ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರದಲ್ಲಿ ಚುನಾವಣಾ ಆಯೋಗದ ವಿರುದ್ಧ ಎದ್ದಿರುವ ಅನುಮಾನಗಳಿಂದ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಈ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಿನ್ನೆ (ಸೆ.24) ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಒಂದು ಸ್ಲೈಡ್ ಒಂದು ಗಮನ ಸೆಳೆದಿದೆ. ‘Destroyers of Democracy’ ಎಂಬ ಶೀರ್ಷಿಕೆಯಡಿ ಪ್ರದರ್ಶಿಸಿದ ಈ ಸ್ಲೈಡ್‌ನಲ್ಲಿ ಮೇಲ್ಭಾಗದಲ್ಲಿ ‘Conspirators’ (ಸೂತ್ರಧಾರಿಗಳು) ಹಾಗೂ ಕೆಳಭಾಗದಲ್ಲಿ ‘Pawns’ (ಆಟದ ಕಾಯಿಗಳು) ಎಂಬ ಎರಡು ವಿಭಾಗಗಳನ್ನು ಮಾಡಿ ಬಿಜೆಪಿಯ ನಾಯಕರು, ಸಂಸದರು ಹಾಗೂ ಕೆಲ ಪತ್ರಕರ್ತರನ್ನು ʼಸಂವಿಧಾನದ ವಿಧ್ವಂಸಕರುʼ ಎಂದಿದ್ದಾರೆ.
ನವದೆಹಲಿ ಇಂದಿರಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ಭಾರತದಲ್ಲಿ ಚುನಾವಣೆಗಳು ಅಕ್ರಮವಾಗಿ ನಡೆಯುತ್ತಿವೆ ಎಂಬ ಬಗ್ಗೆ ‘ನೂರಕ್ಕೆ ನೂರು ಖಚಿತತೆ’ ಇದೆ. ಈ ಆರೋಪಗಳನ್ನು ಸಮರ್ಥಿಸಲು ಸಾಕಷ್ಟು ಮಾಹಿತಿ ಮತ್ತು ಪುರಾವೆಗಳೂ ಕೂಡ ಇವೆ ಎಂದಿರುವ ರಾಹುಲ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ‘ದೇಶದ್ರೋಹಿಗಳು’ ಎಂದು ಕರೆದಿದ್ದಾರೆ. ಗ್ಯಾನೇಶ್ ಕುಮಾರ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಮತದಾನದ ಹಕ್ಕಿನ ಮೇಲಿನ ದಾಳಿ ಸಂವಿಧಾನ, ಕಾನೂನು ರಚನಾ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ದಾಳಿಗೆ ಸಮಾನ ಎಂದು ಕಿಡಿಕಾರಿದ್ದಾರೆ.
ರಾಹುಲ್ ಲಿಸ್ಟ್‌ನಲ್ಲಿರುವ ಸಂವಿಧಾನದ ವಿಧ್ವಂಸಕರು ಯಾರ್ಯಾರು?
ರಾಹುಲ್ ಗಾಂಧಿ ‘Conspirators’ ಎಂದು ಗುರುತಿಸಿದ ಸಾಲಿನಲ್ಲಿ ಒಟ್ಟು 7 ಮಂದಿ ಸೂತ್ರಧಾರರಿದ್ದಾರೆ. ಆ ಪೈಕಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಉದ್ಯಮಿ ಗೌತಮ್ ಅದಾನಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಪ್ರಧಾನಮಂತ್ರಿಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರು ಲಿಸ್ಟ್‌ನಲ್ಲಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧ ನೇರ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಚುನಾವಣಾ ವ್ಯವಸ್ಥೆಯಲ್ಲಿ ನಡೆಯುತ್ತಿದೆ ಎಂದು ತಾವು ಆರೋಪಿಸುತ್ತಿರುವ ಅಕ್ರಮಗಳ ಬಗ್ಗೆ ಗ್ಯಾನೇಶ್ ಕುಮಾರ್ ಅವರಿಗೆ ಮಾಹಿತಿ ಇದ್ದರೆ, ಅವರು ಸತ್ಯವನ್ನು ಬಹಿರಂಗಪಡಿಸಿ ‘ಅಪ್ರೂವರ್’ (ಸರ್ಕಾರದ ಪರ ಸಾಕ್ಷಿಯಾಗಿ ತನಿಖೆಗೆ ಸಹಕರಿಸುವ ವ್ಯಕ್ತಿ) ಆಗಬೇಕು ಎಂದು ರಾಹುಲ್ ಕರೆ ನೀಡಿದ್ದಾರೆ.
