ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಜಪ್ತಿ ಮಾಡಿದ ಬಳಿಕ ಪ್ರಕರಣ ದಾಖಲಿಸದೆ ಹಣ ಪಡೆದು ವಾಹನವನ್ನು ಬಿಡುಗಡೆ ಮಾಡಿದ ಆರೋಪ ಆಳಂದ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ವಿರುದ್ಧ ಕೇಳಿಬಂದಿದ್ದು, ಈ ಸಂಬಂಧ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿದಂತೆ ನಾಲ್ವರನ್ನು ಅಮಾನತುಗೊಳಿಸಲಾಗಿದೆ.
ಆಳಂದ ಪೊಲೀಸ್ ಠಾಣೆಯ ಪಿಐ ಶರಣಬಸಪ್ಪ ಕೊಡ್ಲಾ ಹಾಗೂ ಪೇದೆಗಳಾದ ಹಣಮಂತ, ಮಲ್ಲಿಕಾರ್ಜುನ ಮತ್ತು ಸಾಯಬಣ್ಣ ಅಮಾನತುಗೊಂಡವರು ಎಂದು ತಿಳಿದುಬಂದಿದೆ.
ಕಳೆದ ಸೋಮವಾರ ಮಧ್ಯರಾತ್ರಿ 112 ಸಹಾಯವಾಣಿಗೆ ಬಂದ ಮಾಹಿತಿ ಆಧರಿಸಿ ಆಳಂದ ಪೊಲೀಸರು ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ಪತ್ತೆಹಚ್ಚಿ ಜಪ್ತಿ ಮಾಡಿದ್ದರು ಎನ್ನಲಾಗಿದೆ. ಬಳಿಕ ವಾಹನವನ್ನು ಪೊಲೀಸ್ ಠಾಣೆಗೆ ಕೊಂಡೊಯ್ದರೂ, ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಬದಲು ಹಣದ ವ್ಯವಹಾರ ನಡೆಸಿ ವಾಹನವನ್ನು ಬಿಡುಗಡೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ವಾಹನವನ್ನು ಠಾಣೆಯಿಂದ ಬಿಡುಗಡೆ ಮಾಡಲು ಸುಮಾರು ₹1 ಲಕ್ಷಕ್ಕೆ ‘ಡೀಲ್’ ನಡೆದಿತ್ತು ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿತ್ತು. ಈ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟಗೊಂಡ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಇಲಾಖಾ ಮಟ್ಟದಲ್ಲಿ ವಿಚಾರಣೆ ನಡೆಸಿದೆ.
This video cannot be played in your browser. Open the video directly

ಇದನ್ನು ಓದಿದ್ದೀರಾ? ಕಲಬುರಗಿ | ಎಸ್‌ಐಆರ್ ವಿರೋಧಿಸಿ ಧರಣಿ; ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹ
ವಿಚಾರಣೆ ವೇಳೆ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಹಾಗೂ ಪ್ರಕರಣದ ನಿರ್ವಹಣೆಯಲ್ಲಿ ನಿಯಮಬಾಹಿರ ನಡೆ ಕಂಡುಬಂದ ಹಿನ್ನೆಲೆಯಲ್ಲಿ ಪಿಐ ಶರಣಬಸಪ್ಪ ಕೊಡ್ಲಾ ಸೇರಿದಂತೆ ನಾಲ್ವರು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.





