ಮೈಸೂರಿನ ಉಸ್ತುವಾರಿ ಸಚಿವರಾದ ಶ್ರೀ ಯತೀಂದ್ರ ಸಿದ್ದರಾಮಯ್ಯ ನವರು ಮೈಸೂರಿನ ರಾಜಮನೆತನದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಮುಂದುವರಿಯುತ್ತಿದ್ದು ಹಿಂದೆ ಒಂದು ಬಾರಿ ಇವರ ತಂದೆಯವರಾದ ಸಿದ್ದರಾಮಯ್ಯನವರು ಉಪಮುಖ್ಯ ಮಂತ್ರಿಯಾಗಿದ್ದ ಸಮಯದಲ್ಲಿ ಅರಮನೆಯನ್ನು ಸರ್ಕಾರದ ವಶಕ್ಕೆ ಪಡೆಯಲು ಹುನ್ನಾರ ನಡೆಸಿದ್ದರು. ಆ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಅರಸು ಸಂಘ ಇದರ ವಿರುದ್ಧವಾಗಿ ಉಗ್ರವಾದ ಪ್ರತಿಭಟನೆ ಮಾಡಲಾಗಿತ್ತು, ತಂದೆಯ ಚಾಳಿಯನ್ನೇ ಮುಂದುವರಿಸಿದ ಶ್ರೀ ಯತೀಂದ್ರರವರು ಈ ಹಿಂದೆಯೂ ಸಹ ರಾಜ ಶ್ರೀ ನಾಲ್ಮಡಿ ಕೃಷ್ಣರಾಜ ಒಡೆಯರಿಗಿಂತ ಹೆಚ್ಚಿನ ಕೆಲಸಕಾರ್ಯಗಳನ್ನು ನಮ್ಮ ತಂದೆಯವರು ನಮ್ಮ ರಾಜ್ಯಕ್ಕೆ ಮಾಡಿದ್ದಾರೆಂದು ಉದ್ಧಟತನದ ಹೇಳಿಕೆಯನ್ನು ನೀಡಿದ್ದು ಈ ಹೇಳಿಕೆಯನ್ನು ರಾಜ್ಯದ ಎಲ್ಲಾ ಜನತೆ ಖಂಡಿಸುತ್ತೇವೆ ಎಂದು ದಿನೇಶ್ ರಾಜ್ ಅರಸು ತಿಳಿಸಿದರು.
ಮೊನ್ನೆ ನಡೆದ ದಸರಾ ಸಮಯದಲ್ಲಿ ಅರಮನೆಯಲ್ಲಿ ನಡೆದ ಕೆಲವು ಧಾರ್ಮಿಕ ಕಾರ್ಯಗಳಿಗೆ ಅಡ್ಡಿಯುಂಟಾಗಿರುವುದನ್ನು ಮನಗಂಡಿರುವ ರಾಜಮಾತೆಯವರಾದ ಶ್ರೀಮತಿ ಪ್ರಮೋದ ದೇವಿಯವರು ಸರ್ಕಾರಕ್ಕೆ ಸಲಹೆ ನೀಡಿ ಪತ್ರ ಬರೆದಿರುತ್ತಾರೆ. ಈ ಸಲಹೆಗೆ ಗೌರವ ಕೊಡದ ಶ್ರೀ ಯತೀಂದ್ರ ಸಿದ್ಧರಾಮಯ್ಯ ನವರು ನಮ್ಮ ಸರ್ಕಾರಕ್ಕೆ ಸಲಹೆ ಕೊಡಲು ರಾಜಮನೆತನದವರ ಅವಶ್ಯಕತೆ ಇರುವುದಿಲ್ಲ. ನಾವೇ ಅವರುಗಳಿಗೆ ವಾಸಿಸಲು ಅರಮನೆಯಲ್ಲಿ ಸ್ವಲ್ಪ ಜಾಗವನ್ನು ನೀಡಿದ್ದೇವೆ ಹಾಗೂ ಶ್ರೀಮತಿ ಪ್ರಮೋದ ದೇವಿಯವರು ಅಂಬಾರಿ ಹೊರುವ ಆನೆಯ ಬಗ್ಗೆ ವಿವರ ಕೇಳಿದಾಗ ಅದರ ಬಗ್ಗೆ ವಿವರಣೆ ಕೊಡುವ ಅಗತ್ಯವಿಲ್ಲವೆಂದು ಉದ್ದಟತನದ ಹೇಳಿಕೆ ನೀಡಿ, ಮುಂದುವರಿದು ಜಂಬೂಸವಾರಿಯಲ್ಲಿ ವಿಜೃಂಭಿಸುವ ಅಂಬಾರಿಗೂ ಸಹ ಸರ್ಕಾರದಿಂದ ಬಾಡಿಗೆಯನ್ನು ಕೊಡುತ್ತಿದ್ದೇವೆಂದು ಹೇಳಿಕೆಯನ್ನು ರಾಜ್ಯದ ಜನತೆ ತೀವ್ರ ಖಂಡಿಸುತ್ತೇವೆಂದು ದಿನೇಶ್ ರಾಜ್ ಅರಸು ತಿಳಿಸಿದರು.
ಮೈಸೂರಿನ ಉಸ್ತುವಾರಿ ಸಚಿವ ಯತೀಂದ್ರ ಸಿದ್ಧರಾಮಯ್ಯನವರು ಈಗ ನೀಡಿರುವ ಉದ್ದಟತನದ ಹೇಳಿಕೆಯನ್ನು ತಕ್ಷಣ ಹಿಂಪಡೆದು ರಾಜ ಮನೆತನದವರ ಮತ್ತು ರಾಜ್ಯದ ಜನತೆಯ ಕ್ಷಮೆಯಾಚಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡುತ್ತೇವೆಂದು ಜಿಲ್ಹಾ ಅರಸು ಸಂಘದ ಅಧ್ಯಕ್ಷ ಮುಕುಂದರಾಜು ಟಿ. ಎನ್ ತಿಳಿಸಿದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ʼನಮಗೊಂದು ಸೂರು ಕೊಡಿ; ಇಲ್ಲವಾದ್ರೆ ಗುಡಿಸಲಿನಲ್ಲೇ ಪ್ರಾಣ ಬಿಡ್ತೇವೆʼ: ವಸತಿಹೀನರ ಅಳಲು
ಈ ವೇಳೆ ಗೌರವ ಅಧ್ಯಕ್ಷ ಮಂಜುನಾಥ್ ರಾಜ್ ಅರಸು, ಪ್ರಧಾನ ಕಾರ್ಯದರ್ಶಿ ಯಶೋಧರ ರಾಜ್ ಅರಸು,ಮಾಜಿ ಅಧ್ಯಕ್ಷ ಜನಕ ರಾಜ್, ಖಜಾಂಚಿ ಲೋಕೇಶ್ ರಾಜ್, ಮೋಹನರಾಜ್, ವಕೀಲ ಆನಂದರಾಜ್ ಅರಸು ಹಾಗೂ ಇನ್ನಿತರರು ಭಾಗವಹಿಸಿದ್ದರು.




