ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನ 8ನೇ ದಿನದಂದು ಭಾರತೀಯ ಕ್ರೀಡಾಪಟುಗಳು ಮಿಶ್ರ ಫಲಿತಾಂಶದ ನಡುವೆಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಮ್ಯಾರಥಾನ್ ಓಟ ಹಾಗೂ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತ ಬೆಳ್ಳಿ ಪದಕಗಳಿಗೆ ಮುತ್ತಿಟ್ಟರೆ, ಸ್ಕ್ವಾಷ್ನಲ್ಲಿ ಕಂಚಿನ ಪದಕ ಒಲಿದಿದೆ. ಆದರೆ, ಬ್ಯಾಡ್ಮಿಂಟನ್ನಲ್ಲಿ ಪದಕದ ಭರವಸೆಯಾಗಿದ್ದ ಸ್ಟಾರ್ ಆಟಗಾರ ಲಕ್ಷ್ಯ ಸೇನ್ ಸೋಲುಂಡು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.
ಪುರುಷರ ಮ್ಯಾರಥಾನ್ ಓಟದಲ್ಲಿ ಭಾರತದ ಸಾವನ್ ಬರ್ವಾಲ್ ಬೆಳ್ಳಿ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ. ಕೇವಲ 2 ಗಂಟೆ 11 ನಿಮಿಷ 37 ಸೆಕೆಂಡುಗಳಲ್ಲಿ ಗುರಿ ತಲುಪಿದ ಅವರು ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಎರಡನೇ ಸ್ಥಾನ ಪಡೆದರು. ವಿಶೇಷವೆಂದರೆ, ಬರೋಬ್ಬರಿ 44 ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ (1982ರ ನಂತರ) ಏಷ್ಯನ್ ಗೇಮ್ಸ್ ಮ್ಯಾರಥಾನ್ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ ಇದಾಗಿದೆ.
ಶೂಟಿಂಗ್ ವಿಭಾಗದಲ್ಲಿ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ಸ್ (3P) ಟೀಮ್ ಇವೆಂಟ್ನಲ್ಲಿ ಆಶಿ ಚೌಕ್ಸೆ, ವಿದರ್ಸಾ ವಿನೋದ್ ಹಾಗೂ ತಿಲೋತ್ತಮಾ ಸೇನ್ ಅವರನ್ನೊಳಗೊಂಡ ಭಾರತದ ತ್ರಿವಳಿ ತಂಡವು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದೆ. ಇದರ ಜೊತೆಗೆ, ಅತ್ಯುತ್ತಮ ಪ್ರದರ್ಶನ ಕಾಯ್ದುಕೊಂಡ ತಿಲೋತ್ತಮಾ ಸೇನ್ ಮತ್ತು ವಿದರ್ಸಾ ಅವರು ಇದೇ ವಿಭಾಗದ ವೈಯಕ್ತಿಕ ಫೈನಲ್ ಸುತ್ತಿಗೂ ಅರ್ಹತೆ ಗಿಟ್ಟಿಸಿಕೊಂಡು ಪದಕದ ಆಸೆ ಜೀವಂತವಾಗಿರಿಸಿದ್ದಾರೆ.
ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ನಲ್ಲಿ ಭಾರತದ ಲಕ್ಷ್ಯ ಸೇನ್ ಎರಡನೇ ಸುತ್ತಿನಲ್ಲೇ ಮುಗ್ಗರಿಸಿದ್ದಾರೆ. ಸಿಂಗಾಪುರದ ಲೋಹ್ ಕೀನ್ ಯೂ ವಿರುದ್ಧ 12-21, 21-15, 14-21 ಅಂತರದ ಮೂರು ಗೇಮ್ಗಳ ಕಠಿಣ ಹೋರಾಟದಲ್ಲಿ ಅವರು ಸೋಲು ಕಂಡರು. ಆದರೆ, ಮಹಿಳಾ ಸಿಂಗಲ್ಸ್ನಲ್ಲಿ ಉನ್ನತಿ ಹೂಡಾ ಮಲೇಷ್ಯಾದ ವಾಂಗ್ ಲಿಂಗ್ ಚಿಂಗ್ ಅವರನ್ನು 21-14, 20-22, 21-19 ಅಂತರದಲ್ಲಿ ಮಣಿಸಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿರುವುದು ಭಾರತೀಯ ಪಾಳಯದಲ್ಲಿ ಸಮಾಧಾನ ತಂದಿದೆ.
