ರಾಸುಗಳ ವಿಮಾ ಸೌಲಭ್ಯದ ಮೊತ್ತವನ್ನು ₹60 ಸಾವಿರದಿಂದ ₹80 ಸಾವಿರಕ್ಕೆ ಹೆಚ್ಚಿಸಲಾಗಿದ್ದು, ವಿಮೆ ಮಾಡಿಸಿದ ಹಸು ಮೃತಪಟ್ಟರೆ ದೊರೆಯುವ ಪರಿಹಾರದ ನೆರವಿನಿಂದ ರೈತರು ಮತ್ತೊಂದು ಹಸು ಖರೀದಿಸಲು ಅನುಕೂಲವಾಗಲಿದೆ ಎಂದು ಕೋಮುಲ್ ನಿರ್ದೇಶಕ ಚಲುವನಹಳ್ಳಿ ನಾಗರಾಜ್ ತಿಳಿಸಿದರು
ತಾಲೂಕಿನ ತಮ್ಮ ಸ್ವಗ್ರಾಮದಲ್ಲಿ ಸೋಮವಾರ ಹಾಲು ಉತ್ಪಾದಕರಿಗೆ ರಾಸುಗಳ ವಿಮಾ ಸೌಲಭ್ಯ ವಿತರಿಸಿ ಮಾತನಾಡಿದ ಅವರು, ಹೈನುಗಾರಿಕೆಯನ್ನೇ ಜೀವನಾಧಾರವಾಗಿಸಿಕೊಂಡಿರುವ ರೈತರಿಗೆ ರಾಸುಗಳ ವಿಮೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಅನಿರೀಕ್ಷಿತವಾಗಿ ಹಸು ಮೃತಪಟ್ಟಾಗ ರೈತರು ದೊಡ್ಡ ಪ್ರಮಾಣದ ನಷ್ಟ ಅನುಭವಿಸುತ್ತಾರೆ. ಇಂತಹ ಸಂದರ್ಭದಲ್ಲಿ ವಿಮಾ ಪರಿಹಾರವು ನೆರವಿಗೆ ಬರಲಿದ್ದು, ಹೈನುಗಾರಿಕೆಯನ್ನು ಮುಂದುವರಿಸಲು ಸಹಕಾರಿಯಾಗಲಿದೆ ಎಂದರು.
ರಾಸುಗಳ ವಿಮಾ ಮೊತ್ತವನ್ನು ₹60 ಸಾವಿರದಿಂದ ₹80 ಸಾವಿರಕ್ಕೆ ಹೆಚ್ಚಿಸಿರುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಸೌಲಭ್ಯವನ್ನು ಹಾಲು ಉತ್ಪಾದಕರು ಸಮರ್ಪಕವಾಗಿ ಬಳಸಿಕೊಳ್ಳಬೇಕು. ವರ್ಷಕ್ಕೆ ನಾಲ್ಕು ಬಾರಿ ರಾಸುಗಳಿಗೆ ವಿಮೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು, ರೈತರು ಈ ಬಗ್ಗೆ ಮಾಹಿತಿ ಪಡೆದು ತಮ್ಮ ಜಾನುವಾರುಗಳಿಗೆ ವಿಮೆ ಮಾಡಿಸಿಕೊಳ್ಳಬೇಕು ಎಂದರು
ಹೈನುಗಾರಿಕೆ ಗ್ರಾಮೀಣ ಕುಟುಂಬಗಳ ಆರ್ಥಿಕ ಪ್ರಗತಿಗೆ ಪ್ರಮುಖ ಆಧಾರವಾಗಿದೆ. ಹೀಗಾಗಿ ಹಾಲು ಉತ್ಪಾದಕರು ರಾಸುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜತೆಗೆ ವಿಮಾ ಸೌಲಭ್ಯವನ್ನೂ ಪಡೆದುಕೊಳ್ಳಬೇಕು ಜೊತೆಗೆ ಕೋಮುಲ್ ವತಿಯಿಂದ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವಂತೆ ತಿಳಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಟಾಟಾ ಎಲೆಕ್ಟ್ರಾನಿಕ್ಸ್ನಲ್ಲಿ ಮಹಿಳಾ ಕಾರ್ಮಿಕರ ಸಾವು: ಸಮಗ್ರ ತನಿಖೆಗೆ ಸಿಐಟಿಯು ಒತ್ತಾಯ
ಈ ಸಂದರ್ಭದಲ್ಲಿ ಕೋಮುಲ್ ಉಪವ್ಯವಸ್ಥಾಪಕರಾದ ಡಾ.ಮಹೇಶ್, ಡಾ.ಅಶ್ವಕ್ ಅಹಮದ್, ವಿಸ್ತರಣಾಧಿಕಾರಿಗಳಾದ ರಾಜ್ ಬಾಬು, ನಾಗಪ್ಪ ಸೇರಿದಂತೆ ಡೇರಿ ಕಾರ್ಯದರ್ಶಿಗಳು ಹಾಲು ಉತ್ಪಾದಕರು ಇದ್ದರು.





