ಲಾಪತಾ ಲೇಡೀಸ್: ಮನೆ ಒಳಗೂ ಹೊರಗೂ ಕಳೆದುಹೋಗುವ ಮಹಿಳೆಯರ ಹುಡುಕಾಟ

Date:

'ಲಾಪತಾ ಲೇಡೀಸ್' ಕೇವಲ ರೈಲಿನಲ್ಲಿ ಕಾಣೆಯಾದ ಇಬ್ಬರು ವಧುಗಳ ಕಥೆಯಲ್ಲ. ಮಹಿಳೆ ಮನೆಯಲ್ಲಿದ್ದರೂ ಅವಳನ್ನು ಕೇವಲ ಹೆಂಡತಿ, ಸೊಸೆ ಅಥವಾ ವಧುವಿನ ಪಾತ್ರದಲ್ಲಿ ನೋಡಿದಾಗ ಅವಳೊಳಗಿನ ವ್ಯಕ್ತಿ ಹೇಗೆ ಕಾಣೆಯಾಗುತ್ತಾನೆ ಎಂಬ ಕಥೆಯೂ ಹೌದು.

ಬಾಲಿವುಡ್ನಲ್ಲಿ ಹಾರರ್, ಆಕ್ಷನ್ ಮತ್ತು ಮಸಾಲಾ ಸಿನಿಮಾಗಳ ಅಬ್ಬರ ಜೋರಾಗಿರುವ ಈ ಕಾಲಘಟ್ಟದಲ್ಲಿ, ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡೀಸ್’ ಚಿತ್ರವು ವಿಭಿನ್ನ ಅನುಭವ ನೀಡುತ್ತದೆ. 2001ರ ಗ್ರಾಮೀಣ ಭಾರತದ ಹಿನ್ನೆಲೆಯಲ್ಲಿ ಸಾಗುವ ಈ ಕಥೆ, ಭಾರತೀಯ ಸಮಾಜದ ಪಿತೃಪ್ರಧಾನ ವ್ಯವಸ್ಥೆ, ಮಹಿಳೆಯರ ಅಸ್ತಿತ್ವ, ಶಿಕ್ಷಣ ಮತ್ತು ಸಬಲೀಕರಣದಂತಹ ಗಂಭೀರ ವಿಷಯಗಳನ್ನು ಸರಳವಾದ ಹಾಸ್ಯ ಮತ್ತು ಹೃದಯಸ್ಪರ್ಶಿ ಕಥೆಯ ಮೂಲಕ ಪ್ರೇಕ್ಷಕರ ಮುಂದಿಡುತ್ತದೆ.

- Advertisement -

ರೈಲಿನಲ್ಲಿ ವಧು ಕಾಣೆಯಾಗಿದ್ದಾಳೆ. ಗಂಡ ಹುಡುಕುತ್ತಿದ್ದಾನೆ. ಮನೆಯವರು ಗಾಬರಿಯಾಗಿದ್ದಾರೆ. ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಆದರೆ ಕಾಣೆಯಾಗಿರುವ ಆ ವಧುವಿನ ಮುಖವನ್ನು ತೋರಿಸುವ ಒಂದು ಫೋಟೋ ಕೂಡ ಗಂಡನ ಬಳಿ ಇಲ್ಲ. ಮದುವೆಯಾದ ದಿನದಿಂದ ಘೂಂಗಟ್ನೊಳಗೆ ಮುಖ ಮುಚ್ಚಿಕೊಂಡೇ ಇದ್ದ ಹೆಂಡತಿಯ ಮುಖವನ್ನು ಅವನು ಸರಿಯಾಗಿ ನೋಡಿದ್ದಾನೆಯೇ. ಈ ವಿಚಿತ್ರ ಸನ್ನಿವೇಶದಿಂದ ಆರಂಭವಾಗುವ ‘ಲಾಪತಾ ಲೇಡೀಸ್’ ನಿಧಾನವಾಗಿ ಮಹಿಳೆಯನ್ನು ನೋಡುವುದು ಮತ್ತು ಮಹಿಳೆಯನ್ನು ವ್ಯಕ್ತಿಯಾಗಿ ಗುರುತಿಸುವುದು ಒಂದೇ ಅಲ್ಲ ಎಂಬುದನ್ನು ಹೇಳುತ್ತಾ ಹೋಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ...

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ ಮುಕ್ತವಾಗಿರಬೇಕು. ಆದರೆ ಚುನಾವಣೆ ಸ್ಪರ್ಧಿಸುವ ಆಡಳಿತ ಪಕ್ಷವೇ ತನಗೆ ಇಷ್ಟವಾದ ವ್ಯಕ್ತಿಯನ್ನು ಚುನಾವಣಾ ಅಧಿಕಾರಿಯಾಗಿ ನೇಮಕ ಮಾಡಿಕೊಂಡರೆ, ವಿರೋಧ ಪಕ್ಷಗಳಿಗೆ...

ರಾಹುಲ್‌ ಗಾಂಧಿ ಲಿಸ್ಟ್‌ನಲ್ಲಿರುವ ʼಸಂವಿಧಾನದ ವಿಧ್ವಂಸಕರುʼ ಇವರೇನಾ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್‌ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ...

ತೆಲಂಗಾಣ ಬೆಳೆ ರಕ್ಷಣೆಗೆ 3 ಟಿಎಂಸಿ ನೀರು: ಅಚ್ಚುಕಟ್ಟು...

