ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿ-ಯುವಜನರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಹಿಂಪಡೆಯುತ್ತೇವೆ ಎಂದು ಬಿಹಾರ ಮತ್ತು ಅಸ್ಸಾಂ ಸರ್ಕಾರಗಳು ಭರವಸೆ ನೀಡಿವೆ. ಅಲ್ಲದೆ, ಬಂಧಿತರನ್ನು ತಕ್ಷಣವೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿವೆ.
ದೆಹಲಿಯಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಬೆಂಬಲಿಸಿ ಜುಲೈ 26ರಂದು ಹಲವು ರಾಜ್ಯಗಳಲ್ಲಿ ಪ್ರತಿಭಟನೆಗಳು ನಡೆದಿದ್ದವು. ಆದರೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿ, ಹಲವು ಪ್ರತಿಭಟನಾಕಾರರನ್ನು ಬಂಧಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರವು ದೇಶಾದ್ಯಂತ ನೀಟ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಯಾರ ವಿರುದ್ಧವೂ ಎಫ್‌ಐಆರ್ ದಾಖಲಿಸುವುದಿಲ್ಲ, ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿತ್ತು. ಅದರಂತೆ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ಗಳನ್ನು ರದ್ದುಗೊಳಿಸಬೇಕು ಮತ್ತು ಬಂಧಿತರನ್ನು ಬಿಡುಗಡೆ ಮಾಡಬೇಕೆಂದು ಸಿಜೆಪಿ ಒತ್ತಾಯಿಸಿತ್ತು.
ಈ ಬೆನ್ನಲ್ಲೇ, ಎಫ್‌ಐಆರ್ ರದ್ದತಿ ಮತ್ತು ಬಂಧಿತರ ಬಿಡುವಡೆ ಬಗ್ಗೆ ಬಿಹಾರ ಮತ್ತು ಅಸ್ಸಾಂ ಸರ್ಕಾರಗಳು ಭರವಸೆ ನೀಡಿವೆ. ಬಿಹಾರ ಸರ್ಕಾರದ ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ ಕ್ಷತ್ರನೀಲ್ ಸಿಂಗ್ ಅವರು ಪ್ರಕಟಣೆ ನೀಡಿದ್ದು, “ಜುಲೈ 26ರ ಶಾಂತಿಯುತ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಯಾರ ವಿರುದ್ಧವೂ ಯಾವುದೇ ರೀತಿಯ ಕಾನೂನು ಅಥವಾ ದಂಡನಾತ್ಮಕ ಕ್ರಮಗಳನ್ನು ಜರುಗಿಸುವುದಿಲ್ಲ” ಎಂದು ತಿಳಿಸಿದ್ದಾರೆ. ಅಂತೆಯೇ, ಅಸ್ಸಾಂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಜಯ್ ತಿವಾರಿ ಕೂಡ ಪ್ರಕಟಣೆ ಹೊರಡಿಸಿದ್ದು, “ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳು, ನೋಟಿಸ್‌ಗಳನ್ನು ಹಿಂಪಡೆಯುವ ಪ್ರಕ್ರಿಯೆ ತಕ್ಷಣದಿಂದಲೇ ಜಾರಿಗೆ ಬರಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ಸಮಿತಿಯ ಮೇಲೆ ಸಮಿತಿ: ಪರೀಕ್ಷಾ ಸುಧಾರಣೆಯೇ? ವಿದ್ಯಾರ್ಥಿಗಳ ಕಣ್ಣಿಗೆ ಮಣ್ಣೆರಚುವ ತಂತ್ರವೇ?
ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾರಣಕ್ಕಾಗಿ ಬಂಧಿಸಲಾದ ಅಥವಾ ವಶಕ್ಕೆ ಪಡೆಯಲಾದ ಎಲ್ಲರನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು ಎಂದು ಬಿಹಾರ ಸರ್ಕಾರ ತಿಳಿಸಿದೆ. ಅಸ್ಸಾಂನಲ್ಲೂ ಕೂಡ 13ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಅವರಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪರಾಮರ್ಶಿಸಿ ಶೀಘ್ರವೇ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ಭವಿಷ್ಯದಲ್ಲಿಯೂ ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಯಾರ ಮೇಲೆಯೂ ನೇರ ಅಥವಾ ಪರೋಕ್ಷ ಕ್ರಮ ಕೈಗೊಳ್ಳುವುದಿಲ್ಲ ಎಂದು ಎರಡೂ ಸರ್ಕಾರಗಳು ಭರವಸೆ ನೀಡಿವೆ.
ಅದೇ ರೀತಿ, ರಾಜಸ್ಥಾನ ಸೇರಿದಂತೆ ಇತರ ಎನ್‌ಡಿಎ ಆಡಳಿತದ ರಾಜ್ಯಗಳೂ ಸಹ ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳನ್ನು ರದ್ದುಗೊಳಿಸುವುದಾಗಿ ಮತ್ತು ಭವಿಷ್ಯದಲ್ಲಿ ಯಾವುದೇ ಪ್ರಕರಣ ದಾಖಲಿಸುವುದಿಲ್ಲ ಎಂಬ ಭರವಸೆ ನೀಡಿವೆ.
ಬಿಜೆಪಿ ಮತ್ತು ಎನ್‌ಡಿಎ ಆಡಳಿತದ ರಾಜ್ಯಗಳ ಈ ನಿರ್ಧಾರವು ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಮತ್ತು ಯುವಜನರಿಗೆ ದೊರೆತ ದೊಡ್ಡ ಜಯವಾಗಿದೆ.



