ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026 ರಲ್ಲಿ ಆಟಗಾರರ ಭದ್ರತೆ ಹಾಗೂ ಶಿಸ್ತು ಕಾಪಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿದೆ. ‘ಹನಿ ಟ್ರ್ಯಾಪ್’ (ವಂಚನೆಯ ಜಾಲ) ಮತ್ತು ಉದ್ದೇಶಪೂರ್ವಕ ರಾಜಿ (ಟಾರ್ಗೆಟೆಡ್ ಕಾಂಪ್ರಮೈಸ್) ಅಪಾಯಗಳ ಕುರಿತು ಐಪಿಎಲ್ ತಂಡಗಳಿಗೆ ಬಿಸಿಸಿಐ ಗಂಭೀರ ಎಚ್ಚರಿಕೆ ನೀಡಿದೆ.
ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಫ್ರಾಂಚೈಸಿ ಮಾಲೀಕರ ನಡವಳಿಕೆ ಹಾಗೂ ಹೋಟೆಲ್ ಪ್ರವೇಶದ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರು ಗುರುವಾರ ರಾತ್ರಿ ಎಲ್ಲಾ ಫ್ರಾಂಚೈಸಿಗಳಿಗೆ 7 ಪುಟಗಳ ವಿಸ್ತೃತ ಮಾರ್ಗಸೂಚಿಯನ್ನು ರವಾನಿಸಿದ್ದು, ಲೈಂಗಿಕ ದುರ್ನಡತೆಯಂತಹ ಗಂಭೀರ ಕಾನೂನು ಆರೋಪಗಳಿಗೆ ಎಡೆಮಾಡಿಕೊಡುವ ಸಂದರ್ಭಗಳ ಬಗ್ಗೆ ಎಚ್ಚರಿಕೆ ವಹಿಸಲು ಮತ್ತು ಸದಾ ಜಾಗೃತರಾಗಿರಲು ತಂಡಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹೊಸ ನಿಯಮಗಳ ಪ್ರಕಾರ ಹೋಟೆಲ್ ಪ್ರವೇಶದ ಮೇಲೆ ತೀವ್ರ ನಿರ್ಬಂಧ ಹೇರಲಾಗಿದೆ. ಆಟಗಾರ ಅಥವಾ ಸಹಾಯಕ ಸಿಬ್ಬಂದಿಯ ಕೊಠಡಿಗೆ ಹೊರಗಿನವರು ಪ್ರವೇಶಿಸಬೇಕೆಂದರೆ ತಂಡದ ಮ್ಯಾನೇಜರ್ ಅವರ ಮುಂಚಿತ ಲಿಖಿತ ಅನುಮತಿ ಕಡ್ಡಾಯವಾಗಿದೆ. ಅತಿಥಿಗಳನ್ನು ಹೋಟೆಲ್‌ನ ಲಾಬಿ ಅಥವಾ ಸ್ವಾಗತ ಪ್ರದೇಶದಲ್ಲಿ ಮಾತ್ರ ಭೇಟಿಯಾಗಬೇಕಿದೆ.
ಇದರ ಜೊತೆಗೆ, ಭದ್ರತಾ ಸಂಪರ್ಕ ಅಧಿಕಾರಿಗಳಿಗೆ (SLO/TIO) ಮಾಹಿತಿ ನೀಡದೆ ಅಸಮಯದಲ್ಲಿ ಹೋಟೆಲ್‌ನಿಂದ ಹೊರಗಡೆ ಹೋಗುವುದನ್ನು ನಿರ್ಬಂಧಿಸಲಾಗಿದೆ. ಆಟಗಾರರು ಹೊರಗೆ ಹೋಗುವ ಮುನ್ನ ಪೂರ್ವಾನುಮತಿ ಪಡೆದು ದಾಖಲೆ ನಿರ್ವಹಿಸುವುದು ಕಡ್ಡಾಯ. ಹಾಗೆಯೇ, ಕ್ರೀಡಾಂಗಣ, ಹೋಟೆಲ್ ಮತ್ತು ಅಭ್ಯಾಸದ ಸ್ಥಳಗಳಲ್ಲಿ ಆಟಗಾರರು ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಮಾನ್ಯತೆ ಕಾರ್ಡ್‌ಗಳನ್ನು (ಅಕ್ರೆಡಿಟೇಶನ್ ಕಾರ್ಡ್) ಧರಿಸಲೇಬೇಕು ಮತ್ತು ತಪಾಸಣೆ ವೇಳೆ ಭದ್ರತಾ ಸಿಬ್ಬಂದಿಗೆ ತಪ್ಪದೆ ತೋರಿಸಬೇಕು ಎಂದು ನಿಯಮಾವಳಿಯಲ್ಲಿ ತಿಳಿಸಲಾಗಿದೆ.