ಕೃಷ್ಣಾ ನದಿಯ ನೀರು ಮತ್ತೊಮ್ಮೆ ಕರ್ನಾಟಕ–ತೆಲಂಗಾಣದ ನಡುವಿನ ಪ್ರಮುಖ ವಿಚಾರವಾಗಿ ಮುನ್ನೆಲೆಗೆ ಬಂದಿದೆ. ತೆಲಂಗಾಣದ ಕೃಷಿ ಪ್ರದೇಶದಲ್ಲಿನ ನಿಂತಿರುವ ಬೆಳೆಗಳನ್ನು ರಕ್ಷಿಸಲು ಕರ್ನಾಟಕದಿಂದ ಕೃಷ್ಣಾ ನೀರು ಬಿಡುಗಡೆ ಮಾಡುವಂತೆ ಆ ರಾಜ್ಯದ ಸಚಿವರು...
images 73

ರೈಲಿನ ಪ್ರಯಾಣದ ನಡುವೆ ಇಬ್ಬರು ವಧುಗಳು ಅದಲುಬದಲಾಗುತ್ತಾರೆ. ಇಬ್ಬರೂ ಮುಖಕ್ಕೆ ಘೂಂಗಟ್ ಹಾಕಿಕೊಂಡಿರುವುದರಿಂದ ಯಾರು ಯಾರೆಂಬುದನ್ನು ಗುರುತಿಸಲು ಆಗುವುದಿಲ್ಲ. ಹೊರನೋಟಕ್ಕೆ ಇದು ಹಾಸ್ಯದ ಸನ್ನಿವೇಶದಂತೆ ಕಂಡರೂ, ಅದರ ಹಿಂದೆ ಮಹಿಳೆಯ ಗುರುತಿನ ಬಗ್ಗೆ ಒಂದು ಗಂಭೀರ ಪ್ರಶ್ನೆ ಅಡಗಿದೆ.

ಚಿತ್ರದಲ್ಲಿ ಘೂಂಗಟ್ ಕೇವಲ ಮುಖ ಮುಚ್ಚುವ ಬಟ್ಟೆಯಲ್ಲ. ಮಹಿಳೆ ತನ್ನ ಸುತ್ತಲಿನ ಜಗತ್ತನ್ನು ಹೇಗೆ ನೋಡಬೇಕು ಎಂಬುದಕ್ಕೆ ಅದು ಗಡಿ ಹಾಕುತ್ತದೆ. ‘ಒಮ್ಮೆ ಘೂಂಗಟ್ ಹಾಕಿಕೊಂಡ ಮೇಲೆ ಮುಂದೆ ನೋಡದೆ, ಕೆಳಗೆ ನೋಡಿಕೊಂಡು ನಡೆಯುವುದನ್ನು ಕಲಿತುಕೋ’ ಎನ್ನುವ ಮಾತು ಘೂಂಗಟ್ನ ಹಿಂದಿರುವ ಮನಸ್ಥಿತಿಯನ್ನು ಹೇಳುತ್ತದೆ. ಮಹಿಳೆ ಮುಂದೆ ನೋಡಿ ತನ್ನ ದಾರಿ ಹುಡುಕುವುದಕ್ಕಿಂತ, ಕೆಳಗೆ ನೋಡಿಕೊಂಡು ವಿಧೇಯಳಾಗಿ ನಡೆಯಬೇಕು ಎನ್ನುವ ತರಬೇತಿ ಅದು. ಹೀಗಾಗಿ ಘೂಂಗಟ್ ಮುಖವನ್ನು ಮಾತ್ರ ಮುಚ್ಚುವುದಿಲ್ಲ. ಮಹಿಳೆಯ ನೋಡುವ ದೃಷ್ಟಿಗೂ ಮಿತಿ ಹಾಕುತ್ತದೆ.

ಅದಕ್ಕೇ ದೀಪಕ್ ತನ್ನ ಹೆಂಡತಿಯ ಫೋಟೋವನ್ನೇ ಹೊಂದಿರದಿರುವುದು ಕೇವಲ ಹಾಸ್ಯದ ಸನ್ನಿವೇಶವಾಗಿ ಉಳಿಯುವುದಿಲ್ಲ. ಹೆಂಡತಿಯ ಮುಖವನ್ನೇ ಸರಿಯಾಗಿ ನೋಡಿರದ ಗಂಡನಿಗೆ ಅವಳನ್ನು ಗುರುತಿಸುವುದೂ ಕಷ್ಟವಾಗುತ್ತದೆ. ಇಲ್ಲಿ ಮಹಿಳೆಯನ್ನು ನೋಡಿದ್ದೇವೆ ಎನ್ನುವುದಕ್ಕೂ, ಅವಳನ್ನು ತಿಳಿದಿದ್ದೇವೆ ಎನ್ನುವುದಕ್ಕೂ ಇರುವ ವ್ಯತ್ಯಾಸ ಗೊತ್ತಾಗುತ್ತದೆ.

