ಸಿಜೆಪಿ ಕರೆಕೊಟ್ಟಿರುವ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಲು ದೆಹಲಿಯ ಜಂತರ್ ಮಂತರ್ಗೆ ತೆರಳುತ್ತಿದ್ದ ಸಿಪಿಐ(ಎಂ) ನಾಯಕರು, ಭಾರತೀಯ ವಿದ್ಯಾರ್ಥಿ ಫೆಡರೇಶನ್ (SFI) ಸದಸ್ಯರು ಹಾಗೂ ಹಲವು ವಕೀಲರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್ಎಫ್ಐ ಮತ್ತು ಇತರ ವಿದ್ಯಾರ್ಥಿ ಸಂಘಟನೆಗಳ ನೂರಾರು ಕಾರ್ಯಕರ್ತರು ಮತ್ತು ವಕೀಲರು ಸುಪ್ರೀಂ ಕೋರ್ಟ್ ಆವರಣದಿಂದ ಜಂತರ್ ಮಂತರ್ ಕಡೆಗೆ ಮೆರವಣಿಗೆ ಆರಂಭಿಸಿದ್ದರು. ಮೆರವಣಿಗೆ ಪ್ರಾರಂಭವಾಗುತ್ತಿದ್ದಂತೆಯೇ ಪ್ರತಿಭಟನಾಕಾರರನ್ನು ಭದ್ರತಾ ಕಾರಣಗಳು ಮತ್ತು ಕಾನೂನು ಪ್ರಕ್ರಿಯೆಗಳ ನೆಪವೊಡ್ಡಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ತಡೆಯನ್ನೂ ಮೀರಿ ಮುನ್ನುಗ್ಗಲು ಯತ್ನಿಸಿದ ಎಸ್ಎಫ್ಐ ರಾಷ್ಟ್ರೀಯ ಅಧ್ಯಕ್ಷ ಆದರ್ಶ್ ಎಂ. ಸಾಜಿ ಸೇರಿದಂತೆ 400ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ. ಮತ್ತೊಂದೆಡೆ, ಜಂತರ್ ಮಂತರ್ ಪ್ರದೇಶದಲ್ಲಿ ಪ್ರತಿಭಟನೆಗೆ ಯತ್ನಿಸುತ್ತಿದ್ದ ಸಿಪಿಐ(ಎಂ) ಹಿರಿಯ ನಾಯಕರಾದ ಎಂ. ಎ. ಬೇಬಿ, ಬೃಂದಾ ಕಾರಟ್ ಸೇರಿದಂತೆ ಹಲವಾರು ಎಡಪಂಥೀಯ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.
ಗ್ಯಾನೇಶ್ ಕುಮಾರ್ ರಾಜೀನಾಮೆ ಮತ್ತು ಎಸ್ಐಆರ್ ರದ್ದತಿಗೆ ಒತ್ತಾಯಿಸಿ ಹಾಗೂ ಚುನಾವಣಾ ಅಕ್ರಮಗಳ ವಿರುದ್ಧ ತನಿಖೆಗೆ ಆಗ್ರಹಿಸಿ ಸಿಜೆಪಿ ಬೃಹತ್ ಪ್ರತಿಭಟನೆಗೆ ಕರೆಕೊಟ್ಟಿತ್ತು. ಈ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದ ಸಿಜೆಪಿ ನಾಯಕರಾದ ಅಭಿಜೀತ್ ದೀಪ್ಕೆ, ಸೌರವ್ ದಾವ್, ಅಶುತೋಷ್ ರಂಕಾ, ರತ್ನಾ ಸಿಂಗ್, ಖ್ಯಾತ ಯೂಟ್ಯೂಬರ್ ಧೃವ್ ರಾಠಿ, ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಸಾವಿರಾರು ಪ್ರತಿಭಟನಾಕಾರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.



