ಜಿಲ್ಲೆ ಸಾಹಿತ್ಯಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕವಾಗಿ ಶ್ರೀಮಂತ ಪರಂಪರೆಯನ್ನು ಹೊಂದಿದೆ. ಸೂಫಿ ಸಂತರು, ಶರಣರು ಹಾಗೂ ಮಹಾನ್ ಚಿಂತಕರ ನೆಲದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಡಾ.ಅಜಯ್ ಧರ್ಮಸಿಂಗ್ ಹೇಳಿದರು.
ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕವು ಬಸವಣ್ಣನವರ ಕರ್ಮಭೂಮಿಯಾಗಿದ್ದು, 12ನೇ ಶತಮಾನದಲ್ಲಿ ಶರಣರು ಜಾತಿ, ಧರ್ಮದ ಭೇದವಿಲ್ಲದೆ ಎಲ್ಲರನ್ನೂ ಒಂದೆಡೆ ಸೇರಿಸಿ ಜ್ಞಾನದಾಸೋಹ ನಡೆಸಿದ ಪರಂಪರೆಯನ್ನು ಹೊಂದಿದೆ. ಬಸವಣ್ಣನವರ ವಚನಗಳು ಜ್ಞಾನದ ಮಹತ್ವ ಸತ್ಯ ಮತ್ತು ಸಮಾನತೆಯ ಸಂದೇಶ ಸಾರುತ್ತವೆ. 16ನೇ ಶತಮಾನವನ್ನು ದಾಸರ ಶತಮಾನವೆಂದು ಗುರುತಿಸಲಾಗಿದ್ದು, ಕನಕದಾಸರು ಮತ್ತು ಪುರಂದರದಾಸರು ತಮ್ಮ ಸಾಹಿತ್ಯದ ಮೂಲಕ ಸಮಾಜಕ್ಕೆ ಮಹತ್ವದ ಸಂದೇಶ ನೀಡಿದ್ದಾರೆ ಎಂದರು.
ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಕುಲದ ಹೆಸರಿನಲ್ಲಿ ಸಂಘರ್ಷ ಮಾಡಬಾರದು ಎಂಬ ಸಂದೇಶ ನೀಡಿದ್ದಾರೆ. ಅಕ್ಕಮಹಾದೇವಿ ಹಾಗೂ ಸರ್ವಜ್ಞರ ವಚನಗಳಲ್ಲಿಯೂ ಮಾನವೀಯತೆ, ಸಮಾನತೆ ಮತ್ತು ಗುಣಶೀಲತೆಯ ಮಹತ್ವವನ್ನು ಸಾರಲಾಗಿದೆ. ಇಂತಹ ಮೌಲ್ಯಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವಲ್ಲಿ ಸಾಹಿತ್ಯ ಸಮ್ಮೇಳನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು
ರಾಯಚೂರು ಜಿಲ್ಲೆಯ ಜನಪದ ಹಾಡುಗಳಲ್ಲಿ ಮಣ್ಣಿನ ಸೊಗಡಿದೆ. ವಚನ ಸಾಹಿತ್ಯದಲ್ಲಿ ಸಮಾನತೆಯ ಸಂದೇಶವಿದೆ. ದಾಸ ಸಾಹಿತ್ಯದಲ್ಲಿ ಭಕ್ತಿಯ ಪರಿಮಳವಿದ್ದರೆ, ಸೂಫಿ ಪರಂಪರೆಯಲ್ಲಿ ಸಹಬಾಳ್ವೆ ಮತ್ತು ಸಹಭಾಗಿತ್ವದ ಆಶಯವಿದೆ. ಸೂಫಿ ಸಂತರು, ಶರಣರು ಹಾಗೂ ದಾರ್ಶನಿಕರು ನಡೆದಾಡಿದ ಈ ಪುಣ್ಯಭೂಮಿಯ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕಿದೆ ಎಂದರು.