ಚುನಾವಣಾ ಆಯೋಗದ ಮುಖ್ಯಸ್ಥರಾಗಿರುವ ಗ್ಯಾನೇಶ್ ಕುಮಾರ್ ಅವರ ಜವಾಬ್ದಾರಿಯೇ ದೇಶದ ಮತದಾನದ ಹಕ್ಕನ್ನು ರಕ್ಷಿಸುವುದಾಗಿದ್ದು, ಅದೇ ವ್ಯವಸ್ಥೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಎದುರಾದ ಸಂದರ್ಭದಲ್ಲಿ ಅವರು ಹೊಣೆ ಹೊತ್ತು ಸ್ಥಾನ ತೊರೆಯಬೇಕು ಎಂಬುದು ರಾಹುಲ್ ಗಾಂಧಿಯವರ ವಾದ. ಚುನಾವಣಾ ಪ್ರಕ್ರಿಯೆಯಲ್ಲಿನ ಅಕ್ರಮಗಳ ಹಿಂದೆ ದೊಡ್ಡ ಮಟ್ಟದ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಈ ಆರೋಪಿತ ವ್ಯವಸ್ಥೆಯ ಮೇಲ್ಮಟ್ಟದ ಭಾಗವೆಂದು ತಮ್ಮ ಸುದ್ದಿಗೋಷ್ಠಿಯಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಧಾಂದಲೆ ನಡೆಯುವ ಚುನಾವಣೆಗಳನ್ನು ಬಹಿಷ್ಕರಿಸಿ: ವಿಪಕ್ಷಗಳಿಗೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಕರೆ
ಮತದಾನದ ಹಕ್ಕಿನ ಮೇಲಿನ ದಾಳಿ ಕೇವಲ ಚುನಾವಣಾ ಪ್ರಕ್ರಿಯೆಯ ಸಮಸ್ಯೆಯಲ್ಲ; ಅದು ಸಂವಿಧಾನ, ಕಾನೂನು ರಚನಾ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ದಾಳಿ ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು. ಮತದಾನದ ವ್ಯವಸ್ಥೆಯೇ ದುರ್ಬಲಗೊಂಡರೆ, ಅದರ ಆಧಾರದ ಮೇಲೆ ರಚನೆಯಾಗುವ ಕಾನೂನುಗಳು ಮತ್ತು ಕಾರ್ಯನಿರ್ವಹಿಸುವ ಸಂಸ್ಥೆಗಳ ವಿಶ್ವಾಸಾರ್ಹತೆಯೂ ಪ್ರಶ್ನಾರ್ಹವಾಗುತ್ತದೆ ಎಂದು ಅವರು ವಾದಿಸಿದರು.
‘Pawns’ ಸಾಲಿನಲ್ಲಿ ಯಾರಿದ್ದಾರೆ?
ರಾಹುಲ್ ಗಾಂಧಿ ಪ್ರದರ್ಶಿಸಿದ ‘Destroyers of Democracy’ ಸ್ಲೈಡ್‌ನ ಎರಡನೇ ಸಾಲಿನಲ್ಲಿ ‘Pawns’ ಎಂಬ ಶೀರ್ಷಿಕೆಯಡಿ 11 ಮಂದಿಯ ಚಿತ್ರಗಳನ್ನು ಇರಿಸಲಾಗಿತ್ತು. ಆ ಪೈಕಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಚಿವ ಪಿಯೂಷ್ ಗೋಯಲ್, ಬಾಬಾ ರಾಮ್‌ದೇವ್, ಸಂಸದೆ ಕಂಗನಾ ರಣಾವತ್, ಪತ್ರಕರ್ತ ಅರ್ನಬ್ ಗೋಸ್ವಾಮಿ, ಬ್ರಿಜ್ ಭೂಷಣ್ ಶರಣ್ ಸಿಂಗ್, ಜಯ್ ಶಾ ಸೇರಿದಂತೆ 11 ಮಂದಿ ಲಿಸ್ಟ್‌ನಲ್ಲಿದ್ದಾರೆ.

ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳ ಅವಧಿಯಲ್ಲಿ ಚುನಾವಣಾ ಆಯೋಗದ ಕೆಲವು ನಿರ್ಧಾರಗಳು ಹಾಗೂ ಪ್ರಕ್ರಿಯೆಗಳ ಕುರಿತು ಕನಿಷ್ಠ 14 ಬಾರಿ ಆಕ್ಷೇಪ ದಾಖಲಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR), ಮತದಾರರ ಸೇರ್ಪಡೆ ಹಾಗೂ ಹೆಸರುಗಳ ಅಳಿಸುವಿಕೆ ಸೇರಿದಂತೆ ಚುನಾವಣಾ ಪಟ್ಟಿಗೆ ಸಂಬಂಧಿಸಿದ ಹಲವು ವಿಷಯಗಳಲ್ಲಿ ಆಕ್ಷೇಪಗಳು ವ್ಯಕ್ತವಾಗಿದ್ದವು ಎಂದು ವರದಿಯಾಗಿದೆ. ಆದರೆ ಚುನಾವಣಾ ಆಯೋಗವು ಇದನ್ನು ಸಾಂಸ್ಥಿಕ ಭಿನ್ನಾಭಿಪ್ರಾಯ ಎಂದು ಪರಿಗಣಿಸಿಲ್ಲ. ಕರಡು ಹಂತದಲ್ಲಿ ಅಧಿಕಾರಿಗಳು ಮತ್ತು ಆಯುಕ್ತರು ಪ್ರಶ್ನೆ, ಸಲಹೆ ಅಥವಾ ಅಭಿಪ್ರಾಯಗಳನ್ನು ದಾಖಲಿಸುವುದು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿಕೊಂಡು ನುಣುಚಿಕೊಳ್ಳಲು ಯತ್ನಿಸುತ್ತಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
SIR ಕುರಿತ ವಿವಾದ ಇದೀಗ ಚುನಾವಣಾ ಆಯೋಗದ ಸ್ವಾಯತ್ತತೆ, ಮತದಾನದ ಹಕ್ಕಿನ ವಿಶ್ವಾಸಾರ್ಹತೆ ಹಾಗೂ ಪ್ರಜಾಪ್ರಭುತ್ವದ ಸಂಸ್ಥೆಗಳ ಕಾರ್ಯವೈಖರಿ ಕುರಿತ ದೊಡ್ಡ ರಾಜಕೀಯ ಸಂಘರ್ಷವಾಗಿ ರೂಪುಗೊಂಡಿದೆ. ರಾಹುಲ್ ಗಾಂಧಿ ಪ್ರದರ್ಶಿಸಿರುವ ‘Conspirators’ ಮತ್ತು ‘Pawns’ ಪಟ್ಟಿಯ ಮೂಲಕ ಚುನಾವಣಾ ಅಕ್ರಮದ ಆರೋಪಗಳ ಹಿಂದೆ ವ್ಯವಸ್ಥಿತ ಸಂಚು ಇದೆ ಎಂದು ಪ್ರತಿಪಾದಿಸಿದ್ದರೆ. ರಾಹುಲ್ ಮುಂದಿಟ್ಟಿರುವ ಆರೋಪಗಳ ಕುರಿತು ಸತ್ಯವನ್ನು ಮುಂದಿನ ದಿನಗಳಲ್ಲಿ ದಾಖಲೆಗಳು ಹಾಗೂ ನ್ಯಾಯಾಂಗದ ಪರಿಶೀಲನೆಗಳೇ ಸ್ಪಷ್ಟಪಡಿಸಬೇಕಿದೆ.




