ಕಾದಂಬರಿಕಾರ, ಭಾಷಾತಜ್ಞ, ನಿವೃತ್ತ ಪ್ರಾಧ್ಯಾಪಕ ಕೆ.ಟಿ. ಗಟ್ಟಿ(86) ಇಂದು ನಿಧನರಾಗಿದ್ದಾರೆ. ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ 1938ರ ಜುಲೈ 22ರಂದು ಜನಿಸಿದ ಶ್ರೀಯುತರು, ಪ್ರಾಥಮಿಕ ಶಿಕ್ಷಣವನ್ನು ಕಾಸರಗೋಡಿನ ಹೈಯರ್ ಎಲಿಮೆಂಟರಿ ಶಾಲೆಯಲ್ಲಿ ಕಲಿತರು. ತಂದೆ ಧೂಮಪ್ಪಗಟ್ಟಿಯವರು ಕೃಷಿಕರಾದರೂ ಯಕ್ಷಗಾನ ಕಲೆಯ ಬಗ್ಗೆ ಅಪಾರ ಒಲವಿದ್ದವರು. ತಾಯಿ ಪರಮೇಶ್ವರಿ ತುಳು-ಮಲಯಾಳಂ ಪಾಡ್ದನ ಹಾಡುಗಳನ್ನು ಕಲಿತವರು.
ಉತ್ತಮ ಭಾಷೆ, ಆಕರ್ಷಕ ಶೈಲಿ, ಹೊಸ ಹೊಸ ವಸ್ತು, ಸರಳ ನಿರೂಪಣೆಗಳ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ಮನೆ ಮಾತಾದ ಹಿರಿಯ ಕಥೆಗಾರ ಕೆ.ಟಿ.ಗಟ್ಟಿ ಅವರು ಎಲ್ಲಾ ಓದುಗರಿಗೆ ಚಿರಪರಿಚಿತರು. ಕೇರಳ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಬಿಎಡ್ ಪದವಿ ಪಡೆದಿರುವ ಕೆ.ಟಿ.ಗಟ್ಟಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯವರು. ಸದ್ಯ ಮಂಗಳೂರಿನಲ್ಲಿ ನೆಲೆಸಿದ್ದರು.
ತಮ್ಮ ಹದಿನೇಳರ ಹರೆಯದಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ ಇವರು ಇಥಿಯೋಪಿಯಾದಲ್ಲಿ ಒಂಬತ್ತು ವರ್ಷ ಸೇರಿದಂತೆ ಒಟ್ಟು 25 ವರ್ಷ ಇಂಗ್ಲಿಷ್ ಪ್ರಾಧ್ಯಾಪಕರಾಗಿ ದುಡಿದವರು. 1957ರಿಂದ ಲೇಖನಿ ಹಿಡಿದು ಸಾಹಿತ್ಯ ಕೃಷಿ ಆರಂಭಿಸಿದ ಈ ಹಿರಿಯ ಕಥೆಗಾರ ನಿರಂತರವಾಗಿ ಕಥೆ, ಕಾದಂಬರಿ, ಕವನ, ಪ್ರಬಂಧ ಸಂಕಲನ, ನಾಟಕಗಳನ್ನು ಬರೆಯುತ್ತಲೇ ಬಂದವರು.
ಇವರ ಮೊದಲ ಕಾದಂಬರಿ ‘ಶಬ್ದಗಳು’ 1973ರಲ್ಲಿ ಪ್ರಕಟವಾಯಿತು. ಈವರೆಗೆ 48 ಕಾದಂಬರಿಗಳು 5 ಕಥಾಸಂಕಲನಗಳು, 6 ಪ್ರಬಂಧ ಸಂಕಲನಗಳು, 22 ನಾಟಕಗಳು, 14 ಬಾನುಲಿ ನಾಟಕಗಳು, 2 ಕವನ ಸಂಕಲನಗಳಲ್ಲದೆ ಆತ್ಮಕಥೆ, ವ್ಯಕ್ತಿಚಿತ್ರ ಹಾಗೂ ಪ್ರವಾಸ ಕಥನಗಳನ್ನೂ ಬರೆದು ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ಇವರದು. ತುಳು ಭಾಷೆಯಲ್ಲೂ ಒಂದು ಕವನ ಸಂಕಲನ ಹಾಗೂ ಕಾದಂಬರಿ ಪ್ರಕಟಿಸಿದ್ದಾರೆ.