178307 rugiuccarh 1660112094

ಫೂಲ್ ಈ ಜಗತ್ತಿನೊಳಗಿಂದ ಹೊರಗೆ ಬಂದಾಗ ತನ್ನ ಸುತ್ತಲಿನ ಬದುಕನ್ನು ಬೇರೆ ರೀತಿಯಲ್ಲಿ ನೋಡಲು ಆರಂಭಿಸುತ್ತಾಳೆ. ಅವಳು ಕಾಣೆಯಾಗುವುದು ಆಕಸ್ಮಿಕ. ಆದರೆ ಆ ಆಕಸ್ಮಿಕ ಅವಳಿಗೆ ಮನೆಯ ಹೊರಗಿನ ಜಗತ್ತನ್ನು ನೋಡುವ ಅವಕಾಶ ಕೊಡುತ್ತದೆ. ಮಂಜು ಮಾಯಿಯ ಜೊತೆಗಿರುವ ದಿನಗಳಲ್ಲಿ ಕೆಲಸ, ತನ್ನ ಸಾಮರ್ಥ್ಯ ಮತ್ತು ತನ್ನ ಮಾತಿನ ಬೆಲೆಯ ಬಗ್ಗೆ ಅವಳಿಗೆ ಹೊಸ ಅನುಭವಗಳು ಸಿಗುತ್ತವೆ. ಆರಂಭದಲ್ಲಿ ತನ್ನ ಪತಿಯ ಹೆಸರು ಮತ್ತು ಮನೆಯ ವಿಳಾಸವನ್ನೂ ಸರಿಯಾಗಿ ಹೇಳಲಾಗದ ಫೂಲ್ ನಿಧಾನವಾಗಿ ತನ್ನ ಬದುಕಿನ ಬಗ್ಗೆ ಮಾತನಾಡಲು ಕಲಿಯುತ್ತಾಳೆ. ಮನೆಗೆ ಹಿಂದಿರುಗುವಾಗ ಅವಳು ಮದುವೆಯಾದ ದಿನದ ಫೂಲ್ ಆಗಿರುವುದಿಲ್ಲ.

ಫೂಲ್‌ನ ಬದುಕಿಗಿಂತ ಜಯಾಳ ಬದುಕು ಭಿನ್ನ. ಫೂಲ್ ಹೊರಗಿನ ಜಗತ್ತನ್ನು ನೋಡುತ್ತಾ ನಿಧಾನವಾಗಿ ತನ್ನ ಸಾಮರ್ಥ್ಯವನ್ನು ಅರಿಯುತ್ತಾಳೆ. ಜಯಾಗೆ ತನ್ನ ಬಗ್ಗೆ ಮೊದಲೇ ಸ್ಪಷ್ಟತೆ ಇದೆ. ಅವಳಿಗೆ ಓದಬೇಕು, ಕೆಲಸ ಮಾಡಬೇಕು, ಕೃಷಿಯ ಬಗ್ಗೆ ಕನಸುಗಳಿವೆ. ಮದುವೆ ಅವಳಿಗೆ ಅಂತ್ಯವಲ್ಲ. ಮದುವೆಯ ನಂತರವೂ ತನ್ನ ಕನಸುಗಳಿಗೆ ಜಾಗ ಬೇಕು ಎಂಬುದು ಅವಳ ನಿಲುವು.

ಇಲ್ಲಿ ಇಬ್ಬರನ್ನೂ ಒಂದೇ ರೀತಿಯ ಸ್ವತಂತ್ರ ಮಹಿಳೆಯರಾಗಿ ಚಿತ್ರಿಸದೆ ಇರುವುದೇ ಚಿತ್ರದ ಚೆಲುವು. ಒಬ್ಬಳಿಗೆ ಬದುಕಿನ ಅನುಭವಗಳು ಹೊಸ ಪ್ರಶ್ನೆಗಳನ್ನು ಹುಟ್ಟಿಸಿದರೆ, ಮತ್ತೊಬ್ಬಳು ತನ್ನ ಕನಸುಗಳಿಗಾಗಿ ಸವಾಲುಗಳನ್ನು ಎದುರಿಸುತ್ತಾಳೆ. ಮಹಿಳಾ ಸ್ವಾತಂತ್ರ್ಯಕ್ಕೆ ಒಂದೇ ರೂಪವಿಲ್ಲ ಎಂಬುದನ್ನು ಚಿತ್ರ ಇಲ್ಲಿಂದ ಹೇಳುತ್ತದೆ. ಸ್ವಾತಂತ್ರ್ಯ ಎಂದರೆ ಎಲ್ಲರೂ ಒಂದೇ ರೀತಿಯ ಬದುಕನ್ನು ಆರಿಸಿಕೊಳ್ಳುವುದಲ್ಲ. ತನ್ನ ಬದುಕಿನ ಬಗ್ಗೆ ತಾನೇ ನಿರ್ಧರಿಸುವ ಅವಕಾಶ ಇರುವುದು.

1716845271 laapataa ladies 7 min

ಫೂಲ್‌ನ ಅತ್ತೆಯ ಬದುಕಿನ ಸಣ್ಣ ಸಂಗತಿಯೊಂದರಲ್ಲೂ ಚಿತ್ರದ ಈ ದೃಷ್ಟಿ ಕಾಣಿಸುತ್ತದೆ. ಅವಳಿಗೆ ಕಮಲಕಡ್ಡಿ ಪಲ್ಯ ಇಷ್ಟ. ಆದರೆ ಮನೆಯ ತನ್ನ ಪತಿ ಹಾಗೂ ಮಗನಿಗೆ ಅದು ಇಷ್ಟವಿಲ್ಲ. ಹಾಗಾಗಿ ಅದನ್ನು ಅವಳಿಗಾಗಿಯೇ ಮಾಡಿಕೊಳ್ಳಬೇಕು. ‘ಮಹಿಳೆಯರ ಇಷ್ಟದ ಊಟವೂ ಆಗಬೇಕಾ’ ಎನ್ನುವ ವ್ಯಂಗ್ಯ ಆ ಕ್ಷಣವನ್ನು ಇನ್ನಷ್ಟು ಅರ್ಥಪೂರ್ಣವಾಗಿಸುತ್ತದೆ. ಊಟದಂಥ ಸಾಮಾನ್ಯ ವಿಷಯದಲ್ಲೂ ಯಾರ ಇಷ್ಟ ಮುಖ್ಯ, ಯಾರ ಇಷ್ಟವನ್ನು ಬದಿಗಿಡಬಹುದು ಎಂಬುದು ಮನೆಯೊಳಗಿನ ಅಧಿಕಾರದ ಸ್ವರೂಪವನ್ನು ಕಾಣಿಸುತ್ತದೆ.

