ಟೆಕ್ ಜಗತ್ತಿನ ಮುಂದುವರಿದ ಉದ್ಯೋಗ ಕಡಿತದ ಅಲೆಯಲ್ಲಿ ಜನಪ್ರಿಯ ಡಿಸೈನ್ ಸಾಫ್ಟ್‌ವೇರ್ ಕಂಪನಿ ‘ಕ್ಯಾನ್ವಾ’ (Canva) ಕೂಡ ಸೇರಿದೆ. ಕಂಪನಿಯು ತನ್ನ ಒಟ್ಟು ಕಾರ್ಯಪಡೆಯ ಶೇ. 22ರಷ್ಟನ್ನು ಅಂದರೆ ಬರೋಬ್ಬರಿ 1,271 ನೌಕರರನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಹೆಚ್ಚುತ್ತಿರುವ ವೆಚ್ಚಗಳೇ ಈ ಕಠಿಣ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಕಂಪನಿ ಹೇಳಿಕೊಂಡಿದೆ.
ಕಂಪನಿಯ ಸಹ-ಸಂಸ್ಥಾಪಕಿ ಹಾಗೂ ಸಿಇಒ ಮೆಲನಿ ಪರ್ಕಿನ್ಸ್ (Melanie Perkins) ಅವರು ಉದ್ಯೋಗಿಗಳಿಗೆ ಬರೆದ ಆಂತರಿಕ ಪತ್ರದಲ್ಲಿ, ಕಳೆದ ಹದಿಮೂರು ವರ್ಷಗಳಲ್ಲಿ ಕಂಪನಿ ಅಸಾಧಾರಣ ಬೆಳೆವಣಿಗೆ ಸಾಧಿಸಿದೆ ಎಂದಿದ್ದಾರೆ. ಪಿಚ್‌ಡೆಕ್‌ನಲ್ಲಿದ್ದ ಸಣ್ಣ ಕನಸೊಂದು ಇಂದು ಕೋಟ್ಯಂತರ ಮಂದಿ ಬಳಸುವ ವೇದಿಕೆಯಾಗಿ ಬೆಳೆದಿರುವುದಕ್ಕೆ ಪ್ರತಿ ನೌಕರನ ಪರಿಶ್ರಮವೇ ಕಾರಣ ಎಂದು ಶ್ಲಾಘಿಸಿದ್ದಾರೆ. ಆದರೆ, ಮೊದಲ ಹಂತದ ಯಶಸ್ಸು ಮುಂದಿನ ಹಂತದ ಯಶಸ್ಸಿಗೆ ಗ್ಯಾರಂಟಿ ಅಲ್ಲ ಎಂದಿರುವ ಅವರು, ಈ ವರ್ಷ ಕಂಪನಿಗೆ ಅತ್ಯಂತ ಸವಾಲಿನದ್ದಾಗಿದ್ದು, ಕಳೆದ ಒಂದು ದಶಕದಲ್ಲಿ ಮೊದಲ ಬಾರಿಗೆ ಬೆಳವಣಿಗೆಯ ವೇಗ ಕುಸಿದಿದೆ ಎಂದು ಒಪ್ಪಿಕೊಂಡಿದ್ದಾರೆ.
ಕಾರ್ಯನಿರ್ವಹಣೆಯಲ್ಲಿನ ಅಡಚಣೆಗಳನ್ನು ನಿವಾರಿಸಲು ಕ್ಯಾನ್ವಾ ತನ್ನ ಸಾಂಸ್ಥಿಕ ರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಇದರ ಭಾಗವಾಗಿ ಪ್ರಾಡಕ್ಟ್, ಗ್ರೋತ್ ಮತ್ತು ಪ್ಲಾಟ್‌ಫಾರ್ಮ್ ತಂಡಗಳನ್ನು ವಿಲೀನಗೊಳಿಸಲಾಗುತ್ತಿದೆ. ನೌಕರರು ತಮ್ಮ ಪ್ರಮುಖ ಕರ್ತವ್ಯಗಳಾಚೆಗೂ ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಸೂಚಿಸಲಾಗಿದೆ. ಜತೆಗೆ, ರಿಮೋಟ್ ವರ್ಕ್ ಮಾದರಿಗೆ ಹೆಸರಾಗಿದ್ದ ಕಂಪನಿ, ಇನ್ನುಮುಂದೆ ನೌಕರರು ವಾರದಲ್ಲಿ ಕೆಲವು ದಿನ ಕಚೇರಿಗೆ ಬಂದು ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಿದೆ.
