ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಹಾಗೂ ಕೇವಲ ಕೆಲವೇ ದಿನಗಳಲ್ಲಿ 1.9 ಕೋಟಿಗೂ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್‌ಗಳನ್ನು ಹೊಂದಿರುವ ವ್ಯಂಗ್ಯಾತ್ಮಕ ಡಿಜಿಟಲ್ ರಾಜಕೀಯ ಪಕ್ಷ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸ್ಥಾಪಕ ಅಭಿಜೀತ್ ಡಿಪ್ಕೆ ಅವರ ಪೋಷಕರು ತಮ್ಮ ಮಗನ ಬಂಧನವಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಸದ್ಯದ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ ಆತಂಕ ಸಹಜ ಎಂದಿರುವ ಅವರು, ಮಗನಿಗೆ ರಾಜಕೀಯ ಬೇಡವೇ ಬೇಡ ಎಂದು ಆಗ್ರಹಿಸಿದ್ದಾರೆ.
ಅಭಿಜೀತ್ ಅವರ ತಂದೆ ಭಗವಾನ್ ಹಾಗೂ ತಾಯಿ ಅನಿತಾ ಡಿಪ್ಕೆ ಅವರು ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನೆಲೆಸಿದ್ದಾರೆ. ಮರಾಠಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, “ಅಭಿಜೀತ್ ನಡೆಯನ್ನು ಕಂಡು ನಮಗೆ ನಿದ್ದೆ ಹಾರಿದೆ. ಅವನು ರಾಜಕೀಯ ಪ್ರವೇಶಿಸುವುದು ನಮಗೆ ಇಷ್ಟವಿಲ್ಲ,” ಎಂದಿದ್ದಾರೆ. ಅಭಿಜೀತ್ ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಪದವಿ ಪಡೆದಿದ್ದು, ಈ ಹಿಂದೆ ಆಮ್ ಆದ್ಮಿ ಪಾರ್ಟಿ ಜೊತೆ ಗುರುತಿಸಿಕೊಂಡಿದ್ದರು.
“ಇತ್ತೀಚಿನ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ, ಅವರಿಗೆ ಎಷ್ಟೇ ಅನುಯಾಯಿಗಳಿದ್ದರೂ ಭಯ ಸಹಜ. ತನ್ನ ಒಂದು ಸಂದರ್ಶನದಲ್ಲಿ, ಭಾರತಕ್ಕೆ ಹಿಂದಿರುಗಿದ ಮೇಲೆ ತನ್ನ ಬಂಧನವಾಗಬಹುದು ಎಂಬ ಆತಂಕವನ್ನು ಅಭಿಜೀತ್ ಸ್ವತಃ ವ್ಯಕ್ತಪಡಿಸಿದ್ದಾನೆ. ದಿನಪತ್ರಿಕೆಗಳಲ್ಲಿ ಇಂತಹ ಘಟನೆಗಳ ಬಗ್ಗೆ ನಾವು ಓದುತ್ತಿರುತ್ತೇವೆ. ಈ ಚಿಂತೆಯಿಂದ ನನಗೆ ಕಳೆದ ಎರಡು ರಾತ್ರಿಗಳಿಂದ ನಿದ್ದೆ ಬಂದಿಲ್ಲ. ನನಗೆ ರಾಜಕೀಯ ಎಂದರೆ ಆಗಬಾರದು ಹಾಗೂ ಅದರಲ್ಲಿ ಆಸಕ್ತಿಯೂ ಇಲ್ಲ,” ಎಂದು ತಂದೆ ಭಗವಾನ್ ಡಿಪ್ಕೆ ಹೇಳಿದ್ದಾರೆ.
