1996ರಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡ ವಿಜಯಪುರ ಜಿಲ್ಲೆಯ ಕೊಲ್ಹಾರದ ಸಂತ್ರಸ್ತರ ಸಮಸ್ಯೆಗೆ ಇಂದಿಗೂ ಪರಿಹಾರ ಸಿಗದಿರುವುದು ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ್ ಗುರೂಜಿ ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಶಶಿಕಾಂತ್ ಗುರೂಜಿ, “ಮನೆ, ಮಠ ಹಾಗೂ ಜಮೀನು ಕಳೆದುಕೊಂಡು ಪುನರ್ವಸತಿಗಾಗಿ ಕಾಯುತ್ತಿರುವ ಸಂತ್ರಸ್ತರಿಗೆ ಇಂದಿಗೂ ಹಕ್ಕುಪತ್ರ ಮತ್ತು ಉತಾರಿ ದೊರೆಯದಿರುವುದು ನೋವಿನ ಸಂಗತಿ” ಎಂದು ಹೇಳಿದರು.
ಕೊಲ್ಹಾರ ಪಟ್ಟಣದ ಸ್ಟೇಟ್ ಬ್ಯಾಂಕ್ ಹಿಂಭಾಗದಲ್ಲಿ ಸುಮಾರು 25 ವರ್ಷಗಳಿಂದ ತಾತ್ಕಾಲಿಕವಾಗಿ ವಾಸಿಸುತ್ತಿರುವ ಸಂತ್ರಸ್ತರಿಗೆ ಕೂಡಲೇ ನಿವೇಶನ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಿರೇಶ್ ಹಟ್ಟಿಯವರಿಗೆ ಒತ್ತಾಯಿಸಿದರು. ನಿವೇಶನ ಮಂಜೂರಾಗುವವರೆಗೆ ಅವರಿಗೆ ಯಾವುದೇ ತೊಂದರೆ ನೀಡದೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು ಎಂದೂ ಅವರು ಆಗ್ರಹಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಒನಪ್ಪ ಪೂಜಾರಿ ಮಾತನಾಡಿ, “ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಗಳಾದ ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಳ, ಭೂ ಪರಿಹಾರ ಮತ್ತು ನೀರಾವರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.
This video cannot be played in your browser. Open the video directly
ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಹಾಗೂ ತಾಲೂಕು ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿದರು. ಮೂರು ದಶಕಗಳಿಂದ ಮನೆ-ಮಠ ಕಳೆದುಕೊಂಡ ಸಂತ್ರಸ್ತರು ತಮ್ಮ ಹಕ್ಕುಗಳಿಗಾಗಿ ಕಚೇರಿಗಳಿಗೆ ಅಲೆದಾಡುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ಹೇಳಿದರು. ಸರ್ಕಾರ ಹಾಗೂ ಅಧಿಕಾರಿಗಳು ಇನ್ನಾದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಹಕ್ಕುಪತ್ರ ವಿತರಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರಮುಖ ಬೇಡಿಕೆಗಳು
- ಆಲಮಟ್ಟಿ ಜಲಾಶಯಕ್ಕಾಗಿ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಕೂಡಲೇ ಹಕ್ಕುಪತ್ರ ವಿತರಿಸುವುದು.
- ವಿಜಯಪುರ ಜಿಲ್ಲೆಯ ಎಲ್ಲ ಕೆರೆಗಳನ್ನು ಮುಳವಾಡ ಏತ ನೀರಾವರಿ ಯೋಜನೆಯ ಮೂಲಕ ತುಂಬಿಸುವುದು.
- ಜನವರಿಯಿಂದ ಜುಲೈವರೆಗೆ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ 20 ಟಿಎಂಸಿ ನೀರು ಕಾಯ್ದಿರಿಸುವುದು.
- ರೈತರ ಜಮೀನುಗಳಿಗೆ ಸಮರ್ಪಕವಾಗಿ ತ್ರೀ-ಫೇಸ್ ಹಾಗೂ ಸಿಂಗಲ್-ಫೇಸ್ ವಿದ್ಯುತ್ ಪೂರೈಸುವುದು.
ನಾಲ್ಕು ತಿಂಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ
ಪ್ರತಿಭಟನೆಯ ಹಿನ್ನೆಲೆಯಲ್ಲಿ ಯುಕೆಪಿ ವಿಶೇಷ ಜಿಲ್ಲಾಧಿಕಾರಿ, ವಿಜಯಪುರ ಅಪರ ಜಿಲ್ಲಾಧಿಕಾರಿ, ಹೆಸ್ಕಾಂ ಅಧಿಕಾರಿಗಳು, ಸ್ಥಳೀಯ ತಾಲೂಕು ದಂಡಾಧಿಕಾರಿ ಹಾಗೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳೊಂದಿಗೆ ಪ್ರತಿಭಟನಾಕಾರರು ಮಾತುಕತೆ ನಡೆಸಿದರು. ಬಾಕಿ ಉಳಿದಿರುವ ಮುಳುಗಡೆ ಸಂತ್ರಸ್ತರ ಬೇಡಿಕೆಗಳನ್ನು ನಾಲ್ಕು ತಿಂಗಳೊಳಗೆ ಬಗೆಹರಿಸುವುದಾಗಿ ಅಧಿಕಾರಿಗಳು ಲಿಖಿತ ಭರವಸೆ ನೀಡಿದರು. ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.
ಪ್ರತಿಭಟನೆಯಲ್ಲಿ ಅಪ್ಪು ಗೌಡ ಮನಗೋಳಿ, ರಾಹುಲ್ ಕೋಬಕಡ್ಡಿ, ಮಲ್ಲಪ್ಪ ಅಂಗಡಿ, ಪ್ರೇಮ್ ಚೌಗಲಾ, ಪ್ರಕಾಶ್ ಉಮ್ರಾಣಿ, ಶಿವಾನಂದ, ಸಿದ್ದು ಬಾಲಗೊಂಡ, ವಿಜಯ ಮಹಾಂತೇಶ ಗೆಡ್ಡಪ್ಪಗೋಳ, ಸಿ.ಎಸ್. ಗಿಡ್ಡಪ್ಪಗೋಳ, ಈರಣ್ಣಗೌಡ ಕೋಮಾರ, ಸಿಎಂ ಗಣಕುಮಾರ ಮತ್ತು ಪೀರ್ ಮೊಹಮ್ಮದ್ ಗಿರಿಗಾವಿ ಸೇರಿದಂತೆ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಂತ್ರಸ್ತರು ಭಾಗವಹಿಸಿದ್ದರು.





