ಗ್ರಾಮೀಣ ಭಾಗದಲ್ಲಿ ಮಾನವ ದಿನಗಳ ಸೃಜನೆ ಹೆಚ್ಚಿಸಲು ವಿಬಿ-ಜಿ ರಾಮ್-ಜಿ ಯೋಜನೆಯಡಿ ಕೆಲಸ ಮಾಡಲು ಸಿದ್ಧರಿರುವ ಕೂಲಿಕಾರರನ್ನು ಗುರುತಿಸಿ, ಅವರಿಗೆ ತಕ್ಷಣ ಉದ್ಯೋಗ ಕಲ್ಪಿಸಬೇಕು. ಕೆಲಸಕ್ಕೆ ಬರುವುದಾಗಿ ಒಪ್ಪಿರುವ ಕಾರ್ಮಿಕರಿಗೆ ಎರಡು ದಿನಗಳೊಳಗೆ ಕೆಲಸ ನೀಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್ ಸೂಚಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಮಾರನಬಸರಿ ಗ್ರಾಮ ಪಂಚಾಯಿತಿಗೆ ಬುಧವಾರ ಭೇಟಿ ನೀಡಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದ ಅವರು, “ಮಾನವ ದಿನಗಳ ಸೃಜನೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮನೆಮನೆಗೆ ತೆರಳಿ ಗ್ರಾಮಸ್ಥರೊಂದಿಗೆ ನೇರವಾಗಿ ಮಾತುಕತೆ ನಡೆಸಿ ಚರ್ಚಿಸಿದರು. ವಿಬಿ-ಜಿ ರಾಮ್-ಜಿ ಯೋಜನೆಯಡಿ ಕಾಮಗಾರಿ ಆರಂಭಿಸಿದರೆ ಕೆಲಸಕ್ಕೆ ಬರುತ್ತೀರಾ ಎಂದು ಜನರನ್ನು ಪ್ರಶ್ನಿಸಿದರು. ಕೆಲವರು ಕೆಲಸಕ್ಕೆ ಬರಲು ಸಿದ್ಧರಿರುವುದಾಗಿ ತಿಳಿಸಿದರೆ, ಇನ್ನು ಕೆಲವರು ಕೃಷಿ ಹಾಗೂ ಮನೆಗೆ ಸಂಬಂಧಿಸಿದ ಕೆಲಸಗಳಿರುವುದರಿಂದ ಒಂದು ವಾರದ ಬಳಿಕ ಕೆಲಸಕ್ಕೆ ಬರುವುದಾಗಿ” ಎಂದು ಗ್ರಾಮಸ್ಥರು ಸಿಇಒಗೆ ತಿಳಿಸಿದರು.
“ಕಾರ್ಮಿಕರ ಪ್ರತಿಕ್ರಿಯೆ ಆಲಿಸಿದ ಸಿಇಒ, ತಕ್ಷಣ ಕೆಲಸಕ್ಕೆ ಸಿದ್ಧರಿರುವವರನ್ನು ಗುರುತಿಸಿ ಅವರಿಗೆ ಉದ್ಯೋಗ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಕುಟುಂಬಗಳಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯುವಂತೆ ಮಾಡುವುದರ ಜತೆಗೆ ಯೋಜನೆಯಡಿ ಮಾನವ ದಿನಗಳ ಸೃಜನೆಯನ್ನೂ ಹೆಚ್ಚಿಸಬೇಕು” ಎಂದು ತಿಳಿಸಿದರು.
ಅನುಮೋದಿತ ಕಾಮಗಾರಿಗಳನ್ನು ತಕ್ಷಣ ಆರಂಭಿಸಿ: “ಗ್ರಾಮ ಪಂಚಾಯಿತಿಯ ಕ್ರಿಯಾ ಯೋಜನೆಯಲ್ಲಿ ಅನುಮೋದನೆ ಗೊಂಡಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಸಿಇಒ, ಅಲ್ಲಿ ಕೈಗೆತ್ತಿಕೊಳ್ಳಬೇಕಿರುವ ಕಾಂಪೌಂಡ್ ನಿರ್ಮಾಣ, ಚರಂಡಿ, ಸಿಸಿ ರಸ್ತೆ ಹಾಗೂ ಆಟದ ಮೈದಾನ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಅನುಮೋದಿತ ಕಾಮಗಾರಿಗಳ ಜತೆಗೆ ವೈಯಕ್ತಿಕ ಕಾಮಗಾರಿಗಳನ್ನು ಕೂಡ ವಿಳಂಬವಿಲ್ಲದೆ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪಿಡಿಒಗೆ ಸೂಚಿಸಿದರು.
