ಉಡುಪಿ ನಗರದ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಹೂಡೆ ಎಂಬಲ್ಲಿ ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದ ನವಜಾತ ಶಿಶುವಿನ ಕಳೇಬರವನ್ನು ಬೀಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ದಫನ ಮಾಡಲಾಯಿತು.
ಕೆಲವು ದಿನಗಳ ಹಿಂದೆ ಹೂಡೆಯಲ್ಲಿನ ಮನೆಯೊಂದಕ್ಕೆ ತೆರಳುವ ಕಾಲುದಾರಿಯ ಬಳಿ, ಕೆಲವೇ ಗಂಟೆಗಳ ಹಿಂದೆ ಜನಿಸಿದಂತೆ ಕಂಡುಬಂದ ನವಜಾತ ಶಿಶುವನ್ನು ಸ್ಥಳೀಯರು ಗಮನಿಸಿದ್ದರು. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿತ್ತು.
ಘಟನೆಯ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕಾನೂನು ಪ್ರಕ್ರಿಯೆ ನಡೆಸಿದ್ದರು. ಬಳಿಕ ಜಿಲ್ಲಾಸ್ಪತ್ರೆಯಲ್ಲಿ ರಕ್ಷಿಸಿಡಲಾಗಿದ್ದ ಶಿಶುವಿನ ಕಳೇಬರವನ್ನು ಸೋಮವಾರ ಬೀಡಿನಗುಡ್ಡೆ ಹಿಂದೂ ರುದ್ರಭೂಮಿಯಲ್ಲಿ ದಫನ ಮಾಡಲಾಯಿತು.
ಈ ಸಂದರ್ಭದಲ್ಲಿ ಠಾಣಾಧಿಕಾರಿಯವರ ಆದೇಶದ ಮೇರೆಗೆ ಮುಖ್ಯ ಆರಕ್ಷಕ ಗುರುರಾಜ್, ನಗರಸಭೆ ಹೆಲ್ತ್ ಇನ್ಸ್‌ಪೆಕ್ಟರ್ ಸತೀಶ್ ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು.






