ದಕ್ಷಿಣ ಲೆಬನಾನ್ಅನ್ನು ವಶಪಡಿಸಿಕೊಳ್ಳುವ ಇಸ್ರೇಲ್ ಹವಣಿಸುತ್ತಿದೆ. ಇಸ್ರೇಲಿ ಪಡೆಗಳು ಲೆಬನಾನ್ ಮೇಲೆ ಪ್ರಮುಖ ಭೂಸೇನಾ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿವೆ. ಇಸ್ರೇಲ್‌ನ ಈ ಆಕ್ರಮಣಕಾರಿ ಯೋಜನೆಗಳನ್ನು ಕೆನಡಾ ತೀವ್ರವಾಗಿ ಖಂಡಿಸಿದೆ. ಲೆಬನಾನ್‌ನ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಬಾರದು ಎಂದು ಕೆನಡಾ ಎಚ್ಚರಿಸಿದೆ.
ಲೆಬನಾನ್‌ನ ದಕ್ಷಿಣ ಗಡಿಯಿಂದ 30 ಕಿ.ಮೀ.ಗಳಷ್ಟು ಒಳಗಿನ ಪ್ರದೇಶವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಇಸ್ರೇಲ್ ಸಿದ್ಧತೆ ನಡೆಸುತ್ತಿದೆ. ಲೆಬನಾನ್‌ನ ದಕ್ಷಿಣ ಮತ್ತು ಪೂರ್ವ ಭಾಗಗಳು ಹಾಗೂ ರಾಜಧಾನಿ ಬೈರೂತ್ ಮೇಲೆ ವಾರಗಳಿಂದ ನಡೆಯುತ್ತಿರುವ ಇಸ್ರೇಲಿ ದಾಳಿಯಿಂದಾಗಿ ಸಾವನ್ನಪ್ಪಿದ ಲೆಬನಾನ್ ಜನರ ಸಂಖ್ಯೆ ಕನಿಷ್ಠ 1,079ಕ್ಕೆ ಏರಿಕೆಯಾಗಿದೆ. ಹತ್ತು ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾಗಿದ್ದಾರೆ. ಈಗ ಇಸ್ರೇಲ್ ತನ್ನ ಭೂಸೇನೆಯನ್ನು ಲೆಬನಾನ್‌ಗೆ ನುಗ್ಗಿಸಲು ಸಂಚು ಹೂಡಿದೆ. ಲಿಟಾನಿ ನದಿಯವರೆಗಿನ ದಕ್ಷಿಣ ಲೆಬನಾನ್ ಪ್ರದೇಶವನ್ನು ತನ್ನ ಮಿಲಿಟರಿ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ ಎಂದು ಇಸ್ರೇಲ್ ಘೋಷಿಸಿದೆ.
ಈ ಸಂದರ್ಭದಲ್ಲಿ, ಲೆಬನಾನ್ ಸರ್ಕಾರ ಮತ್ತು ಅಲ್ಲಿನ ಜನರೊಂದಿಗೆ ಐಕ್ಯತೆ ಘೋಷಿಸಿರುವ ಕೆನಡಾ, “ಸಂಘರ್ಷದಲ್ಲಿರುವ ಎಲ್ಲ ಕಡೆಯವರು ಅಂತರಾಷ್ಟ್ರೀಯ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ನಾಗರಿಕರನ್ನು ರಕ್ಷಿಸಲು, ಮೂಲಸೌಕರ್ಯಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಶಾಂತಿಪಾಲಕರ ಮೇಲಿನ ದಾಳಿಯಿಂದ ದೂರವಿರಬೇಕು” ಎಂದು ಕರೆಕೊಟ್ಟಿದೆ.
ಈ ಲೇಖನ ಓದಿದ್ದೀರಾ?: ಅಮೆರಿಕ-ಇರಾನ್ ಬಿಕ್ಕಟ್ಟು ಶಮನಕ್ಕೆ ಪಾಕ್ ಸಂಧಾನಕಾರ! ಏನಿದು ಅಚ್ಚರಿಯ ಲೆಕ್ಕಾಚಾರ?
ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್-ನೋಯೆಲ್ ಬ್ಯಾರೋ ಕೂಡ ಇಸ್ರೇಲ್ ಕ್ರೌರ್ಯವನ್ನು ಖಂಡಿಸಿದ್ದಾರೆ. “ಆಕ್ರಮಣದಂತಹ ಕ್ರಮವು ನಾಗರಿಕರ ಮೇಲೆ ಭೀಕರ ಪರಿಣಾಮ ಬೀರಲಿದೆ, ಈಗಾಗಲೇ ಹದಗೆಟ್ಟಿರುವ ದೇಶದ ಪರಿಸ್ಥಿತಿಯನ್ನು ಇನ್ನಷ್ಟು ಕದಡಲಿದೆ. ಇಸ್ರೇಲ್ ತನ್ನ ಯೋಜಿತ ಆಕ್ರಮಣದಿಂದ ಹಿಂದೆ ಸರಿಯಬೇಕು” ಎಂದಿದ್ದಾರೆ.