ಕಂಪನಿಯು ಪ್ರಮುಖವಾಗಿ ಎಐ (AI) ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ದೊಡ್ಡ ಸವಾಲನ್ನು ಎದುರಿಸುತ್ತಿದೆ. ಇತರ ಕಂಪನಿಗಳ ಎಐ ಸೇವೆಗಳ ಮೇಲೆ ಹೆಚ್ಚು ಅವಲಂಬಿತವಾಗುವುದನ್ನು ತಪ್ಪಿಸಲು, ಕ್ಯಾನ್ವಾ ತನ್ನದೇ ಆದ ಸ್ವಂತ ಎಐ ಮಾದರಿಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿತ್ತು. ಆದರೆ, ಈ ಹೊಸ ಎಐ ತಂತ್ರಜ್ಞಾನದ ಸಂಶೋಧನೆ ಮತ್ತು ಅಭಿವೃದ್ಧಿಗೆ ಅತಿಯಾದ ವೆಚ್ಚ ತಗಲುತ್ತಿರುವುದು ಕಂಪನಿಗೆ ದೊಡ್ಡ ಹೊರೆಯಾಗಿದೆ.
ಇದರ ಪರಿಣಾಮವಾಗಿ, ಕಂಪನಿಯು ತನ್ನ ಆದಾಯದ ಬೆಳವಣಿಗೆಯ ಅಂದಾಜನ್ನು ಶೇ. 30 ರಿಂದ ಶೇ. 20ಕ್ಕೆ ಇಳಿಸಿಕೊಂಡಿದೆ. ಕಂಪನಿಯ ಆದಾಯದ ವೇಗ ತಗ್ಗಿದ್ದನ್ನು ಕಂಡು ಹೂಡಿಕೆದಾರರ ಭರವಸೆ ಕುಸಿದಿದ್ದು, ಅವರು ಕ್ಯಾನ್ವಾ ಕಂಪನಿಯ ಒಟ್ಟು ಮೌಲ್ಯವನ್ನು 35 ಶತಕೋಟಿ ಡಾಲರ್‌ಗೆ ಇಳಿಸಿದ್ದಾರೆ. ಮತ್ತೊಂದೆಡೆ, ಚಾಟ್ ಜಿಪಿಟಿ ಮತ್ತು ಜೆಮಿನಿಯಂತಹ ಪ್ರಮುಖ ಎಐ ವೇದಿಕೆಗಳು ಕೇವಲ ಒಂದೇ ಕಮಾಂಡ್‌ನಲ್ಲಿ ಆಕರ್ಷಕ ಚಿತ್ರ ಹಾಗೂ ಗ್ರಾಫಿಕ್ಸ್ ನೀಡಲು ಆರಂಭಿಸಿರುವುದರಿಂದ, ಕ್ಯಾನ್ವಾಗೆ ಮಾರುಕಟ್ಟೆಯಲ್ಲಿ ಕಠಿಣ ಸ್ಪರ್ಧೆ ಎದುರಾಗಿದೆ.