ಮಹಿಳೆಯರ ನಡುವಿನ ಸಂಬಂಧಗಳನ್ನೂ ಚಿತ್ರ ಸೂಕ್ಷ್ಮವಾಗಿ ಮುಟ್ಟುತ್ತದೆ. ‘ಬಬ್ಲುವಿನ ಅಪ್ಪ ಇಲ್ಲ. ನಾನು ಯಾರ ಜೊತೆ ಮಾತಾಡಲಿ’? ಎನ್ನುವಾಗ ಮನೆಯೊಳಗಿನ ಒಂಟಿತನ ಕೇಳಿಸುತ್ತದೆ. ಕುಟುಂಬ ಮತ್ತು ಜವಾಬ್ದಾರಿಗಳ ನಡುವೆ ಬದುಕುವ ಮಹಿಳೆಗೆ ಮನಸ್ಸಿನ ಮಾತು ಹೇಳಿಕೊಳ್ಳಲು ಒಬ್ಬ ಗೆಳತಿಯೂ ಇಲ್ಲದ ಸ್ಥಿತಿ ಅದು. ಇದೇ ಸಂದರ್ಭದಲ್ಲಿ ಫೂಲ್ನ ಅತ್ತೆ ಹೇಳುವ, ಮನೆಯ ಮಹಿಳೆಯರು ಅತ್ತೆ, ನಾದಿನಿ, ದೇವರಾಣಿ, ಜೇಠಾಣಿ ಎಲ್ಲವೂ ಆಗಿಬಿಡುತ್ತಾರೆ. ಆದರೆ ಒಬ್ಬರಿಗೊಬ್ಬರು ಗೆಳತಿಯರಾಗಲು ಸಾಧ್ಯವಾಗುವುದಿಲ್ಲ ಎನ್ನುವ ಮಾತು ಬಹಳ ಮುಖ್ಯ. ನಂತರ ಅವಳೇ ‘ಅಮ್ಮಾ, ನೀವು ನನ್ನ ಗೆಳತಿಯಾಗಬಹುದಾ’? ಎಂದು ಕೇಳುತ್ತಾಳೆ. ಇಷ್ಟು ಕಾಲ ಪಾತ್ರಗಳಾಗಿ ಬದುಕಿದ ಇಬ್ಬರು ಮಹಿಳೆಯರು ಒಬ್ಬರನ್ನೊಬ್ಬರು ಗೆಳತಿಯರಾಗಿ ನೋಡುವ ಸಾಧ್ಯತೆ ಅಲ್ಲಿ ಮೂಡುತ್ತದೆ. ಕುಟುಂಬ ಮಹಿಳೆಯರ ಸಂಬಂಧಗಳಿಗೂ ಗಡಿಗಳನ್ನು ಹಾಕುತ್ತದೆ. ಸ್ನೇಹ ಆ ಗಡಿಗಳನ್ನು ಸ್ವಲ್ಪ ಸಡಿಲಿಸುತ್ತದೆ.

ಈ ಹಾದಿಯಲ್ಲಿ ಮಂಜು ಮಾಯಿಯ ಪಾತ್ರವೂ ಮುಖ್ಯ. ಅವಳು ಫೂಲ್ಗೆ ಆಶ್ರಯ ಕೊಡುವ ಮಹಿಳೆ ಮಾತ್ರವಲ್ಲ. ಅವಳ ಚಹಾ ಅಂಗಡಿ ಅವಳ ಆರ್ಥಿಕ ಸ್ವಾವಲಂಬನೆಯ ಗುರುತು. ಮನೆಯ ಸಂಬಂಧಗಳೊಳಗೆ ಸಿಕ್ಕಿಹಾಕಿಕೊಳ್ಳದೆ ಕೆಲಸ ಮಾಡಿ ತನ್ನ ಬದುಕನ್ನು ತಾನೇ ನಡೆಸುತ್ತಿರುವ ಮಹಿಳೆಯ ಮತ್ತೊಂದು ಚಿತ್ರವನ್ನು ಫೂಲ್ ಅವಳಲ್ಲಿ ನೋಡುತ್ತಾಳೆ. ಆದರೆ ಮಂಜು ಮಾಯಿಯ ಬದುಕನ್ನು ಸ್ವಾವಲಂಬನೆ ಎಂಬ ಒಂದೇ ಪದದಲ್ಲಿ ಮುಗಿಸಲಾಗುವುದಿಲ್ಲ. ಅವಳ ಹಿಂದೆ ಇರುವ ಏಕಾಂತ, ಸಾಮಾಜಿಕ ಭದ್ರತೆಯ ಕೊರತೆ ಮತ್ತು ಬದುಕಿನ ಕಷ್ಟಗಳ ಬಗ್ಗೆ ಚಿತ್ರ ಹೆಚ್ಚು ಮಾತನಾಡುವುದಿಲ್ಲ. ಅವಳನ್ನು ಇನ್ನೊಬ್ಬ ಮಹಿಳೆಗೆ ದಾರಿ ತೋರಿಸುವ ಗಟ್ಟಿಯಾದ ಮಹಿಳೆಯಾಗಿ ಚಿತ್ರಿಸುವುದು ಸುಂದರ. ಆದರೆ ಅವಳದೇ ಬದುಕಿನ ನೋವು ಮತ್ತು ಸಂಕೀರ್ಣತೆ ಹಿಂದೆ ಉಳಿಯುತ್ತದೆ.

