ನಕಲಿ ನ್ಯಾಯಾಲಯದ ಆದೇಶಗಳನ್ನು ಆಧರಿಸಿ 100ಕ್ಕೂ ಹೆಚ್ಚು ವೆಬ್ಸೈಟ್ಗಳನ್ನು ನಿರ್ಬಂಧಿಸಿದ (ಬ್ಲಾಕ್) ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯು (ಪಿಎಂಒ) ದೂರಸಂಪರ್ಕ ಇಲಾಖೆಯ (ಟೆಲಿಕಾಂ) ಕಾರ್ಯದರ್ಶಿಗೆ ಶನಿವಾರ ಸಮನ್ಸ್ ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ವಕೀಲರ ಸೋಗಿನಲ್ಲಿ ಕಿಡಿಗೇಡಿಗಳು ಇ-ಮೇಲ್ ಮೂಲಕ ಕಳುಹಿಸಿದ್ದ ಹೈಕೋರ್ಟ್ನ ನಕಲಿ ಆದೇಶಗಳನ್ನು ನಂಬಿದ ದೂರಸಂಪರ್ಕ ಅಧಿಕಾರಿಗಳು, 129 ಅಕ್ರಮ ಬೆಟ್ಟಿಂಗ್ ವೆಬ್ಸೈಟ್ಗಳನ್ನು ನಿರ್ಬಂಧಿಸಲು ಇಂಟರ್ನೆಟ್ ಸೇವಾದಾತರಿಗೆ (ಐಎಸ್ಪಿ) ಸೂಚಿಸಿದ್ದರು ಎಂಬ ಆಘಾತಕಾರಿ ವಿಚಾರವನ್ನು ‘ರಾಯಿಟರ್ಸ್’ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಪ್ರಧಾನಿ ಕಚೇರಿಯು ತೀವ್ರ ನಿಗಾ ವಹಿಸಿ, ಈ ಬಿಗಿ ಕ್ರಮ ಕೈಗೊಂಡಿದೆ.
ಟೆಲಿಕಾಂ ಆಪರೇಟರ್ಗಳಿಂದ ಹಿಡಿದು ಇಂಟರ್ನೆಟ್ ಸೇವಾದಾತರವರೆಗೆ ಇಡೀ ದೂರಸಂಪರ್ಕ ಸಚಿವಾಲಯವನ್ನು ನೋಡಿಕೊಳ್ಳುವ ಅತ್ಯುನ್ನತ ಅಧಿಕಾರಿಯಾಗಿರುವ ಕಾರ್ಯದರ್ಶಿ ಅಮಿತ್ ಅಗರ್ವಾಲ್ ಅವರಿಗೆ ಪಿಎಂಒ ಬುಲಾವ್ ನೀಡಿದೆ. ಬೇರೆ ರಾಜ್ಯದ ಪ್ರವಾಸದಲ್ಲಿದ್ದ ಅಮಿತ್ ಅಗರ್ವಾಲ್ ಅವರ ಪ್ರವಾಸವನ್ನು ಮೊಟಕುಗೊಳಿಸಿ, ಈ ಭದ್ರತಾ ಲೋಪದ ಬಗ್ಗೆ ಖುದ್ದಾಗಿ ವಿವರಿಸುವಂತೆ ಸೂಚಿಸಲಾಗಿದೆ.
ಭಾರತದಲ್ಲಿ ಆನ್ಲೈನ್ ಬೆಟ್ಟಿಂಗ್ ಕಾನೂನುಬಾಹಿರವಾಗಿದೆ. ಆದರೆ, ನಕಲಿ ದಾಖಲೆಗಳ ಆಧಾರದ ಮೇಲೆ ಅಧಿಕಾರಿಗಳು ವೆಬ್ಸೈಟ್ಗಳನ್ನು ನಿರ್ಬಂಧಿಸಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ನಮ್ಮ ವ್ಯವಸ್ಥೆಯಲ್ಲಿರುವ ಸೂಕ್ತ ಪರಿಶೀಲನಾ ಕೊರತೆಯಿಂದಾಗಿ, ಭವಿಷ್ಯದಲ್ಲಿ ನಕಲಿ ಆದೇಶಗಳನ್ನು ಬಳಸಿ ನ್ಯಾಯಸಮ್ಮತವಾದ ವೆಬ್ಸೈಟ್ಗಳನ್ನೂ ಬ್ಲಾಕ್ ಮಾಡಬಹುದು ಎಂಬ ಆತಂಕ ವ್ಯಕ್ತವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಆರೋಪದಡಿ ರಾಜ್ಯ ಪೊಲೀಸರು ಕ್ರಿಮಿನಲ್ ತನಿಖೆ ಆರಂಭಿಸಿದ್ದಾರೆ. ಟೆಲಿಕಾಂ ಸಚಿವಾಲಯ ಕೂಡ ಆಂತರಿಕ ತನಿಖೆ ಶುರು ಮಾಡಿದ್ದು, ತನಿಖೆಯ ಭಾಗವಾಗಿ ಪೊಲೀಸರು ಸಚಿವಾಲಯದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಶುಕ್ರವಾರವಷ್ಟೇ ವರದಿಯಾಗಿತ್ತು.
