ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ವಿಸ್ಟೆಕ್ಸ್ ಸಂಸ್ಥೆಯ ಬೆಳ್ಳಿಹಬ್ಬ ಸಂಭ್ರಮಾಚರಣೆ ವೇಳೆ ಅವಘಡ ಸಂಭವಿಸಿ, ಕಂಪನಿಯ ಸಂಸ್ಥಾಪಕ ಹಾಗೂ ಸಿಇಓ ಸಂಜಯ್ ಶಾ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಅಮೆರಿಕ ಮೂಲದ ಈ ಕಂಪನಿಯ ಮತ್ತೊಬ್ಬ ಅಧಿಕಾರಿ ಘಟನೆಯಲ್ಲಿ ಗಂಭೀರ ಗಾಯಗೊಂಡಿರುವುದಾಗಿ ವರದಿಯಾಗಿದೆ.
ರಾಮೋಜಿ ಫಿಲ್ಮ್ ಸಿಟಿಯಲ್ಲಿ ಗುರುವಾರ ಕಂಪನಿಯ ಬೆಳ್ಳಿ ಹಬ್ಬ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದ ಪ್ರಯುಕ್ತ ವೇದಿಕೆಯ ಮೇಲೆ ‘ಎಂಟ್ರಿ’ಗಾಗಿ ಇಡಲಾಗಿದ್ದ ‘ಐರನ್ ಕೇಜ್’ನ ಕಬ್ಬಿಣದ ಸರಳು ಮುರಿದು ಕುಸಿದು ಬಿದ್ದು ಈ ದುರ್ಷಟನೆ ಸಂಭವಿಸಿದೆ. ಘಟನೆಯಲ್ಲಿ ಸಿಇಓ ಸಂಜಯ್ ಷಾ ಸಾವನ್ನಪ್ಪಿದ್ದಾರೆ. ವೇದಿಕೆಯಲ್ಲಿ 15 ಅಡಿ ಮೇಲಿಂದ ಬಿದ್ದ ದೃಶ್ಯವು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
#Hyderabad | Sanjay Shah, the CEO of Illinois-based firm Vistex, and company president Raju Datla were being lowered onto a stage in an iron platform at Ramoji Film City in Hyderabad when one of the wires snapped.
Read the full story: https://t.co/mcuEraNkaR pic.twitter.com/FBwQ7X2vqd
— The Indian Express (@IndianExpress) January 20, 2024
ಅಮೆರಿಕ ಮೂಲದ ಸಾಫ್ಟ್‌ವೇರ್ ಕಂಪನಿ ವಿಸ್ಟೆಕ್ಸ್‌ನ ಮುಖ್ಯ ಕಾರ್ಯನಿವರ್ಹಣಾ ಅಧಿಕಾರಿಯಾಗಿದ್ದ ಸಂಜಯ್ ಷಾ ಹಾಗೂ ಕಂಪನಿಯ ಅಧ್ಯಕ್ಷರಾಗಿದ್ದ ರಾಜು ದತ್ಲಾ, ಸಮಾರಂಭದಲ್ಲಿ ಇರಿಸಲಾಗಿದ್ದ ಕಬ್ಬಿಣದ ಪಂಜರದ ಒಳಗೆ ಪ್ರವೇಶಿಸಿದ್ದರು. ಭಾರೀ ಎತ್ತರದಲ್ಲಿ ಇಡಲಾಗಿದ್ದ ಈ ಐರನ್ ಕೇಜ್ ಅನ್ನು ಕೆಳಗಿಳಿಸಲು ಉದ್ದೇಶಿಸಲಾಗಿತ್ತು. ಆದರೆ, ಐರನ್ ಕೇಜ್‌ಗೆ ಹಾಕಲಾಗಿದ್ದ ಕಬ್ಬಿಣದ ಚೈನು ತುಂಡಾಗಿದ್ದರಿಂದ ಕುಸಿದು ಬಿದ್ದಿದ್ದು, ಅದರೊಳಗಿದ್ದ ಇಬ್ಬರೂ ಮೇಲಿಂದ ಬಿದ್ದಿದ್ದಾರೆ.