3aabbfd8 ee4c 4303 b789 e70139086524 3918x2000

‘ಒಳ್ಳೆಯ ಮನೆಯ ಸೊಸೆ-ಮಗಳು’ ಎನ್ನುವ ಕಲ್ಪನೆಯನ್ನೂ ಚಿತ್ರ ವ್ಯಂಗ್ಯದ ಮೂಲಕ ಪ್ರಶ್ನಿಸುತ್ತದೆ. ಒಳ್ಳೆಯ ಸೊಸೆ ಎಂದರೆ ಎಷ್ಟು ಮಾತನಾಡಬೇಕು, ಹೇಗೆ ನಡೆಯಬೇಕು, ಯಾರ ಮುಂದೆ ಮುಖ ತೋರಿಸಬೇಕು, ಮನೆಯವರ ಇಷ್ಟಕ್ಕೆ ಹೇಗೆ ಹೊಂದಿಕೊಳ್ಳಬೇಕು ಎನ್ನುವುದನ್ನು ಸಮಾಜವೇ ನಿರ್ಧರಿಸುತ್ತದೆ. ಒಳ್ಳೆಯತನ ಎನ್ನುವ ಹೆಸರಿನಲ್ಲಿ ಮಹಿಳೆಯ ಸ್ವಾತಂತ್ರ್ಯವನ್ನು ಅಳೆಯುವ ವಿಧಾನವನ್ನು ಚಿತ್ರ ಹಾಸ್ಯದ ಮೂಲಕ ಪ್ರಶ್ನಿಸುತ್ತದೆ.

ಹೀಗಾಗಿ ಚಿತ್ರದ ಹಾಸ್ಯ ಕೇವಲ ಮನರಂಜನೆ ಅಲ್ಲ. ಅದು ವ್ಯಂಗ್ಯದ ಸಾಧನ. ಕಠಿಣ ವಿಷಯಗಳನ್ನು ಉಪದೇಶದಂತೆ ಹೇಳದೆ ಹಾಸ್ಯದೊಳಗೆ ಇಡುವುದು ಚಿತ್ರದ ಶಕ್ತಿ. ಆದರೆ ಇದೇ ಹಾಸ್ಯ ಕೆಲವೊಮ್ಮೆ ವಿಷಯದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಮಹಿಳೆಯರ ಮೇಲಿನ ಹಿಂಸೆ, ಮದುವೆಯೊಳಗಿನ ಅಧಿಕಾರ ಮತ್ತು ಆರ್ಥಿಕ ಅವಲಂಬನೆಯಂಥ ಪ್ರಶ್ನೆಗಳು ನಗುವಿನ ನಡುವೆ ಬಂದಾಗ ಅವುಗಳ ನೋವು ಅಷ್ಟಾಗಿ ಉಳಿಯುವುದಿಲ್ಲ.

ಪ್ರೀತಿಯ ಹೆಸರಿನಲ್ಲಿ ನಡೆಯುವ ಹಿಂಸೆಯನ್ನೂ ಚಿತ್ರ ಪ್ರಶ್ನಿಸುತ್ತದೆ. ಪ್ರೀತಿಸುವ ವ್ಯಕ್ತಿಗೆ ಹೊಡೆಯುವ ಹಕ್ಕು ಇರುತ್ತದೆ ಎಂಬ ಮನಸ್ಥಿತಿ ಎಷ್ಟು ಅಪಾಯಕಾರಿ ಎಂಬುದನ್ನು ಒಂದು ಸಂಭಾಷಣೆಯ ಮೂಲಕ ತೋರಿಸುತ್ತದೆ. ಪ್ರೀತಿ ಎಂದರೆ ಹಕ್ಕು ಸಾಧಿಸುವುದು ಅಲ್ಲ. ಪ್ರೀತಿಯ ಹೆಸರಿನಲ್ಲಿ ಹಿಂಸೆಯನ್ನು ಸಹಜವೆಂದು ಒಪ್ಪಿಕೊಳ್ಳುವ ಮನಸ್ಥಿತಿಯನ್ನೇ ಇಲ್ಲಿ ಪ್ರಶ್ನಿಸಲಾಗುತ್ತದೆ.

ಆದರೆ ಮಹಿಳೆಯ ಬದುಕಿನ ಈ ಪ್ರಶ್ನೆಗಳನ್ನು ಜಾತಿ, ವರ್ಗ, ಆರ್ಥಿಕ ಸ್ಥಿತಿ ಮತ್ತು ಶಿಕ್ಷಣದ ಅವಕಾಶಗಳ ಜೊತೆ ಇನ್ನಷ್ಟು ಜೋಡಿಸುವ ಅವಕಾಶ ಚಿತ್ರದಲ್ಲಿ ಕಡಿಮೆ. ಎಲ್ಲ ಮಹಿಳೆಯರಿಗೂ ಆಯ್ಕೆ ಮಾಡುವ ಪರಿಸ್ಥಿತಿ ಒಂದೇ ಆಗಿರುವುದಿಲ್ಲ. ಫೂಲ್ ಮತ್ತು ಜಯಾಗೆ ಸಿಗುವ ಅವಕಾಶಗಳು ಪ್ರತಿಯೊಬ್ಬ ಮಹಿಳೆಗೂ ಸಿಗುವುದಿಲ್ಲ. ತನ್ನ ಬದುಕನ್ನು ತಾನೇ ಆರಿಸಿಕೊಳ್ಳಬೇಕು ಎನ್ನುವುದು ಸುಲಭವಾಗಿ ಹೇಳಬಹುದಾದ ಮಾತು. ಆದರೆ ಆಯ್ಕೆ ಮಾಡುವ ಅವಕಾಶವೂ ಎಲ್ಲ ಮಹಿಳೆಯರಿಗೆ ಸಮಾನವಾಗಿ ಸಿಗುವುದಿಲ್ಲ.

