ಆಕ್ರಮಿತ ಪ್ಯಾಲೆಸ್ಟೈನ್ ಮತ್ತು ಸಿರಿಯಾದ ಗೋಲನ್ ಪ್ರದೇಶದಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಇಸ್ರೇಲ್ ದುರ್ಬಳಕೆ ಮಾಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸಲಾದ ನಿರ್ಣಯಕ್ಕೆ ಭಾರತ ಸೇರಿದಂತೆ 151 ರಾಷ್ಟ್ರಗಳು ಬೆಂಬಲ ಸೂಚಿಸಿವೆ. ಆದರೆ, ಅಮೆರಿಕ ಮತ್ತು ಇಸ್ರೇಲ್ ಸೇರಿದಂತೆ 7 ರಾಷ್ಟ್ರಗಳು ಮಾತ್ರ ಈ ನಿರ್ಣಯವನ್ನು ವಿರೋಧಿಸಿವೆ.
ಒಟ್ಟು 193 ಸದಸ್ಯ ರಾಷ್ಟ್ರಗಳಿರುವ ಸಾಮಾನ್ಯ ಸಭೆಯಲ್ಲಿ ಬುಧವಾರ ಈ ನಿರ್ಣಯವನ್ನು ಅಂಗೀಕರಿಸಲಾಯಿತು. 151 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ, ಕೇವಲ 7 ರಾಷ್ಟ್ರಗಳು ವಿರುದ್ಧವಾಗಿ ಮತ ಹಾಕಿದವು. ಇನ್ನುಳಿದ 11 ರಾಷ್ಟ್ರಗಳು ಮತದಾನ ಪ್ರಕ್ರಿಯೆಯಿಂದ ಹೊರಗುಳಿದಿದ್ದವು. ದಕ್ಷಿಣ ಅಮೆರಿಕದ ‘ಉರುಗ್ವೆ’ ದೇಶವು ಈ ನಿರ್ಣಯವನ್ನು ಮಂಡಿಸಿತ್ತು.
ಆಕ್ರಮಿತ ಪ್ಯಾಲೆಸ್ಟೈನ್ ಪ್ರದೇಶ ಮತ್ತು ಸಿರಿಯಾದ ಗೋಲನ್ (Golan) ಬೆಟ್ಟಗಳ ಸುತ್ತಮುತ್ತಲಿನ ನೈಸರ್ಗಿಕ ಸಂಪನ್ಮೂಲಗಳನ್ನು ಇಸ್ರೇಲ್ ಹಾನಿ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು ಎಂಬುದು ಈ ನಿರ್ಣಯದ ಪ್ರಮುಖ ಒತ್ತಾಯವಾಗಿದೆ. ಈ ಸಂಪನ್ಮೂಲಗಳು ಅಲ್ಲಿ ವಾಸಿಸುವ ಜನರಿಗೆ ಸೇರಿವೆ. ಭೂಮಿ, ನೀರು ಮತ್ತು ಇಂಧನದ ಮೇಲೆ ಅವರಿಗೆ ಪರಭಾರೆ ಮಾಡಲಾಗದ ಹಕ್ಕು ಇದೆ ಎಂದು ನಿರ್ಣಯವು ಸ್ಪಷ್ಟಪಡಿಸಿದೆ.
ಪೂರ್ವ ಜೆರುಸಲೆಮ್ ಸೇರಿದಂತೆ ಆಕ್ರಮಿತ ಪ್ರದೇಶಗಳಲ್ಲಿ ಇಸ್ರೇಲ್ ನಿರ್ಮಿಸಿರುವ ವಿಭಜನಾ ಗೋಡೆ ಹಾಗೂ ವಸಾಹತುಗಳು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ. ಇವು ಪ್ಯಾಲೆಸ್ಟೀನಿಯನ್ನರನ್ನು ಅವರ ನ್ಯಾಯಸಮ್ಮತ ಸಂಪನ್ಮೂಲಗಳಿಂದ ದೂರ ಮಾಡುತ್ತಿವೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. 2004ರ ಜುಲೈನಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯ (ICJ) ನೀಡಿದ ಸಲಹಾ ಅಭಿಪ್ರಾಯ ಹಾಗೂ ಈ ಹಿಂದಿನ ವಿಶ್ವಸಂಸ್ಥೆಯ ನಿರ್ಣಯಗಳನ್ನು ಇಸ್ರೇಲ್ ಸಂಪೂರ್ಣವಾಗಿ ಗೌರವಿಸಬೇಕು ಎಂದು ಸದಸ್ಯ ರಾಷ್ಟ್ರಗಳು ಒತ್ತಾಯಿಸಿವೆ.
ಪ್ಯಾಲೆಸ್ಟೀನಿಯನ್ನರ ಮನೆಗಳನ್ನು ಕೆಡವುವುದು, ಕೃಷಿ ಭೂಮಿ, ಬಾವಿಗಳು ಮತ್ತು ನಾಗರಿಕ ಕಟ್ಟಡಗಳನ್ನು ವಶಪಡಿಸಿಕೊಳ್ಳುವುದನ್ನು ಇಸ್ರೇಲ್ ನಿಲ್ಲಿಸಬೇಕು. ಕುಡಿಯುವ ನೀರು ಮತ್ತು ಒಳಚರಂಡಿ ಪೈಪ್ಲೈನ್ಗಳು ಹಾಗೂ ವಿದ್ಯುತ್ ಪೂರೈಕೆ ಜಾಲವನ್ನು ನಾಶಪಡಿಸುವುದನ್ನು ಕೈಬಿಡಬೇಕು ಎಂದು ನಿರ್ಣಯವು ಆಗ್ರಹಿಸಿದೆ.
ಆಕ್ರಮಿತ ಪ್ರದೇಶಗಳಲ್ಲಿ ತ್ಯಾಜ್ಯ ಸುರಿಯುವುದು ಸೇರಿದಂತೆ ಪರಿಸರಕ್ಕೆ ಹಾನಿ ಉಂಟುಮಾಡುವ ಯಾವುದೇ ಚಟುವಟಿಕೆಗಳನ್ನು ತಡೆಯಬೇಕು ಎಂದು ನಿರ್ಣಯದಲ್ಲಿ ಕೋರಲಾಗಿದೆ. ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಇಸ್ರೇಲ್ ಕಟ್ಟುನಿಟ್ಟಾಗಿ ಪಾಲಿಸಬೇಕು. ಜೊತೆಗೆ, ಗಾಜಾ ಸೇರಿದಂತೆ ಯುದ್ಧದಿಂದ ಹಾನಿಗೊಳಗಾದ ಪ್ರದೇಶಗಳ ಮರುನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಗಳ ತುರ್ತು ಅಗತ್ಯವಿದ್ದು, ಈ ಕಾರ್ಯಗಳಿಗೆ ಜಾಗತಿಕ ಬೆಂಬಲ ನೀಡುವಂತೆ ನಿರ್ಣಯವು ಕರೆ ನೀಡಿದೆ.



