ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ ಮುನ್ನಡೆಯಬೇಕು ಎಂದು RIFAH ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ರಾಜ್ಯಾಧ್ಯಕ್ಷ ಜನಾಬ್ ಸೈಯದ್ ಮುಮ್ತಾಜ್ ಮನ್ಸೂರಿ ಕರೆ ನೀಡಿದರು.
ಉಡುಪಿಯ ಹೋಟೆಲ್ ಮಣಿಪಾಲ್ ಇನ್‌ನ ರಂಜಿತಾ ಪ್ಯಾಲೇಸ್‌ನಲ್ಲಿ ಸೆ.27ರಂದು ನಡೆದ RIFAH ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ತ್ರಿ-ಜಿಲ್ಲಾ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರು, ಮಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ ಹಾಗೂ ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳ ಉದ್ಯಮಿಗಳು ಮತ್ತು RIFAH ಸದಸ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಪ್ರಾದೇಶಿಕ ಮಟ್ಟದಲ್ಲಿ ವ್ಯಾಪಾರ ಸಹಯೋಗವನ್ನು ಬಲಪಡಿಸುವುದು ಹಾಗೂ ವ್ಯವಹಾರ ವಿಸ್ತರಣೆಗೆ ಅವಕಾಶ ಕಲ್ಪಿಸುವುದು ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿತ್ತು.
ಕಾರ್ಯಾಗಾರದಲ್ಲಿ ವಿವಿಧ ಉದ್ಯಮ ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಯಿತು. ಸಮುದಾಯದ ಸಹೋದರರನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮೇಲಕ್ಕೆತ್ತಲು ಉದ್ಯಮಿಗಳು ಪರಸ್ಪರ ಬೆಂಬಲ ನೀಡುವ ಅಗತ್ಯವಿದೆ ಎಂದು ಮುಮ್ತಾಜ್ ಮನ್ಸೂರಿ ಹೇಳಿದರು.
ವಿವಿಧ ಮಸ್ಲಕ್ ಅಥವಾ ಸಿದ್ಧಾಂತಗಳನ್ನು ಮೀರಿ ಸಮಾಜದ ಅಭಿವೃದ್ಧಿಗೆ ಎಲ್ಲರೂ ಕೊಡುಗೆ ನೀಡಬೇಕು. ಉತ್ತಮ ಭವಿಷ್ಯಕ್ಕಾಗಿ ಒಗ್ಗಟ್ಟಿನಿಂದ ಬೆಳೆಯುವುದು ಇಂದಿನ ಅಗತ್ಯವಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಉಡುಪಿ ಚಾಪ್ಟರ್‌ನ್ನು ಅವರು ಶ್ಲಾಘಿಸಿದರು.

RIFAH ರಾಜ್ಯ ಉಪಾಧ್ಯಕ್ಷ ಜನಾಬ್ ಫಯಾಜ್ ಅಬ್ದುಲ್ ಜಬ್ಬಾರ್ ಅವರು ಅತಿಥಿಗಳು, ಸದಸ್ಯರು ಹಾಗೂ ಸಮುದಾಯದ ಉದ್ಯಮಿಗಳನ್ನು ಸ್ವಾಗತಿಸಿ, ದೇಶ ಹಾಗೂ ಜಾಗತಿಕ ಮಟ್ಟದಲ್ಲಿ ಬದಲಾಗುತ್ತಿರುವ ಸನ್ನಿವೇಶದಲ್ಲಿ RIFAHನ ಪ್ರಸ್ತುತತೆ ಮತ್ತು ಮಹತ್ವವನ್ನು ವಿವರಿಸಿದರು.
MAHE ಮಣಿಪಾಲದ ಇನ್ನೋವೇಶನ್ ಆಫೀಸರ್ ಡಾ. ಮೊಹಮ್ಮದ್ ಝುಬೈರ್ ಅವರು ಸ್ಟಾರ್ಟ್‌ಅಪ್‌ಗಳು ಹಾಗೂ ನವೀನ ಆಲೋಚನೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡುವುದರ ಜೊತೆಗೆ ಆದಾಯದ ಹೊಸ ಮೂಲಗಳನ್ನು ಸೃಷ್ಟಿಸುವ ಕುರಿತು ಮಾಹಿತಿ ನೀಡಿದರು. ಉತ್ತಮ ಹಾಗೂ ಪ್ರಾಮಾಣಿಕ ಆಲೋಚನೆಗಳು ಸಣ್ಣ ಪ್ರಮಾಣದ ಸ್ಟಾರ್ಟ್‌ಅಪ್‌ಗಳನ್ನು ದೊಡ್ಡ ಉದ್ಯಮಗಳಾಗಿ ಬೆಳೆಸುವ ಸಾಧ್ಯತೆಗಳ ಕುರಿತು PPT ಪ್ರಸ್ತುತಿಯ ಮೂಲಕ ವಿವರಿಸಿದರು.
ಬೆಂಗಳೂರಿನ ಮೆರಿಟ್ಯೂಡ್ ಸ್ಕಿಲ್ ಡೆವಲಪ್‌ಮೆಂಟ್ ಪ್ರೈ.ಲಿ. ಸಿಇಒ ಫಯಾಜ್ ಅಹ್ಮದ್ ಅವರು ವ್ಯವಹಾರ ವಿಸ್ತರಣೆ ಮತ್ತು ಬೆಳವಣಿಗೆಯಲ್ಲಿ ಕೃತಕ ಬುದ್ಧಿಮತ್ತೆ (AI)ಯ ಮಹತ್ವದ ಕುರಿತು ಮಾತನಾಡಿದರು.
ಕಾರ್ಯಕ್ರಮವು ಜನಾಬ್ ಫೈಜ್ ಅಹ್ಮದ್ ಅವರ ಕುರಾನ್ ತಿಲಾವತ್‌ನೊಂದಿಗೆ ಆರಂಭವಾಯಿತು. ಬೆಳಗಿನ ಅಧಿವೇಶನವನ್ನು ಶೋಯೆಬ್ ಅಹ್ಮದ್ ನಿರೂಪಿಸಿದರು. ಮಧ್ಯಾಹ್ನದ ಅಧಿವೇಶನ ಹಾಗೂ ‘ರುಬಾರು’ ಸಂವಾದವನ್ನು ಝಹೀರ್ ಅಹ್ಮದ್ ನಡೆಸಿಕೊಟ್ಟರು.
RIFAH ಉಡುಪಿ ಚಾಪ್ಟರ್ ಅಧ್ಯಕ್ಷ ಜನಾಬ್ ಆಸಿಫ್ ಇಕ್ಬಾಲ್ ವಂದಿಸಿದರು.