ದೀಪಕ್‌ನ ಬದಲಾವಣೆಯೂ ಗಮನಾರ್ಹ. ಹೆಂಡತಿ ಕಾಣೆಯಾದ ನಂತರ ಅವಳನ್ನು ಹುಡುಕುತ್ತಾ ಅವಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಫೂಲ್ ಕಾಣೆಯಾಗದೇ ಇದ್ದಿದ್ದರೆ ಅವಳನ್ನು ಅರ್ಥಮಾಡಿಕೊಳ್ಳಲು ಅವನು ಇಷ್ಟು ಪ್ರಯತ್ನಿಸುತ್ತಿದ್ದನಾ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ. ಹೆಂಡತಿ ಕಾಣೆಯಾಗದಿದ್ದರೂ ಅವಳನ್ನು ಕೇಳುವುದು, ಅವಳ ಆಸೆಗಳನ್ನು ತಿಳಿದುಕೊಳ್ಳುವುದು, ಅವಳನ್ನು ವ್ಯಕ್ತಿಯಾಗಿ ಗೌರವಿಸುವುದು ಗಂಡನ ಜವಾಬ್ದಾರಿಯಲ್ಲವೇ. ಮಹಿಳೆ ಕಾಣೆಯಾದಾಗ ಮಾತ್ರ ಅವಳ ಮೌಲ್ಯ ಗೊತ್ತಾಗಬೇಕೇ ಎಂಬ ಪ್ರಶ್ನೆಗೆ ಚಿತ್ರ ಇನ್ನಷ್ಟು ಗಟ್ಟಿಯಾದ ಉತ್ತರ ಕೊಡಬಹುದಿತ್ತು.

lapata 1

ಪೊಲೀಸ್ ಅಧಿಕಾರಿ ಶ್ಯಾಮ್ ಮನೋಹರ್ನ ಬದಲಾವಣೆಯೂ ಇದೇ ರೀತಿಯದ್ದು. ಆರಂಭದಲ್ಲಿ ಪ್ರಕರಣವನ್ನು ನೋಡುವ ಅವನ ದೃಷ್ಟಿ ಬದಲಾಗುತ್ತದೆ. ಆದರೆ ಒಬ್ಬ ಅಧಿಕಾರಿಯ ಮನಸ್ಸು ಬದಲಾದರೆ ಪೊಲೀಸ್ ವ್ಯವಸ್ಥೆಯ ಸಮಸ್ಯೆಗಳು ಬದಲಾಗುವುದಿಲ್ಲ. ಮಹಿಳೆಯರ ದೂರುಗಳನ್ನು ಹೇಗೆ ನೋಡಲಾಗುತ್ತದೆ, ಅವರಿಗೆ ನ್ಯಾಯ ಪಡೆಯುವ ದಾರಿ ಎಷ್ಟು ಸುಲಭ ಎಂಬುದು ವ್ಯಕ್ತಿಯ ಒಳ್ಳೆಯತನಕ್ಕಿಂತ ದೊಡ್ಡ ಪ್ರಶ್ನೆಗಳು. ಚಿತ್ರ ಅವನ ವೈಯಕ್ತಿಕ ಬದಲಾವಣೆಯಲ್ಲೇ ಹೆಚ್ಚು ನಿಲ್ಲುತ್ತದೆ.

ಚಿತ್ರದ ನಿರ್ದೇಶನದ ದೊಡ್ಡ ಬಲ ಅದರ ಸರಳತೆ. ಗಂಭೀರ ವಿಷಯಗಳನ್ನು ಪ್ರೇಕ್ಷಕರ ಮೇಲೆ ಹೇರದೆ, ಕಥೆ ಮತ್ತು ಹಾಸ್ಯದ ಮೂಲಕ ನಿಧಾನವಾಗಿ ತಲುಪಿಸುತ್ತದೆ. ಸಂಭಾಷಣೆಗಳು ಸರಳವಾಗಿದ್ದರೂ ಅವುಗಳೊಳಗೆ ಪಿತೃಪ್ರಧಾನತೆ, ಮಹಿಳೆಯರ ಬದುಕು ಮತ್ತು ಸಂಬಂಧಗಳಲ್ಲಿನ ಅಧಿಕಾರದ ಬಗ್ಗೆ ಪ್ರಶ್ನೆಗಳಿವೆ. ಚಿತ್ರದ ಗ್ರಾಮೀಣ ವಾತಾವರಣ ಮತ್ತು ಅಲ್ಲಿನ ಸೊಗಸಾದ ಭಾಷೆ ಕಥೆಗೆ ಸಹಜತೆಯನ್ನು ನೀಡುತ್ತವೆ. ಪಾತ್ರಗಳ ಮಾತುಗಳಲ್ಲಿರುವ ಸ್ಥಳೀಯ ಸೊಗಡು ಚಿತ್ರವನ್ನು ಇನ್ನಷ್ಟು ಆಪ್ತವಾಗಿಸುತ್ತದೆ.

ಚಿತ್ರದ ಛಾಯಾಗ್ರಹಣ ಚೆನ್ನಾಗಿದೆ. ಘೂಂಗಟ್‌ನೊಳಗಿನ ಮಹಿಳೆಯರ ಬದುಕು ಮತ್ತು ಹೊರಗಿನ ವಿಶಾಲ ಜಗತ್ತನ್ನು ಕ್ಯಾಮೆರಾ ಚೆನ್ನಾಗಿ ಹಿಡಿದಿದೆ. ಗ್ರಾಮೀಣ ಪ್ರದೇಶದ ಸುಂದರ ದೃಶ್ಯಗಳೂ ಗಮನ ಸೆಳೆಯುತ್ತವೆ. ಆದರೆ ಆ ಸೌಂದರ್ಯದ ನಡುವೆ ಅಲ್ಲಿನ ಬದುಕಿನ ಕಷ್ಟಗಳು ಅಷ್ಟಾಗಿ ಕಾಣಿಸುವುದಿಲ್ಲ.