ಸಾಮಾನ್ಯವಾಗಿ ದೊಡ್ಡ ಕಂಪನಿಗಳಲ್ಲಿ ನಡೆಯುವ ನೌಕರರ ಕಡಿತದ ಸುದ್ದಿಗಳು ಆತಂಕ ತಂದರೂ, ಕ್ಯಾನ್ವಾ ಅನುಸರಿಸಿರುವ ಮಾನವೀಯ ವಿಧಾನ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಕೆಲಸ ಕಳೆದುಕೊಳ್ಳುವ 1,271 ಮಂದಿಯಲ್ಲಿ ಎಲ್ಲರೂ ಉದ್ಯೋಗ ಕಳೆದುಕೊಳ್ಳುತ್ತಿಲ್ಲ, ಬದಲಿಗೆ ಕೆಲವರಿಗೆ ಬೇರೆ ಪಾತ್ರಗಳು ಹಾಗೂ ಸ್ಥಳಾಂತರದ ಅವಕಾಶವನ್ನೂ ನೀಡಲಾಗಿದೆ.
ಉದ್ಯೋಗ ಬಿಡುವವರಿಗೆ ಕಂಪನಿಯು ಹಲವು ಸೌಲಭ್ಯಗಳನ್ನೂ ಘೋಷಿಸಿದೆ: ಕೆಲಸ ಕಳೆದುಕೊಳ್ಳುವವರು ಕಂಪನಿ ನೀಡಿದ್ದ ಮ್ಯಾಕ್‌ಬುಕ್ (MacBook) ತಮ್ಮ ಬಳಿಯೇ ಇಟ್ಟುಕೊಳ್ಳಬಹುದು. ಎಲ್ಲರಿಗೂ ಕನಿಷ್ಠ 6 ತಿಂಗಳ ವೇತನವನ್ನು ಸೆವೆರೆನ್ಸ್ ಪ್ಯಾಕೇಜ್ ರೂಪದಲ್ಲಿ ನೀಡಲಾಗುತ್ತದೆ. 1 ವರ್ಷದ ಲಿಂಕ್ಡ್‌ಇನ್ ಪ್ರೀಮಿಯಂ ಚಂದಾದಾರಿಕೆ, ವೈಯಕ್ತಿಕ ವೃತ್ತಿ ಮಾರ್ಗದರ್ಶನ ಮತ್ತು ಸಂದರ್ಶನ ತಯಾರಿಗೆ ನೆರವು ನೀಡಲಾಗುತ್ತದೆ. ಸ್ಥಳೀಯ ನಿಯಮಗಳಿರುವ ದೇಶಗಳಲ್ಲಿ 12 ತಿಂಗಳವರೆಗೆ ಆರೋಗ್ಯ ವಿಮೆ ಮುಂದುವರಿಯಲಿದೆ. ಉದ್ಯೋಗಿಗಳ ಕುಟುಂಬಗಳಿಗೆ 1 ವರ್ಷದವರೆಗೆ ‘ಕ್ಯಾನ್ವಾ ಕೇರ್’ ನೌಕರರ ಸಹಾಯ ಕಾರ್ಯಕ್ರಮ ಲಭ್ಯವಿರುತ್ತದೆ. ಹೊಸ ಉದ್ಯಮ ಆರಂಭಿಸಲು ಇಚ್ಛಿಸುವವರಿಗೆ ‘ಕ್ಯಾನ್ವಾ ಕಲೆಕ್ಟಿವ್ ಫಂಡ್’ ಮೂಲಕ ಯಾವುದೇ ಈಕ್ವಿಟಿ ಪಡೆದುಕೊಳ್ಳದೆ 10,000 ಯುಎಸ್ ಡಾಲರ್ ಅನುದಾನ ನೀಡಲಾಗುತ್ತದೆ ಎಂದು ಹೇಳಿದೆ.
ಟೆಕ್ ಲೋಕದಲ್ಲಿ ಉದ್ಯೋಗ ಕಡಿತದ ಸರಣಿ ಮುಂದುವರಿದಿದ್ದರೂ, ಕ್ಯಾನ್ವಾ ಅನುಸರಿಸಿದ ಈ ಸಹಾನುಭೂತಿಯ ವಿಧಾನವು ಕಾರ್ಪೊರೇಟ್ ಜಗತ್ತಿನಲ್ಲಿ ಹೊಸ ಮಾನದಂಡವನ್ನು ಸೃಷ್ಟಿಸಿದೆ ಎಂದು ಉದ್ಯಮದ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.




