2021ರ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ಆರೋಪಿಯಾಗಿರುವ ಮಾಜಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಕುಟುಂಬದೊಂದಿಗೆ ದೀಪಾವಳಿ ಆಚರಿಸಲು ಸ್ವಗ್ರಾಮಕ್ಕೆ ತೆರಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಪೀಠವು ಈ ಅನುಮತಿಯನ್ನು ನೀಡಿದ್ದು, ಈಗಾಗಲೇ ವಿಧಿಸಿರುವ ಜಾಮೀನು ಷರತ್ತುಗಳನ್ನು ಪಾಲಿಸುವಂತೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವ ಅಗತ್ಯವನ್ನು ಒತ್ತಿಹೇಳಿತು. ವಿಚಾರಣೆಯಲ್ಲಿ ಅತಿಯಾದ ಆತುರ ತೋರಬಾರದು, ಅದೇ ರೀತಿ ಅನಗತ್ಯ ವಿಳಂಬಕ್ಕೂ ಅವಕಾಶ ನೀಡಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
“ಸಾಕ್ಷಿಗಳ ವಿಚಾರಣೆ, ಪಾಟಿ ಸವಾಲು ಹಾಗೂ ಸಾಕ್ಷ್ಯಾಧಾರಗಳ ಪರಿಶೀಲನೆ ಪೂರ್ಣಗೊಳ್ಳದೆ ಪ್ರಕರಣವನ್ನು ಆತುರದಲ್ಲಿ ಮುಗಿಸಲು ನಾವು ಬಯಸುವುದಿಲ್ಲ. ಅದೇ ಸಮಯದಲ್ಲಿ, ಅನಗತ್ಯವಾಗಿ ವಿಚಾರಣೆ ದೀರ್ಘಕಾಲ ಮುಂದುವರಿಯುವುದನ್ನೂ ಬಯಸುವುದಿಲ್ಲ. ಇಂತಹ ವಿಳಂಬವು ತಪ್ಪು ಸಂದೇಶ ನೀಡುತ್ತದೆ” ಎಂದು ನ್ಯಾಯಪೀಠ ತಿಳಿಸಿತು.
ಪ್ರಕರಣದ ವಿಚಾರಣೆಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ನ್ಯಾಯಾಲಯ ಸೂಚಿಸಿತು. ಸಾಕ್ಷಿಗಳ ವಿಚಾರಣೆಯಲ್ಲಿ ಅಭಿಯೋಜಕರು ಸಮತೋಲಿತ ಧೋರಣೆ ಅನುಸರಿಸಬೇಕು ಎಂದೂ ಪೀಠ ಅಭಿಪ್ರಾಯಪಟ್ಟಿತು.
ಉತ್ತರ ಪ್ರದೇಶ ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದಂತೆ, ಪ್ರಕರಣದ ವಿಚಾರಣೆಗಾಗಿ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಿಸಲಾಗಿದೆ. ಪ್ರಕರಣದಲ್ಲಿ ಒಟ್ಟು 131 ಸಾಕ್ಷಿಗಳಿದ್ದು, ಈವರೆಗೆ 90 ಮಂದಿಯ ವಿಚಾರಣೆ ಪೂರ್ಣಗೊಂಡಿದೆ. ಇನ್ನೂ 41 ಸಾಕ್ಷಿಗಳ ವಿಚಾರಣೆ ಬಾಕಿ ಉಳಿದಿದೆ. ಉಳಿದ ಸಾಕ್ಷಿಗಳ ವಿಚಾರಣೆಯನ್ನು ಪೂರ್ಣಗೊಳಿಸಿ, ಪ್ರಕರಣವನ್ನು ಸಕಾಲದಲ್ಲಿ ಮುಕ್ತಾಯಗೊಳಿಸುವತ್ತ ಅಭಿಯೋಜಕರು ಗಮನಹರಿಸಬೇಕು ಎಂದು ನ್ಯಾಯಪೀಠ ಸೂಚಿಸಿತು.
ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ತಡೆಯಲು ಮೆಟ್ರೋ, ರೈಲು ಬಂದ್: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಪಿಐಎಂ ನಾಯಕ ಎಂ ಎ ಬೇಬಿ
ಜಾಮೀನಿನ ಮೇಲೆ ಹೊರಗಿರುವ ಆಶಿಶ್ ಮಿಶ್ರಾ ಅವರಿಗೆ ಈ ಹಿಂದೆ ಲಖಿಂಪುರ ಖೇರಿ ಪ್ರವೇಶಿಸಲು ನಿರ್ಬಂಧ ವಿಧಿಸಲಾಗಿತ್ತು. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಮತ್ತು ಆಪ್ತ ಸಂಬಂಧಿಕರನ್ನು ಭೇಟಿಯಾಗಲು ಅನುಮತಿ ನೀಡುವಂತೆ ಅವರ ಪರ ಹಿರಿಯ ವಕೀಲ ಸಿದ್ಧಾರ್ಥ್ ದವೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದರು. ಮನವಿಯನ್ನು ಪರಿಗಣಿಸಿದ ನ್ಯಾಯಪೀಠ, ಈ ಹಿಂದೆ ವಿಧಿಸಲಾದ ಷರತ್ತುಗಳಿಗೆ ಒಳಪಟ್ಟು ಲಖಿಂಪುರ ಖೇರಿಯಲ್ಲಿರುವ ತಮ್ಮ ಸ್ವಗ್ರಾಮಕ್ಕೆ ತೆರಳಿ ಕುಟುಂಬದವರೊಂದಿಗೆ ದೀಪಾವಳಿ ಆಚರಿಸಲು ಅನುಮತಿ ನೀಡಿತು.
2021ರ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾದಲ್ಲಿ, ಅಂದಿನ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಭೇಟಿಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಹಿಂಸಾಚಾರ ಸಂಭವಿಸಿತ್ತು. ಘಟನೆಯಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟಿದ್ದರು.