ಕೆ.ಟಿ.ಗಟ್ಟಿಯವರು ರಚಿಸಿದ 30 ಮಕ್ಕಳ ನಾಟಕಗಳು ಕನ್ನಡ ಅಂತರ್ಜಾಲ ಮ್ಯಾಗಜಿನ್ ನಲ್ಲಿ ಪ್ರಕಟಗೊಂಡಿವೆ. ಇತರ 10 ಮಕ್ಕಳ ನಾಟಕಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಮಂಗಳೂರು ಆಕಾಶವಾಣಿಯಲ್ಲಿ ಹಲವು ಭಾಷಣಗಳು, 50 ಚಿಂತನಗಳು, ಕಥೆಗಳು ಪ್ರಸಾರವಾಗಿವೆ. ಕಳೆದ 40 ವರ್ಷಗಳಿಂದ ನಾಡಿನ ಹೆಸರಾಂತ ದಿನಪತ್ರಿಕೆಗಳು, ವಾರ ಹಾಗೂ ಮಾಸಪತ್ರಿಕೆಗಳಲ್ಲಿ ಇವರ ಹಲವಾರು ಲೇಖನಗಳು, ಕವನಗಳು ಪ್ರಕಟವಾಗಿವೆ. ಹೆಸರಿಗೆ ತಕ್ಕಂತೆ ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿ ಕುಳ ಎನಿಸಿರುವ ಕೆ.ಟಿ.ಗಟ್ಟಿ ಅವರ ಒಟ್ಟು 16 ಕಾದಂಬರಿಗಳು ಸುಧಾ ವಾರಪತ್ರಿಕೆ ಒಂದರಲ್ಲೇ ಪ್ರಕಟವಾಗಿವೆ.
ಇಥಿಯೋಪಿಯಾದಲ್ಲಿದ್ದಾಗ ಒಮ್ಮೆ ನಡೆದ ಘಟನೆ ಇವರ ಮನಸ್ಸಿನ ಮೇಲೆ ಅಚ್ಚೊತ್ತಿತು. ಇವರು ಪ್ರೀತಿಯಿಂದ ಬೆಳೆಸಿದ ನಿಂಬೆಗಿಡವನ್ನೂ ಕುರಿಯೊಂದು ಬಂದು ತಿನ್ನತೊಡಗಿದಾಗ ಕೋಪಗೊಂಡು ಓಡಿಸಿದ ಮೇಲೆ ಗಟ್ಟಿಯವರೆಗೆ ಕಾಡಿದ ಪ್ರಶ್ನೆ. ಬೇರೆಯವರ ದೇಶ, ಅವರ ಮಣ್ಣು, ಅವರ ಗಿಡ, ಅವರ ಕುರಿ-ನಾನು ಓಡಿಸಿದ್ದು ಸರಿಯಾ? ಅನುಭವಿಸಿದ ಈ ಗೊಂದಲದಿಂದ ಹುಟ್ಟಿ ಬಂದದ್ದೇ ‘ಅರಗಿನ ಅರಮನೆ’ ಕಾದಂಬರಿ. 1982ರಲ್ಲಿ ಸ್ವದೇಶಕ್ಕೆ ಮರಳಿಬಂದ ಗಟ್ಟಿಯವರು ಪೂರ್ಣಾವಧಿ ಲೇಖಕರಾಗಿ ಬದುಕಲು ನಿರ್ಧರಿಸಿ, ದ.ಕ. ಜಿಲ್ಲೆಯ ಉಜಿರೆಯ ಬಳಿ ಜಮೀನು ಖರೀದಿಸಿ ‘ವನಸಿರಿ’ಯಲ್ಲಿ ಕೃಷಿ, ಸಾಹಿತ್ಯ ಕೃಷಿ ಎರಡರಲ್ಲೂ ತೊಡಗಿಸಿಕೊಂಡಿದ್ದರು.
ದಿವಂಗತರಿಗೆ ನಮನಗಳು. ಗಟ್ಟಿಯವರು ವಿಶ್ವದಲ್ಲಿ ಲೀನವಾಗಿದ್ದಾರೆ. ವಿದ್ಯಾರ್ಥಿ ದಿನಗಳಲ್ಲಿ ಗ್ರಂಥಾಲಯದಲ್ಲಿ ಓದುತ್ತಿದ್ದ ಕಾದಂಬರಿಗಳು ಗಟ್ಟಿಯವರದ್ದೇ. ಪರುಷ ದಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಯ ಕೊರತೆಗಳು, ಓರೆ ಕೋರೆ ಗಳನ್ನು ಟೀಕಿಸುತ್ತಾ ಪರ್ಯಾಯ ವ್ಯವಸ್ಥೆಗೆ ಹೊರಳುವುದನ್ನು ಸೂಚಿಸುತ್ತಾರೆ. ಆದರೆ ಆ ಪರ್ಯಾಯ ಬೇರಾವುದಲ್ಲದೆ ಗುರುಕುಲ ಮಾದರಿಯದ್ದು.
ಇನ್ನು ಗ್ಲಾನಿ ಕಾದಂಬರಿ ಜರತಾರಿ ಧರ್ಮಗುರುಗಳ ಮುಖವಾಡದ ಶೋಧನೆ.
ಉರಿ ಸಾಮಾಜಿಕ ಕಥನ.
ಮಿಂಚು ಸಿನಿಮಾರಂಗದ , ಸಿನಿ ಮಾಧ್ಯಮದ ವಿಡಂಬನೆ, ಕಟು ಟೀಕೆ.