ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ಇ.ಡಿ) ನಡೆಸುತ್ತಿರುವ ವಿಚಾರಣೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಜರಾಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷ ತಿಳಿಸಿದೆ.
ಸಮನ್ಸ್ ಅನ್ನು ಕಾನೂನುಬಾಹಿರ ಎಂದು ಕರೆದಿರುವ ಪಕ್ಷ, ಪದೇ ಪದೇ ಸಮನ್ಸ್ ಕಳುಹಿಸುವ ಬದಲು ನ್ಯಾಯಾಲಯದ ವಿಚಾರಣೆ ಮುಗಿಯುವವರೆಗೆ ಕಾಯಲಿ ಎಂದು ಪಕ್ಷ ತಿಳಿಸಿದೆ.
ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧಿಸಿದಂತೆ ಇ.ಡಿ ಒಟ್ಟು ಆರು ಬಾರಿ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ಇದುವರೆಗೆ ಒಂದೇ ಒಂದು ವಿಚಾರಣೆಗೆ ಅವರು ಹಾಜರಾಗಿರಲಿಲ್ಲ. ವಿಚಾರಣೆಗೆ ಹಾಜರಾಗದೇ ಇರುವುದರ ವಿರುದ್ಧ ಈ ಹಿಂದೆ ಇ.ಡಿ ನ್ಯಾಯಾಲಯದ ಮೆಟ್ಟಿಲೇರಿತ್ತು.
ಈ ಹಿನ್ನೆಲೆಯಲ್ಲಿ ಫೆ.17ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ನ್ಯಾಯಾಲಯ ಕೇಜ್ರಿವಾಲ್ ಅವರಿಗೆ ಆದೇಶಿಸಿತ್ತು. ಶನಿವಾರ(ಫೆ.17) ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದ ಕೇಜ್ರಿವಾಲ್, ಬಜೆಟ್ ಅಧಿವೇಶನ ಮತ್ತು ವಿಶ್ವಾಸಮತ ಯಾಚನೆ ನಡೆಯುತ್ತಿರುವುದರಿಂದ ದೈಹಿಕವಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.
ವಿಚಾರಣೆ ಆಲಿಸಿದ ನ್ಯಾಯಾಲಯ ಮಾರ್ಚ್ 16ರಂದು ಖುದ್ದು ಹಾಜರಾಗುವಂತೆ ಕೇಜ್ರಿವಾಲ್‌ಗೆ ಸೂಚಿಸಿದೆ.