ಇದನ್ನು ಓದಿದ್ದೀರಾ? ತಮಿಳುನಾಡಿನಲ್ಲಿ ತುಮಕೂರು ಮೂಲದ ಕನ್ನಡಿಗನ ಜಯಭೇರಿ; ಟಿವಿಕೆ ಪಕ್ಷದಿಂದ ಸುನಿಲ್ ಆನಂದ್ ಶಾಸಕ
ಪಂದ್ಯದ ವೇಳೆ ಫ್ರಾಂಚೈಸಿ ಮಾಲೀಕರ ವರ್ತನೆಗೂ (PMOA ನಿಯಮ) ಕಡಿವಾಣ ಹಾಕಲಾಗಿದ್ದು, ಅವರು ಡಗೌಟ್, ಡ್ರೆಸ್ಸಿಂಗ್ ರೂಮ್ ಅಥವಾ ಮೈದಾನದಲ್ಲಿ ಆಟಗಾರರೊಂದಿಗೆ ಮಾತನಾಡುವುದು, ಅಪ್ಪಿಕೊಳ್ಳುವುದು ಸೇರಿ ಮುಂತಾದ ಒಡನಾಟವನ್ನು ನಿರ್ಬಂಧಿಸಲಾಗಿದೆ. ಡ್ರೆಸ್ಸಿಂಗ್ ರೂಮ್, ಡಗೌಟ್ ಹಾಗೂ ಹೋಟೆಲ್‌ಗಳಲ್ಲಿ ವೇಪಿಂಗ್, ಇ-ಸಿಗರೇಟ್ ಹಾಗೂ ಯಾವುದೇ ನಿಷೇಧಿತ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈ ನಿಯಮಗಳನ್ನು ಉಲ್ಲಂಘಿಸಿದರೆ ಶೋಕಾಸ್ ನೋಟಿಸ್, ಭಾರಿ ಆರ್ಥಿಕ ದಂಡ, ಐಪಿಎಲ್‌ನಿಂದ ಅಮಾನತು ಅಥವಾ ಕಾನೂನಾತ್ಮಕ ಕ್ರಮದಂತಹ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಬಿಸಿಸಿಐ ಎಚ್ಚರಿಸಿದೆ. ಫ್ರಾಂಚೈಸಿಗಳು 48 ಗಂಟೆಯೊಳಗೆ ಆಟಗಾರರಿಗೆ ಈ ಹೊಸ ನಿಯಮಗಳ ಬಗ್ಗೆ ಮಾಹಿತಿ ನೀಡಿ ಲಿಖಿತ ಒಪ್ಪಿಗೆ ಪಡೆಯಬೇಕು. ನಿಯಮಗಳ ಪಾಲನೆಯ ಬಗ್ಗೆ ಬಿಸಿಸಿಐ ಕಾರ್ಯಾಚರಣೆ ತಂಡವು ಅನಿರೀಕ್ಷಿತ ತಪಾಸಣೆ ಕೂಡ ನಡೆಸಲಿದೆ ಎಂದು ಸ್ಪಷ್ಟಪಡಿಸಲಾಗಿದೆ.