ಹಾಡುಗಳ ಪೈಕಿ ‘ಓ ಸಜ್ನಿ ರೇ’ ವಿಶೇಷವಾಗಿ ಗಮನ ಸೆಳೆಯುತ್ತದೆ. ಫೂಲ್‌ಗಾಗಿ ನಡೆಯುವ ಹುಡುಕಾಟ, ಗಂಡ ಹೆಂಡತಿಯ ನಡುವಿನ ದೂರ ಮತ್ತು ಅವಳ ನೆನಪಿನ ಕಾತರವನ್ನು ಹಾಡು ಚೆನ್ನಾಗಿ ಕಟ್ಟಿಕೊಡುತ್ತದೆ. ಕಥೆಯ ಭಾವನೆಗೆ ಹೊಂದಿಕೊಂಡೇ ಸಾಗುವ ಈ ಹಾಡು ಚಿತ್ರದ ನೆನಪಿನಲ್ಲಿ ಉಳಿಯುತ್ತದೆ. ಉಳಿದ ಹಾಡುಗಳು ಕಥೆಯ ಜೊತೆ ಸಾಗಿ ‘ಓ ಸಜ್ನಿ ರೇ’ ಅಷ್ಟು ಗಾಢವಾಗಿ ಮನಸ್ಸಿನಲ್ಲಿ ಉಳಿಯುವುದಿಲ್ಲ.

ನಟನೆಯಲ್ಲೂ ಚಿತ್ರ ತನ್ನ ಸರಳತೆಯನ್ನು ಉಳಿಸಿಕೊಂಡಿದೆ. ನಿತಾಂಶಿ ಗೋಯಲ್ ಫೂಲ್‌ನ ಅಮಾಯಕತೆಯ ಜೊತೆಗೆ ಅವಳೊಳಗೆ ನಿಧಾನವಾಗಿ ಮೂಡುವ ಆತ್ಮವಿಶ್ವಾಸವನ್ನೂ ಚೆನ್ನಾಗಿ ಹಿಡಿದಿದ್ದಾರೆ. ಪ್ರತಿಭಾ ರಾಂತಾ ಜಯಾಳ ಸ್ಪಷ್ಟತೆ ಮತ್ತು ಧೈರ್ಯವನ್ನು ಸಹಜವಾಗಿ ತೋರಿಸಿದ್ದಾರೆ. ಸ್ಪರ್ಶ ಶ್ರೀವಾಸ್ತವ ದೀಪಕ್‌ನ ಗೊಂದಲ ಮತ್ತು ಕಾಳಜಿಯನ್ನು ಅತಿಯಾಗಿ ನಾಟಕೀಯಗೊಳಿಸದೆ ಅಭಿನಯಿಸಿದ್ದಾರೆ. ಛಾಯಾ ಕದಮ್ ಮಂಜು ಮಾಯಿಯ ಗಟ್ಟಿತನದ ಜೊತೆಗೆ ಅವಳೊಳಗಿನ ಏಕಾಂತವನ್ನೂ ಕಾಣಿಸುವಂತೆ ಮಾಡುತ್ತಾರೆ. ರವಿ ಕಿಶನ್ ಶ್ಯಾಮ್ ಮನೋಹರ್ ಪಾತ್ರಕ್ಕೆ ಹಾಸ್ಯ ಮತ್ತು ಗಂಭೀರತೆಯ ಎರಡೂ ಮುಖಗಳನ್ನು ನೀಡಿದ್ದಾರೆ.

ಚಿತ್ರದ ದ್ವಿತೀಯಾರ್ಧದಲ್ಲಿ ಕೆಲವು ಸನ್ನಿವೇಶಗಳು ಮುಂಚಿತವಾಗಿಯೇ ಊಹಿಸಬಹುದಾದಂತಿವೆ. ಕೆಲವು ಪರಿಹಾರಗಳು ಸಿನಿಮೀಯವಾಗಿಯೂ ಅನಿಸುತ್ತವೆ. ವಿಶೇಷವಾಗಿ ಮಹಿಳೆಯ ಬದುಕಿನ ದೊಡ್ಡ ಪ್ರಶ್ನೆಗಳಿಗೆ ಕೆಲವು ಕಡೆ ವೈಯಕ್ತಿಕ ಬದಲಾವಣೆಯೇ ಪರಿಹಾರವಾಗಿ ಕಾಣಿಸುತ್ತದೆ. ಆದರೂ ಈ ಮಿತಿಗಳ ನಡುವೆಯೂ ಚಿತ್ರ ತನ್ನ ಮೂಲ ಪ್ರಶ್ನೆಯನ್ನು ಬಿಟ್ಟುಕೊಡುವುದಿಲ್ಲ.

