ಆಹಾರ ಮತ್ತು ಔಷಧಗಳ ಉತ್ಪಾದನೆ, ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ನಡೆಯುವ ನಕಲಿ ಮತ್ತು ಕಲಬೆರಕೆ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಸವಾಲಾಗಿದೆ. ಇದು ಕೇವಲ ಗ್ರಾಹಕರ ಆರ್ಥಿಕ ಶೋಷಣೆಗೆ ಸಂಬಂಧಿಸಿದ್ದಲ್ಲ; ಜನರ ಆರೋಗ್ಯ, ಜೀವ, ವೈದ್ಯಕೀಯ ವ್ಯವಸ್ಥೆಯ ಮೇಲಿನ ನಂಬಿಕೆ ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಬಹುಮುಖ ಸಮಸ್ಯೆಯಾಗಿದೆ.
ಆಹಾರ ಮತ್ತು ಔಷಧ ಮನುಷ್ಯನ ಬದುಕಿನ ಮೂಲಭೂತ ಅಗತ್ಯಗಳು. ಸುರಕ್ಷಿತ ಆಹಾರವು ದೈಹಿಕ ಆರೋಗ್ಯವನ್ನು ಕಾಪಾಡಿದರೆ, ಗುಣಮಟ್ಟದ ಔಷಧಗಳು ರೋಗಗಳ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಹಸಿವು ನೀಗಿಸಬೇಕಾದ ಆಹಾರವೇ ವಿಷವಾಗುವುದು; ರೋಗ ಗುಣಪಡಿಸಬೇಕಾದ ಔಷಧವೇ ರೋಗ ಉಲ್ಬಣಗೊಳಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಸಮಸ್ಯೆ ಸೃಷ್ಟಿಸುತ್ತಿದೆ.
ಆಹಾರ ಮತ್ತು ಔಷಧಗಳ ಉತ್ಪಾದನೆ, ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ನಡೆಯುವ ನಕಲಿ ಮತ್ತು ಕಲಬೆರಕೆ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಸವಾಲಾಗಿದೆ. ಇದು ಕೇವಲ ಗ್ರಾಹಕರ ಆರ್ಥಿಕ ಶೋಷಣೆಗೆ ಸಂಬಂಧಿಸಿದ್ದಲ್ಲ; ಜನರ ಆರೋಗ್ಯ, ಜೀವ, ವೈದ್ಯಕೀಯ ವ್ಯವಸ್ಥೆಯ ಮೇಲಿನ ನಂಬಿಕೆ ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಬಹುಮುಖ ಸಮಸ್ಯೆಯಾಗಿದೆ.
ಕಲಬೆರಕೆ ಆಹಾರ, ನಕಲಿ ಔಷಧ ಜಾಲದ ಪರಿಣಾಮ ವ್ಯಕ್ತಿಯ ಆರೋಗ್ಯಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಅನಾರೋಗ್ಯದಿಂದಾಗಿ ಕುಟುಂಬದ ವೈದ್ಯಕೀಯ ವೆಚ್ಚ, ಚಿಕಿತ್ಸೆಯ ಅವಧಿ ಹೆಚ್ಚಾಗಬಹುದು. ದುಡಿಮೆಗೆ ದುಸ್ತರವಾಗಬಹುದು. ಅದು ಕುಟುಂಬದ ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದಲ್ಲದೆ, ನಕಲಿ ಉತ್ಪನ್ನಗಳ ವ್ಯಾಪಕ ಬಳಕೆಯು ಮಾರುಕಟ್ಟೆ ವ್ಯವಸ್ಥೆಯನ್ನು ಕೆಡಿಸಿ, ಅನ್ಯಾಯದ ಸ್ಪರ್ಧಾತ್ಮಕ ಒತ್ತಡವನ್ನು ಉಂಟುಮಾಡಬಹುದು. ಇದರಿಂದ ಗುಣಮಟ್ಟದ ಉತ್ಪನ್ನಗಳ ಮೇಲಿನ ಗ್ರಾಹಕರ ವಿಶ್ವಾಸವೂ ಕುಸಿಯಬಹುದು.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸಾಮರಸ್ಯ ಇರಲೆನ್ನುವ ಆರೆಸ್ಸೆಸ್, ಸಮಾನತೆ ಬೇಕೆಂದು ಸಾರುವುದಿಲ್ಲವೇಕೆ?
ನಕಲಿ ಉತ್ಪನ್ನಗಳ ವ್ಯಾಪಾರಕ್ಕೆ ಹಲವು ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿವೆ. ಅತಿಯಾದ ಲಾಭದಾಸೆ, ಗ್ರಾಹಕರ ಅರಿವಿನ ಕೊರತೆ, ದುರ್ಬಲ ಮೇಲ್ವಿಚಾರಣೆ, ಸರಬರಾಜು ಸರಪಳಿಯ ಸಂಕೀರ್ಣತೆ ಮತ್ತು ಅಕ್ರಮ ವ್ಯಾಪಾರ ಜಾಲಗಳೇ ಪ್ರಮುಖ ಕಾರಣಗಳಾಗಿವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ, ಆರೋಗ್ಯ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳು- ಇತ್ತೀಚಿನ ದಿನಗಳಲ್ಲಿ ಕೈಗೊಂಡ ಕ್ರಮಗಳು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ.
