ಲೆಬನಾನ್ ಮತ್ತು ಇಸ್ರೇಲ್ ನಡುವಿನ ಕದನ ವಿರಾಮಕ್ಕೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಒಪ್ಪಂದ ನಡೆದಿದೆ. ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಹಾಕಿವೆ. ಇದಾದ ಕೆಲವೇ ಗಂಟೆಗಳಲ್ಲಿ, ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ ಭಾರಿ ರಾಜಕೀಯ ಅಸ್ಥಿರತೆ ಮತ್ತು ಅಶಾಂತಿ ಭುಗಿಲೆದ್ದಿದೆ. ಒಪ್ಪಂದದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿರುವ ಹಿಜ್ಬೊಲ್ಲಾ ಸಂಘಟನೆಯ ಸಾವಿರಾರು ಬೆಂಬಲಿಗರು ಬೈರುತ್‌ನ ಬೀದಿಗಳಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.
ಅಮೆರಿಕ ಬೆಂಬಲಿತ ಈ ಒಪ್ಪಂದವನ್ನು ಲೆಬನಾನ್ ಸರ್ಕಾರವು ಒಪ್ಪಿಕೊಂಡಿರುವುದು ದೇಶಕ್ಕೆ ಮತ್ತು ತಮ್ಮ ಹೋರಾಟಗಳಿಗೆ ಬಗೆದ ‘ದ್ರೋಹ’ವಾಗಿದೆ. ಇಸ್ರೇಲ್ ಮತ್ತು ಅಮೆರಿಕದ ಕಠಿಣ ಷರತ್ತುಗಳಿಗೆ ಲೆಬನಾನ್ ಸರ್ಕಾರವು ಸಂಪೂರ್ಣವಾಗಿ ಮಂಡಿಯೂರಿದೆ. ಇದು ದೇಶದ ಸಾರ್ವಭೌಮತ್ವವನ್ನು ಅಡವಿಡುವ ತಂತ್ರವಾಗಿದೆ ಎಂದು ಹಿಜ್ಬೊಲ್ಲಾ ಸಂಘಟನೆ ಕಿಡಿಕಾರಿದೆ.
ಪ್ರತಿಭಟನಾಕಾರರು ಹಿಜ್ಬೊಲ್ಲಾ ಧ್ವಜಗಳನ್ನು ಮತ್ತು ತಮ್ಮ ಮೃತ ನಾಯಕರ ಪೋಸ್ಟರ್‌ಗಳನ್ನು ಹಿಡಿದು ಸರ್ಕಾರದ ವಿರುದ್ಧ ತೀವ್ರ ಘೋಷಣೆಗಳನ್ನು ಕೂಗಿದ್ದಾರೆ. ನಗರದ ಹಲವೆಡೆ ಟೈರ್‌ಗಳಿಗೆ ಬೆಂಕಿ ಹಚ್ಚಿ ರಸ್ತೆ ತಡೆ ನಡೆಸಿದ್ದಾರೆ.
ಅಮೆರಿಕದ ತೀವ್ರ ರಾಜತಾಂತ್ರಿಕ ಒತ್ತಡ ಮತ್ತು ತಿಂಗಳುಗಳ ಕಾಲ ನಡೆದ ರಹಸ್ಯ ಮಾತುಕತೆಗಳ ಫಲವಾಗಿ ಈ ಒಪ್ಪಂದವನ್ನು ಸಿದ್ಧಪಡಿಸಲಾಗಿತ್ತು. ಒಪ್ಪಂದದ ಅಡಿಯಲ್ಲಿ ದಕ್ಷಿಣ ಲೆಬನಾನ್ ಗಡಿ ಭಾಗದಲ್ಲಿ ತಕ್ಷಣವೇ ಕದನ ವಿರಾಮ ಜಾರಿಗೊಳಿಸುವುದು, ಉಭಯ ದೇಶಗಳ ಸೇನಾ ಹಿಂತೆಗೆತ ಹಾಗೂ ಗಡಿ ಸುರಕ್ಷತೆಯ ಜವಾಬ್ದಾರಿಯನ್ನು ಅಂತರರಾಷ್ಟ್ರೀಯ ನಿಯಮಾವಳಿಗಳಂತೆ ಮರುಸಂಘಟಿಸುವ ಬಗ್ಗೆ ಎರಡೂ ದೇಶಕ್ಕೆ ಒಮ್ಮತಕ್ಕೆ ಬಂದಿವೆ ಎನ್ನಲಾಗಿದೆ.
ಆದರೆ, ದಕ್ಷಿಣ ಲೆಬನಾನ್ ಪ್ರಾಂತ್ಯದಲ್ಲಿ ಹಿಜ್ಬೊಲ್ಲಾ ಹೊಂದಿರುವ ಮಿಲಿಟರಿ ಪ್ರಭಾವ ಮತ್ತು ಶಸ್ತ್ರಾಸ್ತ್ರ ಬಲವನ್ನು ಸಂಪೂರ್ಣವಾಗಿ ತಗ್ಗಿಸುವ ಹಾಗೂ ಅಮೆರಿಕ-ಇಸ್ರೇಲ್‌ನ ನಿರಂತರ ಮೇಲ್ವಿಚಾರಣೆಗೆ ಒಪ್ಪಿಕೊಳ್ಳುವ ರಹಸ್ಯ ಷರತ್ತುಗಳನ್ನು ಈ ಒಪ್ಪಂದದಲ್ಲಿ ಸೇರಿಸಲಾಗಿದೆ ಎಂದು ಹಿಜ್ಬೊಲ್ಲಾ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಈ ಕಾರಣಕ್ಕಾಗಿಯೇ ಒಪ್ಪಂದದ ಅಧಿಕೃತ ಪ್ರಕಟಣೆ ಹೊರಬಿದ್ದ ತಕ್ಷಣವೇ ಹಿಜ್ಬೊಲ್ಲಾದ ರಾಜಕೀಯ ಮತ್ತು ಮಿಲಿಟರಿ ವಿಭಾಗವು ಒಪ್ಪಂದದ ವಿರುದ್ಧ ಬಹಿರಂಗ ಬಂಡಾಯ ಸಾರಿದೆ.
ಈ ಹಠಾತ್ ಬೆಳವಣಿಗೆಯಿಂದಾಗಿ ಲೆಬನಾನ್ ಸರ್ಕಾರವು ಪ್ರತಿಭಟನಾಕಾರರನ್ನು ನಿಯಂತ್ರಿಸಲು ರಾಷ್ಟ್ರೀಯ ಸೇನೆಯನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಿದೆ. ಬೈರುತ್‌ನ ಬಹುತೇಕ ಮಾರುಕಟ್ಟೆಗಳು, ಶಾಲೆಗಳು ಹಾಗೂ ಕಚೇರಿಗಳು ಮುಚ್ಚಲ್ಪಟ್ಟಿದ್ದು, ಇಡೀ ನಗರದಲ್ಲಿ ನಿಶ್ಯಬ್ದ ಮತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.



