ಶ್ರೀಲಂಕಾ ವಿರುದ್ಧ ಮುಂಬರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ತಂಡವನ್ನು ಪ್ರಕಟಿಸಿದ್ದು, ಹಿರಿಯ ಆಲ್‌ರೌಂಡರ್ ರವೀಂದ್ರ ಜಡೇಜಾ ಮರಳಿದ್ದಾರೆ. ಕಳೆದ ಮೇ ತಿಂಗಳಲ್ಲಿ ನಡೆದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ವೇಳೆ ಟೆನಿಸ್ ಎಲ್ಬೊ ಗಾಯಕ್ಕೆ ತುತ್ತಾಗಿದ್ದ ಜಡೇಜಾ, ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಉಪಖಂಡದ ಪಿಚ್‌ಗಳಲ್ಲಿ ಭಾರತದ ಸ್ಪಿನ್ ದಾಳಿಗೆ ಬಲ ತುಂಬಲಿದ್ದಾರೆ. ಇದೇ ವೇಳೆ, ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಮಂಡಿರಜ್ಜು ಗಾಯಕ್ಕೆ ತುತ್ತಾಗಿರುವ ವಾಷಿಂಗ್ಟನ್ ಸುಂದರ್ ಬದಲಿಗೆ, ಸ್ಪಿನ್ ಆಲ್‌ರೌಂಡರ್ ಸಾರಾಂಶ್ ಜೈನ್ ಅವರಿಗೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದಿಂದ ಬುಲಾವ್ ಬಂದಿದೆ.
ಮಧ್ಯಪ್ರದೇಶ ಮೂಲದ ಸಾರಾಂಶ್ ಜೈನ್ ಇತ್ತೀಚೆಗೆ ಶ್ರೀಲಂಕಾ ‘ಎ’ ವಿರುದ್ಧದ ಪಂದ್ಯಗಳಲ್ಲಿ ಭಾರತ ‘ಎ’ ಪರ ನೀಡಿದ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ 15 ಸದಸ್ಯರ ಈ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 54 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವರು, ಮಧ್ಯಪ್ರದೇಶ ಹಾಗೂ ಭಾರತ ‘ಎ’ ತಂಡದ ಪ್ರಮುಖ ಬೌಲಿಂಗ್ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಬಲಗೈ ಆಫ್-ಸ್ಪಿನ್ನರ್ ಆಗಿರುವ ಸಾರಾಂಶ್, 27.30ರ ಸರಾಸರಿ ಹಾಗೂ ಕೇವಲ 3.01ರ ಎಕಾನಮಿಯಲ್ಲಿ ಒಟ್ಟು 181 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 75 ರನ್ ನೀಡಿ 6 ವಿಕೆಟ್ ಪಡೆದಿರುವುದು ಅವರ ಶ್ರೇಷ್ಠ ಸಾಧನೆಯಾಗಿದೆ.
ಬೌಲಿಂಗ್ ಮಾತ್ರವಲ್ಲದೆ ಕೆಳ ಕ್ರಮಾಂಕದ ಎಡಗೈ ಬ್ಯಾಟರ್ ಆಗಿಯೂ ಸಾರಾಂಶ್ ತಂಡಕ್ಕೆ ಆಧಾರವಾಗಬಲ್ಲರು. ಪ್ರಥಮ ದರ್ಜೆ ಕ್ರಿಕೆಟ್‌ನ 85 ಇನ್ನಿಂಗ್ಸ್‌ಗಳಲ್ಲಿ 31.75ರ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಅವರು, ಒಟ್ಟು 2,223 ರನ್ ಕಲೆಹಾಕಿದ್ದಾರೆ. ಇದರಲ್ಲಿ 14 ಅರ್ಧಶತಕ ಹಾಗೂ 2 ಶತಕಗಳು (ಗರಿಷ್ಠ ಸ್ಕೋರ್ 103) ಸೇರಿವೆ. ವಾಷಿಂಗ್ಟನ್ ಸುಂದರ್ ಅವರ ಅನುಪಸ್ಥಿತಿಯನ್ನು ತುಂಬಬಲ್ಲ ಎಲ್ಲ ಸಾಮರ್ಥ್ಯವೂ ಈ ಮೂಲಕ ಅವರಲ್ಲಿರುವುದು ಸಾಬೀತಾಗಿದೆ.
ಸರಣಿಗೂ ಮುನ್ನ ಆಗಸ್ಟ್ 7ರಿಂದ ಕೊಲಂಬೊದಲ್ಲಿ ನಾಲ್ಕು ದಿನಗಳ ಅಭ್ಯಾಸ ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು ಯುವ ಬ್ಯಾಟರ್ ಸಾಯಿ ಸುದರ್ಶನ್ ಮತ್ತು ವೇಗಿ ಜಸ್‌ಪ್ರೀತ್ ಬುಮ್ರಾ ಅವರ ಲಭ್ಯತೆಯು ಬಿಸಿಸಿಐ ವೈದ್ಯಕೀಯ ತಂಡದ ಫಿಟ್‌ನೆಸ್ ಪ್ರಮಾಣಪತ್ರವನ್ನು ಅವಲಂಬಿಸಿದೆ. ಆಗಸ್ಟ್ 15 ರಿಂದ 19ರವರೆಗೆ ಗಾಲ್‌ನಲ್ಲಿ ಮೊದಲ ಟೆಸ್ಟ್ ನಡೆದರೆ, ಆಗಸ್ಟ್ 23 ರಿಂದ 27ರವರೆಗೆ ಕೊಲಂಬೊದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.
ಹಾಗೆಯೇ ತಂಡದಲ್ಲಿ ಕೆ ಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ, ದೇವದತ್ತ ಪಡಿಕ್ಕಲ್ ಒಳಗೊಂಡ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ.
ಶ್ರೀಲಂಕಾ ಟೆಸ್ಟ್ ಸರಣಿಗೆ ಪ್ರಕಟಿಸಲಾದ ಭಾರತ ತಂಡ: ಶುಭ್‌ಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮಾನವ್ ಸುತಾರ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್, ಸಾರಾಂಶ್ ಜೈನ್.