ಆ. 9ರಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ, ಕೊಳೆತ ಮೀನು, ಮಾಂಸದ ಜೊತೆಗೆ ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದ್ದರು. ಅದರಲ್ಲೂ ಆ ಹೋಟೆಲ್‌ಗಳ ಶುಚಿತ್ವ, ಆಹಾರ ಉತ್ಪನ್ನಗಳ ದಾಸ್ತಾನು, ಗುಣಮಟ್ಟ ಹಾಗೂ ಸುರಕ್ಷತೆ ಕುರಿತು ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡಿದ್ದರು.
ಇದರ ಮುಂದುವರೆದ ಭಾಗವಾಗಿ, ಆ. 18ರಂದು ಬಿಡದಿ ಬಳಿಯ ಫಾರ್ಮ್ ಹೌಸ್‌ನಲ್ಲಿ ಬೃಹತ್ ನಕಲಿ ಔಷಧ ಜಾಲವನ್ನು ಭೇದಿಸಿ, 5 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ನಕಲಿ ಔಷಧಗಳು ಮತ್ತು ಕೈಗಾರಿಕಾ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದರು. ಅವು ಅವಧಿ ಮೀರಿದ ಔಷಧಗಳಾಗಿದ್ದವು. ಅವುಗಳನ್ನು ನೆರೆಯ ದೇಶ ಮತ್ತು ರಾಜ್ಯಗಳಿಂದ ಕಡಿಮೆ ಬೆಲೆಗೆ ಖರೀದಿಸಿ ತಂದು ಇಲ್ಲಿ ರೀಪ್ಯಾಕಿಂಗ್ ಮಾಡಿ, ಪ್ರತಿಷ್ಠಿತ ಕಂಪನಿಗಳ ಲೇಬಲ್ ಅಂಟಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಅಕ್ರಮ ಜಾಲವನ್ನು ಪತ್ತೆಹಚ್ಚಿದ್ದರು.
ಹಾಗೆಯೇ, ಸೆ. 20ರಂದು ಕಡಿಮೆ ಬೆಲೆಯ ಔಷಧಗಳನ್ನು ದುಬಾರಿ ಬೆಲೆಯ ಜೀವ ರಕ್ಷಕ ಬ್ರ್ಯಾಂಡ್‌ಗಳ ಹೆಸರಿನಲ್ಲಿ ಮಾರಾಟ ಮತ್ತು ಪೂರೈಕೆ ಮಾಡುತ್ತಿದ್ದ ರಾಜ್ಯದ 24 ಫಾರ್ಮಾ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದರು. ಈ ಪೈಕಿ 16 ಸಂಸ್ಥೆಗಳ ಪರವಾನಗಿಗಳನ್ನು ಸಂಪೂರ್ಣ ರದ್ದುಗೊಳಿಸಲಾಗಿದೆ. ಪ್ರತಿಷ್ಠಿತ ಫೈಜರ್ ಕಂಪನಿಯೂ ಸೇರಿದಂತೆ 8 ಸಂಸ್ಥೆಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಚಾಮರಾಜಪೇಟೆಯ ಕೃಪಾ ಹೆಲ್ತ್ ಕೇರ್ ಪ್ರಕರಣದಲ್ಲಿ ಕರ್ತವ್ಯಲೋಪವೆಸಗಿದ ಎಫ್‌ಡಿಎ ಅಧಿಕಾರಿ ಓಂಕಾರೇಶ್ವರ್ ಅವರನ್ನು ಅಮಾನತು ಮಾಡಲಾಗಿದೆ.
ಕಡಿಮೆ ಬಂಡವಾಳ ಹೂಡಿ ಹೆಚ್ಚು ಲಾಭ ಗಳಿಸುವ ದುರಾಸೆ, ನಿಯಮಗಳ ಉಲ್ಲಂಘನೆ ಹಾಗೂ ಗುಣಮಟ್ಟದ ಮೇಲ್ವಿಚಾರಣೆಯ ಕೊರತೆ ಇಂತಹ ಅಕ್ರಮಗಳಿಗೆ ಅವಕಾಶ ಮಾಡಿಕೊಡುತ್ತವೆ. ಕಲಬೆರಕೆ ಆಹಾರ ಅಥವಾ ನಕಲಿ ಔಷಧಗಳ ಪರಿಣಾಮ ನೇರವಾಗಿ ಸಾಮಾನ್ಯ ಜನರ ಮೇಲಾಗುತ್ತದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಬೆಲೆ ಏರಿಕೆ ಎನ್ನುವುದು ದಿನನಿತ್ಯದ ಸಾಮಾನ್ಯ ಸಂಗತಿಯಾಗಿದೆ. ಹಸಿವು ನೀಗಿಸಿಕೊಳ್ಳುವ ನೆಪದಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಕಡಿಮೆ ಬೆಲೆಯ ಉತ್ಪನ್ನಗಳನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಬಡವರ ದುಃಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವ ದುರುಳರ ಜಾಲ ಜನರ ಜೀವಕ್ಕೆ ಸಂಚಕಾರ ತಂದಿಟ್ಟಿದೆ.