ಸಿಜೆಪಿ ಬಗ್ಗೆ ನೆರೆಯವರಿಂದ ಮೊದಲು ತಿಳಿದಿದ್ದು, ತದನಂತರ ತಮ್ಮ ಮೊಮ್ಮಗನಿಂದ ಈ ಪಕ್ಷದ ಜನಪ್ರಿಯತೆಯ ಬಗ್ಗೆ ಮಾಹಿತಿ ಲಭಿಸಿತು ಎಂದು ಅವರು ವಿವರಿಸಿದರು. ತಮ್ಮ ಮಗ ಪುಣೆ ಅಥವಾ ದೆಹಲಿಯಲ್ಲಿ ಉತ್ತಮ ಕೆಲಸ ಮಾಡಬೇಕು ಎಂದು ತಾವು ಬಯಸಿದ್ದಾಗಿ ಭಗವಾನ್ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? IPL ರೋಚಕ ಘಟ್ಟ: 3 ತಂಡಗಳ ಪ್ಲೇ-ಆಫ್ ಪ್ರವೇಶ,1 ಸ್ಥಾನಕ್ಕಾಗಿ 5 ತಂಡಗಳ ಹಣಾಹಣಿ
ತಾಯಿ ಅನಿತಾ ಮಾತನಾಡಿ, “ಅವನು ಕ್ಷೇಮವಾಗಿ ಮನೆಗೆ ಬರಬೇಕು ಎಂಬುದೇ ನಮ್ಮ ಆಸೆ. ಅವನು ರಾಜಕೀಯ ಮುಂದುವರೆಸುತ್ತಾನೋ ಇಲ್ಲವೋ ಎನ್ನುವುದು ಅವನ ನಿರ್ಧಾರ, ಆದರೆ ನಮಗೆ ಅವನು ಈ ಕ್ಷೇತ್ರದಲ್ಲಿ ಇರುವುದು ಇಷ್ಟವಿಲ್ಲ. ನಾನು ಈ ವಿಷಯದಲ್ಲಿ ಬೆಂಬಲ ನೀಡುವುದಿಲ್ಲ,” ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಅಭಿಜೀತ್ ಆರಂಭದಲ್ಲಿ ಸಂಭಾಜಿನಗರದಲ್ಲಿ ಓದಿ, ನಂತರ ಪುಣೆಗೆ ಹೋದನು. ಇಂಜಿನಿಯರಿಂಗ್ ಕಷ್ಟ ಎನಿಸಿದ್ದರಿಂದ, ಸಮೂಹ ಮಾಧ್ಯಮ ಆಯ್ಕೆ ಮಾಡಿಕೊಂಡನು ಹಾಗೂ ಆತನ ಸಹೋದರಿ ಹೊರದೇಶದಲ್ಲಿ ಇದ್ದುದರಿಂದ ಅಲ್ಲಿಗೆ ಓದಲು ಹೋದನು ಎಂದು ಅವರು ಮಾಹಿತಿ ನೀಡಿದ್ದಾರೆ.
ಸಿಜೆಪಿ ವೇದಿಕೆಯು ಮೀಮ್‌ಗಳು , ಅನಿಮೇಷನ್ ಹಾಗೂ ಗ್ರಾಫಿಕ್‌ಗಳ ಮೂಲಕ ರಾಜಕೀಯ ವ್ಯಂಗ್ಯ ಹಾಗೂ ವಿಮರ್ಶೆಯನ್ನು ಮಾಡುತ್ತಿದೆ. ಮುಖ್ಯವಾಗಿ ಯುವಜನರ ಸಮಸ್ಯೆಗಳಾದ ನಿರುದ್ಯೋಗ, ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣದ ಬಗ್ಗೆ ಪ್ರಣಾಳಿಕೆ ರೀತಿಯಲ್ಲಿ ಬೇಡಿಕೆಗಳನ್ನು ಮುಂದಿಟ್ಟು ಭಾರಿ ಜನಪ್ರಿಯತೆ ಗಳಿಸಿದೆ. ಇದರ ಜನಪ್ರಿಯತೆ ಹೆಚ್ಚಾದಂತೆ, ಭಾರತದಲ್ಲಿ ಸಿಜೆಪಿಯ ‘ಎಕ್ಸ್’ ಖಾತೆಯನ್ನು ಇತ್ತೀಚೆಗಷ್ಟೇ ತಡೆಹಿಡಿಯಲಾಗಿತ್ತು.