ಇದನ್ನೂ ಓದಿ ಅವಳ ಕಣ್ಣೋಟ | ಮಿಮಿ-ತಾಯ್ತನದ ನಡುವೆ ಮರೆಯಾದ ಕನಸು

ಕೊನೆಯಲ್ಲಿ ಫೂಲ್ ಮನೆಗೆ ಹಿಂದಿರುಗುತ್ತಾಳೆ. ಆದರೆ ಅವಳು ಮದುವೆಯಾದ ದಿನದ ಫೂಲ್ ಆಗಿ ಹಿಂದಿರುಗುವುದಿಲ್ಲ. ಹೊರಗಿನ ಜಗತ್ತನ್ನು ಕಂಡಿದ್ದಾಳೆ. ತನ್ನ ಸಾಮರ್ಥ್ಯವನ್ನು ಅನುಭವಿಸಿದ್ದಾಳೆ. ತನ್ನ ಮಾತಿಗೂ ಬೆಲೆ ಇರಬೇಕು ಎಂಬ ಅರಿವು ಬಂದಿದೆ. ಜಯಾ ತನ್ನ ಓದು ಮತ್ತು ಕನಸುಗಳನ್ನು ಬೆನ್ನಟ್ಟುತ್ತಾಳೆ. ಮಂಜು ಮಾಯಿ ತನ್ನ ದುಡಿಮೆಯ ಮೂಲಕ ಮತ್ತೊಂದು ಬದುಕಿನ ಸಾಧ್ಯತೆಯನ್ನು ತೋರಿಸುತ್ತಾಳೆ. ಫೂಲ್‌ನ ಅತ್ತೆ ಅತ್ತೆ-ಸೊಸೆ ಎನ್ನುವ ಸಂಬಂಧದ ಗಡಿಯಾಚೆಗೂ ಸ್ನೇಹ ಸಾಧ್ಯ ಎಂಬುದನ್ನು ಅನುಭವಿಸುತ್ತಾಳೆ.

‘ಲಾಪತಾ ಲೇಡೀಸ್’ ಕೇವಲ ರೈಲಿನಲ್ಲಿ ಕಾಣೆಯಾದ ಇಬ್ಬರು ವಧುಗಳ ಕಥೆಯಲ್ಲ. ಮಹಿಳೆ ಮನೆಯಲ್ಲಿದ್ದರೂ ಅವಳನ್ನು ಕೇವಲ ಹೆಂಡತಿ, ಸೊಸೆ ಅಥವಾ ವಧುವಿನ ಪಾತ್ರದಲ್ಲಿ ನೋಡಿದಾಗ ಅವಳೊಳಗಿನ ವ್ಯಕ್ತಿ ಹೇಗೆ ಕಾಣೆಯಾಗುತ್ತಾನೆ ಎಂಬ ಕಥೆಯೂ ಹೌದು.

ಇಲ್ಲಿಯೇ ಲಾಪತಾ ಎನ್ನುವ ಪದಕ್ಕೆ ಮತ್ತೊಂದು ಅರ್ಥ ಸಿಗುತ್ತದೆ. ಮಹಿಳೆ ಮನೆಯಿಂದ ಕಾಣೆಯಾಗುವುದು ಮಾತ್ರವಲ್ಲ, ಕೆಲವೊಮ್ಮೆ ಮನೆಯಲ್ಲೇ ಇದ್ದು ತನ್ನ ಇಷ್ಟ, ಕನಸು ಮತ್ತು ಧ್ವನಿಯನ್ನು ಕಳೆದುಕೊಂಡಾಗಲೂ ಅವಳು ಕಾಣೆಯಾಗಿರುತ್ತಾಳೆ. ಮಹಿಳೆ ನಮ್ಮ ಜೊತೆಗೇ ಇದ್ದರೂ, ಅವಳನ್ನು ಒಬ್ಬ ವ್ಯಕ್ತಿಯಾಗಿ ನಾವು ನಿಜವಾಗಿಯೂ ನೋಡುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಚಿತ್ರ ನಮ್ಮ ಮುಂದೆ ಇಡುತ್ತದೆ.

Rukmini
ರುಕ್ಮಿಣಿ ನಾಗಣ್ಣವರ
+ posts

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ರುಕ್ಮಿಣಿ ನಾಗಣ್ಣವರ
ರುಕ್ಮಿಣಿ ನಾಗಣ್ಣವರ
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಿಎಂ ಮೋದಿ, ಯುವತಿಯ ಡೀಪ್‌ಫೇಕ್ ಫೋಟೋ: ಸಿಜೆಪಿ ನಾಯಕರು, ದೆಹಲಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಯುವತಿಯೊಬ್ಬಳ ಮುಖವನ್ನು ಕೃತಕ ಬುದ್ಧಿಮತ್ತೆ (AI)...

ಸೌಜನ್ಯ ಪ್ರಕರಣ | SIT ವಿರುದ್ಧ ತಾಯಿ ಕುಸುಮಾವತಿ ಅಸಮಾಧಾನ; ತನಿಖಾಧಿಕಾರಿ ಬದಲಾವಣೆಗೆ ಆಗ್ರಹ

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂ ಕೋರ್ಟ್‌ನ...

ಚುನಾವಣಾ ಆಯುಕ್ತರ ನೇಮಕ, ವಜಾ ಹೇಗೆ? ಈ ಹಿಂದೆ ‘ಮಹಾಭಿಯೋಗ’ ನಡೆದಿದೆಯೇ?

ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಬೇಕಾದ ಚುನಾವಣಾ ಆಯೋಗ, ಚುನಾವಣಾ ಆಯುಕ್ತರು ಸರ್ಕಾರದ ಪ್ರಭಾವದಿಂದ...

‘ವೀರಮಣಿ ಅತ್ಯಾಚಾರ ಪ್ರಕರಣ ಮುಚ್ಚುವುದರ ಹಿಂದೆ ಯಾವ ಒಪ್ಪಂದವಿತ್ತು’?; ಡಿಎಂಕೆ ವಿರುದ್ಧ ಸಿಎಂ ವಿಜಯ್‌ ವಾಗ್ದಾಳಿ

ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದ ತಮಿಳುನಾಡಿನ ಆರ್‌....