಗ್ಗೆ ಮಾತಾಡಲು ಬೇರೆ ಬೇರೆ ಹಂತಗಳಲ್ಲಿ ಹೋಗಲು ಏಲಿಯನ್ ಟೆಕ್ನಾಲಜಿ, ಸ್ಪರಿಚ್ವಲ್ ಆದ ವಿದ್ಯಮಾನಗಳಿಗೆ ತೆರೆದುಕೊಳ್ಳುವವರು, ಮಾತಾಡುವವರು ಇದ್ದಾರೆ. ಹಾಗಾಗಿ ಜನರೇಷನ್ ಝೆಡ್ ಚಳವಳಿ ಅನ್ನೋದು ಕ್ಷಣದ ಅನಂತತೆಯನ್ನು ಸುಂದರವಾಗಿಸುವ ಹಲವು ಶಕ್ತಿಗಳು ಒಟ್ಟಾಗಿ ಸೇರಿ ನಡೆಸುವ ವಿದ್ಯಮಾನ.
ಇದನ್ನೂ ಓದಿ ‘ಕಾಕ್ರೋಚ್ ಜನತಾ ಪಾರ್ಟಿ’ ಸ್ಥಾಪಕ ಅಭಿಜೀತ್ ಡಿಪ್ಕೆ ಬಂಧನದ ಭೀತಿಯಲ್ಲಿ ಪೋಷಕರು
ಅದದೇ ಕುಟುಂಬಗಳಿಗೆ ಸಿಕ್ಕುವ ರಾಜಕೀಯ, ಆರ್ಥಿಕ ಸೌಲಭ್ಯಗಳು, ಕೆಲವರ ಮಧ್ಯೆ ಅಧಿಕಾರ ಹಂಚಿಕೆ, ದುಡ್ಡು ಓಡಾಡುವುದು, ಜಾತಿ- ಧರ್ಮಗಳ ಮಧ್ಯೆ ವಿಷಬೀಜ ಬಿತ್ತುತ್ತಾ ಯುವಕ- ಯುವತಿಯರಲ್ಲಿರುವ ಒಂದೇ ಮನಸ್ಥಿತಿ ಕನಸುಗಳನ್ನು ನುಚ್ಚುನೂರು ಮಾಡುವುದು ಈ ಜನರೇಷನ್ ಸಹಿಸುವುದಿಲ್ಲ. ಹಾಗಾಗಿ ಇವರು ಕಲುಷಿತಗೊಂಡಿರುವ ನೀರು, ಗಾಳಿ, ರಾಜಕೀಯ ಎಲ್ಲವನ್ನು ಶುಚಿಗೊಳಿಸಬಲ್ಲರು. ಕಾಕ್ರೋಚ್ ಜನತಾ ಪಾರ್ಟಿ ಈ ಜನರೇಷನ್ ನ ಸಣ್ಣ ವಿದ್ಯಮಾನವಾಗಿ ಜಾರಿಯಾಗಿದ್ದು ಕಾಡ್ಗಿಚ್ಚಿನಂತೆ ಹಬ್ಬಲು, ಈ ಯುವಕರ ಅವಲಂಬನೆಯ ವಿಶ್ವ ಹೆಚ್ಚು ವ್ಯಾಪಕವಾಗಿ ವಿಸ್ತರಣೆಗೊಂಡಿರುವುದೇ ಆಗಿದೆ. ಹಾಗಾಗಿ ಜನರೇಷನ್ ಝೆಡ್ ಜೊತೆ ಎದುರು ಹಾಕಿಕೊಳ್ಳುವವರು ನಾಮಾವೇಷವಿಲ್ಲದಂತೆ ಅಳಿಸಿಹಾಕುವ ತಾಕತ್ತು ಈ ಯುವಕ-ಯುವತಿಯರಲ್ಲಿರುತ್ತೆ. ಇದು ಜ್ಞಾನಯುಗದ ಅಥವಾ ಪ್ರಜ್ಞಾಯುಗದ ಆರಂಭ ಅಷ್ಟೆ, ಮುಂದೆ ಐತೆ ಮಾರಿ ಹಬ್ಬ. ಜನರೇಷನ್ ಝೆಡ್ ವಿಶ್ವದಾದ್ಯಂತ ತನ್ನ ಜಾಲ ವಿಸ್ತರಿಸುತ್ತಾ ಯುದ್ದವಿರೋಧಿ ಹೋರಾಟ, ಸರ್ವಾಧಿಕಾರದ ವಿರೋಧಿ ಹೋರಾಟ, ಮಾನವ ಕುಲದ ಏಕತೆಯ ಹೋರಾಟ ಹಾಗೂ ಪರಿಸರ ಸ್ನೇಹಿ ಹೋರಾಟದ ಜೊತೆ ಜಗತ್ತಿನಾದ್ಯಂತ ಈ ಜನರೇಷನ್ ಒಂದಾಗುತ್ತವೆ. ಆಗ ಪ್ರಭುತ್ವಗಳು ಈ ಜನರೇಷನ್ ಕನಸುಗಳ ಜೊತೆ ನಿಲ್ಲಲೇಬೇಕಾಗುತ್ತದೆ. ಈ ಜನರೇಷನ್ ಎದುರು ಸಾಹಿತ್ಯ, ರಾಜಕೀಯ, ವಿಜ್ಞಾನ, ಸಾಮಾಜಿಕ ವಿದ್ಯಮಾನಗಳೆಲ್ಲ ಬದಲಾಗುತ್ತವೆ. ಇವೆಲ್ಲಕ್ಕೂ ಮಾನವೀಯ ನೆಲೆಯ ಸ್ಪಂದನ ಹೆಚ್ಚು ಸಿಗುತ್ತಾ ಹೊಸ ವಿದ್ಯಮಾನಗಳಿಗೆ ಕಾರಣವಾಗುತ್ತದೆ. ಹಾಗಾಗಿ ಹಳೆಯ ತಲೆಗಳು ಈ ಮಾನವೀಯ ಮುಖವನ್ನು ಕಡೆಗಣಿಸುವುದು ಅಷ್ಟು ಸುಲಭವಲ್ಲ!




