ನೈಋತ್ಯ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾ ಹೊರವಲಯದಲ್ಲಿದ್ದ ಕಲ್ಲಿದ್ದಲು ಗಣಿಯೊಂದರಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ದುರ್ಘಟನೆಯಲ್ಲಿ ಕನಿಷ್ಠ32 ಕಾರ್ಮಿಕರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಗಣಿ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಗಣಿಯೊಳಗೆ ಮಿಥೇನ್ ಅನಿಲ ಹೆಚ್ಚಾಗಿ ಶೇಖರಣೆಗೊಂಡು ಈ ಸ್ಫೋಟ ಸಂಭವಿಸಿದೆ ಎಂದು ಸರ್ಕಾರಿ ಗಣಿ ಪರಿವೀಕ್ಷಕ ಘನಿ ಬಲೋಚ್ ಸ್ಪಷ್ಟಪಡಿಸಿದ್ದಾರೆ.
ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ 7 ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ನಂತರ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ 25 ಶವಗಳು ಪತ್ತೆಯಾಗಿದ್ದು, ಒಟ್ಟು ಮೃತರ ಸಂಖ್ಯೆ 32ಕ್ಕೇರಿದೆ.
ಗಣಿಯೊಳಗೆ ಸಿಲುಕಿರುವ 10 ಕಾರ್ಮಿಕರನ್ನು ರಕ್ಷಿಸಲು ಆಪತ್ಕಾಲೀನ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಆದರೆ, ಗಣಿಯೊಳಗೆ ಆಮ್ಲಜನಕದ ಪ್ರಮಾಣ ಗಣನೀಯವಾಗಿ ಕುಸಿದಿರುವುದರಿಂದ ಅವರು ಜೀವಂತವಾಗಿ ಉಳಿದಿರುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಬಲೂಚಿಸ್ತಾನ್‌ನ ಗಣಿ ಮತ್ತು ಖನಿಜ ಸಚಿವ ಶೋಯೆಬ್ ನೋಶೇರ್ವಾನಿ ಘಟನೆಗೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.