ಪೊಲೀಸ್ ಮತ್ತು ನ್ಯಾಯಾಲಯದ ರಿಜಿಸ್ಟ್ರಿಯ ಮಾಹಿತಿಯ ಪ್ರಕಾರ, ಈ ಆದೇಶಗಳು ಸಂಪೂರ್ಣ ನಕಲಿಯಾಗಿವೆ. ಇವುಗಳಲ್ಲಿ ನ್ಯಾಯಾಲಯದ ನಕಲಿ ಲೋಗೊ, ಸೀಲ್ ಹಾಗೂ ನಕಲಿ ಕ್ಯೂಆರ್ (QR) ಕೋಡ್ಗಳನ್ನು ಬಳಸಲಾಗಿತ್ತು.
ಅಚ್ಚರಿಯ ಸಂಗತಿಯೆಂದರೆ, ಈ ನಕಲಿ ಆದೇಶಗಳು ಮತ್ತು ವೆಬ್ಸೈಟ್ ತೆಗೆದುಹಾಕಲು ಸರ್ಕಾರಿ ಅಧಿಕಾರಿಗಳು ಇಂಟರ್ನೆಟ್ ಸೇವಾದಾತರಿಗೆ ನೀಡಿದ್ದ ಸೂಚನಾ ಪತ್ರಗಳು ತಿಂಗಳುಗಳ ಕಾಲ ದೂರಸಂಪರ್ಕ ಇಲಾಖೆಯ (DoT) ಅಧಿಕೃತ ವೆಬ್ಸೈಟ್ನಲ್ಲಿಯೇ ಸಾರ್ವಜನಿಕರಿಗೆ ಲಭ್ಯವಿದ್ದವು. ಶನಿವಾರದ ಹೊತ್ತಿಗೆ ಒಂದು ಆದೇಶವನ್ನು ವೆಬ್ಸೈಟ್ನಿಂದ ಅಳಿಸಿಹಾಕಲಾಗಿದ್ದರೂ, ಮತ್ತೊಂದು ನಕಲಿ ಆದೇಶ ಇನ್ನೂ ಲಭ್ಯವಿತ್ತು.
ಬೆಟ್ಟಿಂಗ್ ಖಾತೆಗಳ ವಿರುದ್ಧದ ಕ್ರಮಗಳನ್ನು ಸಂಬಂಧಪಟ್ಟ ಫೀಲ್ಡ್ ಅಧಿಕಾರಿಗಳ ಮೂಲಕ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ರಾಯಿಟರ್ಸ್ ಯತ್ನಿಸಿದಾಗ ಅಮಿತ್ ಅಗರ್ವಾಲ್, ಅವರ ಸಚಿವಾಲಯ ಹಾಗೂ ಪ್ರಧಾನಿ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಲಾದ ನಕಲಿ ನ್ಯಾಯಾಲಯದ ತೀರ್ಪುಗಳು ವಿಶ್ವಾದ್ಯಂತ ನ್ಯಾಯಾಧೀಶರ ತಲೆನೋವಿಗೆ ಕಾರಣವಾಗಿವೆ. ಅಸ್ತಿತ್ವದಲ್ಲಿಯೇ ಇಲ್ಲದ ತೀರ್ಪುಗಳನ್ನು ಆಧರಿಸಿ ನೀಡಲಾಗಿದ್ದ ನ್ಯಾಯಮಂಡಳಿಯ ಆದೇಶಗಳನ್ನು ಭಾರತದ ಸುಪ್ರೀಂ ಕೋರ್ಟ್ ಕಳೆದ ಜುಲೈನಲ್ಲಿ ವಜಾಗೊಳಿಸಿತ್ತು. ಇತ್ತೀಚೆಗಷ್ಟೇ ಅಮೆರಿಕದಲ್ಲಿಯೂ ನಕಲಿ ಕಾನೂನು ಉಲ್ಲೇಖಗಳನ್ನು ಬಳಸಿದ್ದಕ್ಕಾಗಿ ವಕೀಲರೊಬ್ಬರನ್ನು ನ್ಯಾಯಾಧೀಶರು ಅನರ್ಹಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.




