ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಸ್ಫೋಟಕ ಬ್ಯಾಟರ್ ಸಂಜು ಸ್ಯಾಮ್ಸನ್ ಕೈಬಿಟ್ಟು, ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿದ್ದು ಭಾರತ ತಂಡದ ಕೋಚ್ ಗೌತಮ್ ಗಂಭೀರ್ ಪಾಲಿಗೆ ಅತ್ಯಂತ ಕಠಿಣ ನಿರ್ಧಾರವಾಗಿತ್ತು. ಜಿಯೋಸ್ಟಾರ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಬದಲಾವಣೆಯ ಹಿಂದಿನ ಕಾರಣ ಹಾಗೂ ತಾವು ಎದುರಿಸಿದ ಸಂಕಟವನ್ನು ಬಿಚ್ಚಿಟ್ಟಿದ್ದಾರೆ.
”ಕಳೆದ ಎರಡು ವರ್ಷಗಳ ನನ್ನ ಕೋಚಿಂಗ್ ಪಯಣದಲ್ಲಿ ನಾನು ಸರಿಯಾಗಿ ನಿದ್ದೆ ಮಾಡಲಾಗದ ಏಕೈಕ ರಾತ್ರಿ ಅದಾಗಿತ್ತು. ಈ ವಿಚಾರವನ್ನು ಖುದ್ದಾಗಿ ಸಂಜುಗೂ ತಿಳಿಸಿದ್ದೇನೆ. ಟಿ20 ಕ್ರಿಕೆಟ್‌ನಲ್ಲಿ ಕೇವಲ ಮೂರ್ನಾಲ್ಕು ಪಂದ್ಯಗಳ ಬಳಿಕ ‘ಪ್ಲೇಯರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಪಡೆದ ಆಟಗಾರನನ್ನೇ ಹೊರಗಿಡುವುದು ನನ್ನ ವೃತ್ತಿಜೀವನದ ಅತಿ ಕಠಿಣ ನಿರ್ಧಾರವಾಗಿತ್ತು. ಸರಣಿ ಗೆಲ್ಲಬೇಕೆಂಬ ಕಾರಣಕ್ಕೆ ಈ ಬದಲಾವಣೆ ಮಾಡಲಾಯಿತು,” ಎಂದು ಗಂಭೀರ್ ಹೇಳಿದ್ದಾರೆ.
”ನೀವು ಭಾರತ ತಂಡವನ್ನು ಪ್ರತಿನಿಧಿಸುವಾಗ ಪ್ರತಿ ಸರಣಿಯನ್ನು ಗೆಲ್ಲಬೇಕೆಂಬ ಹಂಬಲವಿರುತ್ತದೆ. ನಾನು ಸಂಜು ಜೊತೆ ಈ ಬಗ್ಗೆ ಅತ್ಯಂತ ಪ್ರಾಮಾಣಿಕವಾಗಿ ಮಾತನಾಡಿದೆ. ವೈಭವ್ ಸೂರ್ಯವಂಶಿ ಅದ್ಭುತ ಫಾರ್ಮ್‌ನಲ್ಲಿದ್ದರು ಹಾಗೂ ಆರಂಭದಲ್ಲಿ ನಮಗೆ ಉತ್ತಮ ಅಡಿಪಾಯ ಹಾಕಿಕೊಟ್ಟು ವೇಗವಾಗಿ ರನ್ ಗಳಿಸುವವರ ಅಗತ್ಯವಿತ್ತು. ಸಂಜು ಕೂಡ ತಂಡದ ಈ ನಿರ್ಧಾರವನ್ನು ಅತ್ಯಂತ ಕ್ರೀಡಾಸ್ಫೂರ್ತಿಯಿಂದ ಸಕಾರಾತ್ಮಕವಾಗಿ ಸ್ವೀಕರಿಸಿದರು,” ಎಂದು ಗಂಭೀರ್ ವಿವರಿಸಿದ್ದಾರೆ.
ಯುವ ಆಟಗಾರರ ಅವಕಾಶಗಳ ಕುರಿತು ಮಾತನಾಡಿದ ಅವರು, ವೈಭವ್ ಸೂರ್ಯವಂಶಿಯಂತಹ ಪ್ರತಿಭೆಗಳು ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾಯಬೇಕಾಗುತ್ತದೆ ಎಂದರು. “ಇದು ಕಷ್ಟದ ವಿಚಾರ. ಆದರೆ ನೀವು ಎಷ್ಟೇ ಉತ್ತಮ ಫಾರ್ಮ್‌ನಲ್ಲಿದ್ದರೂ, ತಂಡಕ್ಕಾಗಿ ದೀರ್ಘಕಾಲದಿಂದ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಆಟಗಾರರಿದ್ದಾಗ ಅವಕಾಶಕ್ಕಾಗಿ ಕಾಯುವುದು ಅನಿವಾರ್ಯ ಎಂಬುದನ್ನು ಯುವ ಆಟಗಾರರಿಗೆ ಮನವರಿಕೆ ಮಾಡಿದ್ದೇನೆ,” ಎಂದು ಗಂಭೀರ್ ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆಗಳು ಹಾಗೂ ಹೊರಗಿನ ಟೀಕೆಗಳು ಎಂದಿಗೂ ಆಡುವ ಹನ್ನೊಂದರ ಬಳಗವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ಗಂಭೀರ್ ಸ್ಪಷ್ಟಪಡಿಸಿದ್ದಾರೆ. ತಂಡದ ಆಯ್ಕೆಯಲ್ಲಿ ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಕೇವಲ ವಾಸ್ತವಿಕ ಅಂಶಗಳ ಆಧಾರದ ಮೇಲೆ ತಂಡ ಆಯ್ಕೆ ಮಾಡಲಾಗುತ್ತದೆ ಎಂದು ಅವರು ನುಡಿದರು.
”ತಂಡಕ್ಕೆ ಪಂದ್ಯವನ್ನು ಗೆಲ್ಲಿಸಬಲ್ಲ ಅತ್ಯುತ್ತಮ ಹನ್ನೊಂದರ ಬಳಗ ಯಾವುದು ಎಂಬುದನ್ನು ಡ್ರೆಸ್ಸಿಂಗ್ ರೂಮ್‌ನಲ್ಲಿರುವ ನಾಯಕ ಹಾಗೂ ಕೋಚ್ ಮಾತ್ರ ನಿರ್ಧರಿಸುತ್ತಾರೆ. ಒಂದು ವೇಳೆ ಇಂದು ವೈಭವ್ ಆಡಿದರೆ, ಅಭಿಷೇಕ್ ಶರ್ಮಾ ಅಥವಾ ಸಂಜು ಸ್ಯಾಮ್ಸನ್ ಪೈಕಿ ಯಾರನ್ನೇ ಕೈಬಿಟ್ಟರೂ ಆಟಗಾರರೊಂದಿಗೆ ಆ ಬಗ್ಗೆ ಮಾತನಾಡುವುದು ಅತ್ಯಂತ ಕಠಿಣ ಪ್ರಕ್ರಿಯೆ,” ಎಂದು ಗಂಭೀರ್ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.




