ಶತಕ ಬಾರಿಸುವ ಮೂಲಕ ಕೊಹ್ಲಿ ಅವರು ಹಲವು ಮುಖ್ಯ ದಾಖಲೆಗಳನ್ನು ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ 10 ಶತಕಗಳನ್ನು ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ರೋಮಾಂಚಕಾರಿ ಪಂದ್ಯದಲ್ಲಿ, ಕೆಕೆಆರ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 60 ಎಸೆತಗಳಲ್ಲಿ ಅಜೇಯ 105 ರನ್ ಗಳಿಸುವ ಮೂಲಕ ಹಲವಾರು ಹೊಸ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
ಕಳೆದ ಎರಡು ಪಂದ್ಯಗಳಲ್ಲಿ ಶೂನ್ಯ ಸಂಪಾದಿಸಿ ನಿರಾಸೆ ಮೂಡಿಸಿದ್ದ ಕೊಹ್ಲಿ, ಈ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಅಸಾಧಾರಣ ಗೆಲುವು ತಂದುಕೊಟ್ಟಿದ್ದಾರೆ. ಕೆಕೆಆರ್ ನೀಡಿದ್ದ 193 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ಇನ್ನೂ 5 ಎಸೆತಗಳು ಬಾಕಿ ಇರುವಂತೆಯೇ 19.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 194 ರನ್ ಗಳಿಸಿ ಜಯಶಾಲಿಯಾಯಿತು.
ವಿರಾಟ್ ಕೊಹ್ಲಿ ಅವರ ಈ ಅಮೋಘ ಇನಿಂಗ್ಸ್‌ನಲ್ಲಿ 11 ಆಕರ್ಷಕ ಬೌಂಡರಿಗಳು ಮತ್ತು 3 ಸಿಕ್ಸರ್‌ಗಳು ಒಳಗೊಂಡಿದ್ದವು. ಅವರ ಸ್ಟ್ರೈಕ್ ರೇಟ್ 175.00 ಆಗಿತ್ತು. ಆರಂಭಿಕ ಆಟಗಾರ ಜಾಕೋಬ್ ಬೆಥೆಲ್ (15) ಅವರ ವಿಕೆಟ್ ಬೇಗನೆ ಪತನವಾದ ನಂತರ, ದೇವದತ್ ಪಡಿಕ್ಕಲ್ (39) ಅವರ ಜೊತೆ ಸೇರಿದ ಕೊಹ್ಲಿ 92 ರನ್‌ಗಳ ಉತ್ತಮ ಜೊತೆಯಾಟದ ಇನ್ನಿಂಗ್ಸ್ ಕಟ್ಟಿದರು. ಈ ಭರ್ಜರಿ ಗೆಲುವಿನ ಮೂಲಕ ಹಾಲಿ ಚಾಂಪಿಯನ್ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವಂತೆ ನೋಡಿಕೊಂಡರು.
ಇದನ್ನು ಓದಿದ್ದೀರಾ? IPL ಆಟಗಾರರಿಗೆ ‘ಹನಿ ಟ್ರ್ಯಾಪ್’ ಭೀತಿ: ಬಿಸಿಸಿಐನಿಂದ ಹೈಅಲರ್ಟ್, ಮಾಲೀಕರಿಗೂ ಎಚ್ಚರಿಕೆ
ಈ ಶತಕ ಬಾರಿಸುವ ಮೂಲಕ ಕೊಹ್ಲಿ ಅವರು ಹಲವು ಮುಖ್ಯ ದಾಖಲೆಗಳನ್ನು ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ 10 ಶತಕಗಳನ್ನು ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಇದುವರೆಗೂ ಅಭಿಷೇಕ್ ಶರ್ಮಾ (9 ಶತಕಗಳು) ಜೊತೆ ಸಮಬಲ ಸಾಧಿಸಿದ್ದರು. ವಿಶ್ವ ಕ್ರಿಕೆಟ್‌ನಲ್ಲಿ ಕ್ರಿಸ್ ಗೇಲ್ (22) ಮತ್ತು ಬಾಬರ್ ಅಜಮ್ (13) ಅವರ ನಂತರ 10 ಟಿ20 ಶತಕಗಳನ್ನು ಗಳಿಸಿದ ಮೂರನೇ ಆಟಗಾರ ಕೊಹ್ಲಿ ಆಗಿದ್ದಾರೆ.

ಅಲ್ಲದೆ, ಐಪಿಎಲ್ ಇತಿಹಾಸದಲ್ಲಿ ತಮ್ಮ 9ನೇ ಶತಕವನ್ನು ಪೂರ್ಣಗೊಳಿಸಿದ್ದು, ಐಪಿಎಲ್‌ನಲ್ಲಿ ಅತ್ಯಧಿಕ ಶತಕಗಳ ದಾಖಲೆ ಅವರ ಹೆಸರಿನಲ್ಲೇ ಮುಂದುವರೆಯುತ್ತಿದೆ. ಐಪಿಎಲ್ ರನ್ ಬೆನ್ನಟ್ಟುವ ಇತಿಹಾಸದಲ್ಲಿ ತಮ್ಮ 3ನೇ ಶತಕವನ್ನು ಬಾರಿಸುವ ಮೂಲಕ ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಅವರ ದಾಖಲೆಗೆ ಕೊಹ್ಲಿ ಸಮಬಲ ಸಾಧಿಸಿದ್ದಾರೆ. ಇದರ ಜೊತೆಗೆ ಟಿ20 ಕ್ರಿಕೆಟ್‌ನಲ್ಲಿ 14,000 ರನ್ ಗಳಿಸಿದ ಅತಿವೇಗದ ಆಟಗಾರ ಎಂಬ ವಿಶ್ವ ದಾಖಲೆ ಸಹ ಅವರ ಮುಡಿಗೇರಿದೆ.
ಈ ಅಜೇಯ ಇನಿಂಗ್ಸ್‌ನ ನಂತರ, ಕೊಹ್ಲಿ ಐಪಿಎಲ್ 2026ರ ‘ಆರೆಂಜ್ ಕ್ಯಾಪ್’ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದ್ದಾರೆ. ಅವರು ಈ ಆವೃತ್ತಿಯಲ್ಲಿ ಆಡಿದ 12 ಪಂದ್ಯಗಳಿಂದ 53.77 ಸರಾಸರಿ ಮತ್ತು 165.75 ಸ್ಟ್ರೈಕ್ ರೇಟ್‌ನಲ್ಲಿ 484 ರನ್ ಗಳಿಸಿದ್ದಾರೆ (1 ಶತಕ, 3 ಅರ್ಧ ಶತಕಗಳು ಸೇರಿದಂತೆ). ಮೊದಲು ಬ್ಯಾಟಿಂಗ್ ಮಾಡಿದ್ದ ಕೆಕೆಆರ್, ಎ. ರಘುವಂಶಿ ಅವರ 71 ರನ್‌ಗಳ ನೆರವಿನಿಂದ 192/4 ರನ್ ಗಳಿಸಿತ್ತು. ಆದರೆ ಕೊಹ್ಲಿ ಅವರ ಅಸಾಧಾರಣ ಆಟದ ಮುಂದೆ ಈ ಗುರಿ ಸಣ್ಣದಾಯಿತು ಮತ್ತು ಆರ್‌ಸಿಬಿ ಸುಲಭ ಜಯವನ್ನು ತನ್ನದಾಗಿಸಿಕೊಂಡಿತು.




