ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧ ಗುರುವಾರ ಬೀದರ್ ನಗರದಲ್ಲಿ ಇಂಡಿಯಾ ಮೈತ್ರಿಕೂಟದಿಂದ ʼಮತ ಉಳಿಸಿ-ದೇಶ ಉಳಿಸಿʼ ಘೋಷವಾಕ್ಯದಡಿ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್, ಸಿಪಿಐ(ಎಂ), ಸಿಪಿಐ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಬಿಜೆಪಿ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಮಟ್ಟದ ಕರೆಯ ಮೇರೆಗೆ ಇಂಡಿಯಾ ಒಕ್ಕೂಟ ಹಾಗೂ ಎಸ್‌ಐಆರ್ ವಿರೋಧಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಕೇಂದ್ರ ಚುನಾವಣಾ ಆಯೋಗವು ಅವೈಜ್ಞಾನಿಕ ಎಸ್‌ಐಆರ್ ಪ್ರಕ್ರಿಯೆಯ ಮೂಲಕ ದೇಶದ 13 ಕೋಟಿ ಮತದಾರರ ಮತಹಕ್ಕನ್ನು ಕಸಿದುಕೊಂಡಿದ್ದು, ಇದು ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ಕ್ರಮವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಆರೋಪಿಸಿದರು.
ಕೇಂದ್ರ ಮುಖ್ಯ ಚುನಾವಣಾ ಆಯೋಗವು ಬಿಜೆಪಿ ಸರ್ಕಾರದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿದೆ. ಸಂವಿಧಾನಬದ್ಧ ಹಕ್ಕುಗಳನ್ನು ಕಸಿಯುವ ಚುನಾವಣಾ ಆಯೋಗದ ನೀತಿ ಖಂಡನೀಯ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಲು ಸಾಮೂಹಿಕ ಶಕ್ತಿಯನ್ನು ರೂಪಿಸುವ ಅಗತ್ಯವಿದ್ದು, ಎಸ್‌ಐಆರ್ ರದ್ದತಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಧ್ವನಿ ಎತ್ತಬೇಕು ಎಂದು ಕರೆ ನೀಡಿದರು.
ನ.1ರಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ದೇಶದ ಅಸಂಖ್ಯಾತ ಜನರು ಪಾಲ್ಗೊಂಡು ಎಸ್‌ಐಆರ್ ವಿರುದ್ಧ ಧ್ವನಿ ಮೊಳಗಿಸಿದ್ದಾರೆ. ಈ ಹೋರಾಟವನ್ನು ದೇಶಾದ್ಯಂತ ತೀವ್ರಗೊಳಿಸುವ ಅಗತ್ಯವಿದೆ ಎಂದು ಮುಖಂಡರು ಅಭಿಪ್ರಾಯಪಟ್ಟರು.
ಈ ಹಿಂದೆ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಪ್ರತಿಪಕ್ಷದ ನಾಯಕ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿ ಸದಸ್ಯರಾಗಿದ್ದರು. ಆದರೆ ಈಗಿನ ವ್ಯವಸ್ಥೆಯಲ್ಲಿ ಮುಖ್ಯ ನ್ಯಾಯಮೂರ್ತಿಯವರ ಬದಲಿಗೆ ಕೇಂದ್ರ ಗೃಹ ಸಚಿವರನ್ನು ಸೇರಿಸಿರುವುದು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ನೇಮಕಾತಿ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಹಿಂದಿನ ವ್ಯವಸ್ಥೆಯನ್ನು ಮರುಸ್ಥಾಪಿಸುವಂತೆ ಕಾಯ್ದೆಗೆ ತಿದ್ದುಪಡಿ ತರಬೇಕು. ಮುಖ್ಯ ಚುನಾವಣಾ ಆಯುಕ್ತರಿಗೆ ನೀಡಿರುವ ಕಾನೂನು ವಿನಾಯಿತಿ ರದ್ದುಗೊಳಿಸಬೇಕು. ದೇಶದ ಪ್ರತಿಯೊಬ್ಬರೂ ಕಾನೂನಿನ ಮುಂದೆ ಹೊಣೆಗಾರರಾಗಿರುವಂತೆ ಚುನಾವಣಾ ಆಯುಕ್ತರೂ ತಮ್ಮ ಕಾರ್ಯಗಳಿಗೆ ಹೊಣೆಗಾರರಾಗಿರಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಸಂವಿಧಾನ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಆರ್‌ಎಸ್‌ಎಸ್ ಅಜೆಂಡಾದಂತೆ ಸರ್ವಾಧಿಕಾರಿ ಧೋರಣೆ ಹಾಗೂ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಪಕ್ಷಪಾತರಹಿತ ಪ್ರಕ್ರಿಯೆಯ ಮೂಲಕ ಹೊಸ ಚುನಾವಣಾ ಆಯೋಗವನ್ನು ನೇಮಿಸಬೇಕು ಹಾಗೂ ಮತದಾರರ ಪಟ್ಟಿಯನ್ನು ನ್ಯಾಯಸಮ್ಮತವಾಗಿ ಪರಿಷ್ಕರಿಸಬೇಕು. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕೆ. ಪುಂಡಲಿಕರಾವ್, ಅರವಿಂದ ಕುಮಾರ ಅರಳಿ, ಸಿಪಿಐ ಹಾಗೂ ಸಿಪಿಐ(ಎಂ) ಮುಖಂಡರಾದ ಬಾಬುರಾವ್ ಹೊನ್ನಾ, ಜಾರ್ಜ್ ಫರ್ನಾಂಡೀಸ್, ಎಂ.ಡಿ.ಸಮೀ, ನಾಸೀರ್ ಖಾದ್ರಿ, ರೇಷ್ಮಾ ಹಂಸರಾಜ್, ಪ್ರಭು ಸಂತೋಷಕರ್, ಡಾ. ಮಕ್ಸೂದ್ ಚಂದಾ, ಪಂಡಿತ ಚಿದ್ರಿ, ಬಸವರಾಜ ಮಾಳಗೆ, ಮುಹಮ್ಮದ್ ನಿಜಾಮುದ್ದೀನ್, ಓಂಪ್ರಕಾಶ ರೊಟ್ಟೆ, ವಿಠಲದಾಸ ಪ್ಯಾಗೆ, ಜಗದೀಶ್ವರ ಬಿರಾದರ್, ದೇವಿದಾಸ ತುಮಕುಂಟೆ, ಗೋವರ್ಧನ ರಾಠೋಡ್, ಗೀತಾ ಪಂಡಿತ ಚಿದ್ರಿ, ಸುಧಾಕರ ಕೊಳ್ಳೂರ್, ದತ್ತು ಮೂಲಗೆ, ಶ್ರೀಕಾಂತ್ ಸ್ವಾಮಿ, ಚಂದ್ರಶೇಖರ ಚನ್ನಶೆಟ್ಟಿ, ಹಣಮಂತ ಮಲ್ಕಾಪುರೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಇದನ್ನೂ ಓದಿ : ಬೀದರ್ | ಪ್ರಥಮ ದಲಿತ ಬಂಡಾಯ ಸಮ್ಮೇಳನ ಸರ್ವಾಧ್ಯಕ್ಷರಿಗೆ ಆಹ್ವಾನ




