ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕೇವಲ ಯಾರದೋ ಒಬ್ಬರ ಮೇಲೆ ಹೊರಿಸದೆ; ರೈತರು, ಸಕ್ಕರೆ ಕಾರ್ಖಾನೆಗಳು ಹಾಗೂ ಸರ್ಕಾರ ಒಟ್ಟಾಗಿ ಸೇರಿ ಬಗೆಹರಿಸಬೇಕಿದೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಮಂಗಳವಾರ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೈತರು ಕಬ್ಬು ಬೆಳೆದರೆ ಮಾತ್ರ ಕಾರ್ಖಾನೆಗಳು ಇರಲು ಸಾಧ್ಯ. ಅದೇ ರೀತಿ ಕಾರ್ಖಾನೆಗಳಿಗೂ ನಷ್ಟವಾಗದಂತೆ ಕಬ್ಬು ಅರೆಯುವ ಕೆಲಸವಾಗಬೇಕು. ಆಗ ಮಾತ್ರ ಇಬ್ಬರೂ ಉಳಿಯಲು ಸಾಧ್ಯ. ಇದು ಪ್ರತಿಯೊಬ್ಬರ ಬದುಕಿನ ಪ್ರಶ್ನೆಯಾಗಿರುವುದರಿಂದ ರೈತರ, ಸಕ್ಕರೆ ಕಾರ್ಖಾನೆಗಳ ಮತ್ತು ಸರ್ಕಾರದ ಸಮಸ್ಯೆಗಳೇನು ಎಂಬುದನ್ನು ನಾವೆಲ್ಲರೂ ಕುಳಿತು ಮುಕ್ತವಾಗಿ ಚರ್ಚಿಸಬೇಕಿದೆ’ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಬೆಳಗಾವಿಯಲ್ಲಿ ರೈತರಿಗೆ ಈ ಕುರಿತು ಮಾತುಕೊಟ್ಟು ಬಂದಿದ್ದೇನೆ. ಸಭೆ ನಡೆಸಲು ಎಲ್ಲರಿಗೂ ಅನುಕೂಲವಾಗುವಂತಹ ದಿನಾಂಕವನ್ನು ಶೀಘ್ರದಲ್ಲೇ ನಿಗದಿಪಡಿಸಲಾಗುವುದು. ಜನಪ್ರತಿನಿಧಿಗಳಿಗೂ ಈ ವಿಚಾರ ತಿಳಿಸಿದ್ದೇನೆ. ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದೇನೆ. ಜೊತೆಗೆ, ಆ ಭಾಗದ ಕೇಂದ್ರ ಸಚಿವರು, ಸಂಸದರು ಹಾಗೂ ಮಂತ್ರಿಗಳನ್ನು ಆಹ್ವಾನಿಸಿ ಶಾಂತಿ ಮತ್ತು ಸೌಹಾರ್ದತೆಯಿಂದ ಈ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ವಿವರಿಸಿದರು.
ರಾಜ್ಯದಲ್ಲಿನ ಬರ ಪರಿಸ್ಥಿತಿ ನಿರ್ವಹಣೆ ಮತ್ತು ಪರಿಹಾರ ನಿಧಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲು ಸಮಯಾವಕಾಶ ಕೋರಲಾಗಿದೆ. ಆದರೆ, ಕೇಂದ್ರದಿಂದ ಇದುವರೆಗೂ ಭೇಟಿಗೆ ಸಮಯ ನಿಗದಿಯಾಗಿಲ್ಲ ಎಂದು ಅವರು ಮಾಹಿತಿ ನೀಡಿದರು.
ಡಿಸೆಂಬರ್ 31ರೊಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಅಕ್ಟೋಬರ್ 27ರಂದು ಚುನಾವಣಾ ಆಯೋಗವು ಹೊಸ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಆಯೋಗವು ಯಾವಾಗ ಬೇಕಾದರೂ ಚುನಾವಣೆ ಘೋಷಿಸುವ ಸಾಧ್ಯತೆಯಿದೆ. ಹೀಗಾಗಿ, ಬೆಂಗಳೂರು ನಗರ ಸೇರಿದಂತೆ ಎಲ್ಲೆಡೆ ಚುನಾವಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸೋಮವಾರ ನಡೆದ ಸಭೆಯಲ್ಲಿ ಸಚಿವರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡುವ ಬಗ್ಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಗತ್ಯ ಅನುದಾನದ ವರದಿ ಸಲ್ಲಿಸುವಂತೆ ಶಾಸಕರಿಗೆ ಸೂಚಿಸಲಾಗಿದೆ. ಇದೇ ವಿಚಾರವಾಗಿ ಬೆಂಗಳೂರು ಶಾಸಕರನ್ನೂ ಕರೆದು ಚರ್ಚಿಸಿದ್ದೇನೆ. ಜೊತೆಗೆ ಶಾಸಕರಿಗೆ ಕರೆ ಮಾಡಿ ಹಬ್ಬದ ಶುಭಾಶಯಗಳನ್ನೂ ತಿಳಿಸಿದ್ದೇನೆ ಎಂದರು.
ರಾಜ್ಯದ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯ ಕೋರಿದ ಅವರು, ‘ರೈತರು, ಕಾರ್ಮಿಕರು ಹಾಗೂ ಶ್ರಮಿಕ ವರ್ಗದವರ ಪರಿಕರಗಳಿಗೆ ಪೂಜೆ ಸಲ್ಲಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ವಾಹನಗಳಿಗೂ ಪೂಜೆ ನೆರವೇರಿಸಲಾಗಿದೆ. ನಾಡಿನ ಜನರಿಗೆ ಒಳಿತಾಗಲಿ, ಎಲ್ಲರ ಪ್ರಯಾಣ ಸುಖಕರ ಮತ್ತು ಸುರಕ್ಷಿತವಾಗಿರಲಿ ಎಂದು ತಾಯಿ ಚಾಮುಂಡೇಶ್ವರಿಯ ಅನುಗ್ರಹ ಬೇಡುತ್ತೇನೆ’ ಎಂದು ಪ್ರಾರ್ಥಿಸಿದರು.