ಇಂತಹ ಅಕ್ರಮಗಳನ್ನು ತಡೆಯಲು ಸರ್ಕಾರ ಈಗಿರುವ ಆಹಾರ ಮತ್ತು ಔಷಧ ನಿಯಂತ್ರಣ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಅಗತ್ಯವಿದೆ. ತಪ್ಪಿತಸ್ಥ ಉತ್ಪಾದಕರು, ಪೂರೈಕೆದಾರರು ಮತ್ತು ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ, ನಿಯಮಿತ ತಪಾಸಣೆ, ಮಾದರಿ ಸಂಗ್ರಹಣೆ ಮತ್ತು ಪ್ರಯೋಗಾಲಯ ಪರೀಕ್ಷೆಗಳನ್ನು ಹೆಚ್ಚಿಸಬೇಕು. ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವುದಷ್ಟೇ ಸಾಲದು; ನ್ಯಾಯಾಂಗ ಪ್ರಕ್ರಿಯೆ ವೇಗವಾಗಿ ಪೂರ್ಣಗೊಂಡು ಶಿಕ್ಷೆ ಖಚಿತವಾಗುವವರೆಗೆ, ತಾರ್ಕಿಕ ಅಂತ್ಯ ಕಾಣುವವರೆಗೆ ದೃಢವಾಗಿ ನಿಲ್ಲಬೇಕಿದೆ. ಆ ನಿಟ್ಟಿನಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಕ್ರಮ ಶ್ಲಾಘನೀಯ. ಆದರೆ ಅದು ಪ್ರಚಾರಕ್ಕಷ್ಟೇ ಸೀಮಿತವಾಗದಿರಲಿ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಖರೀದಿ ಮೇಲೆ ತೆರಿಗೆ, ಖರೀದಿ ಹಣಕ್ಕೆ ಶುಲ್ಕ… ಇದು ಮೋದಿ ಡಿಜಿಟಲ್ ದರೋಡೆ!
ಇಲ್ಲಿ ಸರ್ಕಾರ, ಸಚಿವರಷ್ಟೇ ಅಲ್ಲ, ಗ್ರಾಹಕರೂ ಜಾಗೃತರಾಗಬೇಕು. ಪ್ರತಿ ವಸ್ತುವಿನ ಲೇಬಲ್, ಅವಧಿ ಮುಕ್ತಾಯದ ದಿನಾಂಕ, ಪರವಾನಗಿ ವಿವರಗಳು ಹಾಗೂ ಗುಣಮಟ್ಟದ ಗುರುತುಗಳನ್ನು ಪರಿಶೀಲಿಸಿ ಖರೀದಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಅನುಮಾನಾಸ್ಪದ ಆಹಾರ ಅಥವಾ ಔಷಧ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಹಾಗೆಯೇ ಆ ದೂರನ್ನು ಸರ್ಕಾರ ಮತ್ತು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮಗೊಳ್ಳಬೇಕಾಗಿದೆ.
ನಕಲಿ ಆಹಾರ ಮತ್ತು ಔಷಧಗಳ ಸಮಸ್ಯೆ ಆರ್ಥಿಕ ಅಪರಾಧದ ವ್ಯಾಪ್ತಿಯನ್ನು ಮೀರಿದ ಸಾರ್ವಜನಿಕ ಆರೋಗ್ಯದ ಪ್ರಶ್ನೆಯಾಗಿದೆ. ಆಹಾರದಲ್ಲಿ ಕಲಬೆರಕೆ ಅಥವಾ ಔಷಧದಲ್ಲಿ ನಕಲಿ ಸಂಭವಿಸಿದಾಗ ಅದರ ಅಂತಿಮ ಪರಿಣಾಮವನ್ನು ಎದುರಿಸುವವರು ಸಾಮಾನ್ಯ ಗ್ರಾಹಕರೇ. ಅದರಲ್ಲೂ ಬಡವರು ಮತ್ತು ಮಧ್ಯಮವರ್ಗದವರೇ. ಆದ್ದರಿಂದ ಈ ಅಕ್ರಮ, ಅವ್ಯವಹಾರ ಮತ್ತು ಸಮಸ್ಯೆಯನ್ನು ನಿವಾರಿಸುವಲ್ಲಿ ಸರ್ಕಾರ ಮತ್ತು ಜನ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಜನರ ಆರೋಗ್ಯವನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾದರೂ, ಅದು ಸಮಾಜದ ಸಾಮೂಹಿಕ ಹೊಣೆಗಾರಿಕೆ ಎನ್ನುವುದನ್ನು ಅರಿತು, ಅಳವಡಿಸಿಕೊಂಡರೆ- ದುರುಳರು ಜನರ ಜೀವದ ಜೊತೆ ಚೆಲ್ಲಾಟವಾಡುವುದಕ್ಕೆ ಕೊಂಚವಾದರೂ ಕಡಿವಾಣ ಹಾಕಬಹುದಾಗಿದೆ.