ಇಂದಿನ ಮಕ್ಕಳ ಕೈಯಲ್ಲಿ ಮೊಬೈಲ್ಗಳಿದ್ದು, ಪುಸ್ತಕಗಳು ದೂರವಾಗುತ್ತಿವೆ. ರೀಲ್ಸ್ ನೋಡುವ ಮಕ್ಕಳು ಕವನ ಬರೆಯುವ ಆಸಕ್ತಿ ಬೆಳೆಸಿಕೊಳ್ಳುತ್ತಿಲ್ಲ. ವಾಟ್ಸಾಪ್ನಲ್ಲಿ ನೂರಾರು ಸಂದೇಶಗಳನ್ನು ಕಳುಹಿಸುವವರು ಪತ್ರ ಬರೆಯುವ ಅಭ್ಯಾಸವನ್ನೂ ಮರೆಯುತ್ತಿದ್ದಾರೆ. ಮಕ್ಕಳು ತಮ್ಮ ಸುಖ-ದುಃಖ, ಗುರಿ ಹಾಗೂ ಜೀವನದ ಅನುಭವಗಳನ್ನು ಪುಸ್ತಕದಲ್ಲಿ ದಾಖಲಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಯಚೂರು ಜಿಲ್ಲೆಯಲ್ಲಿ ಈ ಹಿಂದೆ ಮೂರು ಬಾರಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿರುವುದು ಹೆಮ್ಮೆಯ ಸಂಗತಿ. ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 2027ರಲ್ಲಿ ಕರ್ನಾಟಕದಲ್ಲಿ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಕುರಿತು ಪ್ರಸ್ತಾಪಿಸಿದ್ದಾರೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಇಂತಹ ಸಮ್ಮೇಳನಗಳು ಮತ್ತಷ್ಟು ವೇದಿಕೆಯಾಗಲಿವೆ. ವಿಶ್ವ ಕನ್ನಡ ಸಮ್ಮೇಳನವನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.
ರಾಯಚೂರು ನಗರ ಕ್ಷೇತ್ರದ ಶಾಸಕ ಡಾ. ಶಿವರಾಜ ಎಸ್. ಪಾಟೀಲ ಮಾತನಾಡಿ, ರಾಯಚೂರು ಜಿಲ್ಲೆ ಸಾಂಸ್ಕೃತಿಕ ತವರಾಗಿದ್ದು, ಪಂಪನ ಕಾಲದಿಂದಲೂ ಕನ್ನಡ ಸಾಹಿತ್ಯ ಇಲ್ಲಿ ಬೆಳೆದು ಬಂದಿದೆ. ಜನಪದ ಹಾಡುಗಳು, ದಾಸ ಸಾಹಿತ್ಯ ಮತ್ತು ಗ್ರಾಮೀಣ ಬದುಕಿನ ಕಥೆಗಳಲ್ಲಿ ಈ ಭಾಗದ ಇತಿಹಾಸ ಹಾಗೂ ಜೀವನಮೌಲ್ಯಗಳು ಅಡಗಿವೆ. ಹಳ್ಳಿಗಳಲ್ಲಿ ಇಂದಿಗೂ ಹಿರಿಯರು ಹೇಳುವ ಕಥೆಗಳು, ಅಜ್ಜಿಯರು ಹಾಡುವ ಹಾಡುಗಳು ನಮ್ಮ ಸಂಸ್ಕೃತಿಯ ಜೀವಂತ ದಾಖಲೆಗಳಾಗಿವೆ. ಅವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವುದು ಸಮ್ಮೇಳನದ ಪ್ರಮುಖ ಕರ್ತವ್ಯವಾಗಬೇಕು ಎಂದರು.
ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಎನ್.ಎಸ್. ಬೋಸರಾಜು ಮಾತನಾಡಿ, ಸರ್ಕಾರಗಳು ಕೈಗೊಳ್ಳುವ ಕೆಲಸಗಳು ಮತ್ತು ಜವಾಬ್ದಾರಿಗಳನ್ನು ಎಚ್ಚರಿಸುವುದರ ಜತೆಗೆ ಸೂಕ್ತ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಸಾಹಿತ್ಯ ಸಮ್ಮೇಳನದ ಗೋಷ್ಠಿಗಳು ನಡೆಯಬೇಕು. ಈ ಭಾಗದ ನೆಲ, ಜಲ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕುರಿತು ಸಮ್ಮೇಳನದಲ್ಲಿ ಚರ್ಚೆಗಳು ನಡೆಯಬೇಕು ಎಂದರು.
ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ ಅವರು ಕಾರ್ಯಕ್ರಮದಲ್ಲಿ ಆದಿ ಅಮಾತೆಪ್ಪನವರ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿ, ಎಡೆದೊರೆ ನಾಡು ಸಮೃದ್ಧ ನಾಡಾಗಿದ್ದು, ಇಲ್ಲಿ ಕನ್ನಡಕ್ಕೆ ಸಂಬಂಧಿಸಿದ ಹಲವಾರು ಸಮ್ಮೇಳನಗಳು ನಡೆಯುತ್ತವೆ. ಶಬ್ದಗಳ ರಚನೆಯಲ್ಲಿ ಸಾಹಿತಿಗಳ ಶ್ರಮ ಬಹಳಷ್ಟಿರುತ್ತದೆ. ದೇವದುರ್ಗ ತಾಲೂಕನ್ನು ದೇವರುಗಳ ನಾಡೆಂದು ಕರೆಯುತ್ತಾರೆ. ರಾಯಚೂರನ್ನು ಹಿಂದುಳಿದ ನಾಡು ಎನ್ನುತ್ತಾರೆ. ರಾಜಕೀಯವಾಗಿ ನಾವು ಹಿಂದುಳಿದಿರಬಹುದು, ಆದರೆ ಸಾಂಸ್ಕೃತಿಕವಾಗಿ ಬಹಳ ಶ್ರೀಮಂತರಾಗಿದ್ದೇವೆ ಎಂದರು.
ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಅವರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಈ ನಾಡು ಸೂಫಿ ಸಂತರು ಹಾಗೂ ಶರಣರ ಪರಂಪರೆಯ ನೆಲವಾಗಿದೆ. ದಾಸ ಪರಂಪರೆಯ ಜಗನ್ನಾಥ ದಾಸರು, ವಿಜಯ ದಾಸರು ಮತ್ತು ಗೋಪಾಲ ದಾಸರ ಸಾಂಸ್ಕೃತಿಕ ನೆಲೆವೀಡಾಗಿದೆ. ತಾರಾನಾಥರು ಮಂಗಳೂರಿನಿಂದ ಇಲ್ಲಿಗೆ ಬಂದು ಕನ್ನಡ ಸಂಸ್ಕೃತಿಯನ್ನು ಕಟ್ಟಿಕೊಡುವ ಬಹುದೊಡ್ಡ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಐದು ರೂಪಾಯಿ ಮುಖಬೆಲೆಯ ಸಮ್ಮೇಳನದ ಲಾಂಛನ ಹೊಂದಿರುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದೇವಸುಗೂರಿನಲ್ಲಿ ಶಾಸಕ ಬಸನಗೌಡ ದದ್ದಲ್ ನೇತೃತ್ವದಲ್ಲಿ ಪ್ರಜಾ ಸೇವೆ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ. ವೆಂಕಟ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಲು ಗಿರಿ, ರಾಯಚೂರು ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ, ಸಂಪಾದಕರಾದ ಬಸವರಾಜ ಸ್ವಾಮಿ, ಅರವಿಂದ್ ಕುಲಕರ್ಣಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೃಷ್ಣ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಂದಿತಾ ಎಂ.ಎನ್, ಮುಖಂಡರಾದ ಜಯಣ್ಣ ಕೆ. ಶಾಂತಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾಹಿತಿಗಳು, ಪರಿಷತ್ತಿನ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.