ಸ್ಕ್ವಾಷ್ ಮಿಶ್ರ ಡಬಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಜೋಶ್ನಾ ಚಿನ್ನಪ್ಪ ಮತ್ತು ವೇಲವನ್ ಸೆಂಥಿಲ್ ಕುಮಾರ್ ಜೋಡಿಯು, ಹಾಂಗ್ಕಾಂಗ್ನ ಟ್ಯಾಂಗ್-ಲೀ ಜೋಡಿಯ ವಿರುದ್ಧ 10-11, 11-2, 10-11 ಅಂತರದಲ್ಲಿ ರೋಚಕವಾಗಿ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ. ಟೇಬಲ್ ಟೆನಿಸ್ನಲ್ಲಿ ಮನುಷ್ ಶಾ ಮತ್ತು ಯಶಸ್ವಿನಿ ಘೋರ್ಪಡೆ ತಮ್ಮ ನಿರ್ಣಾಯಕ ಸಿಂಗಲ್ಸ್ ಪಂದ್ಯಗಳಲ್ಲಿ ಪರಾಭವಗೊಂಡು ಟೂರ್ನಿಯಿಂದ ನಿರ್ಗಮಿಸಿದ್ದಾರೆ.
ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತವು 2026ರ ಏಷ್ಯನ್ ಗೇಮ್ಸ್ನಲ್ಲಿ ಈವರೆಗೆ 2 ಚಿನ್ನ, 11 ಬೆಳ್ಳಿ ಮತ್ತು 13 ಕಂಚಿನ ಪದಕಗಳು ಸೇರಿ ಒಟ್ಟು 26 ಪದಕಗಳನ್ನು ಗೆದ್ದುಕೊಂಡು ಪದಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ. ಭಾರತೀಯ ಕ್ರೀಡಾಪಟುಗಳು ಶೂಟಿಂಗ್ನಲ್ಲಿ ಅತಿ ಹೆಚ್ಚು ಅಂದರೆ 13 ಪದಕಗಳನ್ನು ಬಾಚಿಕೊಂಡಿದ್ದಾರೆ (1 ಚಿನ್ನ, 6 ಬೆಳ್ಳಿ, 6 ಕಂಚು).
ಅಥ್ಲೆಟಿಕ್ಸ್ನಲ್ಲಿ 6 (3 ಬೆಳ್ಳಿ, 3 ಕಂಚು) ಪದಕಗಳು ಒಲಿದಿದ್ದರೆ, ಮಹಿಳಾ ಕ್ರಿಕೆಟ್ ತಂಡವು ಒಂದು ಬಂಗಾರಕ್ಕೆ ಕೊರಳೊಡ್ಡಿದೆ. ಇನ್ನುಳಿದಂತೆ ವೇಟ್ಲಿಫ್ಟಿಂಗ್ (1 ಬೆಳ್ಳಿ), ವುಶು (1 ಬೆಳ್ಳಿ), ಬ್ಯಾಡ್ಮಿಂಟನ್ (1 ಕಂಚು), ಟೇಬಲ್ ಟೆನಿಸ್ (1 ಕಂಚು), ಸ್ಕ್ವಾಷ್ (1 ಕಂಚು), ಸಾಫ್ಟ್ ಟೆನಿಸ್ (1 ಕಂಚು), ರೋಯಿಂಗ್ (1 ಕಂಚು) ಹಾಗೂ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ನಲ್ಲಿ (1 ಕಂಚು) ಭಾರತ ಪದಕಗಳನ್ನು ಮುಡಿಗೇರಿಸಿಕೊಂಡಿದೆ.