ಯೋಜನೆಯಡಿ ನೋಂದಾಯಿತ ಕುಟುಂಬಗಳು, ಉದ್ಯೋಗ ಚೀಟಿ ಪಡೆದಿರುವವರು, ಈ ವರ್ಷ ಕೆಲಸ ಮಾಡಿದ ದಿನಗಳ ಸಂಖ್ಯೆ, ಪಡೆದ ಕೂಲಿ ಮೊತ್ತ ಹಾಗೂ ವೈಯಕ್ತಿಕ ಸೌಲಭ್ಯಗಳ ವಿವರಗಳನ್ನು ಅಧಿಕಾರಿಗಳು ಸರಿಯಾಗಿ ಪರಿಶೀಲಿಸಬೇಕು ಎಂದು ತಿಳಿಸಿದರು. ಸಾಮೂಹಿಕ ಕಾಮಗಾರಿಗಳಿಗೆ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದ್ದಾರೆಯೇ, ಸಲ್ಲಿಸಿದ್ದರೆ ಎಷ್ಟು ದಿನ ಕೆಲಸ ನೀಡಲಾಗಿದೆ ಎಂಬ ಮಾಹಿತಿಯನ್ನೂ ಸಂಗ್ರಹಿಸುವಂತೆ ಸೂಚಿಸಿದರು.
ಕಾಮಗಾರಿ ಆರಂಭಿಸುವ ಮೊದಲು ನೀಡಬೇಕಾದ ತಿಳುವಳಿಕೆ ಪತ್ರ, ಮನೆ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದ ನೋಟಿಸ್‌ಗಳ ವಿತರಣೆ ಸೇರಿದಂತೆ ವಿವಿಧ ಆಡಳಿತಾತ್ಮಕ ಅಂಶಗಳ ಬಗ್ಗೆಯೂ ಪರಿಶೀಲನೆ ನಡೆಸಿದರು. ಪ್ರತಿ ಮನೆಗೆ ಭೇಟಿ ನೀಡಿ ಈ ಎಲ್ಲಾ ವಿವರಗಳನ್ನು ಸಂಗ್ರಹಿಸಿ, ಎರಡು ದಿನಗಳೊಳಗೆ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದಿಂಡೂರಿನಲ್ಲಿ ಬೂದು ನೀರು ನಿರ್ವಹಣೆ ಪರಿಶೀಲನೆ
ರಾಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಂಡೂರು ಗ್ರಾಮಕ್ಕೆ ಭೇಟಿ ನೀಡಿದ ಮುಕುಲ್ ಜೈನ್, ಅಲ್ಲಿ ನಡೆಯುತ್ತಿರುವ ಬೂದು ನೀರು ನಿರ್ವಹಣಾ ಕಾಮಗಾರಿಯನ್ನು ಪರಿಶೀಲಿಸಿದರು. ಗ್ರಾಮದಲ್ಲಿ ನೀರು ನಿರ್ವಹಣೆ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಗಮನಿಸಿ, ಸಾರ್ವಜನಿಕರಿಂದ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಸ್ಥಳದಲ್ಲೇ ಪರಿಹರಿಸಲು ಸಾಧ್ಯವಿದ್ದ ಸಮಸ್ಯೆಗಳಿಗೆ ಕ್ರಮ ಕೈಗೊಂಡರು.
ಇದೇ ವೇಳೆ ಪ್ರೌಢಶಾಲೆಗೆ ಭೇಟಿ ನೀಡಿದ ಸಿಇಒ, ವಿದ್ಯಾರ್ಥಿಗಳ ದಾಖಲಾತಿ ವಿವರಗಳನ್ನು ಪರಿಶೀಲಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಕಲಿಕೆ, ಶಾಲೆಯ ಸೌಲಭ್ಯಗಳು ಹಾಗೂ ಶೈಕ್ಷಣಿಕ ಪ್ರಗತಿಯ ಕುರಿತು ಮಾಹಿತಿ ಪಡೆದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆಗಳ ಅನುಷ್ಠಾನ, ಉದ್ಯೋಗದ ಬೇಡಿಕೆ, ಅಭಿವೃದ್ಧಿ ಕಾಮಗಾರಿಗಳು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಚುರುಕುಗೊಳಿಸುವ ಉದ್ದೇಶದಿಂದ ಈ ಭೇಟಿ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಯೋಜನಾ ನಿರ್ದೇಶಕರಾದ ಎಂ.ವಿ. ಚಳಿಗೇರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ, ವಿಬಿಜಿ-ರಾಮ್-ಜಿ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಅಧಿಕಾರಿ ಕಿರಣಕುಮಾರ್ ಎಸ್ ಎಚ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶರಣಪ್ಪ ನರೇಗಲ್, ವಿಲಾಸ ಲಮಾಣಿ ಸೇರಿದಂತೆ ತಾಲೂಕ ಪಂಚಾಯತಿ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಜರಿದ್ದರು.