ಪೊಲೀಸರು ಶುಕ್ರವಾರ ನೀಡಿದ ಮಾಹಿತಿಯ ಪ್ರಕಾರ, “ಸಾಫ್ಟ್‌ವೇರ್ ಸಂಸ್ಥೆ ವಿಸ್ಟೆಕ್ಸ್‌ನ ಸಿಇಒ ಸಂಜಯ್ ಶಾ ಮತ್ತು ಕಂಪನಿ ಅಧ್ಯಕ್ಷ ರಾಜು ದಾಟ್ಲಾ ಗುರುವಾರ ಸಂಜೆ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕಬ್ಬಿಣದ ಪಂಜರದ ಮೂಲಕ ವೇದಿಕೆಗೆ ಇಳಿಯಲು ಉದ್ದೇಶಿಸಿದ್ದರು. ಆದರೆ, ಪಂಜರಕ್ಕೆ ಸಪೋರ್ಟ್ ಆಗಿ ಇಡಲಾಗಿದ್ದ ಕಬ್ಬಿಣದ ಸರಪಳಿಯ ಒಂದು ಬದಿಯು ಮುರಿದು, ಇಬ್ಬರೂ ವ್ಯಕ್ತಿಗಳು ಕೆಳಕ್ಕೆ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ” ಎಂದು ತಿಳಿಸಿದ್ದಾರೆ.
“ವಿಸ್ಟೆಕ್ಸ್ ತನ್ನ ಸಿಬ್ಬಂದಿಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ವಸತಿ ವ್ಯವಸ್ಥೆ ಮಾಡಿದ್ದಲ್ಲದೆ, ಎರಡು ದಿನಗಳ ತನ್ನ ರಜತ ಮಹೋತ್ಸವ ಸಂಭ್ರಮಾಚರಣೆಯನ್ನು ಆಯೋಜಿಸಿತ್ತು. ಶಾ ಮತ್ತು ರಾಜು ಅವರನ್ನು ಕಬ್ಬಿಣದ ಪಂಜರದ ಮೂಲಕ ವೇದಿಕೆ ಮೇಲೆ ಇಳಿಸಿ ಸಂಭ್ರಮಾಚರಣೆಗೆ ಚಾಲನೆ ನೀಡಲು ಯೋಜನೆ ಮಾಡಿಕೊಳ್ಳಲಾಗಿತ್ತು. ಈ ವೇಳೆ ಈ ರೀತಿಯ ಅವಘಡ ಸಂಭವಿಸಿದೆ” ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಇದ್ದಕ್ಕಿದ್ದಂತೆ ಪಂಜರಕ್ಕೆ ಜೋಡಿಸಲಾದ ಎರಡು ತಂತಿಗಳಲ್ಲಿ ಒಂದು ತುಂಡಾಯಿತು. ಇದರಿಂದ ಇಬ್ಬರೂ 15 ಅಡಿಗಳಷ್ಟು ಎತ್ತರದಿಂದ ಕಾಂಕ್ರೀಟ್ ವೇದಿಕೆಯ ಮೇಲೆ ಬಿದ್ದರು. ಇದರಿಂದ ಇಬ್ಬರಿಗೂ ಗಂಭೀರ ಗಾಯಗಳಾದವು” ಎಂದು ಅಬ್ದುಲ್ಲಾಪುರಮೆಟ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಡಿ ಕರುಣಾಕರ್ ರೆಡ್ಡಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಒಳಮೀಸಲಾತಿ ವಿಚಾರ | ಕೇಂದ್ರ ಸರ್ಕಾರಕ್ಕೆ ಪ್ರಾಮಾಣಿಕ ಕಾಳಜಿ ಇದ್ದರೆ ತಿದ್ದುಪಡಿ ಮಾಡಲಿ: ಸಿದ್ದರಾಮಯ್ಯ
ತಕ್ಷಣವೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಂಜಯ್ ಶಾ ಅವರು ನಿಧನರಾದರು. ಅವರ ಸಹೋದ್ಯೋಗಿ ಸ್ಥಿತಿ ಗಂಭೀರವಾಗಿದೆ. ಕಂಪನಿಯ ಅಧಿಕಾರಿಯೋರ್ವರು ನೀಡಿದ ದೂರಿನ ಆಧಾರದ ಮೇಲೆ ಫಿಲ್ಮ್ ಸಿಟಿ ಈವೆಂಟ್ ಮ್ಯಾನೇಜ್‌ಮೆಂಟ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ವಿಸ್ಟೆಕ್ಸ್ ಆದಾಯ ನಿರ್ವಹಣೆ ಪರಿಹಾರಗಳು ಮತ್ತು ಸೇವೆಗಳಲ್ಲಿ ಪರಿಣತಿ ಹೊಂದಿರುವ ಇಲಿನಾಯ್ಸ್ ಮೂಲದ ಸಂಸ್ಥೆಯಾಗಿದೆ. 20 ಜಾಗತಿಕ ಕಚೇರಿಗಳು ಮತ್ತು 2,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸಂಸ್ಥೆ ಹೊಂದಿದ್ದು, ಕಂಪನಿಯು ಜಿಎಂ, ಬರಿಲ್ಲಾ ಮತ್ತು ಬೇಯರ್‌ನಂತಹ ಪ್ರಮುಖ ಬ್ರಾಂಡ್‌ಗಳಿಗೆ ಸೇವೆ ನೀಡುತ್ತಿದೆ.